‘ಮಾನವೀಯತೆ’ ಮೈಗೂಡಿಸಿಕೊಂಡ ಮಾದರಿ ಅಧಿಕಾರಿ

ಶನಿವಾರ, ಮೇ 25, 2019
33 °C

‘ಮಾನವೀಯತೆ’ ಮೈಗೂಡಿಸಿಕೊಂಡ ಮಾದರಿ ಅಧಿಕಾರಿ

Published:
Updated:
‘ಮಾನವೀಯತೆ’ ಮೈಗೂಡಿಸಿಕೊಂಡ ಮಾದರಿ ಅಧಿಕಾರಿ

ಚಿಕ್ಕಬಳ್ಳಾಪುರ: ಹಣ, ಅಧಿಕಾರ, ಜಾತಿ, ಧರ್ಮದ ಎಲ್ಲೆ ಮೀರಿದ ಮಾನವೀಯ ಸಮಾಜದಲ್ಲಿ ಬಹುದೊಡ್ಡ ಸ್ಥಾನವಿದೆ. ಅದನ್ನು ಮೈಗೂಡಿಸಿಕೊಳ್ಳಿ ಪಾಲಿಸುವವರು ವಿರಳ. ಅಂತಹ ವಿರಳರಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಆಗಿ ಕಾರ್ಯ ನಿರ್ವಹಿಸುತ್ತಿರುವ ನಂಜುಂಡಯ್ಯ ಒಬ್ಬರು.

ಕೋತಿಗಳೊಂದಿಗೆ ಮಾನವೀಯ ಸಂಬಂಧ ಬೆಸೆದುಕೊಂಡು ಮೂರು ವರ್ಷಗಳಿಂದ ‘ವಾನರ’ ಸಂಕುಲಕ್ಕೆ ನಿಯಮಿತವಾಗಿ ಆಹಾರ ನೀಡುತ್ತಿದ್ದಾರೆ. ಕೆಲಸದ ಜಾಗ ಬದಲಾದರೂ ಕೋತಿಗಳೊಂದಿಗಿನ ನಂಟು ಬದಲಾಗಿಲ್ಲ. 2014ರ ಜೂನ್‌ನಲ್ಲಿ ಎಸ್‌ಪಿ ಕಚೇರಿ ನಗರದಿಂದ ಚದುಲಪುರ ಬಳಿ ಇರುವ ರೇಷ್ಮೆ ಇಲಾಖೆ ಕಟ್ಟಡಕ್ಕೆ ಸ್ಥಳಾಂತರಗೊಂಡ ದಿನದಿಂದ ಆರಂಭವಾದ ಅವರ ವಾನರ ‘ಪ್ರೇಮ’ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ.

ಮೊದಮೊದಲು ನಂಜುಂಡಯ್ಯ ಅವರ ಕೈ ತುತ್ತು ತಿನ್ನಲು ಹಿಂದೇಟು ಹಾಕಿದ ವಾನರ ಸಮೂಹ ಈಗ ಬರುವಿಕೆಗಾಗಿ ಎದುರು ನೋಡುತ್ತ ನಿಗದಿತ ಸ್ಥಳದಲ್ಲಿ ಕಾಯುತ್ತಿರುತ್ತವೆ. ಆರಂಭದಲ್ಲಿ ನಾಲ್ಕು ಮರಿಗಳು ಸೇರಿದಂತೆ 10 ಕೋತಿಗಳಿಗೆ ಆಹಾರ ನೀಡುತ್ತಿದ್ದರು. ಎರಡು ವರ್ಷಗಳಲ್ಲಿ ಆ ಸಂಖ್ಯೆ 30ಕ್ಕೆ ಏರಿದೆ. ಆದರೂ ಬೇಸರಪಟ್ಟುಕೊಳ್ಳದೆ ಆಹಾರ ನೀಡುವುದನ್ನು ವ್ರತ’ದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ.

ನಂಜುಂಡಯ್ಯ ಅವರು ಈ ವಾನರ ಸಂಕುಲಕ್ಕೆ ನಿತ್ಯ ಬೆಳಿಗ್ಗೆ 11.30ರಿಂದ 12 ಮತ್ತು ಸಂಜೆ 4 ರಿಂದ 7ರ ಒಳಗೆ ಹೀಗೆ ಎರಡು ಹೊತ್ತು ತಪ್ಪದೆ ಬಿಸ್ಕತ್‌, ಬಾಳೆಹಣ್ಣು, ಕಡಲೆಕಾಯಿ, ಬ್ರೆಡ್‌, ಪಪ್ಪಾಯಿ, ಕರಬೂಜ ಹೀಗೆ ಒಂದಿಲ್ಲೊಂದು ಆಹಾರದ ಜತೆಗೆ ಕುಡಿಯಲು ನೀರು ಒದಗಿಸುವರು.

ನಿಗದಿತ ಸಮಯಕ್ಕೆ ಕಚೇರಿ ಆವರಣಕ್ಕೆ ಬರುವ ಕೋತಿಗಳು ಆಹಾರ ನೀಡುವುದು ಸ್ವಲ್ಪ ತಡ ಮಾಡಿದರೂ ಮೊದಲ ಮಹಡಿಯಲ್ಲಿದ್ದ ಎಸ್‌ಪಿ ಕಚೇರಿ ಕಿಟಕಿಗಳ ಬಳಿ ಠಳಾಯಿಸುತ್ತಿದ್ದವು. ಆಗಲೂ ಬರದಿದ್ದಾಗ ಕಿಟಕಿಯಲ್ಲಿ ಕೈ ತೂರಿಸಿ ನಂಜುಂಡಯ್ಯ ಅವರ ಅಂಗಿ ಎಳೆದು ಆಹಾರ ನೀಡುವಂತೆ ಪೀಡಿಸುತ್ತಿದ್ದುದು ಅಚ್ಚರಿ ಮೂಡಿಸುತ್ತಿತ್ತು ಎಂದು ಅವರ ಸಹೊದ್ಯೋಗಿಗಳು ಸ್ಮರಿಸುತ್ತಾರೆ.

ಕೋತಿಗಳಲ್ಲಿ ಮಕ್ಕಳ ಪ್ರೀತಿಯನ್ನು ಕಂಡ ನಂಜುಂಡಯ್ಯ, ಅದಕ್ಕಾಗಿ ತಮ್ಮ ಸಂಬಳದಲ್ಲಿ ಮೂರ್ನಾಲ್ಕು ಸಾವಿರ ಖರ್ಚು ಮಾಡುತ್ತಿದ್ದಾರೆ. ವಾನರ ಸಂಕುಲದ ‘ದಾಸೋಹ’ವನ್ನು ಬದುಕಿನ ಭಾಗವನ್ನಾಗಿ ಮಾಡಿಕೊಂಡವರಿಗೆ ಅದನ್ನು ಪೂರೈಸದಿದ್ದರೆ ಸಮಾಧಾನವಿಲ್ಲ. ಹೀಗಾಗಿ ರಜೆ ಅಥವಾ ಪರಸ್ಥಳಗಳಿಗೆ ಹೋಗಬೇಕಾದ ಕಚೇರಿಯ ಬೀರುವಿನಲ್ಲಿ 10–15 ದೊಡ್ಡ, ದೊಡ್ಡ ಬಿಸ್ಕಿಟ್‌ ಪ್ಯಾಕೆಟ್‌ಗಳ ಸಂಗ್ರಹವಿಟ್ಟು, ಸಹದ್ಯೋಗಿಗಳಿಗೆ ತಮ್ಮ ‘ಕಾಯಕ’ ತಪ್ಪದೆ ನಡೆಸಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರು.

ಕಿಸೆಯಲ್ಲಿ ದುಡ್ಡು ಇಲ್ಲದಿದ್ದಾಗ ಸಹದ್ಯೋಗಿಗಳ ಬಳಿ ಹಣ ಪಡೆದುಕೊಂಡು ಕೋತಿಗಳಿಗೆ ಆಹಾರ ಒದಗಿಸಿ ತೃಪ್ತಿ ಪಟ್ಟುಕೊಳ್ಳುತ್ತಿದ್ದ ನಂಜುಂಡಯ್ಯ ಅವರಿಗೆ, ಕಳೆದ ಆಗಸ್ಟ್‌ನಿಂದ ಎಸ್‌ಪಿ ಕಚೇರಿ ಚದುಲಪುರ ಕ್ರಾಸ್‌ನಿಂದ ಅಣಕನೂರು ಬಳಿ ನಿರ್ಮಿಸಿದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಅವರಿಗೆ ಬಳಿಕ ‘ಅಗಲಿಕೆ’ಯ ಬೇಸರದಲ್ಲಿದ್ದರು. ಸೋಜಿಗದ ಸಂಗತಿ ಎಂದರೆ ಇತ್ತೀಚೆಗಷ್ಟೇ ಚದುಲಪುರದ ಹಳೆ ಕಚೇರಿಯಿಂದ ನಂಜುಂಡಯ್ಯ ಅವರನ್ನು ಅರಸಿಕೊಂಡು ಕೋತಿಯೊಂದು ಐದಾರು ಕಿ.ಮೀ ದೂರದ ಅಣಕನೂರಿನಲ್ಲಿರುವ ಕಚೇರಿಗೆ ಬಂದು ಅವರ ನಾಲ್ಕೈದು ದಿನ ಅವರ ಕೈತುತ್ತು ಸವಿದು ಹೋಗಿದೆ.

ಕೋತಿಗಳ ಸಾನ್ನಿಧ್ಯದಿಂದ ದೂರವಾದರೂ ಅವುಗಳ ನಂಟು ಕಡಿದುಕೊಳ್ಳಲು ಒಪ್ಪದ ನಂಜುಂಡಯ್ಯ, ರಜಾ ದಿನ ಅಥವಾ ಬಿಡುವು ಸಿಕ್ಕಾಗಲೆಲ್ಲ ಚದುಲಪುರ ಹಳೆ ಕಚೇರಿ ಬಳಿ ಹೋಗಿ ‘ಎಲ್ಲಿದ್ದೀರಾ ಬನ್ರೋ’ ಎಂದು ಕರೆದರೆ ಸಾಕು, ಅವರ ಅಕ್ಕರೆಯ ಕೂಗಿಗೆ ವಾನರ ಸಮೂಹ ಕೈತುತ್ತಿಗಾಗಿ ಓಡಿ ಬರುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry