ಗುರುವಾರ , ಸೆಪ್ಟೆಂಬರ್ 19, 2019
29 °C

ದುಡ್ದು ತಿನ್ನೋರಿಗೆ ಹಿಂಗಾಗ್ಬೇಕಾ..!

Published:
Updated:
ದುಡ್ದು ತಿನ್ನೋರಿಗೆ ಹಿಂಗಾಗ್ಬೇಕಾ..!

ವಿಜಯಪುರ: ‘ಊರಲ್ಲೇ ದುಡ್ಕೊಂಡು ತಿನ್ನೋಣ ಅಂದ್ರೇ ಜಮೀನಿಲ್ಲ. ಕೂಲಿ ಕೆಲ್ಸಾನೂ ಸಿಗಲ್ಲ. ಪಾಡ್ಯದ ಪೂಜೆ ಮುಗ್ಸ್ಕೊಂಡು, ಮೂರ್ ಮಕ್ಕಳನ್ನ ಅವ್ವನ್ನತ್ರ ಬಿಟ್‌ ದುಡಿಯೋಕೆ ಅಂಥಾ ಶುಕ್ರವಾರ ರಾತ್ರಿ ಶಹಾಬಾದ್‌ ಪರ್ಸಿ ಲಾರಿ ಹತ್ತಿದ್ವೀ.

ನಮ್‌ ಪುಣ್ಯಕ್ಕಾ ಗಂಡ–ಹೆಂಡ್ತಿಗೆ ಕ್ಯಾಬಿನ್‌ನಲ್ಲಿ ಜಾಗ ಸಿಕ್ತು. ಸಿಂದಗಿಲೀ ಲಾರಿ ಹತ್ತಿ ಮಲಗಿದ ನಮ್ಗ ಎಚ್ಚರ ಆದಾಗ ಮೀರಜ್‌ನ ಆಸ್ಪತ್ರೇಲಿ ಬಿದ್ದಿದ್ವೀ. ಕೈ–ಕಾಲು, ತಲೆಗೆ ಭಾರಿ ಪೆಟ್‌ ಬಿದ್ದಾವ್ರೀ. ಕಷ್ಟ ಆಗ್ತೈತ್ರೀ. ಏನ್ ಮಾಡ್ಬೇಕು ಎಂಬುದೇ ತೋಚದಂಗಾಗೈತ್ರೀ... ದುಡ್ಕೊಂಡು ತಿನ್ನೋರಿಗ ಹಿಂಗಾಗ್ಬೇಕಾ...!’

ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ತಾಸ್ಕಗಾಂವ್ ತಾಲ್ಲೂಕಿನ ಮನೇರಾ ಜೋರಿ–ಯೋಗೆವಾಡಿ ಗ್ರಾಮಗಳ ನಡುವಿನ ರಸ್ತೆ ತಿರುವಿನಲ್ಲಿ, ಶನಿವಾರ ನಸುಕಿನ ವೇಳೆ ಪರ್ಸಿ ಕಲ್ಲು ತುಂಬಿದ್ದ ಟ್ರಕ್‌ ಪಲ್ಟಿ ಹೊಡೆದು, ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡು ಮೀರಜ್‌ನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಸಿಂದಗಿ ತಾಲ್ಲೂಕು ಕಲ್ಲಹಳ್ಳಿಯ ಲಕ್ಷ್ಮಣ ಮಾದರ ನೋವಿನ ನುಡಿಗಳಿವು.

‘ದೀಪಾವಳಿ ಮುಗ್ಸ್ಕೊಂಡು ಇದೇ ಮೊದಲ ಬಾರಿಗೆ ದುಡಿಯೋಕಂತ ಕರಾಡಕ್ಕೆ ಹೊಂಟಿದ್ದೆ. ಅಲ್ಲಿ ಪೈಪ್‌ಲೈನ್‌ ಕಾಮಗಾರಿ ಕೆಲಸ ಸಿಕ್ಕಿತ್ತು. ಸ್ವಲ್ಪ ಹೊತ್ತು ಕಳದಿದ್ರಾ ಕರಾಡ ಬರ್ತಿತ್ತು. ನಾವ್‌ ದುಡ್ಕೊಂಡು ತಿಂತಿದ್ವೀ. ನಮ್‌ ಹಣೆಬರ.

ಕಡಿಮೆ ಚಾರ್ಜ್‌ (ಪ್ರಯಾಣ ದರ), ದವಸ–ಧಾನ್ಯ, ಹಿಟ್ಟು, ಪಾತ್ರೆ ಸಾಗಿಸೋಕು ಇದೇ ಚಲೋ ಅಂತ ಪರ್ಸಿ ಲಾರಿ ಹತ್ಕೊಂಡ್ವೀ. ದುಡಿಯೋಕೆ ಹೋಗರೆಲ್ಲರೂ ಇವೇ ಲಾರೀಲಿ ಹೋಗ್ತಾರಂತ ನಾವ್ ಹೊಂಟ್ವೀ. ಆದರೆ ನಮ್ಮ ನಸೀಬ್ ಚಲೋ ಇರಲಿಲ್ಲ. ಕೈ–ಕಾಲ್ಗ ಪೆಟ್‌ ಮಾಡ್ಕೊಂಡು ಆಸ್ಪತ್ರೀಲಿ ಬಿದ್ದೀವಿ’ ಎಂದು ಲಕ್ಷ್ಮೀ ಮಾದರ ತಿಳಿಸಿದರು.

‘ಹಬ್ಬದ ಬಳಿಕ ಪ್ರತಿ ವರ್ಸ ನಮ್ಮೂರ್ನಿಂದ ನೂರ್ ಮಂದಿ ದುಡಿಯಾಕ ಹೋಗ್ತಾರ. ನಮ್ಮೂರನ್ವ್ರೇ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಗುತ್ತಿಗೆ ಮಾಡ್ಕೊಂಡ್, ಊರಿಂದಲೇ ಕರ್ಕೊಂಡು ಹೋಗ್ತಿದ್ದ್ರು. ಅಲ್ಲಿ ಕಡಿಮೆ ಪಗಾರ ಕೊಡ್ತಾರೆ ಅಂತ ಈ ಬಾರಿ ಅಂಕಲಗಿ, ಸುರಗಿಹಳ್ಳಿ ಕುಟುಂಬದ ಆರು ಮಂದಿ ಹೊಲದಲ್ಲಿನ ಶುಂಠಿ ಬಿಡಿಸಲು ಹೊಂಟಿದ್ದರು.

ದುಡಿಯೋ ಸ್ಥಳ ತಲುಪೋ ಮುಂಚೆ ಪರ್ಸಿ ಲಾರಿ ಅಪಘಾತದಲ್ಲಿ ಊರಿನ ಆರು ಮಂದಿ ಸತ್ತಿದ್ದಾರೆ. ಬಡ ಕುಟುಂಬಗಳಿವು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ’ ಎಂದು ಚಾಂದಕವಟೆಯ ಶಿವಶರಣ ಕನ್ನೊಳ್ಳಿ ತಿಳಿಸಿದರು.

‘ನಮ್ಮೂರಿನ ಸಂಗಮ್ಮ ಸಿದ್ದಪ್ಪ ಕೂಗನೂರ ಹಬ್ಬ ಮುಗ್ಸ್ಕೊಂಡು ಮಗಳ ಮನೆಗೆ ಹೊಂಟಿದ್ದರು. ಆದರೆ ಮಗಳ ಮನೆ ತಲುಪಬೇಕಿದ್ದ ಸಂಗಮ್ಮ ಪರ್ಸಿ ಲಾರಿ ಹತ್ತಿ ಮಸಣ ಸೇರಿದ್ದಾರೆ’ ಎಂದು ಮಂಗಳೂರಿನ ವಿಠ್ಠಲ ಕೋಳೂರ ತಿಳಿಸಿದರು.

ಪರ್ಸಿ ಕಲ್ಲು ತುಂಬಿದ್ದ ಟ್ರಕ್‌ ಪಲ್ಟಿ: 10 ಸಾವು

ವಿಜಯಪುರ: ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸ್‌ಗಾಂವ್‌ ಬಳಿ ಪರ್ಸಿ ಕಲ್ಲು ಸಾಗಿಸುತ್ತಿದ್ದ ಲಾರಿಯೊಂದು ಶನಿವಾರ ನಸುಕಿನ ವೇಳೆ ಪಲ್ಟಿಯಾಗಿದ್ದು, ರಾಜ್ಯದ 10 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ.ಮೃತಪಟ್ಟವರಲ್ಲಿ ವಿಜಯಪುರ ಜಿಲ್ಲೆಯ 8 ಮಂದಿ, ಬೀದರ್‌ ಹಾಗೂ ಕಲಬುರ್ಗಿ ಜಿಲ್ಲೆಯ ತಲಾ ಒಬ್ಬರು ಸೇರಿದ್ದಾರೆ.

ಸಿಂದಗಿ ತಾಲ್ಲೂಕಿನ ಚಾಂದಕವಟೆ ಗ್ರಾಮದ ಒಂದೇ ಕುಟುಂಬದ ನಿಸಾರ್‌ಸಾಬ್‌ ಬಾಷಾಸಾಬ್‌ ಅಂಕಲಗಿ (37), ಕಮ್ರೀನ್‌ ನಿಸಾರ್‌ಸಾಬ್‌ ಅಂಕಲಗಿ (35), ಚಾಂದ್‌ಬಿ ನಿಸಾರ್‌ಸಾಬ್‌ ಅಂಕಲಗಿ (12) ಹಾಗೂ ಮತ್ತೊಂದು ಕುಟುಂಬದ ಭೀಮಶ್ಯಾ ಸಂಗಪ್ಪ ಸುರಗಿಹಳ್ಳಿ (65), ಅವ್ವಮ್ಮ ಭೀಮಶ್ಯಾ ಸುರಗಿಹಳ್ಳಿ (60), ಅಪ್ಪಣ್ಣ ಭೀಮಶ್ಯಾ ಸುರಗಿಹಳ್ಳಿ (30), ಮಂಗಳೂರಿನ ಸಂಗಮ್ಮ ಸಿದ್ದಪ್ಪ ಕೂಗನೂರ (70), ಇಂಡಿ ತಾಲ್ಲೂಕಿನ ಹತ್ತರಕಿ ಗ್ರಾಮದ ಬಶೀರ್ ರಾಯಪ್ಪ ರಾಠೋಡ (50), ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ಶ್ರೀಮಂತಗೌಡ ಗೊಲ್ಲಾಳಪ್ಪಗೌಡ ಬಿರಾದಾರ (55), ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ರಾಮತೀರ್ಥವಾಡಿಯ ಈರಮ್ಮ ಮಹಾದೇವ ದಂಡಗೂಳಿ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌

ಗಾಯಾಳುಗಳನ್ನು ಸನಿಹದ ತಾಸ್‌ಗಾಂವ್, ಮೀರಜ್ ಹಾಗೂ ಸಾಂಗ್ಲಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಾಸ್‌ಗಾಂವ್‌ ಪೊಲೀಸರು ತಿಳಿಸಿದರು.‌ ಕಲಬುರ್ಗಿ ಜಿಲ್ಲೆಯ ಶಹಬಾದ್‌ನಿಂದ ಪರ್ಸಿ ಕಲ್ಲು ತುಂಬಿಕೊಂಡು ಮಹಾರಾಷ್ಟ್ರದ ಕರಾಡಕ್ಕೆ ಚಲಿಸುತ್ತಿದ್ದ ಟ್ರಕ್‌, ತಾಸ್‌ಗಾಂವ್‌ ತಾಲ್ಲೂಕಿನ ಯೋಗೆವಾಡಿ ಬಳಿಯ ತಿರುವಿನಲ್ಲಿ ಪಲ್ಟಿಯಾಗಿದೆ. ಪರ್ಸಿ ಕಲ್ಲುಗಳ ಮೇಲೆ ಕುಳಿತಿದ್ದವರು ಕೆಳಗೆ ಬಿದ್ದಿದ್ದು, ಅವರ ಮೇಲೆ ಕಲ್ಲು ಬಿದ್ದಿವೆ. ಹೀಗಾಗಿ 10 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಕ್ಯಾಬಿನ್‌ನಲ್ಲಿ ಕೂತು ಪಯಣಿಸುತ್ತಿದ್ದವರು ಗಾಯಗೊಂಡಿದ್ದಾರೆ ಎಂದು ಹೇಳಿದರು.

Post Comments (+)