ಸರಣಿ ಶುಭಾರಂಭದ ತವಕ

ಸೋಮವಾರ, ಮೇ 27, 2019
27 °C
ಆತಿಥೇಯ ತಂಡದ ಆಟಗಾರರ ‘ವಿರಾಟ್‌’ ಶಕ್ತಿ ಮುಂದೆ ಬ್ಲ್ಯಾಕ್‌ ಕ್ಯಾಪ್ಸ್‌ ಸಾಮರ್ಥ್ಯ ಮೆರೆಯುವುದೇ?

ಸರಣಿ ಶುಭಾರಂಭದ ತವಕ

Published:
Updated:
ಸರಣಿ ಶುಭಾರಂಭದ ತವಕ

ಮುಂಬೈ: ನಿರಂತರ ಗೆಲುವು ಸಾಧಿಸಿ ವಿಶ್ವಾಸದ ಗಣಿಯಾಗಿರುವ ಭಾರತ ತಂಡ ಮತ್ತೊಂದು ಸರಣಿ ಜಯದ ಗುರಿಯೊಂದಿಗೆ ನ್ಯೂಜಿಲೆಂಡ್ ವಿರುದ್ಧ ಕಣಕ್ಕೆ ಇಳಿಯಲಿದೆ.

ಪ್ರವಾಸಿ ತಂಡದ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದ್ದು ವಿರಾಟ್ ಕೊಹ್ಲಿ ಪಡೆ ಸರಣಿ ಗೆಲ್ಲುವ ನೆಚ್ಚಿನ ತಂಡವೆಂದೇ ಬಿಂಬಿತವಾಗಿದೆ. ‌

ಶ್ರೀಲಂಕಾದಲ್ಲಿ ಟೆಸ್ಟ್‌, ಏಕದಿನ ಮತ್ತು ಟಿ–20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿ ಬಂದ ಭಾರತ ತಂಡದವರು ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ಎದುರು ಪಾರಮ್ಯ ಮೆರೆದಿದ್ದರು. ಇಂಥ ತಂಡವನ್ನು ಅವರ ತವರಿನಲ್ಲೇ ಈಗ ನ್ಯೂಜಿಲೆಂಡ್ ಎದುರಿಸಬೇಕಾಗಿದೆ. ಯಾವುದೇ ಸಂದರ್ಭದಲ್ಲಿ ಪುಟಿದೇಳುವ ಗುಣ ಇರುವ ನ್ಯೂಜಿಲೆಂಡ್‌ ತಂಡ ಭಾರತಕ್ಕೆ ಪ್ರಬಲ ಸ್ಪರ್ಧೆ ಒಡ್ಡುವ ನಿರೀಕ್ಷೆ ಇದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಸಮರ್ಥ ಆಟಗಾರರನ್ನು ಹೊಂದಿರುವ ವಿರಾಟ್ ಕೊಹ್ಲಿ ಬಳಗ ಈಗ ನಿರಾಳವಾಗಿದೆ. ನಾಯಕ ಫಾರ್ಮ್‌ನಲ್ಲಿ ಇಲ್ಲದಿದ್ದ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಅನುಪಸ್ಥಿತಿ ಕಾಡಿದ್ದ ಪಂದ್ಯಗಳಲ್ಲೂ ಆಸ್ಟ್ರೇಲಿಯಾವನ್ನು 4–1ರಿಂದ ಮಣಿಸಿದ್ದ ಭಾರತ ತಂಡ ಸಾಮರ್ಥ್ಯ ಮೆರೆದಿತ್ತು. ಎಡಗೈ ಮತ್ತು ಲೆಗ್ ಸ್ಪಿನ್ ಜೋಡಿ ಕುಲದೀಪ್ ಯಾದವ್‌–ಯಜುವೇಂದ್ರ ಚಾಹಲ್ ಅವರ ಅಮೋಘ ಆಟವು ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಈ ಎಲ್ಲ ಅಂಶಗಳು ಪ್ರವಾಸಿ ತಂಡದಲ್ಲಿ ಆತಂಕ ಮೂಡಿಸಿವೆ.

ಆಸ್ಟ್ರೇಲಿಯಾದ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಉಪ ನಾಯಕ ರೋಹಿತ್ ಶರ್ಮಾ 296 ರನ್‌ ಗಳಿಸಿದ್ದರು. 60ರ ಸರಾಸರಿಯಲ್ಲಿ ರನ್‌ ಕಲೆ ಹಾಕಿದ ಅವರು ಒಂದು ಶತಕ ಮತ್ತು ಎರಡು ಅರ್ಧಶತಕ ಸಿಡಿಸಿದ್ದರು. ಅಜಿಂಕ್ಯ ರಹಾನೆ ನಾಲ್ಕು ಅರ್ಧಶತಕ ಒಳಗೊಂಡ 244 ರನ್‌ ಗಳಿಸಿದ್ದರು. ಮುಂಬೈ ಆಟಗಾರರಾದ ಇವರಿಬ್ಬರು ತವರು ನೆಲದಲ್ಲಿ ಮಿಂಚು ಹರಿಸುವ ಭರವಸೆ ಇದೆ. ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಎದುರು ಉತ್ತಮ ಆಟ ಆಡಿದ್ದು 222 ರನ್‌ ಕಲೆ ಹಾಕಿ ಗಮನ ಸೆಳೆದಿದ್ದರು. ಮಹೇಂದ್ರಸಿಂಗ್ ದೋನಿ ಕೂಡ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಬೌಲಿಂಗ್‌ನಲ್ಲಿ ಕುಲದೀಪ್‌ ಯಾದವ್ ಮತ್ತು ಯಜುವೇಂದ್ರ ಚಾಹಲ್‌ ಅವರಿಗೆ ಹೆಗಲೆಣೆಯಾಗಿ ಎಡಗೈ ಸ್ಪಿನ್ನರ್‌ ಅಕ್ಷರ್ ಪಟೇಲ್ ಈಗ ತಂಡದಲ್ಲಿದ್ದಾರೆ. ಎದುರಾಳಿ ತಂಡದ ಅಗ್ರಕ್ರಮಾಂಕ ಮತ್ತು ಬಾಲಂಗೋಚಿಗಳ ಸಂಕಟ ಹೆಚ್ಚಿಸಲು ಭುವನೇಶ್ವರ್ ಕುಮಾರ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ವೇಗದ ದಾಳಿಗೆ ಸಾಧ್ಯವಿದೆ.

ಟೇಲರ್‌, ಲಥಾಮ್ ಮೇಲೆ ಭರವಸೆ

ನ್ಯೂಜಿಲೆಂಡ್ ತಂಡ ಸಮರ್ಥ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ತಂಡದ ಬೌಲಿಂಗ್ ದಾಳಿಯೂ ಉತ್ತಮವಾಗಿದೆ. ಹಿರಿಯ ಆಟಗಾರ ರಾಸ್ ಟೇಲರ್‌. ಸ್ಫೋಟಕ ಬ್ಯಾಟ್ಸ್‌ಮನ್‌ ಟಾಮ್ ಲಥಾಮ್‌, ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್‌, ನಾಯಕ ಕೇನ್ ವಿಲಿಯಮ್ಸನ್‌ ಮೇಲೆ ತಂಡದ ಬ್ಯಾಟಿಂಗ್ ಬಲ ನಿಂತಿದೆ. ಆರಂಭದಲ್ಲಿ ವಿಕೆಟ್‌ಗಳನ್ನು ಉರುಳಿಸುವ ಜವಾಬ್ದಾರಿ ಅನುಭವಿ ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ಅವರಿಗಿದೆ. ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಮತ್ತು ಲೆಗ್ ಸ್ಪಿನ್ನರ್‌ ಈಶ್ ಸೋಧಿ ಅವರ ಮೇಲೆ ಸ್ಪಿನ್ ವಿಭಾಗದ ಹೊರೆ ಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry