ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಡಲ ಕಿಚ್ಚಿನಲ್ಲಿ ಕೊನರಿದ ಚಿಗುರು’

Last Updated 22 ಅಕ್ಟೋಬರ್ 2017, 5:31 IST
ಅಕ್ಷರ ಗಾತ್ರ

ಗಜೇಂದ್ರಗಡ: ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಪಟ್ಟಣಕ್ಕೆ ನೂರಾರು ಲೈಂಗಿಕ ಅಲ್ಪಸಂಖ್ಯಾತರು ಬರುತ್ತಾರೆ. ಹಬ್ಬ ಮುಗಿಯುವರೆಗೆ ಇಲ್ಲಿ ಸುತ್ತಾಡುವ ಅವರು ಅಂಗಡಿಗಳ ಮುಂದೆ ಹಾಡಿ, ಕುಣಿದು ಒಂದಿಷ್ಟು ಹಣ ಸಂಪಾದಿಸಿ ಮರಳುತ್ತಾರೆ. ಲಕ್ಷ್ಮೀಪೂಜೆ ಸಂದರ್ಭದಲ್ಲಿ ತೃತೀಯ ಲಿಂಗಿಗಳನ್ನು ಅಂಗಡಿಗೆ ಬರಮಾಡಿಕೊಂಡರೆ ವ್ಯಾಪಾರ, ವಹಿವಾಟು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ, ದೀಪಾವಳಿ ಅವರ ಬದುಕಿನಲ್ಲೂ ಒಂದಿಷ್ಟು ಬೆಳಕು ಮೂಡಿಸುವ ಕಾಲ.

ಈ ಬಾರಿಯೂ ರಾಯಚೂರು, ಸಿಂಧನೂರು ಭಾಗಗಳಿಂದ ಗಜೇಂದ್ರಗಡಕ್ಕೆ ಹಲವು ಲೈಂಗಿಕ ಅಲ್ಪಸಂಖ್ಯಾತರು ಬಂದಿದ್ದರು. ‘ರಾಯಚೂರದಲ್ಲಿ ‘ಆಪ್ತ ಮಿತ್ರ’ ಎಂಬ ಸಂಘಟನೆ ಕಟ್ಟಿಕೊಂಡು ಆ ಮೂಲಕ ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ.

ಸಮಾಜ ಮುಖಿಯಾಗಿ ಕೆಲಸ ಮಾಡುವ ನಮ್ಮನ್ನು ಮಂಗಳಮುಖಿಯರೆಂದು ಜರೆಯಬೇಡಿ. ಲಿಂಗ ಪರಿವರ್ತಿತರಾದ ನಾವು ಲೈಂಗಿಕ ಅಲ್ಪಸಂಖ್ಯಾತರು. ನಮಗೂ ಬದುಕುವ ಹಕ್ಕಿದೆ. ನಮ್ಮನ್ನೂ ಮನುಷ್ಯರನ್ನಾಗಿ ಕಂಡರೆ ಸಾಕು’ ಎಂದು ಈ ತಂಡದ ಮುಖ್ಯಸ್ಥೆ ಮಧು ಅಭಿಪ್ರಾಯಪಟ್ಟರು.

ಮಧು ಅವರ ಜತೆಗೆ ಅನಿತಾ, ಸಂಜೀವಿನಿ, ಸೃಜಿ, ಶರಣಮ್ಮ, ಭಾಗ್ಯಾ, ಜಮುನಾ, ಶ್ವೇತಾ, ರೇಖಾ, ಹುಸೇನಮ್ಮ,ರಾಮಕ್ಕ, ಶಿಲ್ಪಾ ಇದ್ದರು. ತಾವೇ ಡೋಲು ಬಡಿಯುತ್ತಾ, ಹಾಡುತ್ತಾ, ಅದಕ್ಕೆ ತಕ್ಕಂತೆ ಕುಣಿಯುತ್ತಾ ಪ್ರತಿ ಅಂಗಡಿಗಳಿಗೆ ಅವರು ಭೇಟಿ ನೀಡುತ್ತಿದ್ದರು. ವರ್ತಕರು ನೀಡಿದ್ದನ್ನು ಸ್ವೀಕರಿಸುತ್ತಿದ್ದರು.

ದೀಪಾವಳಿ ಸಂದರ್ಭದಲ್ಲಿ ಪ್ರತಿ ಅಂಗಡಿಯಿಂದ ₹ 100, ₹ 150 ಹಣ ಪಡೆಯುತ್ತಾರೆ. ಉಳಿದ ದಿನಗಲ್ಲಿ ₹ 5, ₹ 10 ಪಡೆಯುತ್ತಾರೆ ಎಂದು ಪಟ್ಟಣದ ವರ್ತಕರು ಹೇಳಿದರು.
‘ಯಾರ ಮನೆಯಲ್ಲಿ ಬೇಕಾದರೂ ಲೈಂಗಿಕ ಅಲ್ಪಸಂಖ್ಯಾತರು ಜನಿಸಬಹುದು. ಅವರಿಗೆ ಉತ್ತಮ ಶಿಕ್ಷಣ ನೀಡಬೇಕು, ಮುಖ್ಯವಾಗಿ ಅವರನ್ನು ಅರ್ಥ ಮಾಡಿಕೊಳ್ಳಬೇಕು. ಅದು ಆಗದಿದ್ದರೆ ಅವರನ್ನು ನಮ್ಮ ಸಂಸ್ಥೆಗೆ ಕಳುಹಿಸಿ. ನಾವು ಅವರನ್ನು ಸಮಾಜಮುಖಿ ವ್ಯಕ್ತಿಯನ್ನಾಗಿ ಮಾಡುತ್ತೇವೆ’ ಎಂದು ಮಧು ಹೇಳಿದರು.

‘ಸಮಾಜ ಇಂದಿಗೂ ನಮ್ಮನ್ನು ತೀರಾ ನಿಕೃಷ್ಟವಾಗಿ ಕಾಣುತ್ತದೆ. ಹೀಗಾಗಿ, ನಮ್ಮ ಮೇಲೆ ಶೋಷಣೆ ನಿರಂತರವಾಗಿ ನಡೆದಿದೆ. ಇವೆಲ್ಲವನ್ನೂ ಎದುರಿಸಿ ಸಮಾಜದಲ್ಲಿ ಘನತೆಯಿಂದ ಬದುಕುವುದನ್ನು ಕಲಿತಿದ್ದೇವೆ. ಪ್ರತಿ ತೃತೀಯ ಲಿಂಗಿಯ ಒಳಗೂ ಒಬ್ಬ ಕಲಾವಿದ ಇರುತ್ತಾನೆ. ಹಾಡು, ಕುಣಿತ, ಡೋಲು, ಹಾರ್ಮೊನಿಯಂ, ಹೀಗೆ ಒಂದಿಲ್ಲೊಂದು ಕಲೆಗಳನ್ನು ಕರಗತ ಮಾಡಿಕೊಂಡಿರುತ್ತಾರೆ. ಒಡಲ ಕಿಚ್ಚಿನಲ್ಲಿ ಕೊನರಿದ ಚಿಗುರು ನಾವು. ಯಾವುದೇ ಚಿಂತೆಯ ಮೂಟೆಯನ್ನು ಹೊತ್ತು ಸಾಗದ ಸ್ವತಂತ್ರರು’ ಎಂದು ತಂಡದಲ್ಲಿದ್ದ ಅನಿತಾ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT