ಎಲ್ಲಿಗೆ ಬಂತು ಪ್ರೊ ಕಬಡ್ಡಿ ಲೀಗ್‌..?

ಭಾನುವಾರ, ಜೂನ್ 16, 2019
29 °C

ಎಲ್ಲಿಗೆ ಬಂತು ಪ್ರೊ ಕಬಡ್ಡಿ ಲೀಗ್‌..?

Published:
Updated:
ಎಲ್ಲಿಗೆ ಬಂತು ಪ್ರೊ ಕಬಡ್ಡಿ ಲೀಗ್‌..?

ಪ್ರೊ ಕಬಡ್ಡಿ ಲೀಗ್‌ ಇನ್ನೂ ಆಸಕ್ತಿ ಉಳಿಸಿಕೊಂಡಿದೆಯೇ? ಲೀಗ್‌ನ ಪಂದ್ಯಗಳನ್ನು ಕಬಡ್ಡಿ ಪ್ರೇಮಿಗಳು ನಿತ್ಯ ವೀಕ್ಷಿಸುತ್ತಿದ್ದಾರೆಯೇ? ವೀಕ್ಷಕರಿಗೆ ಬೋರು ಉಂಟು ಮಾಡಿಲ್ಲವೇ? ಆಟಗಾರರಿಗೆ ಸುಸ್ತಾಗಲಿಲ್ಲವೇ? ಯಾರಿಗೆ ಎಷ್ಟು ಲಾಭವಾಯಿತು?

ಸತತ ಮೂರು ತಿಂಗಳಿನಿಂದ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್‌ ಬಗ್ಗೆ ಇಂಥ ಪ್ರಶ್ನೆಗಳು ಮೂಡುವುದು ಸಹಜ. ದೇಶದ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಉಂಟು ಮಾಡಿರುವ ಲೀಗ್‌ನ ಐದನೇ ಆವೃತ್ತಿ ಈಗ ಅಂತಿಮ ಹಂತದಲ್ಲಿದೆ.

ಈ ಬಾರಿ ಸುದೀರ್ಘವಾಗಿದ್ದರಿಂದ ಕಬಡ್ಡಿ ಪ್ರೇಮಿಗಳಲ್ಲಿ ಲೀಗ್‌ ಬಗ್ಗೆ ತುಸು ಆಸಕ್ತಿ ಕಡಿಮೆಯಾಗಿರುವುದು ನಿಜ. ಆದರೆ, ಸಂಘಟಕರ ಆಸಕ್ತಿ ಮಾತ್ರ ಕುಗ್ಗಿಲ್ಲ. ಲೀಗ್‌ನ ಆಯೋಜನೆಯ ಸ್ಥಳಗಳಲ್ಲಿ ಕ್ರೀಡಾಂಗಣ ಭರ್ತಿಯಾಗುತ್ತಿವೆ. ಈಗ ಪ್ಲೇಆಫ್‌ ಪಂದ್ಯಗಳ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ.

ಜುಲೈ 28ರಂದು ಹೈದರಾಬಾದ್‌ನಲ್ಲಿ ಉದ್ಘಾಟನೆಯಾದ ಟೂರ್ನಿ ಅಕ್ಟೋಬರ್‌ 28ರಂದು ಚೆನ್ನೈನಲ್ಲಿ ನಡೆಯಲಿರುವ ಫೈನಲ್‌ ಕದನದೊಂದಿಗೆ ಅಂತ್ಯಗೊಳ್ಳಲಿದೆ. ಈ ಬಾರಿ ಲೀಗ್‌ ವೇಳಾಪಟ್ಟಿ ಸುದೀರ್ಘವಾಗಿರುವುದಕ್ಕೆ ಆರಂಭದಿಂದಲೇ ವಿರೋಧವಿತ್ತು. ಆದರೆ, 12 ತಂಡಗಳು ಪಾಲ್ಗೊಂಡಿರುವುದರಿಂದ ಹೆಚ್ಚು ದಿನಗಳ ಆಯೋಜನೆ ಅನಿವಾರ್ಯ ಎಂದು ಸಂಘಟಕರು ಸಮರ್ಥನೆ ನೀಡುತ್ತಲೇ ಬಂದಿದ್ದಾರೆ. ಜನರು ಆಸಕ್ತಿ ಕಳೆದುಕೊಂಡಿಲ್ಲ ಎಂಬುದಕ್ಕೆ ಪೂರಕವಾಗಿ ಟಿಆರ್‌ಪಿಯನ್ನು ‍ಸಾಕ್ಷಿಯಾಗಿ ನೀಡುತ್ತಿದ್ದಾರೆ.

ದೇಶದಲ್ಲಿ ಹುಟ್ಟಿ ಬೆಳೆದರೂ ಕಾಳಜಿ ಇಲ್ಲದೆ ಸೊರಗಿದ್ದ ಒಂದು ಕ್ರೀಡೆಯನ್ನು ಕೇವಲ ಮೂರು ವರ್ಷಗಳಲ್ಲಿ ರಾಷ್ಟ್ರದ ಎರಡನೇ ಅತಿ ದೊಡ್ಡ ಕ್ರೀಡೆಯನ್ನಾಗಿ ಮಾಡಿರುವುದು, ಆಟಗಾರರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿರುವುದು ಒಳ್ಳೆಯ ಹಾಗೂ ಮೆಚ್ಚಲೇಬೇಕಾದ ಅಂಶ. ಆದರೆ, ಯಾವುದೇ ಟೂರ್ನಿ ಇರಲಿ; ಹೆಚ್ಚು ದಿನ ನಡೆದರೆ ಆಸಕ್ತಿ ಕಳೆದುಕೊಳ್ಳುವುದು ಸಾಮಾನ್ಯ.

ಕಡಿಮೆ ಆವಧಿ ಇದ್ದಷ್ಟೂ ಕುತೂಹಲ ಹೆಚ್ಚಿರುತ್ತದೆ. ಜೊತೆಗೆ ಆಸಕ್ತಿ ಉಳಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಅದನ್ನು ಬಿಟ್ಟು ಚಿನ್ನದ ಮೊಟ್ಟೆ ಇಡುತ್ತಿದೆ ಎಂದು ಕೋಳಿಯನ್ನೇ ಕತ್ತರಿಸಿದರೆ? ಸತತ ಪಂದ್ಯಗಳಿಂದ ಆಟಗಾರರು ಹೈರಾಣಾಗಿದ್ದಾರೆ. ಹಲವು ಆಟಗಾರರು ಗಾಯದಿಂದ ಜರ್ಜರಿತರಾಗಿದ್ದಾರೆ. ಎಷ್ಟೇ ದುಡ್ಡು ಬಂದರೂ, ಜನ ವೀಕ್ಷಿಸಿದರೂ ಆಟಗಾರರ ಹಿತಾಸಕ್ತಿ ಮುಖ್ಯವಲ್ಲವೇ?

ಹೊಸ ತಂಡಗಳ ಪಾರಮ್ಯ

ಅದೇನೇ ಇರಲಿ, ಈ ಬಾರಿ ತಮಿಳು ತಲೈವಾಸ್‌ ಹೊರತುಪಡಿಸಿ ಹೊಸ ತಂಡಗಳದ್ದೇ ಪಾರಮ್ಯ. ಅದಕ್ಕೆ ಸಾಕ್ಷಿ ಯು.ಪಿ.ಯೋಧಾ, ಹರಿಯಾಣ ಸ್ಟೀಲರ್ಸ್‌, ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡಗಳು ಪ್ಲೇಆಫ್‌ನಲ್ಲಿ ಆಡಲು ಅರ್ಹತೆ ಪಡೆದಿರುವುದು. ಹಿಂದಿನ ಆವೃತ್ತಿಗಳಲ್ಲಿ ಆಡಿದ ಆಟಗಾರರೇ ಇದ್ದರೂ ತಂಡಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಂಶಗಳೆಂದರೆ ಹೊಸ ತಂತ್ರ, ಹೊಸ ಆಡಳಿತ. ಹೊಸ ನಾಯಕ, ಹೊಸ ಕೋಚ್‌. ಹೊಸ ಪ್ರತಿಭೆಗಳೂ ಸೃಷ್ಟಿಯಾಗಿದ್ದಾರೆ. ಆಟಗಾರರಿಗೆ ಹೆಚ್ಚು ಅವಕಾಶಗಳು ಲಭಿಸಿವೆ.

ಅದರಲ್ಲೂ ಸುಕೇಶ್‌ ಹೆಗಡೆ ಸಾರಥ್ಯದ ಗುಜರಾತ್‌ ಫಾರ್ಚೂನ್ ಜೈಂಟ್ಸ್‌ ತಂಡದ್ದು ಅಮೋಘ ಸಾಧನೆ. ಈ ತಂಡದವರು ತವರಿನ ನೆಲದಲ್ಲಿ ಒಂದೂ ಪಂದ್ಯ ಸೋಲಲಿಲ್ಲ. ರಕ್ಷಣಾ ವಿಭಾಗದಲ್ಲಿ ಅಬೋಜರ್‌, ಫಜಲ್‌, ದಾಳಿ ವಿಭಾಗದಲ್ಲಿ ಸುಕೇಶ್‌, ಸಚಿನ್‌, ರೋಹಿತ್‌ ಗುಲಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

‘ಆರಂಭದಲ್ಲಿ ತುಸು ಭಯವಿತ್ತು. ಏಕೆಂದರೆ ಯುವಕರೇ ಹೆಚ್ಚಿರುವ ತಂಡವನ್ನು ಮುನ್ನಡೆಸುವುದು ಸವಾಲಿನ ವಿಷಯ. ಆದರೆ, ಸಂಘಟಿತ ಪ್ರದರ್ಶನದಿಂದಾಗಿ ಯಶಸ್ಸು ಸಿಗುತ್ತಿದೆ. ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದಾರೆ’ ಎಂದು ನುಡಿಯುತ್ತಾರೆ ನಾಯಕ ಸುಕೇಶ್‌ ಹೆಗಡೆ.

ಲೀಗ್‌ನ ಪ್ರಾರಂಭದಲ್ಲಿ ಹಿನ್ನಡೆ ಕಂಡ ಪುಣೇರಿ ಪಲ್ಟನ್‌ ಬಳಿಕ ತಿರುಗೇಟು ನೀಡಿದ ರೀತಿ ಆಕರ್ಷಕ. ಕನ್ನಡಿಗ ಬಿ.ಸಿ.ರಮೇಶ್‌ ಮಾರ್ಗದರ್ಶನದಲ್ಲಿ ಈ ತಂಡದವರು ಈಗ ಟ್ರೋಫಿಯತ್ತ ಕಣ್ಣು ನೆಟ್ಟಿದ್ದಾರೆ.

‘ಸವಾಲಿನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದೇನೆ ಎಂಬ ಭಾವನೆ ನನ್ನದು. ಆರಂಭದಲ್ಲಿ ಆಟಗಾರರೊಂದಿಗೆ ಹೊಂದಾಣಿಕೆ ತುಸು ಕಷ್ಟವಾಯಿತು. ಈಗ ಒಂದು ಕುಟುಂಬವಾಗಿದ್ದೇವೆ’ ಎಂದು ಹೇಳುತ್ತಾರೆ ಬಿ.ಸಿ.ರಮೇಶ್‌.

ಅನುಭವಿ ಆಟಗಾರರನ್ನು ಒಳಗೊಂಡಿರುವ ಯು ಮುಂಬಾ ಹಾಗೂ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಗಳಿಂದ ಈ ಬಾರಿ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬರಲಿಲ್ಲ. ಬೆಂಗಳೂರು ಬುಲ್ಸ್‌ ಹಾಗೂ ತೆಲುಗು ಟೈಟನ್ಸ್‌ ತಂಡಗಳು ಆರಕ್ಕೇರಲಿಲ್ಲ. ಬೆಂಗಳೂರಿನ  ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅವಕಾಶ ಸಿಗದೆ ಈ ಬಾರಿ ನಾಗಪುರದಲ್ಲಿ ತವರಿನ ಪಂದ್ಯಗಳನ್ನು ಆಡಿದ್ದ ಬುಲ್ಸ್‌ 22 ಪಂದ್ಯಗಳಿಂದ ಕೇವಲ 57 ಪಾಯಿಂಟ್‌ ಕಲೆಹಾಕಿತು. 8 ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಇನ್ನು ದಬಂಗ್‌ ಡೆಲ್ಲಿ ತಂಡ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಯಿತು.

ಲೀಗ್‌ನಲ್ಲಿ ಕನ್ನಡಿಗರ ಸಾಧನೆ...

ಪ್ಲೇಆಫ್‌ಗೆ ಅರ್ಹತೆ ಪಡೆದಿರುವ ಆರು ತಂಡಗಳಲ್ಲಿ ಇಬ್ಬರು ಕರ್ನಾಟಕದ ಕೋಚ್‌ಗಳು ಎಂಬುದು ವಿಶೇಷ.ಬಿ.ಸಿ.ರಮೇಶ್‌ (ಪುಣೇರಿ ಪಲ್ಟನ್‌) ಹಾಗೂ ಜಗದೀಶ ಕುಂಬ್ಳೆ (ಬೆಂಗಾಲ್‌ ವಾರಿಯರ್ಸ್‌) ಅವರು ಯಶಸ್ವಿಮಾರ್ಗದರ್ಶಕರಾಗಿ ಹೊರಹೊಮ್ಮಿದ್ದಾರೆ. ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡವನ್ನು ಯಶಸ್ವಿಯಾಗಿಮುನ್ನಡೆಸುತ್ತಿರುವ ಸುಕೇಶ್‌ ಹೆಗ್ಡೆ ಕೂಡ ಕರ್ನಾಟಕದವರು.

ಯು.ಪಿ ಯೋಧಾ ತಂಡದಲ್ಲಿ ರಾಜ್ಯದ ಜೀವಾ ಕುಮಾರ್‌, ರಿಶಾಂಕ್‌ ದೇವಾಡಿಗ ಹಾಗೂ ಬಿ.ಎಸ್‌.ಸಂತೋಷ್‌ಇದ್ದಾರೆ. ಹರಿಯಾಣ ಸ್ಟೀಲರ್ಸ್‌ ತಂಡದಲ್ಲಿ ಪ್ರಶಾಂತ್‌ ರೈ ಆಡುತ್ತಿದ್ದಾರೆ. ಈ ತಂಡಗಳು ಪ್ಲೇಆಫ್‌ನಲ್ಲಿ ತಮ್ಮ ಅದೃಷ್ಟ ಪಣಕೊಡ್ಡಲು ಸಜ್ಜಾಗುತ್ತಿವೆ.

*ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry