ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ನೀತಿಯ ಜಮಾನ ಕೊನೆ: ಅನಂತಕುಮಾರ್ ಹೆಗಡೆ

Last Updated 22 ಅಕ್ಟೋಬರ್ 2017, 6:07 IST
ಅಕ್ಷರ ಗಾತ್ರ

ಹೊನ್ನಾವರ: ‘ಮೀಸಲಾತಿ ನೀತಿಯ ಜಮಾನ ಕೊನೆಗೊಂಡಿದ್ದು, ಮೀಸಲಾತಿ ಅಥವಾ ಪ್ರಮಾಣಪತ್ರಗಳು ವಿದ್ಯಾರ್ಥಿಯ ಬದುಕಿನಲ್ಲಿ ಗೆಲುವು ತಂದುಕೊಡಲಾರದು’ ಎಂದು ಕೇಂದ್ರ ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಹೇಳಿದರು.

ಎಂಪಿಇ ಸೊಸೈಟಿ ಇಲ್ಲಿ ಸ್ಥಾಪಿಸಿರುವ ‘ಡಾ.ಎಂ.ಪಿ.ಕರ್ಕಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಎಂಡ್ ರೀಸರ್ಚ್’ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಬದುಕಿನ ಯಶಸ್ಸಿಗೆ ಪರಿಶ್ರಮ ಅಗತ್ಯ. ಉದ್ಯೋಗಕ್ಕೆ ಪ್ರಮಾಣಪತ್ರವೊಂದೇ ಮಾನದಂಡವಾಗಿದ್ದ ಕಾಲದಲ್ಲಿ ಅದರ ದಂಧೆ ನಡೆಯಿತು.

ಅದರೊಂದಿಗೆ ಕೌಶಲ ಕೂಡ ಅಗತ್ಯವಾದಾಗ ಸ್ಪರ್ಧಾ ಜಗತ್ತಿನ ಚಿತ್ರಣ ಬದಲಾಗಿದೆ. ಪರಿಶ್ರಮ ಈಗ ಮಹತ್ವದ ಸ್ಥಾನ ಪಡೆದಿದೆ. ರಕ್ತ ಚೆಲ್ಲದೆ ಯುದ್ಧದಲ್ಲಿ ಗೆಲುವು ಹೇಗೆ ಸಾಧ್ಯವಿಲ್ಲವೋ, ಪರಿಶ್ರಮ ಇಲ್ಲದೆ ಬದುಕಿನ ಯುದ್ಧ ಗೆಲ್ಲಲಾಗದು’ ಎಂದು ಅಭಿಪ್ರಾಯಪಟ್ಟರು.

‘ಸಂಕಲ್ಪ ಯೋಜನೆಯಡಿ ₹ 6.50 ಸಾವಿರ ಕೋಟಿ ವೆಚ್ಚದಲ್ಲಿ ಉದ್ಯಮಶೀಲತೆ ಬೆಳೆಸಲು ಕಾರ್ಯಕ್ರಮ ರೂಪಿಸಲಾಗುತ್ತಿದ್ದು, ಸದ್ಯದಲ್ಲೇ ಈ ಕುರಿತು ಪ್ರಕಟಣೆ ನೀಡಲಾಗುವುದು. ಇದರ ಫಲಾನುಭವಿಗಳಾಗಲು ಯಾವುದೇ ರಾಜಕೀಯ ವ್ಯಕ್ತಿಗಳ ಶಿಫಾರಸು ಅಗತ್ಯವಿಲ್ಲ. ಅರ್ಹತೆ ಮಾತ್ರ ಇದಕ್ಕೆ ಮಾನದಂಡವಾಗಲಿದೆ’ ಎಂದು ತಿಳಿಸಿದರು.

‘ಉಪಕರಣ, ಕಟ್ಟಡಗಳಿಗಿಂತ ಮಾನವ ಸಂಪನ್ಮೂಲಕ್ಕೆ ಹೆಚ್ಚಿನ ಆದ್ಯತೆ ಇರಬೇಕು. ಜಿಲ್ಲೆಯ ಜನರಲ್ಲಿ ಅದ್ಭುತ ವಿಚಾರ ಶಕ್ತಿಯಿದ್ದು, ಯೋಗ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಸಂಶೋಧನೆ, ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ಜಾಗತಿಕ ಮಟ್ಟದಲ್ಲಿ ಒಪ್ಪಂದ ಏರ್ಪಡುತ್ತಿದ್ದು, ಈ ಕ್ಷೇತ್ರಗಳು ವಿಸ್ತೃತವಾಗುತ್ತಿರುವುದರಿಂದ ಇಲ್ಲಿರುವ ವಿಫುಲ ಅವಕಾಶಗಳನ್ನು ಪಡೆಯಲು ಮುಂದೆ ಬರುವ ಸಂಸ್ಥೆಗಳಿಗೆ ನಮ್ಮ ಸಚಿವಾಲಯ ಅಗತ್ಯ ಸಹಕಾರ ನೀಡಲಿದೆ’ ಎಂದು ಹೇಳಿದರು.

‘ಕೌಶಲಾಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲೆಯ ಜನರಿಗಾಗಿ ಹೊನ್ನಾವರದ ಎಸ್.ಡಿ.ಎಂ ಕಾಲೇಜಿನಲ್ಲಿ ಕಾರ್ಯಾಗಾರ ಏರ್ಪಡಿಸಲಾಗುವುದು’ ಎಂದು ತಿಳಿಸಿದರು.
ಕಾಲೇಜಿನ ‘ವರ್ಚ್ಯುವಲ್ ಲ್ಯಾಬ್’ ಸ್ಥಾಪನೆಗೆ ₹ 15 ಲಕ್ಷ ನೀಡಿದ್ದಕ್ಕಾಗಿ ಸಚಿವರನ್ನು ಪ್ರಾಂಶುಪಾಲ ಎಸ್.ಎಸ್.ಹೆಗಡೆ ಅಭಿನಂದಿಸಿದರು. ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಪಿ.ಐ. ಹೆಗಡೆ, ಖಜಾಂಚಿ ಉಮೇಶ ನಾಯ್ಕ, ಜಂಟಿ ಕಾರ್ಯದರ್ಶಿ ಎಸ್.ಎಂ.ಭಟ್ಟ, ಸದಸ್ಯ ನಾಗರಾಜ ಕಾಮತ, ಡಾ.ಎಸ್.ಪಿ ಹೆಗಡೆ, ಪಿಯು ಕಾಲೇಜಿನ ಪ್ರಾಂಶುಪಾಲ ಎಂ.ಎಚ್.ಭಟ್ಟ ಉಪಸ್ಥಿತರಿದ್ದರು. ಎಂಪಿಇ ಸೊಸೈಟಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಸ್ವಾಗತಿಸಿದರು. ನಾಗರಾಜ ಹೆಗಡೆ, ಪ್ರಶಾಂತ ಹೆಗಡೆ ನಿರೂಪಿಸಿದರು. ಡಾ.ಶಿವರಾಮ ಶಾಸ್ತ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT