ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿ, ಇಂಗ್ಲೆಂಡ್‌ ಸೆಮಿಗೆ ಲಗ್ಗೆ

ಫಿಫಾ ಫುಟ್‌ಬಾಲ್‌: ಘಾನಾ ತಂಡಕ್ಕೆ 1–2 ಗೋಲುಗಳ ಅಂತರದ ಸೋಲು
Last Updated 21 ಅಕ್ಟೋಬರ್ 2017, 19:48 IST
ಅಕ್ಷರ ಗಾತ್ರ

ಗುವಾಹಟಿ: ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ಮಾಲಿ ತಂಡದವರು ರೋಮಾಂಚನ ಸೃಷ್ಟಿಸಿದರು. ಅಮೋಘ ಆಟದ ಮೂಲಕ ಪ್ರೇಕ್ಷಕರನ್ನು ಮುದಗೊಳಿಸಿದ ಈ ತಂಡ 16 ವರ್ಷದೊಳಗಿನವರ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ನಾಲ್ಕರ ಘಟ್ಟಕ್ಕೆ ಲಗ್ಗೆ ಇರಿಸಿದರು.

ಶನಿವಾರ ಸಂಜೆ ಮಳೆಯ ನಡುವೆ ನಡೆದ ಮೊದಲ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಘಾನಾ ಎದುರು ಮಾಲಿ 2–1 ಗೋಲುಗಳ ಜಯ ಸಾಧಿಸಿತು. ಹಾದ್ಜಿ ಡ್ರೇಮ್‌ 15ನೇ ನಿಮಿಷದ ತಂದುಕೊಟ್ಟ ಮುನ್ನಡೆಯನ್ನು ಡೆಮೋಸಾ ಟ್ರೋರ್‌ 61ನೇ ನಿಮಿಷದಲ್ಲಿ ಹೆಚ್ಚಿಸಿದರು. 70ನೇ ನಿಮಿಷದಲ್ಲಿ ಘಾನಾ ಪರವಾಗಿ ಕುಡೋಸ್ ಮಹಮ್ಮದ್‌ ಗೋಲು ಗಳಿಸಿದರೂ ಸೋಲಿನಿಂದ ತಪ್ಪಿಸಿಕೊಳ್ಳಲು ತಂಡಕ್ಕೆ ಸಾಧ್ಯವಾಗಲಿಲ್ಲ.

ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಮಾಲಿ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಘಾನಾ ಕೂಡ ಪ್ರತಿಸ್ಪರ್ಧೆ ಒಡ್ಡಿತು. ಆದರೆ ಮೊದಲ ಯಶಸ್ಸು ಗಳಿಸಿದ್ದು ಮಾಲಿ. ಇದಕ್ಕೆ ಪ್ರತ್ಯುತ್ತರ ನೀಡಲು ಘಾನಾಗೆ ಕೆಲವೇ ನಿಮಿಷಗಳಲ್ಲಿ ಅವಕಾಶ ಒದಗಿತ್ತು. ಆದರೆ ಇಬ್ರಾಹಿಂ ಸುಳ್ಳಿ ನಡೆಸಿದ ಶ್ರಮಕ್ಕೆ ಫಲ ಸಿಗಲಿಲ್ಲ.

2–1ರ ಹಿನ್ನಡೆ ಗಳಿಸಿದ್ದ ಘಾನಾ ಅಂತಿಮ ನಿಮಿಷಗಳಲ್ಲಿ ಆಕ್ರಮಣಕ್ಕೆ ಒತ್ತು ನೀಡಿ ಆಡಿದರು. ಆದರೆ ಗಿಡಿಯೋನ್ ಮೆನ್ಸಾ ಗಾಯಗೊಂಡು ಹೊರಗೆ ಉಳಿದ ಕಾರಣ ತಂಡಕ್ಕೆ ಭಾರಿ ಪೆಟ್ಟು ಬಿತ್ತು. ಭಾನುವಾರ ನಡೆಯಲಿರುವ ಸ್ಪೇನ್ ಮತ್ತು ಇರಾನ್ ನಡುವಿನ ಪಂದ್ಯದಲ್ಲಿ ಗೆದ್ದ
ತಂಡವನ್ನು ಮಾಲಿ ಸೆಮಿಫೈನಲ್‌ನಲ್ಲಿ ಎದುರಿಸಲಿದೆ.

ಜರ್ಮನಿ ಸವಾಲು: ಭಾನುವಾರ ನಡೆಯಲಿರುವ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಇರಾನ್ ಸೆಣಸಲಿದೆ. ಎರಡನೇ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್‌ ಬ್ರೆಜಿಲ್ ತಂಡವನ್ನು ಜರ್ಮನಿ ಎದುರಿಸಲಿದೆ.

ಕೋಲ್ಕತ್ತ ಕ್ರೀಡಾಂಗಣ ಅನೇಕ ಮಹತ್ವದ ಪಂದ್ಯಗಳಿಗೆ ಈ ಹಿಂದೆ ವೇದಿಕೆಯಾಗಿತ್ತು. ಲಯನೆಲ್ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ಮತ್ತು ವೆನೆಜುವೆಲಾ ನಡುವಿನ ಪ್ರದರ್ಶನ ಪಂದ್ಯವೂ ಇದರಲ್ಲಿ ಒಂದು. ಆ ಪಂದ್ಯವನ್ನು ಸಾವಿರಾರು ಫುಟ್‌ಬಾಲ್ ಪ್ರೇಮಿಗಳು ವೀಕ್ಷಿಸಿದ್ದರು. ಬ್ರೆಜಿಲ್ ಮತ್ತು ಜರ್ಮನಿ ನಡುವಿನ ಪಂದ್ಯಕ್ಕೂ ಇದೇ ರೀತಿಯಲ್ಲಿ ಪ್ರೇಕ್ಷಕರು ಮುಗಿ ಬೀಳುವ ನಿರೀಕ್ಷೆ ಇದೆ.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಬ್ರೆಜಿಲ್ ಅತಿ ಹೆಚ್ಚು (75) ಪಂದ್ಯಗಳನ್ನು ಆಡಿದ್ದು ಹೆಚ್ಚು ಗೆಲುವು (47) ಸಾಧಿಸಿದ ದಾಖಲೆಯೂ ತಂಡದ ಹೆಸರಿನಲ್ಲಿದೆ. 17 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು (166) ಗಳಿಸಿದ ಸಾಧನೆನ್ನೂ ಈ ತಂಡ ಮಾಡಿದೆ. ಈ ದಾಖಲೆಯ ಬಲ ಭಾನುವಾರದ ಪಂದ್ಯದಲ್ಲೂ ತಂಡದ ಕೈ ಹಿಡಿಯಲಿದೆಯೇ ಎಂಬುದು ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಇಂಗ್ಲೆಂಡ್‌ಗೆ ಜಯ
ಮತ್ತೊಂದು ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಮೆರಿಕವನ್ನು 4–1ರಿಂದ ಮಣಿಸಿತು. ಬ್ರೆಸ್ಟರ್‌ (11, 14, 90+6ನೇ ನಿಮಿಷ) ಮತ್ತು ಗಿಬ್ಸ್ ವೈಟ್‌ (64ನೇ ನಿ) ಇಂಗ್ಲೆಂಡ್‌ ಪರ ಗೋಲು ಗಳಿಸಿದರೆ ಸಾರ್ಜಂಟ್‌ (72ನೇ ನಿ) ಅಮೆರಿಕಕ್ಕೆ ಗೋಲು ತಂದುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT