ಪಾಂಡವರ ಸ್ಮರಣಾರ್ಥ ಎಮ್ಮೆ ಮೆರವಣಿಗೆ

ಮಂಗಳವಾರ, ಜೂನ್ 25, 2019
26 °C

ಪಾಂಡವರ ಸ್ಮರಣಾರ್ಥ ಎಮ್ಮೆ ಮೆರವಣಿಗೆ

Published:
Updated:

ಕಂಪ್ಲಿ: ಇಲ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮದ ಗೌಳಿ ಸಮಾಜದವರು ದೀಪಾವಳಿ ಪಾಡ್ಯದ ದಿನ ಎಮ್ಮೆಗಳನ್ನು ಶುಭ್ರವಾಗಿ ಮೈ ತೊಳೆದು, ಕೊಂಬುಗಳನ್ನು ಕೆತ್ತಿ, ಬಣ್ಣ ಹಚ್ಚಿ ಚೆಂಡು ಹೂವಿನಿಂದ ವಿಶೇಷವಾಗಿ ಶೃಂಗರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು.

ಗ್ರಾಮದ ಗೌಳಿಹಟ್ಟಿಯ ಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಎಮ್ಮೆಗಳ ಮೆರವಣಿಗೆ ಗ್ರಾಮದ ಮುಖ್ಯ ರಸ್ತೆಗಳ ಮೂಲಕ ಸಾಗಿ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಎಲ್ಲಾ ಎಮ್ಮೆಗಳು ಕೊಟ್ಟಿಗೆ ಸೇರಿದವು. ನಂತರ ಪಾಂಡವರ ಮೂರ್ತಿಗೆ ಎಮ್ಮೆಗಳು ನಮಸ್ಕಾರ ಮಾಡುವ ಸಂಪ್ರದಾಯ ನಡೆಯಿತು.

ಹಿನ್ನೆಲೆ: ಹನ್ನೊಂದು ವರ್ಷ ವನವಾಸ, ಒಂದು ವರ್ಷ ಅಜ್ಞಾತ ವನವಾಸ ಯಶಸ್ವಿಯಾಗಿ ಮುಗಿಸಿಕೊಂಡ ಬಂದ ಧರ್ಮವಂತ ಪಾಂಡವರ ಸ್ಮರಣಾರ್ಥ ದೀಪಾವಳಿ ಪಾಡ್ಯದಂದು ಮನೆಗಳ ಮುಂದೆ ಪಾಂಡವರನ್ನು ಇಟ್ಟು ಪೂಜಿಸುವ ಸಂಪ್ರದಾಯ ಈ ಗ್ರಾಮದ ಗೌಳಿಗರು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.

ಬಾಗಿಲು ಪಕ್ಕದಲ್ಲಿ ಆಕಳ ಸಗಣಿಯಿಂದ ಚೌಕಾಕಾರದ ವೇದಿಕೆ ಮೇಲೆ ಪಾಂಡವರನ್ನು ಪ್ರತಿನಿಧಿಸಿದಂತೆ ಐದು ಉದ್ದನೆಯ ಸಗಣಿಯ ಕುಪ್ಪೆಗಳನ್ನಿಟ್ಟು, ಉತ್ತರಾಣಿ ಕಡ್ಡಿಯನ್ನು, ವನಾಂಬರಿ(ಹಳದಿ)ಹೂಗಳನ್ನು ಹಾಕಿ ಪೂಜಿಸುತ್ತಾರೆ.

ನಂತರ ಸಗಣಿಯಿಂದ ಸಿದ್ದಪಡಿಸಿದ ಕುರುಳುಗಳನ್ನು ಉರಿಸಿ ಚಿಕ್ಕ ಪಾತ್ರೆಯಲ್ಲಿ ಶ್ಯಾವಿಗೆ ಸಿಹಿ ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ಇದಾದ ನಂತರ ಎಮ್ಮೆಗಳನ್ನು ಪಾಂಡವರ ಎದುರಿಗೆ ಎರಡು ಮೊಣಕಾಲು ಊರಿ ಭಕ್ತಿಯಿಂದ ನಮಸ್ಕರಿಸುವ ವಿಶೇಷ ಸಂಪ್ರದಾಯ ನಡೆಯುತ್ತದೆ.

‘ಈ ರೀತಿ ಸಂಪ್ರದಾಯ ಆಚರಣೆಯಿಂದ ಹೈನುಗಾರಿಕೆ ಪ್ರಗತಿಯಾಗುತ್ತದೆ ಎನ್ನುವ ನಂಬಿಕೆ ಇಂದಿಗೂ ನಮ್ಮ ಜನಾಂಗದಲ್ಲಿ ಮನೆ ಮಾಡಿದೆ’ ಎಂದು ಗೌಳಿಗರ ಸಮಾಜದ ಹಿರಿಯೊಬ್ಬರು ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry