ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯುದ್ದಕ್ಕೂ ಗುಂಡಿಗಳ ದರ್ಶನ, ದೂಳಿನ ಮಜ್ಜನ

ಯಲಚೇನಹಳ್ಳಿ– ಅಂಜನಾಪುರ ಟೌನ್‌ಶಿಪ್‌ ಮೆಟ್ರೊ ಕಾಮಗಾರಿ
Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಬದಿಯಲ್ಲಿ ಐದು ನಿಮಿಷವೂ ನಿಲ್ಲಲು ಸಾಧ್ಯವಾಗದಷ್ಟು ದೂಳು. ಇಕ್ಕೆಲಗಳಲ್ಲಿರುವ ಅಂಗಡಿ, ಮನೆಗಳು ಹಾಗೂ ಸಾರ್ವಜನಿಕರಿಗೆ ದೂಳಿನ ಮಜ್ಜನ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸ್ಥಳೀಯ ನಿವಾಸಿಗಳು. ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವಂತೆ ಭಾಸವಾಗುವ ರಸ್ತೆ ಗುಂಡಿಗಳು. ಆಗಾಗ್ಗೆ ಸಂಭವಿಸುವ ಅಪಘಾತಗಳು. ಸಂಚಾರ ದಟ್ಟಣೆಯ ಕಿರಿಕಿರಿ...

‘ನಮ್ಮ ಮೆಟ್ರೊ’ ಎರಡನೇ ಹಂತದ ಯಲಚೇನಹಳ್ಳಿ–ಅಂಜನಾಪುರ ಟೌನ್‌ಶಿಪ್‌ವರೆಗಿನ ರೀಚ್‌–4ಬಿ ಮಾರ್ಗದ ಕಾಮಗಾರಿಯಿಂದಾಗಿ ಕನಕಪುರ ರಸ್ತೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು‘ಪ್ರಜಾವಾಣಿ’ ನಡೆಸಿದ ರಿಯಾಲಿಟಿ ಚೆಕ್‌ ವೇಳೆ ಕಂಡುಬಂದ ದೃಶ್ಯಗಳಿವು.

ಈ ಮಾರ್ಗದಲ್ಲಿ ಅಂಜನಾಪುರ ಅಡ್ಡರಸ್ತೆ, ಕೃಷ್ಣಲೀಲಾ ಪಾರ್ಕ್‌, ವಜ್ರ ಹಳ್ಳಿ, ತಲಘಟ್ಟಪುರ ಹಾಗೂ ಅಂಜನಾಪುರ ಟೌನ್‌ಶಿಪ್‌ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಸಿವಿಲ್‌ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳ ಸಂಚಾರಕ್ಕಾಗಿ ಸರ್ವೀಸ್‌ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ಈ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು. ಯಲಚೇನಹಳ್ಳಿಯಿಂದ ಮುಂದೆ ಸಾಗುತ್ತಿದ್ದಂತೆ ಕೆಲವೆಡೆ ರಸ್ತೆ ಇದೆಯೇ ಎಂಬ ಸಂಶಯ ಕಾಡುತ್ತದೆ.

ದೊಡ್ಡಕಲ್ಲಸಂದ್ರದ ಬಳಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ಗುಬ್ಬಲಾಳ ಗೇಟ್‌ ಬಳಿ ಕಚ್ಚಾ ರಸ್ತೆಯಂತೆ ಭಾಸವಾಗುತ್ತದೆ. ವಜ್ರಹಳ್ಳಿ, ತಲಘಟ್ಟಪುರ ಪ್ರದೇಶಗಳಲ್ಲೂ ಗುಂಡಿಗಳದ್ದೇ ಸಾಮ್ರಾಜ್ಯ.

ವಜ್ರಹಳ್ಳಿ ಬಳಿ ಚರಂಡಿ ನಿರ್ಮಿಸಲು ಅರ್ಧ ರಸ್ತೆಯನ್ನು ಅಗೆಯಲಾಗಿದೆ. ಇದರಿಂದ ರಸ್ತೆಯು ಮತ್ತಷ್ಟು ಕಿರಿದಾಗಿದೆ. ಒಂದು ಬಸ್‌ ಹೋಗುವಷ್ಟು ಮಾತ್ರ ಜಾಗವಿದೆ. ಇದರಿಂದಾಗಿ ಇಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಇಂತಹದ್ದೇ ಕಿರಿದಾದ ರಸ್ತೆಗಳು ಕೆಲವೆಡೆ ಇವೆ.

ಅಂಜನಾಪುರ ಟೌನ್‌ಶಿಪ್‌ ಕಡೆಯಿಂದ ಯಲಚೇನಹಳ್ಳಿ ಕಡೆಗೆ ಬರುವ ಮಾರ್ಗದಲ್ಲಿ ರಸ್ತೆ ಸ್ವಲ್ಪ ವಿಶಾಲವಾಗಿದೆ. ಆದರೆ, ಗುಂಡಿಗಳಿಂದಾಗಿ ಇಲ್ಲೂ  ವಾಹನ ದಟ್ಟಣೆ ಸಮಸ್ಯೆ ಇದೆ.

***
ದೂಳಿನ ಸಮಸ್ಯೆಗೆ ನಲುಗಿದ ನಿವಾಸಿಗಳು:
ಕನಕಪುರ ರಸ್ತೆಯ ಎರಡೂ ಬದಿಗಳಲ್ಲಿ ದೂಳು ವಿಪರೀತವಾಗಿದೆ. ಮುಂದೆ ಸಾಗುತ್ತಿರುವ ವಾಹನಗಳನ್ನು ಗುರುತಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಮಳೆ ಬೀಳುವ ಸಂದರ್ಭದಲ್ಲಿ ರಸ್ತೆಯ ಮೇಲೆ ನೀರು ನಿಂತು ಸಾರ್ವಜನಿಕರಿಗೆ ತೊಂದರೆ ಆಗಿತ್ತು. ಆದರೆ, 3–4 ದಿನಗಳಿಂದ ಮಳೆ ಬಿದ್ದಿಲ್ಲ. ಬಿಸಿಲಿನಿಂದಾಗಿ ರಸ್ತೆಯಲ್ಲಿ ದೂಳಿನ ಪ್ರಮಾಣ ಹೆಚ್ಚಾಗಿದೆ. ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡು ಹೋಗುತ್ತಿದ್ದ ದೃಶ್ಯವೂ ಕಂಡು ಬಂತು.

ಅಂಗಡಿಗಳ ಮಾಲೀಕರಿಗೂ ದೂಳಿನಿಂದಾಗಿ ಬಿಸಿ ತಟ್ಟಿದೆ. ‘ಅಂಗಡಿಯಲ್ಲಿ ಇಟ್ಟಿರುವ ಉತ್ಪನ್ನಗಳ ಮೇಲೆ ದೂಳು ಕೂರುತ್ತಿದೆ. ಎಷ್ಟೇ ಸ್ವಚ್ಛಗೊಳಿಸಿದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೆಟ್ರೊ ಕಾಮಗಾರಿಯಿಂದಾಗಿ ವ್ಯಾಪಾರ ಸರಿಯಾಗಿ ನಡೆಯುತ್ತಿಲ್ಲ’ ಎಂಬುದು ಇಲ್ಲಿನ ವ್ಯಾಪಾರಿಗಳ ಅಳಲು.

‘ಕನಕಪುರ ರಸ್ತೆಯಲ್ಲಿ ಬೆಳಿಗ್ಗೆ 7.30ರಿಂದ 11 ಹಾಗೂ ಸಂಜೆ 4ರಿಂದ ರಾತ್ರಿ 8ರವರೆಗೆ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಮೆಟ್ರೊ ಕಾಮಗಾರಿ ಆರಂಭವಾದ ಬಳಿಕ ವಾಹನಗಳು ಆಮೆಗತಿಯಲ್ಲಿ ಸಾಗುತ್ತವೆ. ಈ ಭಾಗದಲ್ಲಿ ಶಾಲೆಗಳು ಹೆಚ್ಚಾಗಿವೆ. ಬೆಳಿಗ್ಗೆ 7 ಗಂಟೆ ಆಗುತ್ತಿದ್ದಂತೆ ಶಾಲಾ ವಾಹನಗಳ ಓಡಾಟ ಆರಂಭವಾಗುತ್ತವೆ’ ಎಂದು ಕುಮಾರಸ್ವಾಮಿ ಲೇಔಟ್‌ ಸಂಚಾರ ಠಾಣೆಯ ಪೊಲೀಸರೊಬ್ಬರು ತಿಳಿಸಿದರು.

‘ಮೆಟ್ರೊ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದರು.

***
‘ಮುಖ್ಯಮಂತ್ರಿ ಸೂಚನೆ ಪಾಲಿಸದ ಅಧಿಕಾರಿಗಳು’
ಮೈಸೂರು ರಸ್ತೆಯ ಪಂತರಪಾಳ್ಯದ ಬಳಿ ಇದೇ 8ರಂದು ರಸ್ತೆ ಗುಂಡಿಯಿಂದ ಸಂಭವಿಸಿದ ಅಪಘಾತದಲ್ಲಿ ರಾಧಾ ಎಂಬುವರು ಮೃತಪಟ್ಟಿದ್ದರು. ಇದೇ 9ರಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೆಟ್ರೊ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ಅವರಿಗೆ ಸೂಚಿಸಿದ್ದರು.

ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದರೆ, ಒಂದು ಪದರ ಡಾಂಬರು ಹಾಕುವಂತೆಯೂ ಸೂಚಿಸಿದ್ದರು. ಆದರೆ, ಯಲಚೇನಹಳ್ಳಿ–ಅಂಜನಾಪುರ ಟೌನ್‌ಶಿಪ್‌ ಮಾರ್ಗದ ಸರ್ವಿಸ್‌ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕೆಲಸ ಇನ್ನೂ ನಡೆದಿಲ್ಲ.

***
‌‘ಗಂಟಲು ಸೋಂಕು ತಗುಲಿತ್ತು’
ದೂಳಿನ ಸಮಸ್ಯೆಯಿಂದಾಗಿ ಗಂಟಲು ಸೋಂಕು ಉಂಟಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ 15 ದಿನಗಳವರೆಗೆ ಚಿಕಿತ್ಸೆ ಪಡೆದೆ. ಇದಕ್ಕಾಗಿ ₹ 5,000 ಖರ್ಚು ಮಾಡಿದ್ದೇನೆ.  ಮೆಟ್ರೊ ಕಾಮಗಾರಿಯಿಂದಾಗಿ ಎಲ್ಲೆಡೆ ತಡೆಗೋಡೆ ಹಾಕಲಾಗಿದೆ. ಸಾರ್ವಜನಿಕರು ತಿರುವು ಪಡೆಯಲು ಕನಿಷ್ಠ 1 ಕಿ.ಮೀ. ದೂರ ಸಾಗಬೇಕು. ಇದರಿಂದಾಗಿ ಅಂಗಡಿಯಲ್ಲಿ ವ್ಯಾಪಾರ ಅರ್ಧದಷ್ಟು ಕುಸಿದಿದೆ.

– ವರಲಕ್ಷ್ಮಿ, ಪ್ರಾವಿಜನ್‌ ಸ್ಟೋರ್‌ ಮಾಲಕಿ, ದೊಡ್ಡಕಲ್ಲಸಂದ್ರ

***

‘ಗುಂಡಿಯಿಂದ ಅಪಘಾತ’
ಮೆಟ್ರೊ ನಿಗಮದವರು ನಿರ್ಮಿಸಿದ ಸರ್ವಿಸ್‌ ರಸ್ತೆ ಮಳೆಯಿಂದಾಗಿ ಸಂಪೂರ್ಣ ಹಾಳಾಗಿದೆ. ವಾಹನಗಳು ಓಡಾಡಿದಾಗ ಕಲ್ಲುಗಳು ಅಂಗಡಿಯ ಗಾಜುಗಳಿಗೆ ಬಡಿಯುತ್ತವೆ. ಅಂಗಡಿಯ ಎದುರು ರಸ್ತೆ ಗುಂಡಿ ಬಿದ್ದಿದೆ. 15 ದಿನಗಳ ಹಿಂದೆ ಸ್ಕೂಟರ್‌ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದರು.

– ಕೃಷ್ಣಪ್ಪ, ರಾಜಾ ಪಾರ್ಲರ್‌, ದೊಡ್ಡಕಲ್ಲಸಂದ್ರ

***
‘ಮೆಟ್ರೊ ಕಾಮಗಾರಿ ಬೇಗ ಪೂರ್ಣಗೊಳಿಸಿ’

ಇಲ್ಲಿ ದೂಳಿನ ಸಮಸ್ಯೆ ಹೆಚ್ಚಾಗಿದೆ. ಆದಷ್ಟು ಬೇಗ ಮೆಟ್ರೊ ಕಾಮಗಾರಿಯನ್ನು ಪೂರ್ಣಗೊಳಿಸಬೇಕು.

– ಲಕ್ಷ್ಮಮ್ಮ, ದೊಡ್ಡಕಲ್ಲಸಂದ್ರ

***

‘ಅಪಾಯ ಕಟ್ಟಿಟ್ಟ ಬುತ್ತಿ’
ರಸ್ತೆ ಬದಿಯಲ್ಲಿ ಮಳೆ ನೀರು ಹೋಗಲು ಕಾಲುವೆ ನಿರ್ಮಿಸಲಾಗುತ್ತಿದೆ. ಆದರೆ, ಶಂಕರ ಫೌಂಡೇಷನ್‌ನಿಂದ ಗುಬ್ಬಲಾಳ ಗೇಟ್‌ವರೆಗೆ ಕಾಲುವೆ ನಿರ್ಮಿಸಿಲ್ಲ. ಈಗ ನಿರ್ಮಿಸಿರುವ ಕಾಲುವೆಯೂ ಅವೈಜ್ಞಾನಿಕ. ಮೆಟ್ರೊಗಾಗಿ 1,500 ಕಿಲೋ ವಾಟ್‌ ಸಾಮರ್ಥ್ಯದ ಮೂರು ತಂತಿಗಳನ್ನು ಪ್ರತ್ಯೇಕ ಕೊಳವೆಗಳಲ್ಲಿ ಹಾಕಲಾಗಿದೆ. ಕಾಲುವೆ ನಿರ್ಮಾಣಕ್ಕಾಗಿ ಕೊಳವೆಯನ್ನು ಒಡೆಯಲಾಗಿದೆ. ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

– ರಮೇಶ್‌, ಗುಬ್ಬಲಾಳ ಗೇಟ್‌

***
ಅಂಕಿ–ಅಂಶ

* ₹508.86 ಕೋಟಿ – ಯಲಚೇನಹಳ್ಳಿ- ಅಂಜನಾಪುರ  ಮೆಟ್ರೊ ಕಾಮಗಾರಿಯ ಅಂದಾಜು ವೆಚ್ಚ
* 6.52 ಕಿ.ಮೀ.– ಮೆಟ್ರೊ ಮಾರ್ಗದ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT