ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆಗೆ ಮುಂದಾದ ರೌಡಿಗೆ ಪೊಲೀಸ್ ಗುಂಡೇಟು

ಹೆಡ್‌ಕಾನ್‌ಸ್ಟೆಬಲ್‌ಗೆ ಲಾಂಗ್‌ನಿಂದ ಹೊಡೆದ ಆರೋಪಿ l ಎಂಟು ಪ್ರಕರಣಗಳಲ್ಲಿ ಭಾಗಿ
Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ತನ್ನನ್ನು ಹಿಡಿಯಲು ಬಂದ ಹೆಡ್‌ ಕಾನ್‌ಸ್ಟೆಬಲ್ ಮೇಲೆ ಲಾಂಗ್‌ನಿಂದ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ಕುಖ್ಯಾತ ರೌಡಿ ರಾಜದೊರೈ (24) ಎಂಬಾತನ ಕಾಲಿಗೆ ಸಿಸಿಬಿ ಇನ್‌ಸ್ಪೆಕ್ಟರ್ ಪ್ರಕಾಶ್ ರಾಥೋಡ್ ಅವರು ಸರ್ವಿಸ್ ಪಿಸ್ತೂಲ್‌ನಿಂದ ಗುಂಡು ಹೊಡೆದಿದ್ದಾರೆ.

ಬೈಯಪ್ಪನಹಳ್ಳಿಯ ರಾಜದೊರೈ, ಅ.19ರ ರಾತ್ರಿ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ಗುಂಡುಮಣಿ ಹಾಗೂ ಅರ್ಜುನ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದ. ಕೆಲ ದಿನಗಳಿಂದ ಅಪರಾಧ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಈತನ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದರು.

‘ಶನಿವಾರ ಬೆಳಗಿನ ಜಾವ 4.30ರ ಸುಮಾರಿಗೆ ರಾಜದೊರೈ ಪೀಣ್ಯ 8ನೇ ಮೈಲಿಗೆ ಬಂದಿದ್ದ. ಈ ಬಗ್ಗೆ ದೊರೆತ ಖಚಿತ ಸುಳಿವು ಆಧರಿಸಿ ಇನ್‌ಸ್ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಜೀಪಿನಲ್ಲಿ ಸ್ಥಳಕ್ಕೆ ತೆರಳಿದ್ದರು. ಪೊಲೀಸ್ ವಾಹನ ನೋಡುತ್ತಿದ್ದಂತೆಯೇ ಆರೋಪಿ ಬೈಕ್‌ನಲ್ಲಿ ಸೋಲದೇವನಹಳ್ಳಿ ಕಡೆಗೆ ತೆರಳಿದ. ಆತನನ್ನು ಹಿಂಬಾಲಿಸಿದ ಸಿಬ್ಬಂದಿ, ಆಚಾರ್ಯ ಕಾಲೇಜು ಬಳಿ ಬೈಕ್‌ಗೆ ವಾಹನ ಗುದ್ದಿಸಿದರು. ಕೆಳಗೆ ಬಿದ್ದ ಆತ, ನೀಲಗಿರಿ ತೋಪಿನ ಕಡೆಗೆ ಓಡಿದ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ವಿವರಿಸಿದರು.

‘ಹೆಡ್‌ಕಾನ್‌ಸ್ಟೆಬಲ್ ನರಸಿಂಹಮೂರ್ತಿ ಅವರು ಆರೋಪಿಯ ಬೆನ್ನಟ್ಟಿದರು. ಈ ಹಂತದಲ್ಲಿ ಲಾಂಗ್‌ನಿಂದ ಅವರ ಬಲಗೈಗೆ ಹೊಡೆದ ರಾಜದೊರೈ, ಇತರೆ ಸಿಬ್ಬಂದಿ ಮೇಲೂ ಹಲ್ಲೆ ನಡೆಸಲು ಯತ್ನಿಸಿದ. ಆಗ ಇನ್‌ಸ್ಪೆಕ್ಟರ್ ಆರೋಪಿಯತ್ತ ಎರಡು ಸುತ್ತು ಗುಂಡು ಹಾರಿಸಿದರು. ಒಂದು ಗುಂಡು ಗಾಳಿಯಲ್ಲಿ ಹೋದರೆ, ಮತ್ತೊಂದು ಆತನ ಬಲಗಾಲನ್ನು ಹೊಕ್ಕಿತು.’

‘ಆರೋಪಿಯು ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿರುವ ನರಸಿಂಹಮೂರ್ತಿ ಅವರ ಕೈಗೆ 12 ಹೊಲಿಗೆಗಳನ್ನು ಹಾಕಲಾಗಿದೆ’ ಎಂದು ಹೇಳಿದರು.

ಯಾರು ಈ ರಾಜದೊರೈ? : ‘ರಾಜದೊರೈ 4 ವರ್ಷಗಳಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಕುಖ್ಯಾತ ರೌಡಿ ಸೆಲ್ವರಾಜ್‌ನ ಬಲಗೈ ಬಂಟನಾದ ಈತನ ವಿರುದ್ಧ ಫ್ರೇಜರ್‌ಟೌನ್, ಇಂದಿರಾನಗರ, ಎಚ್‌ಎಎಲ್, ಕೆ.ಆರ್.ಪುರ ಹಾಗೂ ಬೈಯಪ್ಪನಹಳ್ಳಿ ಠಾಣೆಗಳಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಈತನ ಹೆಸರನ್ನು ಇಂದಿರಾನಗರ ಠಾಣೆಯ ರೌಡಿಪಟ್ಟಿಯಲ್ಲಿ ಸೇರಿಸಲಾಗಿತ್ತು’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

ಮೂರು ಕೊಲೆಗೆ ಸಂಚು: ‘ರಾಜದೊರೈ ಹಾಗೂ ಆತನ ಸಹಚರರು ಎರಡು ದಿನಗಳಲ್ಲಿ ರೌಡಿ ಪಳನಿ ಗ್ಯಾಂಗ್‌ನ ಮೂವರು ಸದಸ್ಯರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಪೊಲೀಸ್ ಮಾಹಿತಿದಾರರಿಂದ ಈ ಸುಳಿವು ಸಿಕ್ಕಿತು. ಹೀಗಾಗಿ, ಆರೋಪಿಯ ಚಲನವಲನಗಳ ಮೇಲೆ ನಿರಂತರ ನಿಗಾ ಇಟ್ಟಿದ್ದೆವು. ರಾಜದೊರೈನ ಸಹಚರರ ಬಂಧನಕ್ಕೆ ಶೋಧ ಮುಂದುವರಿದಿದೆ’ ಎಂದು ಮಾಹಿತಿ ನೀಡಿದರು.

***
ವಿನಯ್ ಅಪಹರಣಕ್ಕೂ ಸಂಚು

‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಮಾದ್ಯಮ ಸಂಚಾಲಕ ವಿನಯ್ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದ ಆರೋಪಿಗಳ ಗುಂಪಿನಲ್ಲಿ ರಾಜದೊರೈ ಕೂಡ ಇದ್ದ. ಆದರೆ, ಆ ಸಂಚು ಕಾರ್ಯಗತಗೊಳಿಸುವ ಮುನ್ನಾದಿನವೇ ಈತನನ್ನು ರಾಮಮೂರ್ತಿನಗರ ಪೊಲೀಸರು ಬೇರೊಂದು ಪ್ರಕರಣದಲ್ಲಿ ಬಂಧಿಸಿದ್ದರು. ಹೀಗಾಗಿ, ಆ ಪ್ರಕರಣದಲ್ಲಿ ಈತನ ಹೆಸರು ಬರಲಿಲ್ಲ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

***
ಸ್ನೇಹಿತನನ್ನು ಕೊಲೆಗೈದರು

ರಾಜದೊರೈ 2016ರಲ್ಲಿ ರಾಮಮೂರ್ತಿನಗರದ ಸಾಗರ್ ಎಂಬಾತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಇದಕ್ಕೆ ಪ್ರತೀಕಾರವಾಗಿ ಸಾಗರ್ ಹಾಗೂ ಅವನ ಮೂವರು ಸಹಚರರು ಇದೇ ಅ.22ರಂದು ಆತನ ಮೇಲೆ ದಾಳಿ ನಡೆಸಿದ್ದರು. ಆಗ ರಾಜದೊರೈ ತಪ್ಪಿಸಿಕೊಂಡು, ಆತನ ಜತೆಗಿದ್ದ ಸ್ನೇಹಿತ ಮದನ್‌ಕುಮಾರ್ ಕೊಲೆಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT