ಭಾನುವಾರ, ಸೆಪ್ಟೆಂಬರ್ 22, 2019
22 °C

ಬದುಕಿಗೆ ಪ್ರೀತಿ ತುಂಬುವುದೇ ಧರ್ಮದ ತಿರುಳು

Published:
Updated:

ಬೀದರ್: ‘ಬದುಕಿಗೆ ಮೌಲ್ಯಾಧಾರಿತ ಪ್ರೀತಿ ತುಂಬುವುದೇ ಧರ್ಮದ ತಿರುಳಾಗಿದೆ’ ಎಂದು ಉಡುಪಿಯ ಫ್ರಾಂಕ್ಲಿನ್‌ ಜೈರಾಜ್‌ ನುಡಿದರು. ನಗರದ ಸೇಂಟ್ ಪೌಲ್ ಮೆಥೋಡಿಸ್ಟ್ ಕೇಂದ್ರ ಸಭೆಯಲ್ಲಿ ಶಾಲಾ ಶಿಕ್ಷಕರಿಗೆ ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮಕ್ಕಳಲ್ಲಿ ಪ್ರೀತಿಯ ಭಾವನೆ ಬೆಳೆಸಬೇಕು. ಬಾಲ್ಯದಿಂದಲೇ ಅವರ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಬೇಕು. ಅಂದಾಗ ಮಾತ್ರ ಅವರು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿಯೇ ಯೇಸು ಕ್ರಿಸ್ತ ಮಕ್ಕಳ ಏಳಿಗೆಗೆ ಅಡ್ಡಿಪಡಿಸುವವರನ್ನು ಬೀಸುವ ಕಲ್ಲಿಗೆ ಕಟ್ಟಿ ಆಳವಾದ ಸಮುದ್ರಕ್ಕೆ ಎಸೆಯಬೇಕು ಎಂದು ಹೇಳಿದ್ದಾರೆ’ ಎಂದು ತಿಳಿಸಿದರು.

‘ಮೌಲ್ಯ, ತಿಳಿವಳಿಕೆ ಹಾಗೂ ವಿವೇಕ ಜ್ಞಾನದ ಮೂರು ಮುಖ್ಯ ತಿರುಳುಗಳಾಗಿವೆ. ಇವುಗಳನ್ನು ಒಳಗೊಂಡ ಶಿಕ್ಷಣವನ್ನು ಇಂದಿನ ಮಕ್ಕಳಿಗೆ ನೀಡಬೇಕಾದ ಅಗತ್ಯವಿದೆ’ ಎಂದು ಹೇಳಿದರು. ‘ಪ್ರಸ್ತುತಪಡಿಸುವಿಕೆ, ಅರ್ಥೈಸುವಿಕೆ, ಅನ್ವಯಿಸುವಿಕೆ ಮತ್ತು ಪುನರಾವರ್ತನೆ ಈ ನಾಲ್ಕು ಹಂತಗಳಲ್ಲಿ ಮಕ್ಕಳ ಗ್ರಹಿಕೆ ಶಕ್ತಿ ಹೆಚ್ಚಿಸಬೇಕಾಗಿದೆ. ಮಾನವನ ಮೆದುಳಿನಲ್ಲಿ 87 ಬಗೆಯ ಕೌಶಲಗಳಿವೆ. ಅವುಗಳ ಗುರುತಿಸುವಿಕೆಯೊಂದಿಗೆ ದೈವಿ ಜ್ಞಾನಗಳ ಪರಿಜ್ಞಾನಗಳನ್ನು ಬಳಸಿಕೊಂಡು ಬೋಧನೆ ಮಾಡಿದರೆ ಪರಿಪೂರ್ಣ ವ್ಯಕ್ತಿಗಳಾಗಲು ಸಾಧ್ಯ’ ಎಂದರು.

‘14 ವರ್ಷದ ವರೆಗೆ ಮಕ್ಕಳ ಬೌದ್ಧಿಕ ಮಟ್ಟ ಬಹಳ ಚುರುಕಾಗಿರುತ್ತದೆ. ಕಲಿಕೆ ಮತ್ತು ಗ್ರಹಿಕೆ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಪರಿಣಾಮಕಾರಿ ಬೋಧನೆ ಹಾಗೂ ಸರಿಯಾದ ಮಾರ್ಗದರ್ಶನ ದೊರೆತರೆ ಉತ್ತಮ ಸಾಧನೆ ಮಾಡಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

ಸೇಂಟ್ ಪೌಲ್ ಮೆಥೋಡಿಸ್ಟ್ ಕೇಂದ್ರ ಸಭೆಯ ಸಭಾ ಪಾಲಕ ಆನಂದ ಹೊಸೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯೇಸು ಕ್ರಿಸ್ತ ಮಕ್ಕಳನ್ನು ತನ್ನ ಅತ್ಯಂತ ನೆಚ್ಚಿನ ಹಾಗೂ ಪ್ರೀತಿಯ ಪ್ರತೀಕ ಎಂದಿದ್ದರು. ಅವರು ಅದ್ಭುತ ದೈವಿ ಶಿಕ್ಷಕರಾಗಿ ಈ ಭೂಮಿ ಮೇಲೆ ಅವತರಿಸಿ ಬಂದಿದ್ದರು’ ಎಂದು ತಿಳಿಸಿದರು.

‘ಪರಿಶುದ್ಧ ಆತ್ಮದ ಜ್ಞಾನವನ್ನು ಇಡೀ ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಬೇಸುಗೆಯೊಂದಿಗೆ ಸಾರಿದ್ದರು. ಜಗತ್ತಿನಲ್ಲಿ ವಿವಿಧ ಜ್ಞಾನ ಶಾಖೆಗಳ ವಿಶ್ವವಿದ್ಯಾಲಯಗಳು ಸಾಕಷ್ಟಿವೆ. ಆದರೆ ದೈವ ಜ್ಞಾನದೊಂದಿಗೆ ವಿವಿಧ ಜ್ಞಾನ ವಾಹಿನಿಗಳ ಬೋಧನೆಗಳ ವಿಶ್ವವಿದ್ಯಾಲಯಗಳ ಕೊರತೆ ಇದೆ. ಶಿಕ್ಷಕರು ಪ್ರವಾದಿ, ಪಾದ್ರಿ, ದೈವ ಸೇವಕರಿಗಿಂತ ವಿಶೇಷವಾಗಿದ್ದಾರೆ’ ಎಂದು ನುಡಿದರು.

ಶಿರೋಮಣಿ ತಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾನುವಾರ ಪಾಠ ಶಾಲೆಯ ಮೇಲ್ವಿಚಾರಕಿ ಶಶಿಕಲಾ ರವಿದಾಸ, ಎಲ್. ತುಕಾರಾಮ, ಸೈಮನ್, ಜೈಕಾರ್ ರತ್ನಪ್ಪ, ಬಿ.ಕೆ. ಸುಂದರರಾಜ, ಸದಾನಂದ, ಜಾನ್ ವೆಸ್ಲಿ, ಅನಿಲಕುಮಾರ ಕಮಠಾಣಾ ಇದ್ದರು. ಸುಧಾಕರ ಮಲಗಿ ಸ್ವಾಗತಿಸಿದರು. ವಿಜಯಕುಮಾರ ಆರ್. ವಂದಿಸಿದರು.

Post Comments (+)