ಬನಶಂಕರಿಯ ಕಲಾ ದೇಗುಲ...

ಸೋಮವಾರ, ಮೇ 20, 2019
33 °C

ಬನಶಂಕರಿಯ ಕಲಾ ದೇಗುಲ...

Published:
Updated:

ಬಾದಾಮಿಯ ಬನಶಂಕರಿ ದೇಗುಲದಿಂದ ಶಿವಯೋಗಮಂದಿರದ ಕಡೆಗೆ ಹೋಗುವಾಗ ಅಣತಿ ದೂರದಲ್ಲಿ ಬಲಕ್ಕೆ ನಿಸರ್ಗ ಸೌಂದರ್ಯದ ಮರಗಳ ಮಧ್ಯದಿಂದ ಚಣ್‌.. ಚಣ್‌... ಎಂಬ ಇಂಪಾದ ಸಪ್ಪಳ ಕೇಳುವಿರಿ. ಕುತೂಹಲಗೊಂಡು ಹತ್ತಿರ ಹೋದರೆ ಅಲ್ಲಿ ಕಲಾವಿದರು ಮರದ ನೆರಳಿನಲ್ಲಿ ತನ್ಮಯರಾಗಿ ಶಿಲೆಯಲ್ಲಿ ಮೂರ್ತಿಗೆ ಜೀವದುಂಬುವುದು ಕಾಣುತ್ತದೆ. ಅವರು ಉಳಿ, ಸುತ್ತಿಗೆ ಬಳಸಿ ಕಾಡುಗಲ್ಲಿನಲ್ಲಿ ಸುಂದರವಾದ ಮೂರ್ತಿಶಿಲ್ಪ ರೂಪಿಸುವುದು ನೋಡಬಹುದು.

ಕಟ್ಟಡದ ಇನ್ನೊಂದು ಕಡೆ ಚಿತ್ರ ಕಲಾವಿದರು ಕ್ಯಾನವಾಸ್‌ನಲ್ಲಿ ಕಲಾಕೃತಿಗಳಿಗೆ ಜೀವತುಂಬುವುದರಲ್ಲಿ ತನ್ಮಯರಾಗಿರುತ್ತಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಶಿಲ್ಪ ಮತ್ತು ಚಿತ್ರಕಲಾ ವಿಭಾಗ ಕಟ್ಟಡಕ್ಕೆ ನಿಮ್ಮನ್ನು ಸ್ವಾಗತಿಸಲು ಆಳೆತ್ತರ ಸಿಮೆಂಟ್‌ ಮೂರ್ತಿಯನ್ನು ಕಲಾವಿದರು ರೂಪಿಸಿದ್ದಾರೆ. ಪರಿಸರದ ಸುತ್ತ ವಿವಿಧ ಶಿಲಾ ಮೂರ್ತಿಗಳು ಕಲಾ ರಸಿಕರನ್ನು ಸ್ವಾಗತಿಸಲು ಸಜ್ಜಾಗಿ ನಿಂತಿವೆ. ಯುವ ವಿದ್ಯಾರ್ಥಿಗಳು ಕಲಾ ಕೇಂದ್ರದಲ್ಲಿ ತಮ್ಮ ಭವಿಷ್ಯದ ನೆಲೆಯನ್ನು ಗಟ್ಟಿಗೊಳಿಸಿಗೊಳ್ಳುತ್ತಿದ್ದಾರೆ.

ಬಾದಾಮಿ ಪರಿಸರ ಬೌದ್ಧ, ಜೈನ, ಹಿಂದೂ, ಇಸ್ಲಾಂ, ಕ್ರೈಸ್ತ ಧರ್ಮಗಳ ಸಮನ್ವಯ ಸಂಸ್ಕೃತಿಯ ಶಿಲ್ಪಕಲೆಯ ಸಂಗಮ ಸ್ಥಾನವಾಗಿದೆ. ಇಲ್ಲಿ 1999ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಂದಿನ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ಅವರು ವಾಸ್ತುಶಿಲ್ಪ, ಶಿಲ್ಪಶಾಸ್ತ್ರ ಮತ್ತು ಪ್ರತಿಮಾ ಶಾಸ್ತ್ರ ವಿಭಾಗವನ್ನು ಆರಂಭಿಸಿದರು.

2001ರಲ್ಲಿ ಡಾ. ಎಚ್‌.ಜಿ. ಲಕ್ಕಪ್ಪಗೌಡರ ಅವಧಿಯಲ್ಲಿ ಚಿತ್ರಕಲೆ ವಿಭಾಗ ಆರಂಭವಾಯಿತು. ಕುಲಪತಿ ಡಾ. ಮುರಿಗೆಪ್ಪ ಕಾಲದಲ್ಲಿ ವಿಸ್ತರಣಾ ವಿಭಾಗ ಆರಂಭವಾಗಿ ಕೇಂದ್ರ ಉನ್ನತೀಕರಣಗೊಂಡಿದೆ.

19 ವಸಂತಗಳಲ್ಲಿ ಸಾವಿರಾರು ಕಲಾವಿದರು ಕರ್ನಾಟಕ ಕಲಾ ಪ್ರಕಾರಗಳ ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಮತ್ತು ವಿಜಯನಗರ ಸ್ಮಾರಕಗಳ ಸಂಪ್ರದಾಯ ಮತ್ತು ಆಧುನಿಕ ಶೈಲಿಯ ಮೂರ್ತಿಶಿಲ್ಪಗಳನ್ನು ಶಿಲೆ, ಕಟ್ಟಿಗೆ, ಮಣ್ಣು ಮತ್ತು ಸುಟ್ಟ ಮಣ್ಣಿನ ಶಿಲ್ಪ (ಟೆರ್ರಾಕೂಟಾ)ದಲ್ಲಿ ರಚಿಸಿದ್ದಾರೆ. ಹೀಗೆ ರೂಪುಗೊಂಡ ಸಾಂಪ್ರದಾಯಿಕ ಮತ್ತು ಸಮಕಾಲೀನ ಚಿತ್ರಕಲಾ ಕೃತಿಗಳನ್ನು ನಾಡೋಜ ಆರ್‌.ಎಂ. ಹಡಪದ ಕಲಾ ಗ್ಯಾಲರಿಯಲ್ಲಿ ಸಂಗ್ರಹಿಸಲಾಗಿದೆ.

ಇಲ್ಲಿ ಅಧ್ಯಯನಗೈದ ವಿದ್ಯಾರ್ಥಿಗಳು ನಾಡಿನ ತುಂಬೆಲ್ಲ ಪಸರಿಸಿ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕಲಾ ಪ್ರದರ್ಶನದ ಮೂಲಕ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡು ತಮ್ಮ ಬದುಕಿನ ಭವಿಷ್ಯದ ಜೀವನವನ್ನು ಕಟ್ಟಿಕೊಂಡಿದ್ದಾರೆ ಎಂದು ಎಂದು ಕೇಂದ್ರದ ಆಡಳಿತಾಧಿಕಾರಿ ಡಾ. ಕೃಷ್ಣ ಕಟ್ಟಿ ಹೇಳುತ್ತಾರೆ.

ವಿಠ್ಠಲ ಬಡಿಗೇರ, ಸುರೇಂದ್ರ ವಿಶ್ವಕರ್ಮ, ಮಹಾದೇವ ಚಲವಾದಿ, ಮಲ್ಲಿಕ್‌ ಸಾಬ್‌ ನದಾಫ, ಭಾರತಿ ಸರಗಣಾಚಾರಿ, ವೀರೇಶ ರುದ್ರಸ್ವಾಮಿ, ಅಪ್ಪಣ್ಣ ಪೂಜಾರಿ, ಬಸವರಾಜ ಕುರಿ, ಅಮಿತ್‌ ಕಮ್ಮಾರ, ರಾಘವೇಂದ್ರ ಪಾಟೀಲ, ಸುನಿತಾ ಪಾಟೀಲ, ಆಫ್ರಿನ್‌ಬಾನು ಬಾರಾವಲಿ, ಕಲ್ಲಪ್ಪ ಕಮತಗೌಡರ ಮೊದಲಾದ ಕಲಾವಿದರು ರಾಜ್ಯ, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.

ಸೃಜನಶೀಲ ಕಲೆ ನಿಂತ ನೀರಾಗಬಾರದು ಕಲಿಕೆ ಮತ್ತು ಸಂಶೋಧನೆ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕು ಎಂದು ವಿವಿಧ ಕಲಾ ಪ್ರಾಕಾರಗಳ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕೊಟ್ಟರೆ ಕರ್ನಾಟಕ ಸಂಪ್ರದಾಯ ಶಿಲ್ಪಕಲಾಕೇಂದ್ರ ಬೆಳೆಯುತ್ತದೆ ಎಂಬುದು ಕಟ್ಟಿ ಅವರ ಅಭಿಮತ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry