ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರಲ್ಲಿ ಮೂಡಿದ ಗೊಂದಲ ಮುಖ್ಯಸ್ಥರ ಗಮನಕ್ಕೆ

Last Updated 22 ಅಕ್ಟೋಬರ್ 2017, 6:56 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಸಿ.ಎಚ್‌.ವಿಜಯಶಂಕರ್‌ ಅವರು ಪಕ್ಷ ತೊರೆಯುವ ಸಂಬಂಧ ನಡೆಯುತ್ತಿರುವ ವಿದ್ಯಾಮಾನಗಳಿಂದಾಗಿ, ತಾಲ್ಲೂಕಿನ ಕಾರ್ಯಕರ್ತರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಉತ್ಸುಕರಾಗಿರುವ ವಿಜಯಶಂಕರ್‌, ಎರಡು ವರ್ಷಗಳಿಂದ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಆದರೆ, ಬೆಂಗಳೂರು ಮೂಲದ ರಿಯಲ್‌ ಎಸ್ಟೇಟ್‌ ಉದ್ಯಮಿ ಎಸ್‌.ಮಂಜುನಾಥ್‌ ಎಂಬುವವರು ಇದಕ್ಕೆ ತೊಡಕಾಗಿದ್ದಾರೆ.

ಸಂಸದ ಪ್ರತಾಪಸಿಂಹ ಸಹಕಾರದೊಂದಿಗೆ ಈಚೆಗೆ ಬಿಜೆಪಿ ಸೇರಿರುವ ಮಂಜುನಾಥ್‌ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದಾರೆ. ಸಮಾಜ ಸೇವೆ, ಪಕ್ಷ ಸಂಘಟನೆ ಎಂದೆಲ್ಲ ನಿತ್ಯವೂ ಓಡಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಸಾವಿರಾರು ಮಹಿಳೆಯರಿಗೆ ಸೀರೆ ಹಂಚುವುದು, ಕನಕ ಸಮುದಾಯ ಭವನ, ದೇವಸ್ಥಾನ ನಿರ್ಮಾಣಕ್ಕೆ ಹಣ ಸಹಾಯ ಮಾಡುವುದು ಸೇರಿದಂತೆ ಚುನಾವಣೆಗೆ ಬೇಕಾದ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಹಜವಾಗಿಯೇ ಇದು ವಿಜಯಶಂಕರ್‌ ಅವರ ಕಣ್ಣು ಕೆಂಪಾಗಿಸಿದೆ.

ತಾಲ್ಲೂಕಿನಲ್ಲಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಕೈಗೊಂಡ ಕಾಮಗಾರಿಗಳ ಕಾರ್ಯಕ್ರಮದಲ್ಲೂ ಮಂಜುನಾಥ್‌ ಕಾಣಿಸಿಕೊಂಡಿದ್ದರು. ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪಕ್ಷದ ಖರ್ಚಿಗಾಗಿ ಭಾರಿ ಮೊತ್ತವನ್ನು ಇದೇ ಮಂಜುನಾಥ್‌ ಅವರು ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ನೀಡಿದ್ದಾರೆ ಎನ್ನುವ ಸಂಗತಿ ಕೂಡ ಈಚೆಗೆ ಬಹಿರಂಗವಾಗಿದೆ. ಈ ಎಲ್ಲ ಬೆಳವಣಿಗೆ ವಿಜಯಶಂಕರ್‌ ಅವರನ್ನು ಕೆರಳಿಸಿದೆ. ತಮಗೆ ಇಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಭಾವಿಸಿ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಆದರೆ, ಪಕ್ಷದ ತಾಲ್ಲೂಕು ಘಟಕದ ಪದಾಧಿಕಾರಿಗಳು ವಿಜಯಶಂಕರ್‌ಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ನಡೆದರೂ ಅವರ ಮನವೊಲಿಸಲು ಬಿಜೆಪಿ ವರಿಷ್ಠರು ಮನಸು ಮಾಡಿಲ್ಲ. ಇದು ಕಾರ್ಯಕರ್ತರಿಗೆ ತಲೆನೋವಾಗಿ ಪರಿಣಮಿಸಿದೆ.

ಒಂದು ವೇಳೆ ಮಂಜುನಾಥ್‌ಗೆ ಟಿಕೆಟ್‌ ಖಚಿತವಾದರೆ; ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್‌.ಡಿ.ಗಣೇಶ್ ಬಂಡಾಯವೇಳುವ ಸಾಧ್ಯತೆ ಹೆಚ್ಚು. ಮಂಜುನಾಥ್‌ ಮಾತ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ. ಅವರಿಗೇ ಟಿಕಟ್‌ ಖಚಿತವಾದರೆ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡುವ ಆಲೋಚನೆಯಲ್ಲಿ ಕಾರ್ಯಕರ್ತರು ಇದ್ದಾರೆ ಎಂಬುದು ಮೂಲಗಳಿಂದ ಕೇಳಿಬಂದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT