ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಜ ಕೃಷಿ’ಯಡಿ ಅಡಿಕೆ ಬೆಳೆಯಿರಿ

Last Updated 22 ಅಕ್ಟೋಬರ್ 2017, 4:02 IST
ಅಕ್ಷರ ಗಾತ್ರ

ಮಧುರನಹೊ ಸಹಳ್ಳಿ (ದೊಡ್ಡಬಳ್ಳಾಪುರ): ಸಹಜ ಕೃಷಿ ಪದ್ಧತಿ ಮೂಲಕ ಅಡಿಕೆ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಲು ಅವಕಾಶ ಇದೆ. ಆದರೆ ವ್ಯವಸ್ಥಿತ ರೀತಿಯಲ್ಲಿ ಇದನ್ನು ಮುಂದುವರೆಸಬೇಕು ಎಂದು ಅರದೇಶಹಳ್ಳಿ ಜನಜಾಗೃತಿ ಸಮಿತಿ ಅಧ್ಯಕ್ಷ ಎಂ.ಆರ್‌.ಸೀತಾರಾಂ ಹೇಳಿದರು.

ಅವರು ತಾಲ್ಲೂಕಿನ ಮಧುರನಹೊಸಹಳ್ಳಿಯ ತಬರನ ತೋಟದಲ್ಲಿ ಶನಿವಾರ ನಡೆದ ರೈತ ಹೋರಾಟಗಾರ ಡಾ.ಎನ್‌.ವೆಂಕಟರೆಡ್ಡಿ ಅವರ ಐದನೇ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಳೆಯ ಕೃಷಿ ಪದ್ಧತಿಯಲ್ಲೂ ಉತ್ತಮ ವಿಧಾನಗಳು ಇವೆ. ಇವುಗಳಲ್ಲಿ ಮಿಶ್ರ ಬೆಳೆ ಬೇಸಾಯ ವಿಧಾನವು ಒಂದಾಗಿದೆ. ಸಾವಿರಾರು ವರ್ಷಗಳಿಂದ ಅಂತರ್ಜಲಕ್ಕೆ ಸೇರಿರುವ ನೀರನ್ನು ಮೇಲೆತ್ತಿ ಬಳಸುವಾಗ ಮಿತ ಬಳಕೆ ಕಡೆಗೆ ಪ್ರಥಮ ಆದ್ಯತೆ ನೀಡಬೇಕು ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿ, ಹೋರಾಟದಲ್ಲಿ ಪ್ರಚಾರ ಬಯಸದೆ ಸಮಸ್ಯೆಯ ವಿರುದ್ಧ ಬದ್ಧತೆಯಿಂದ ಹೋರಾಟ ನಡೆಸುತ್ತಿದ್ದವರು ಡಾ.ವೆಂಕ ಟರೆಡ್ಡಿ. ಹೋರಾಟಗಾರರ ವಿರುದ್ಧ ಸದಾ ಟೀಕೆ, ಆರೋಪಗಳು ಬರುತ್ತಲೇ ಇರುತ್ತವೆ. ಇವುಗಳನ್ನು ಮೆಟ್ಟಿನಿಂತು ಮುನ್ನಡೆಯಬೇಕು ಎಂದರು.

ಶಾಶ್ವತ ನೀರಾವರಿ ಹೋರಾಟ ತಾತ್ಕಾಲಿಕ ಖುಷಿ ಕೊಡುವುದಿಲ್ಲ. ದೀರ್ಘಕಾಲೀನ ಪರಿಣಾಮವನ್ನು ಬೀರಲಿದೆ. ಹೋರಾಟಗಾರರನ್ನು ಜನರು ಗುಮಾನಿಯಿಂದ ನೋಡುತ್ತಾರೆ. ಆದರೆ, ಅವರು ಪ್ರಾಮಾಣಿಕವಾಗಿ ಮುನ್ನಡೆಯಬೇಕು ಎಂದರು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ 5,700 ಕೆರೆಗಳು ಇವೆ. ಇವಿಗಳ ಪೈಕಿ ಕೋಡಿ ಬಿದ್ದಿರುವ ಕೆರೆಗಳ ಸಂಖ್ಯೆ ಕೇವಲ 600 ಮಾತ್ರ. ಅಂದರೆ ಜನ ಪ್ರತಿನಿಧಿಗಳು ಬಿಂಬಿಸಿರುವಂತೆ ಇಷ್ಟೊಂದು ದೊಡ್ಡ ಪ್ರಮಾಣದ ಮಹಾಮಳೆಗೆ ಕೆರೆಗಳು ತುಂಬಿಲ್ಲ. ಇದಕ್ಕೆ ಕಾರಣ ಈ ಮೂರು ಜಿಲ್ಲೆಗಳಲ್ಲಿ ಮರಳು, ಕಲ್ಲು ಗಣಿಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂದರು.

ಇದರಿಂದಾಗಿ ಕೆರೆಗೆ ನೀರು ಹರಿದು ಬರುವ ರಾಜಕಾಲುವೆ, ಉಪ ಕಾಲುವೆಗಳು ಮುಚ್ಚಿಹೋಗಿವೆ. ಇದರಿಂದಾಗಿ ಈ ಭಾಗದ ಶೇ 50 ಕೆರೆಗಳಿಗೆ ನೀರೇ ಬಂದಿಲ್ಲ. ಈ ಬಗ್ಗೆ ಎಲ್ಲರು ಚಿಂತನೆ ನಡೆಸಬೇಕಿದೆ ಎಂದು ತಿಳಿಸಿದರು. ಡಾ.ಪರಮಶಿವಯ್ಯ ಅವರು ರೂಪಿಸಿರುವ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬಂದರೆ ಮಾತ್ರ ಈ ಭಾಗದ ಜನರ ನೀರಿನ ಬವಣೆ ನೀಗಲಿದೆ ಎಂದರು.

ಶಾಶ್ವತ ನೀರಾವರಿ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷೆ ಕೆ.ಸುಲೋಚ ನಮ್ಮ ವೆಂಕಟರೆಡ್ಡಿ, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್‌ನಾಯ್ಕ್‌, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಸನ್ನ, ಚಿಕ್ಕಬಳ್ಳಾಪುರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT