ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳಕುಂಟೆ ಕೆರೆಯ ಬಂಡು ಸಡಿಲ: ಅಪಾಯದ ಮನ್ಸೂಚನೆ!

Last Updated 22 ಅಕ್ಟೋಬರ್ 2017, 7:08 IST
ಅಕ್ಷರ ಗಾತ್ರ

ರಾಯಚೂರು: ನಗರದಿಂದ ಬಿಜನಗೇರ ಮಾರ್ಗದಲ್ಲಿರುವ ಮುಳ್ಳಕುಂಟೆ ಕೆರೆಯ ಬಂಡಿನಿಂದ ನೀರು ಜಿನುಗುತ್ತಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿದೆ. ಈಚೆಗೆ ಸುರಿದ ಮಳೆಗೆ ಕೆರೆಯು ಭರ್ತಿಯಾಗಿ ಹರಿದು ಬರುತ್ತಿದ್ದ ಹೆಚ್ಚುವರಿ ನೀರಿಗೆ ನಗರಸಭೆ ಅಧಿಕಾರಿಗಳು ತಡೆ ಹಾಕಿದ್ದರು. ಇದರಿಂದ ಕೆರೆಯ ಹಿನ್ನೀರು ಹೆಚ್ಚಾಗಿ ಸಾಕಷ್ಟು ವಿಸ್ತಾರವಾಗಿ ಸಂಗ್ರಹವಾಗಿದೆ. ಅಧಿಕ ನೀರು ಸಂಗ್ರಹದ ಒತ್ತಡವು ಕೆರೆ ಬಂಡಿನ ಮೇಲೆ ಬಿದ್ದಿದೆ. ಬಂಡಿನ ತಳಭಾಗದಿಂದ ಸಣ್ಣ ಪ್ರಮಾಣದಲ್ಲಿ ನೀರು ಹೊರ ಬರಲಾರಂಭಿಸಿದೆ. ಕೆರೆ ಬಂಡಿಗೆ ಹೊಂದಿಕೊಂಡು ರಸ್ತೆ ನಿರ್ಮಿಸಲು ಮಣ್ಣು ಕಿತ್ತು ಹಾಕಲಾಗಿದೆ. ಕೆರೆ ಬಂಡು ಗಟ್ಟಿಯಾಗಿಲ್ಲ.

ಕೆರೆ ಭರ್ತಿಯಾಗಿ ಹರಿದು ಬರುತ್ತಿದ್ದ ನೀರು ಯರಗೇರಾ ಕಾಲೋನಿ, ಸತ್ಯನಾಥ ಕಾಲೋನಿಯ ಜನವಸತಿಗೆ ನುಗ್ಗಲಾರಂಭಿಸಿತ್ತು. ಈ ಸಮಸ್ಯೆ ತಪ್ಪಿಸಲು ಹೊಸದೊಂದು ಸಮಸ್ಯೆ ಸೃಷ್ಟಿಸಿದಂತಾಗಿದೆ. ಎರಡೂ ಸಮಸ್ಯೆಗಳನ್ನು ನಿಭಾಯಿಸಲು ನಗರಸಭೆ ಅಧಿಕಾರಿಗಳು ಮುಲಾಮು ಹಚ್ಚುವ ಕೆಲಸ ಮಾಡಿದ್ದಾರೆ. ಕೆರೆಯಿಂದ ನೀರು ಹೊರಗೆ ಹರಿದರೂ ಸಮಸ್ಯೆ, ಹರಿಯದಿದ್ದರೂ ಸಮಸ್ಯೆ. ನೀರು ಸಣ್ಣ ಪ್ರಮಾಣದಲ್ಲಿ ಹರಿದುಹೋಗಲು ಕೊಳವೆಯೊಂದನ್ನು ಅಳವಡಿಸಲಾಗಿದೆ. ಕೊಳವೆಯಿಂದ ಸಣ್ಣದಾಗಿ ನೀರು ಹೊರಹೋಗುತ್ತಿದ್ದರೂ ಹಿನ್ನೀರು ಬೇಗ ಇಳಿಮುಖವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕೆರೆ ಹಿನ್ನೀರಿನಲ್ಲಿ ಉಸುಕಿನ ಹನುಮಾನ ದೇವಸ್ಥಾನ ಮಾತ್ರವಲ್ಲ, ಕೆಲವು ಭತ್ತದ ಗದ್ದೆಗಳು ಜಲಾವೃತವಾಗಿವೆ.

ಪ್ರಥಮ ಪ್ರಸಂಗ: ‘ಕೆರೆಯಲ್ಲಿ ಇಷ್ಟು ನೀರು ಸಂಗ್ರಹ ಆಗಿರುವುದು ಇದೇ ಮೊದಲು. ಉಸುಕಿನ ಹನುಮಾನ ದೇವಸ್ಥಾನ ತನಕ ಕೆರೆಯ ನೀರು ತಲುಪುತ್ತದೆ ಎನ್ನುವ ಕಲ್ಪನೆಯೂ ಇರಲಿಲ್ಲ. ಬಿಡದೆ ಸುರಿದ ಭಾರಿ ಮಳೆಯಿಂದ ಕೆರೆ ಭರ್ತಿ ಆಗಿದೆ. ಆದರೆ ಹೆಚ್ಚುವರಿ ನೀರು ಮಳೆ ಆಗುವಾಗಲೆ ಹರಿದು ಹೋಗಿದ್ದರೆ ಅಪಾಯ ಎದುರಿಸುವ ಪ್ರಶ್ನೆಯೆ ಇರಲಿಲ್ಲ. ಕೆರೆಕುಂಟೆಯಲ್ಲಿ ಸಂಗ್ರಹವಾದ ನೀರು ಏನಾಗುತ್ತದೆ ಎಂದು ಹೇಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದೇವಸ್ಥಾನದ ಭಕ್ತ ವೆಂಕಟೇಶ ಹೇಳಿದರು.

‘ಕೆರೆ ನೀರು ಹೊರ ಹೋಗುವುದನ್ನು ಸ್ಥಗಿತ ಮಾಡಿದರೆ ಅಪಾಯವಿದೆ ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇನೆ. ನಾನು ತಿಳಿಸಿದ ನಂತರ ನಗರಸಭೆ ಅಧಿಕಾರಿಗಳು ಬಂದು ಸಣ್ಣ ಕೊಳವೆ ಅಳವಡಿಸಿ ನೀರು ಹೊರಹಾಕುತ್ತಿದ್ದಾರೆ. ಎರಡು ದಿನವಾದರೂ ಒಂದು ಅಡಿಯಷ್ಟು ನೀರು ಕಡಿಮೆಯಾಗಿಲ್ಲ. 4.5 ಎಕರೆ ಭತ್ತದ ನಮ್ಮ ಜಮೀನಿನಲ್ಲಿ ನೀರು ನಿಂತು ಬೆಳೆಯೆಲ್ಲವೂ ಹಾಳಾಗಿದೆ. ಇದಕ್ಕೆ ಪರಿಹಾರ ಕೊಡುವಂತೆ ಅಧಿಕಾರಿಗಳಿಗೆ ಮತ್ತೆ ಮನವಿ ಸಲ್ಲಿಸುತ್ತೇನೆ’ ಎಂದು ಕೆರೆ ಹಿನ್ನೀರಿನಿಂದ ಬೆಳೆಹಾನಿ ಅನುಭವಿಸಿದ ರೈತ ಸುದರ್ಶನ ಅಳಲು ತೋಡಿಕೊಂಡರು.

ಒಂದು ವೇಳೆ ಕೆರೆ ಬಂಡು ಹಾನಿಯಾದರೆ, ಕೆರೆಯ ನೀರೆಲ್ಲವೂ ಸತ್ಯನಾಥ ಕಾಲೋನಿ, ಯರಗೇರಾ ಲೇಔಟ್‌ ಮೂಲಕ ಮಾವಿನಕೆರೆಗೆ ನುಗ್ಗುತ್ತದೆ. ಜನವಸತಿ ಪ್ರದೇಶಗಳು ಹಾಗೂ ಕೆಲವು ಕಾಲೇಜು ಕ್ಯಾಂಪಸ್‌ ಜಲಾವೃತವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT