ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ–ಬೀದರ್‌ ರೈಲು ಮಾರ್ಗ ಸಿದ್ಧ

Last Updated 22 ಅಕ್ಟೋಬರ್ 2017, 5:59 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ–ಬೀದರ್‌ ಮಧ್ಯದ 104 ಕಿ.ಮೀ. ಉದ್ದದ ನೂತನ ರೈಲು ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅ.29ರಂದು ಬೀದರ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಇದನ್ನು ಲೋಕಾರ್ಪಣೆಗೊಳಿಸಲಿದ್ದು, ಈ ಭಾಗದ ಜನರ ಬಹು ವರ್ಷಗಳ ಕನಸು ನನಸಾಗಲಿದೆ.

ಈ ಯೋಜನೆಗೆ ಚಾಲನೆ ದೊರೆತಿದ್ದು 1999ರಲ್ಲಿ. ಅನುದಾನದ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿತ್ತು. ಕಲಬುರ್ಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಅಗತ್ಯ ಅನುದಾನ ನೀಡಿ ಕಾಮಗಾರಿಗೆ ಚುರುಕು ನೀಡಿದ್ದರು.

ಸುರಂಗ ಮಾರ್ಗ: ಬೀದರ್‌ನಿಂದ ಹುಮನಾಬಾದ್‌ ವರೆಗೆ ಹಾಗೂ ಕಲಬುರ್ಗಿಯಿಂದ ಮಹಾಗಾಂವ ವರೆಗೆ ಈ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿದೆ. ಈ ಮಾರ್ಗದ ಸುರಕ್ಷತೆ ಪರಿಶೀಲನೆಯೂ ನಡೆದಿದೆ. ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳ ಗಡಿಯಲ್ಲಿರುವ ಮರಗುತ್ತಿ ಗ್ರಾಮದ ಸಮೀಪ 1.67 ಕಿ.ಮೀ. ಉದ್ದದ ಸುರಂಗ ಮಾರ್ಗ ಕಾಮಗಾರಿ ಈಗ ಪೂರ್ಣಗೊಂಡಿದೆ. ಈ ಸುರಂಗ ಮಾರ್ಗಕ್ಕೇ ಅಂದಾಜು ₹75 ಕೋಟಿ ವ್ಯಯಿಸಲಾಗಿದೆ.

‘ಈ ಸುರಂಗ ಮಾರ್ಗದಲ್ಲಿ ಹಳಿ ಜೋಡಣೆ ಮುಕ್ತಾಯಗೊಂಡಿದೆ. ವಿದ್ಯುತ್ತೀಕರಣ ಕಾಮಗಾರಿ ಮುಗಿಯುವ ಹಂತದಲ್ಲಿದೆ’ ಎಂದು ಸೈಟ್‌ ಎಂಜಿನಿಯರ್‌ ಪ್ರಶಾಂತ ಸೇಡಂ ತಿಳಿಸಿದರು. ಕಲಬುರ್ಗಿ–ಬೀದರ್‌ ಮಧ್ಯೆ 13 ನೂತನ ರೈಲು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕಲಬುರ್ಗಿ ಬಳಿಯ ತಾಜಸುಲ್ತಾನಪುರ ಬಳಿ ಗೂಡ್ಸ್‌ ಶೆಡ್‌ ನಿರ್ಮಾಣವೂ ಪೂರ್ಣಗೊಂಡಿದೆ.

ಕೇಂದ್ರೀಯ ರೈಲು ಸುರಕ್ಷತಾ ಆಯುಕ್ತರು ಹುಮನಾಬಾದ್‌ನಿಂದ ಹಳ್ಳಖೇಡ (ಕೆ)ವರೆಗಿನ ಮಾರ್ಗದಲ್ಲಿ ಶನಿವಾರ ಪ್ರಯೋಗಿಕ ರೈಲಿನಲ್ಲಿ ಸಂಚರಿಸಿ ಹಳಿ ಕಾಮಗಾರಿ ಪರಿಶೀಲಿಸಿದರು. ಭಾನುವಾರ ಹಳ್ಳಿಖೇಡ್‌ (ಕೆ)ಯಿಂದ ಕಮಲಾಪುರ ವರೆಗಿನ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. ಕಾಮಗಾರಿಯ ವಿಳಂಬದಿಂದಾಗಿ ಈ ಮಾರ್ಗಕ್ಕೆ ಮೂಲ ಯೋಜನಾ ಮೊತ್ತದ ನಾಲ್ಕು ಪಟ್ಟು ಹಣ ವ್ಯಯವಾಗಿದೆ.

ಅಂಕಿ ಅಂಶ

₹369 ಕೋಟಿ ಆರಂಭಿಕ ಯೋಜನಾ ಮೊತ್ತ

₹1,542 ಕೋಟಿ ಪರಿಷ್ಕೃತ ಯೋಜನಾ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT