ಶನಿವಾರ, ಸೆಪ್ಟೆಂಬರ್ 21, 2019
24 °C

ಯೋಧರ ಮನೆಯಲ್ಲಿ ದೀಪಾವಳಿ ಆಚರಣೆ

Published:
Updated:

ಔರಾದ್: ತಾಲ್ಲೂಕಿನ ಜೋಜನಾ ಗ್ರಾಮದ ಯೋಧರ ಮನೆಯಲ್ಲಿ ಶುಕ್ರವಾರ ರಾತ್ರಿ ದೀಪಾವಳಿ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ಬಲಿಪಾಡ್ಯಮಿ ಅಂಗವಾಗಿ ಶುಕ್ರವಾರ ಜೋಜನಾ ಊರಲ್ಲಿ ಸಡಗರ ಸಂಭ್ರಮ ಮನೆ ಮಾಡಿತ್ತು. ಈ ಬಾರಿ ಇಡೀ ಗ್ರಾಮದ ಜನ ಸೇರಿ ತಮ್ಮ ಊರಿನ ಯೋಧರ ಮನೆಯಲ್ಲಿ ದೀಪಾವಳಿ ಆಚರಿಸುವ ಮೂಲಕ ಹೊಸ ಸಾಂಪ್ರದಾಯಕ್ಕೆ ಮುನ್ನುಡಿ ಬರೆದರು.

ರಜೆ ಮೇಲೆ ಗ್ರಾಮಕ್ಕೆ ಬಂದಿರುವ ಗಡಿಭದ್ರತಾ ಪಡೆಯ (ಬಿಎಸ್‌ಎಫ್‌) ಯೋಧರಾದ ಗ್ರಾಮದ ಪ್ರಭು ಮೂಲಗೆ, ಗಣಪತಿ ವಡಗಾವೆ, ಬಂಡೆಪ್ಪ ಶಿವಶೆಟ್ಟಿ, ರತಿಕಾಂತ ಬಾಗಲೆ ಹಾಗೂ ಸಿಆರ್‌ಪಿಎಫ್‌ನಲ್ಲಿ ಕಾರ್ಯ ನಿರ್ವಹಿಸುವ ಗ್ರಾಮದ ಯೋಧರಾದ..ಸಿಆರ್‌ಪಿಎಫ್‌ ದಿಲೀಪ್‌ ಘಾಳೆಪ್ಪ, ರವಿ ಸಾಕೋಳೆ, ಶಿವಕುಮಾರ ಗಣಪತಿ, ಬಿಎಸ್‌ಎಫ್‌ನ ಬಾಬಶೆಟ್ಟಿ ಶಂಕರ್, ಅಮೃತ್‌ (ಬಿಎಸ್‌ಎಫ್‌),ಭಾರತೀಯ ಸೇನೆ ಬಸವರಾಜ ಜಗನ್ನಾಥ ಅವರ ಪೋಷಕರನ್ನು ಶಾಸಕರು ಸನ್ಮಾನಿಸಿದರು.

ಶಾಸಕ ಪ್ರಭು ಚವಾಣ್ ಶುಕ್ರವಾರ ರಾತ್ರಿ ಎಲ್ಲ ಯೋಧರ ಮನೆಗೆ ಭೇಟಿ ನೀಡಿ ಸಿಹಿ ನೀಡಿ ದೀಪಾವಳಿಯ ಶುಭ ಕೋರಿದರು. ನಂತರ ಕೆಲ ಹೊತ್ತು ಯೋಧ ಕುಟುಂಬಗಳ ಜತೆ ಕಾಲ ಕಳೆದರು.

ಈ ವೇಳೆ ಮಾತನಾಡಿದ ಶಾಸಕ, ‘ಜೋಜನಾ ಒಂದೇ ಊರಿನ ಹತ್ತು ಯುವಕರು ದೇಶ ಸೇವೆಯಲ್ಲಿ ತೊಡಗಿರುವುದು ಸಮಸ್ತ ತಾಲ್ಲೂಕಿಗೆ ಹೆಮ್ಮೆ ತರುವ ಸಂಗತಿ. ತಾವು ಕಳೆದ ವರ್ಷ ನಾರಾಯಣಪುರ ಗ್ರಾಮದ ಯೋಧರ ಮನೆಯಲ್ಲಿ ದೀಪಾವಳಿ ಆಚರಿಸಿದ್ದೇವೆ. ಈ ಸಲ ನಾಲ್ವರು ಯೋಧರ ಜತೆ ಸೇರಿ ದೀಪಾವಳಿ ಆಚರಿಸಲು ಅವಕಾಶ ಸಿಕ್ಕಿರುವುದು ತಮ್ಮ ಸುದೈವ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಸಾಕಷ್ಟು ಯುವ ಪ್ರತಿಭಾವಂತರಿದ್ದಾರೆ. ಅವರೆಲ್ಲರೂ ಸೇನೆ ಸೇರಿದಂತೆ ದೇಶದ ಉನ್ನತ ಹುದ್ದೆಯಲ್ಲಿ ಕಾಣುವುದು ನಾವು ಎದುರು ನೋಡುತ್ತಿದ್ದೇವೆ’ ಎಂದು ಆಶಯ ವ್ಯಕ್ತಪಡಿಸಿದರು.

‘ಈ ಸಲ ನಮಗೆ ದೀಪಾವಳಿ ಹಬ್ಬ ವಿಶಿಷ್ಟ ಅನುಭವ ಆಗುತ್ತಿದೆ. ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ನಮ್ಮ ಮನೆಗೆ ಬಂದು ಗೌರವ ನೀಡುತ್ತಿರುವುದು ನಮಗೆ ತುಂಬಾ ಖುಷಿ ಮತ್ತು ಹೆಮ್ಮೆ ಎನಿಸುತ್ತಿದೆ’ ಎಂದು ಯೋಧ ಪ್ರಭು ಮೂಲಗೆ, ಗಣಪತಿ ವಡಗಾವೆ ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ ಬಿರಾದಾರ, ಮಾರುತಿ ಚವಾಣ್‌, ಕಲ್ಲಪ್ಪ ದೇಶಮುಖ, ಮಾಣಿಕ ಚವಾಣ್, ಶಿವಾಜಿ ಚವಾಣ್, ಬಂಟಿ ದರಬಾರೆ, ಪ್ರಕಾಶ ಮೇತ್ರೆ, ಕಲ್ಲಯ್ಯ ಸ್ವಾಮಿ, ಚಂದ್ರಕಾಂತ ವಡಗಾವೆ, ಶರಣಪ್ಪ ಮೂಲಗೆ, ಸಂಗಮೇಶ ಮುಕ್ರಂಬೆ ಇದ್ದರು.

 

Post Comments (+)