ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ತಿಂಗಳಲ್ಲಿ ₹3.5 ಲಕ್ಷ ಗಳಿಕೆ!

ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿಗಳಿಂದ ಜೈವಿಕ ಪೀಡೆನಾಶಕ ಉತ್ಪಾದನೆ
Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಶಿರಸಿ: ಅಡಿಕೆ, ಶುಂಠಿ, ಕಾಳುಮೆಣಸಿಗೆ ಬಾಧಿಸುವ ಬೇರುಹುಳ, ಶಿಲೀಂದ್ರ ರೋಗಗಳನ್ನು ತಡೆಗಟ್ಟುವ ಜೈವಿಕ ಪೀಡೆನಾಶಕಗಳನ್ನು ತಯಾರಿಸಿರುವ ಇಲ್ಲಿನ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು, ಐದು ತಿಂಗಳುಗಳಲ್ಲಿ ₹ 3.5 ಲಕ್ಷ ಆದಾಯ ಪಡೆದ ಖುಷಿಯಲ್ಲಿದ್ದಾರೆ.

ಸ್ವ ಉದ್ಯೋಗಕ್ಕೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿಯನ್ನು ಕಡ್ಡಾಯಗೊಳಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ 11 ವಿದ್ಯಾರ್ಥಿಗಳ ತಂಡವು, ಅಡಿಕೆಗೆ ಕಾಡುವ ಬೇರುಹುಳ ನಿವಾರಣೆಗೆ ಮೆಟರೈಜಿಯಂ ಅನಿಸೋಫ್ಲಿಯೆ, ಕಾಳುಮೆಣಸಿಗೆ ಬಾಧಿಸುವ ಶೀಘ್ರ ಮತ್ತು ನಿಧಾನ ಸೊರಗು ರೋಗ ನಿಯಂತ್ರಣಕ್ಕೆ ಟ್ರೈಕೋಡರ್ಮಾ ಹಾರ್ಜಿಯಾನಮ್ ಮತ್ತು ಸುಡೊಮೊನಾಸ್ ಫ್ಲೋರೊಸೆನ್ಸ್ ಅನ್ನು ಪ್ರಾಯೋಗಿಕವಾಗಿ ಉತ್ಪಾದಿಸಿದೆ.

ಇದರ ಜೊತೆಗೆ, ಅಡಿಕೆ ಸಿಪ್ಪೆಯಿಂದ ಜೈವಿಕ ಗೊಬ್ಬರವನ್ನು ಉತ್ಪಾದಿಸಿ ಇನ್ನಷ್ಟು ಆದಾಯ ಗಳಿಸುವ ಹುಮ್ಮಸ್ಸಿನಲ್ಲಿ ವಿದ್ಯಾರ್ಥಿಗಳು ಇದ್ದಾರೆ.

‘ರೋಗ ಮತ್ತು ಕೀಟ ನಿಯಂತ್ರಣಕ್ಕೆ ರಾಸಾಯನಿಕ ಪೀಡೆನಾಶಕ ಬಳಸುವುದರಿಂದ ಪರಿಸರ ಮಲಿನವಾಗುತ್ತದೆ. ಸಾವಯವ ಅಂಶ ಹೆಚ್ಚಿರುವ ಭೂಮಿಯಲ್ಲಿ ಜೈವಿಕ ಜೀವಾಣುಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣ ಸಿಗುತ್ತದೆ. ಈ ಜೀವಾಣುಗಳು ಆಯಾ ಪರಿಸರಕ್ಕೆ ಶೀಘ್ರ ಹೊಂದಿಕೊಂಡು ಬೆಳೆಗಳಿಗೆ ಬಾಧಿಸುವ ರೋಗ ತಡೆಯುವಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತವೆ’ ಎನ್ನುತ್ತಾರೆ ವಿದ್ಯಾರ್ಥಿ ಸುಮತಿನಾಥ್.

‘1.5 ಟನ್ ಟ್ರೈಕೋಡರ್ಮಾ, 750 ಕೆ.ಜಿ ಮೆಟರೈಜಿಯಂ, 50 ಕೆ.ಜಿ ಸುಡೊಮೊನಾಸ್, 50 ಕೆ.ಜಿ ಅಡಿಕೆ ಸಿಪ್ಪೆಯ ಕಾಂಪೋಸ್ಟ್ ತಯಾರಿಸಿದ್ದೆವು. ಪ್ರತೀ ಕೆ.ಜಿ ಮೆಟರೈಜಿಯಂಗೆ ₹ 200 ಹಾಗೂ ಇನ್ನುಳಿದ ಎರಡು ಪೀಡೆನಾಶಕ ಹಾಗೂ ಜೈವಿಕ ಗೊಬ್ಬರಕ್ಕೆ ಒಂದು ಕೆ.ಜಿ.ಗೆ ತಲಾ ₹ 100 ದರ ನಿಗದಿಪಡಿಸಿದ್ದೆವು. ಸ್ಥಳೀಯ ಸಹಕಾರಿ ಸಂಘಗಳಲ್ಲಿ ಮಾರಾಟಕ್ಕೆ ಇಟ್ಟಿದ್ದ ಇವನ್ನು ರೈತರು ಪೈಪೋಟಿಯಲ್ಲಿ ಖರೀದಿಸಿದರು’ ಎಂದು ವಿದ್ಯಾರ್ಥಿ ಆಕಾಶ ಕೆ.ಎಸ್. ಹೇಳಿದರು.

‘ಆರು ತಿಂಗಳ ತರಬೇತಿಯಲ್ಲಿ, ಮೊದಲ ತಿಂಗಳು ಪ್ರಾಜೆಕ್ಟ್ ಬರವಣಿಗೆ ಹಾಗೂ ಪೂರ್ವಸಿದ್ಧತೆಗೆ ವ್ಯಯವಾಗುತ್ತದೆ. ನಂತರದ ಐದು ತಿಂಗಳುಗಳಲ್ಲಿ ವಿದ್ಯಾರ್ಥಿಗಳು ಜೈವಿಕ ಪೀಡೆನಾಶಕ ಉತ್ಪಾದಿಸಿ ಮಾರಾಟ ಮಾಡಿದ್ದಾರೆ. ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ದೊರೆಯುವ ಇವುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಸಂಗ್ರಹವೂ ಬಹುತೇಕ ಮುಗಿದಿದೆ’ ಎಂದು ಮಾರ್ಗದರ್ಶನ ಮಾಡಿರುವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಶಾಂತ ಎ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
*
ಕಾಲೇಜಿನಲ್ಲಿ ಪಡೆಯುವ ತರಬೇತಿಯಿಂದ ಸ್ವ ಉದ್ಯೋಗದ ಪರಿಕಲ್ಪನೆ ಮೂಡುತ್ತದೆ.
ಸುಮತಿನಾಥ್,
ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT