ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಭಯದ ನಡುವೆ ಮಕ್ಕಳ ಕಲಿಕೆ

Last Updated 22 ಅಕ್ಟೋಬರ್ 2017, 6:33 IST
ಅಕ್ಷರ ಗಾತ್ರ

ಕೋಲಾರ: ಮಳೆ ಬಂದರೆ ಸೋರುವ ಸೂರು. ಶಿಥಿಲಾವಸ್ಥೆಯಲ್ಲಿರುವ ಚಾವಣಿ. ಸುಣ್ಣ ಬಣ್ಣ ಕಾಣದ ಗೋಡೆಗಳು. ಕೊಠಡಿ ತುಂಬಾ ಕತ್ತಲು. ಸದಾ ಜೀವ ಭಯದ ನಡುವೆ ವಿದ್ಯಾರ್ಥಿಗಳ ಕಲಿಕೆ– ಇದು ಜಿಲ್ಲೆಯ ಬಹುಪಾಲು ಸರ್ಕಾರಿ ಶಾಲೆಗಳ ದುಸ್ಥಿತಿ.

ರಾಜ್ಯದ ಮೂಡಣ ಬಾಗಿಲು ಎಂದೇ ಹೆಸರಾಗಿರುವ ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದಿದೆ. ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಸಮಸ್ಯೆಗಳು ಒಂದೆರಡಲ್ಲ. ಶಿಕ್ಷಕರ ಕೊರತೆ, ಕುಡಿಯುವ ನೀರು, ವಿದ್ಯುತ್‌, ಶೌಚಾಲಯ, ಪೀಠೋಪಕರಣ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇದೆ.

ಜಿಲ್ಲೆಯ ಆರು ಶೈಕ್ಷಣಿಕ ವಲಯಗಳಲ್ಲಿ 1,205 ಸರ್ಕಾರಿ ಕಿರಿಯ ಪ್ರಾಥಮಿಕ, 646 ಹಿರಿಯ ಪ್ರಾಥಮಿಕ ಹಾಗೂ 141 ಪ್ರೌಢ ಶಾಲೆಗಳಿವೆ. ಶಿಕ್ಷಣ ಇಲಾಖೆಯು ಇತ್ತೀಚೆಗೆ ನಡೆಸಿದ ಸರ್ವೆ ಪ್ರಕಾರ ಒಟ್ಟಾರೆ ಸರ್ಕಾರಿ ಶಾಲೆಗಳಿಗೆ 161 ಹೆಚ್ಚುವರಿ ಕೊಠಡಿಗಳು ಬೇಕಿವೆ. ಜತೆಗೆ 705 ಕೊಠಡಿಗಳು ದುರಸ್ತಿ ಆಗಬೇಕಿವೆ ಮತ್ತು 342 ಶೌಚಾಲಯಗಳ ಅಗತ್ಯವಿದೆ.

ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ₹ 12.22 ಕೋಟಿ, ಶಿಥಿಲ ಕೊಠಡಿಗಳ ದುರಸ್ತಿಗೆ ₹ 9.52 ಕೋಟಿ ಹಾಗೂ ಶೌಚಾಲಯಗಳ ನಿರ್ಮಾಣಕ್ಕೆ ₹ 4.91 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ವಿದ್ಯಾರ್ಥಿಗಳ ಬವಣೆ: ಶಾಲಾ ಕಟ್ಟಡಗಳ ಅವ್ಯವಸ್ಥೆ ಮತ್ತು ಮೂಲಸೌಕರ್ಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬವಣೆ ಪಡುವಂತಾಗಿದೆ. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ಕೊಠಡಿಗಳ ಸಂಖ್ಯೆ ಕಡಿಮೆ ಇದೆ. ಅಂತಹ ಶಾಲೆಗಳಲ್ಲಿ ಮೂರ್ನಾಲ್ಕು ತರಗತಿಗಳ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಕೂರಿಸಿ ಪಠ್ಯ ಬೋಧನೆ ಮಾಡಲಾಗುತ್ತಿದೆ.

ಮತ್ತೆ ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಹೀಗಾಗಿ ಮೂರ್ನಾಲ್ಕು ತರಗತಿಗಳ ವಿದ್ಯಾರ್ಥಿಗಳಿಗೆ ಒಟ್ಟಿಗೆ ಪಾಠ ಮಾಡಲಾಗುತ್ತಿದೆ. ಜತೆಗೆ ಹಾಲಿ ಶಿಕ್ಷಕರೇ ಮೂರ್ನಾಲ್ಕು ವಿಷಯಗಳನ್ನು ಬೋಧಿಸುವ ಪರಿಸ್ಥಿತಿ ಇದೆ. ಇದರಿಂದ ಶಿಕ್ಷಕರ ಮೇಲೆ ಕಾರ್ಯ ಒತ್ತಡ ಹೆಚ್ಚಿದೆ.

ಕುಸಿದ ಶಾಲೆಗಳು: ಜಿಲ್ಲೆಯಲ್ಲಿ ಒಂದೂವರೆ ತಿಂಗಳಲ್ಲಿ ಧಾರಾಕಾರವಾಗಿ ಸುರಿದ ಮಳೆಯು ಸರ್ಕಾರಿ ಶಾಲೆಗಳ ಚಿತ್ರಣವನ್ನೇ ಬದಲಿಸಿದೆ. ಮಳೆಗೆ ಹಲವೆಡೆ ಶಾಲಾ ಕಟ್ಟಡಗಳು ಕುಸಿದಿವೆ. ಕೋಲಾರ ತಾಲ್ಲೂಕಿನ ಹೊದಲವಾಡಿ, ಕೋಟಿಗಾನಹಳ್ಳಿ, ಮಾಲೂರು ತಾಲ್ಲೂಕಿನ ಬೈರಸಂದ್ರ, ಗಂಗಸಂದ್ರ, ಚೌರಮಂಗಲ, ತೊರ್ನಹಳ್ಳಿ, ಮುಳಬಾಗಿಲು ತಾಲ್ಲೂಕಿನ ಕಿರುಮಣಿ, ಬ್ಯಾಡರಹಳ್ಳಿ ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಸಾಗರ, ಮಿಟ ಗಾನಹಳ್ಳಿ, ಬುರುಕಾಯಲ ಕೋಟೆ ಗ್ರಾಮದಲ್ಲಿ ಶಾಲೆಗಳು ಕುಸಿದಿವೆ.

ಅನೇಕ ಶಾಲಾ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಆತಂಕ ಎದುರಾಗಿದೆ. ಇದರಿಂದ ಶಿಕ್ಷಕರು ಮತ್ತು ಮಕ್ಕಳು ಶಾಲೆಯೊಳಗೆ ಹೋಗಲು ಭಯ ಪಡುವಂತಾಗಿದೆ. ಸುರಕ್ಷತೆ ದೃಷ್ಟಿಯಿಂದ ತರಗತಿಗಳನ್ನು ಬೇರೆ ಕೊಠಡಿಗಳಿಗೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ಕೊಠಡಿಗಳು ಇಲ್ಲದ ಶಾಲೆಗಳಲ್ಲಿ ಬಯಲಿನಲ್ಲಿ ಮರಗಳ ಕೆಳಗೆ ಕೂರಿಸಿ ಪಾಠ ಅನಿವಾರ್ಯ ಸ್ಥಿತಿ ಎದುರಾಗಿದೆ.

ಶೌಚಾಲಯವಿಲ್ಲ: ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಿ ಇತ್ತೀಚೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಲಾಗಿದೆ. ಆದರೆ 342 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎಂಬ ಸಂಗತಿ ಪರಿಶೀಲನೆಯಿಂದ ಗೊತ್ತಾಗಿದೆ. ಅಂತಹ ಶಾಲೆಗಳಲ್ಲಿ ವಿದ್ಯಾರ್ಥಿಗಳು ಬಯಲಿನಲ್ಲೇ ಬಹಿರ್ದೆಸೆಗೆ ಹೋಗುವ ಪರಿಸ್ಥಿತಿ
ಇದೆ.

ಕೆಲ ಶಾಲೆಗಳಲ್ಲಿ ಶೌಚಾಲಯ ಇದ್ದರೂ ನೀರಿನ ಸೌಕರ್ಯವಿಲ್ಲದ ಕಾರಣ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಆ ಶಾಲೆಗಳ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಗೋಳು ಹೇಳತೀರದು. ಶಾಲೆಗಳಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ವರ್ಷವೇ ಕಳೆದಿವೆ. ಆದರೂ ಅವುಗಳನ್ನು ಸರಿ ಮಾಡಿಸುವ ಭಾಗ್ಯ ಇನ್ನು ಕೂಡಿ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT