ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ಮಡಿಕೇರಿ ಕೋಟೆ ಅಭದ್ರ!

Last Updated 22 ಅಕ್ಟೋಬರ್ 2017, 6:20 IST
ಅಕ್ಷರ ಗಾತ್ರ

ಮಡಿಕೇರಿ: ಮಾಸಿದ ಬಣ್ಣ, ಕಪ್ಪಿಟ್ಟ ಗೋಡೆಗಳು, ಮತ್ತೊಂದು ಮಗ್ಗುಲಲ್ಲಿ ಹಾರಿ ಹೋಗಿರುವ ಚಾವಣಿ, ಮಳೆಯ ರಕ್ಷಣೆಗೆ ಪ್ಲಾಸ್ಟಿಕ್‌ ಆಸರೆ... ಹೀಗೆ ‘ಮಡಿಕೇರಿಯ ಐತಿಹಾಸಿಕ ಕೋಟೆ’ ಅವನತಿ ಹಾದಿಯಲ್ಲಿದೆ.

ಅರಸರ ಕಾಲದ ಆಳ್ವಿಕೆಯ ಕುರುಹು ಆಗಿದ್ದ ಕೋಟೆಯು ಕೆಲವೇ ವರ್ಷಗಳಲ್ಲಿ ನೆನಪಿನ ಪುಟ ಸೇರುವ ಆತಂಕ ಎದುರಾಗಿದೆ. ಕೊಡಗು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಕೋಟೆಯೂ ಒಂದು. ಆದರೆ, ನಿರ್ವಹಣೆಯ ಕೊರತೆ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಒಂದೊಂದೇ ಭಾಗವು ಕುಸಿಯುತ್ತಿದೆ.

ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡಗಳ ಕೊರತೆಯಿದ್ದು ಕೋಟೆಯೇ ‘ಕೊಡಗಿನ ಆಡಳಿತ ಸೌಧ’ವಾಗಿದೆ! ಇದನ್ನು ಹಳೆ ವಿಧಾನಸೌಧವೆಂದೇ ಕರೆಯುತ್ತಾರೆ. ಜಿಲ್ಲಾ ಪಂಚಾಯಿತಿ ಕಚೇರಿ, ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಅಂಗವಿಕಲರ ಇಲಾಖೆ, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್‌, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ ಹಾಗೂ ವೀಣಾ ಅಚ್ಚಯ್ಯ ಅವರ ಜನಸಂಪರ್ಕ ಕಚೇರಿಗಳೂ ಈ ಅರಮನೆಯಲ್ಲಿವೆ. ಜತೆಗೆ, ಜಿಲ್ಲಾ ಗ್ರಂಥಾಲಯ, ನ್ಯಾಯಾಲಯ ಸಂಕೀರ್ಣ, ಕೃಷಿ ಇಲಾಖೆಯ ಕಚೇರಿಯೂ ಇದೇ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಆವರಣಕ್ಕೆ ಪ್ರತಿನಿತ್ಯ ನೂರಾರು ವಾಹನಗಳು ಬಂದುಹೋಗುತ್ತಿವೆ. ಕಾರ್ಯಭಾರಕ್ಕೆ ಕೋಟೆಯು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಸಂರಕ್ಷಿತ ಪ್ರದೇಶವೆಂಬ ಸೂಚನಾ ಫಲಕ ಅಳವಡಿಸಲಾಗಿದ್ದರೂ ಕಟ್ಟಡಕ್ಕೆ ಹಾನಿಗೊಳಿಸುವ ಹಾಗೂ ಅಪರೂಪದ ಛಾಯಾಚಿತ್ರಗಳನ್ನು ವಿರೂಪಗೊಳಿಸುವ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಫಿರಂಗಿಗಳು, ಅರಸರು ಬಳಸುತ್ತಿದ್ದ ಪರಿಕರಗಳನ್ನೂ ಸಂರಕ್ಷಣೆ ಮಾಡಿಲ್ಲ. ಕೋಟೆ ವೀಕ್ಷಿಸಿದರೆ ನಿರಾಸೆ ಉಂಟಾಗುತ್ತಿದೆ ಎಂಬುದು ಪ್ರವಾಸಿಗರ ಕೊರಗು. ಸಮೀಪದ ಕೆ.ನಿಡುಗಣಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಪಂಚಾಯಿತಿಯ ಕಟ್ಟಡ ಮಾತ್ರ ಮೇಲೇರುತ್ತಿಲ್ಲ. ಹೀಗಾಗಿ, ಸದ್ಯಕ್ಕೆ ಕೋಟೆಗೆ ಮುಕ್ತಿ ಸಿಗುವಂತೆ ಕಾಣಿಸುತ್ತಿಲ್ಲ.

ಇತಿಹಾಸ: ಹಾಲೇರಿವಂಶದ ಅರಸರ ಕಾಲದಲ್ಲಿ ಮುದ್ದುರಾಜ ಎಂಬಾತ 17ನೇ ಶತಮಾನದಲ್ಲಿ ಈ ಜಾಗದಲ್ಲಿ ಮಣ್ಣಿನ ಕೋಟೆ ಹಾಗೂ ಅರಮನೆ ಕಟ್ಟಿಸಿದ್ದ. ಇದನ್ನೇ ಟಿಪ್ಪು ಸುಲ್ತಾನ್‌ ಕಲ್ಲಿನಲ್ಲಿ ಪುನರ್‌ರಚಿಸಿ ಈ ಸ್ಥಳಕ್ಕೆ ‘ಜಾಫರಾಬಾದ್‌’ ಎಂದು ಕರೆದ. 1790ರಲ್ಲಿ ದೊಡ್ಡ ವೀರರಾಜೇಂದ್ರನು ಈ ಕೋಟೆಯನ್ನು ವಶಪಡಿಸಿಕೊಂಡ. ಬಳಿಕ 1834ರಲ್ಲಿ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ಇತಿಹಾಸ ಹೇಳುತ್ತದೆ.

ನಗರದ ಯಾವುದೇ ಮೂಲೆಯಿಂದ ವೀಕ್ಷಿಸಿದರೂ ಕೋಟೆ ಎದ್ದು ಕಾಣಿಸುವಂತಿದೆ. ಇಡೀ ಕೋಟೆ ವೃತ್ತಾಕಾರದಲ್ಲಿದ್ದು ದ್ವಾರದಲ್ಲಿನ ಉಬ್ಬುಶಿಲ್ಪಗಳು ಗಮನ ಸೆಳೆಯುತ್ತವೆ. ಎರಡು ಬೃಹತ್‌ ಆನೆಯ ಶಿಲ್ಪಗಳಿವೆ. 1855ರಲ್ಲಿ ನಿರ್ಮಾಣವಾಗಿದ್ದ ಚರ್ಚ್‌ನಲ್ಲಿ ರಾಜ್ಯ ಪ್ರಾಚ್ಯವಸ್ತು ಇಲಾಖೆಯ ವಸ್ತುಸಂಗ್ರಾಹಲಯವಿದೆ. 1812ರಲ್ಲಿ ಇಮ್ಮಡಿ ಲಿಂಗರಾಜ ಒಡೆಯರ ಕಾಲದಲ್ಲಿ ನಿರ್ಮಿಸಲಾಗಿದ್ದ ಅರಮನೆಯಲ್ಲಿ ಸರ್ಕಾರಿ ಕಚೇರಿಗಳಿದ್ದು, ಅರಮನೆ ಶಿಥಿಲಾವಸ್ಥೆಗೆ ತಲುಪಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಒಂದು ಭಾಗದ ಚಾವಣಿ ಹಾರಿ ಹೋಗಿದ್ದು, ನೆಲ ಕಚ್ಚುವ ಹಂತ ತಲುಪಿದೆ.

‘ಸರ್ಕಾರಿ ಸಿಬ್ಬಂದಿ ಆತಂಕದಲ್ಲಿ ಕೆಲಸ ನಿರ್ವಹಿಸಿದರೆ, ಪ್ರವಾಸಿಗರು ಅರಮನೆ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅಪೂರ್ವ ಛಾಯಾಚಿತ್ರಗಳೂ ಕಳೆಗುಂದುತ್ತಿವೆ. ಅರಸರ ಇತಿಹಾಸ ಸಾರುವ ಅರಮನೆ ಕಣ್ಣೆದುರೇ ಇತಿಹಾಸ ಸೇರುತ್ತಿದ್ದರೂ ಪುರಾತತ್ವ ಇಲಾಖೆ ಸಂರಕ್ಷಣೆಗೆ ಕ್ರಮ ಕೈಗೊಂಡಿಲ್ಲ’ ಎಂದು ಪ್ರವಾಸಿ ಗೈಡ್‌ ಪ್ರಕಾಶ್‌ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT