ಓದು ಮರೆಯದಿರಲು...

ಮಂಗಳವಾರ, ಜೂನ್ 18, 2019
23 °C

ಓದು ಮರೆಯದಿರಲು...

Published:
Updated:
ಓದು ಮರೆಯದಿರಲು...

ಮಕ್ಕಳೇ, ದಸರೆಯ ರಜೆಯೂ ಕಳೆಯಿತು. ದೀಪಾವಳಿಯ ಸಡಗರವೂ ಮುಗಿಯಿತು. ಇನ್ನೀಗ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗಿದೆ ಅಲ್ಲವೇ? ಮುಂಬರುವ ಪರೀಕ್ಷೆಗಳಿಗೆ ಅಗತ್ಯವಾದ ಸಿದ್ಧತೆಯನ್ನು ಈಗಿನಿಂದಲೇ ನೀವು ಪ್ರಾರಂಭಿಸಿದರೆ ಕೊನೇ ಘಳಿಗೆಯ ಆತಂಕಗಳನ್ನು ನಿವಾರಿಸಿಕೊಳ್ಳಬಹುದು.

ನಿಮ್ಮ ಅಧ್ಯಯನ ಕ್ರಮಬದ್ಧವಾಗಿದ್ದರೆ, ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ ನೀವು ಅಂದುಕೊಂಡಿರುವಂತೆ ಉತ್ತಮ ಅಂಕಗಳನ್ನು ಗಳಿಸಬಹುದು. ಕ್ರಮಬದ್ಧ ಅಧ್ಯಯನದಿಂದ ಮಾತ್ರ ನೀವು ಓದಿದ್ದು ನಿಮ್ಮ ನೆನಪಿನಲ್ಲಿ ಉಳಿಯುತ್ತದೆ. ನೀವು ತಿಳಿದುಕೊಳ್ಳಬೇಕಾದ ಒಂದು ಮುಖ್ಯ ಅಂಶವೆಂದರೆ, ಎಲ್ಲರ ಮೆದುಳು ಒಂದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಅದರೆ, ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಹಲವಾರು ಸರಳವಾದ ಮಾರ್ಗೋಪಾಯಗಳು ನಿಮ್ಮಲ್ಲೇ ಇವೆ.

ನಿಮ್ಮ ಈಗಿನ ಪರಿಕ್ಷಾ ಸಿದ್ಧತೆಯಲ್ಲಿ ನೀವು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಅಂಥ ಕೆಲವು ಮಾರ್ಗೋಪಾಯಗಳನ್ನು ತಿಳಿಸುವ ಪ್ರಯತ್ನವೇ ಈ ಲೇಖನ.

* ಗಟ್ಟಿಯಾಗಿ ಓದಿ: ನಿಮ್ಮ ಅದ್ಯಯನ ಸಿದ್ಧತೆಯ ಮೊದಲ ಆದ್ಯತೆ, ಒಂದು ವೇಳಾಪಟ್ಟಿಯನ್ನು ಹಾಕಿಕೊಳ್ಳುವುದು. ವೇಳಾಪಟ್ಟಿಯ ಪ್ರಕಾರ ನೀವು ಓದಲು ಕುಳಿತಾಗ ಅಲ್ಲಿ ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಯಾವುದೇ ಅಂಶ (ಟಿ.ವಿ. ಮೊಬೈಲ್, ಇತ್ಯಾದಿ) ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ. ಒಂದೇ ದಿನ ಎಲ್ಲ ವಿಷಯಗಳನ್ನು ಓದಿ ಮುಗಿಸುವ ಆತುರ ಬೇಡ. ದಿನಕ್ಕೊಂದು ವಿಷಯದಂತೆ ಓದಿ. ನೀವು ಓದಬೇಕೆಂದು ಆಯ್ಕೆ ಮಾಡಿಕೊಂಡಿರುವ ವಿಷಯವನ್ನು ಗಟ್ಟಿಯಾಗಿಯೇ ಓದಿ. ಇದರಿಂದ ನಿಮ್ಮ ಕಣ್ಣುಗಳ ಜೊತೆಗೇ ನಿಮ್ಮ ಕಿವಿಗಳೂ ಓದಿನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಹೀಗಾಗಿ, ನಿಮ್ಮ ಮೆದುಳು ಸಂಬಂಧಿಸಿದ ಮಾಹಿತಿಯನ್ನು ಹೆಚ್ಚು ಸುಲಭವಾಗಿ ಗ್ರಹಿಸುತ್ತದೆ. ಅಲ್ಲದೆ, ಗ್ರಹಿಸಿದ ಮಾಹಿತಿಯನ್ನು ಕ್ರಮಬದ್ಧವಾಗಿ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಪ್ರತಿ ಒಂದು ಘಂಟೆಯ ಓದಿನ ನಂತರ ಒಂದೆರಡು ನಿಮಿಷಗಳ ಸಂಕ್ಷಿಪ್ತ ವಿಶ್ರಾಂತಿಯನ್ನು ಪಡೆದುಕೊಳ್ಳಿ. ಒಂದು ಹತ್ತು ಹೆಜ್ಜೆ ನಡೆದಾಡಿ. ನಂತರ ಮತ್ತೆ ಪ್ರಾರಂಭಿಸಿ. ಅಗತ್ಯ ಬಿದ್ದರೆ, ಓದುವ ಕೋಣೆಯಲ್ಲೇ ನೀವು ಓದಲು ಕುಳಿತುಕೊಳ್ಳುವ ತಾಣಗಳನ್ನು ಆಗಾಗ್ಗೆ ಬದಲಾಯಿಸಿ. ಇದು ಏಕತಾನತೆಯನ್ನು ದೂರ ಮಾಡಿ ಏಕಾಗ್ರತೆಯನ್ನು ಹೆಚ್ಚಿಸಲು ನೆರವಾಗುತ್ತದೆ.

* ಏಕಾಗ್ರತೆ ಬಹಳ ಮುಖ್ಯ: ಒಬ್ಬ ವ್ಯಕ್ತಿ ಗಳಿಸಿದ ನಿರ್ದಿಷ್ಟ ಮಾಹಿತಿ ಆತನ ಮೆದುಳಿನಲ್ಲಿ ನೆನಪಿನ ರೂಪಕ್ಕೆ ಪರಿವರ್ತನೆ ಆಗಬೇಕಾದರೆ ಕನಿಷ್ಠ ಎಂಟು ಸೆಕೆಂಡುಗಳು ಅಗತ್ಯ ಎಂದು ಒಂದು ಅಧ್ಯಯನ ಹೇಳುತ್ತದೆ. ಹೀಗಾಗಿ, ಓದುವ ಸಮಯದಲ್ಲಿ ಸಂಪೂರ್ಣ ಏಕಾಗ್ರತೆ ಅತ್ಯಂತ ಮುಖ್ಯವಾಗುತ್ತದೆ. ಏಕಾಗ್ರತೆಗೆ ಪ್ರಶಾಂತವಾದ ವಾತಾವರಣ ಅತ್ಯವಶ್ಯ. ಮನಸ್ಸನ್ನು ಕೆಡಿಸುವ ಅಂಶಗಳಿಂದ ದೂರವಾಗಿ, ತನ್ಮಯತೆಯಿಂದ ಅಧ್ಯಯನ ಮಾಡಿದರೆ ಏಕಾಗ್ರತೆ ಸಹಜವಾಗಿ ಬರುತ್ತದೆ. ಅಂಥ ವಾತಾವರಣದಲ್ಲಿ ಓದುವುದು ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪೂರಕವಾಗಿರುತ್ತದೆ. ಈ ಕಾರಣಗಳಿಂದ, ಸಂಜೆಯ ಓದಿಗಿಂತ ಮುಂಜಾನೆಯ ಓದು ಬಹಳ ಉಪಯುಕ್ತ. ಓದಿನ ಮಧ್ಯೆ ಸಣ್ಣ ಪುಟ್ಟ ವ್ಯಾಯಾಮ, ಕೆಲ ಹೊತ್ತು ಸುಶ್ರಾವ್ಯವಾದ ಮೆಲುದನಿಯ ಸಂಗೀತವನ್ನು ಕೇಳುವುದು, ಕಣ್ಣು ಮುಚ್ಚಿ ಧ್ಯಾನ ಮಾಡುವುದು, ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳುವುದು, ಮುಂತಾದ ಉಪಯುಕ್ತ ಚಟುವಟಿಕೆಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆಯನ್ನು ಸುಲಭವಾಗಿ ಸಾಧಿಸಬಹುದು.

* ಸಾರಾಂಶಗಳನ್ನು ಬರೆದಿಟ್ಟುಕೊಳ್ಳಿ: ನೀವು ಓದಿದ ವಿಷಯ ಅಥವಾ ಅಧ್ಯಾಯ ಯಾವುದೇ ಇರಲಿ, ಮುಗಿಸಿದ ಮೇಲೆ ಪುಸ್ತಕ ಮುಚ್ಚಿಟ್ಟು ಒಂದು ಖಾಲಿ ಹಾಳೆಯಲ್ಲಿ ಅದರ ಸಾರಾಂಶನ್ನು ಬರೆದುಕೊಳ್ಳಿ. ಇದಕ್ಕೆ ನೀವು ಮುಖ್ಯವಾದ ಪದಗಳನ್ನು ಬರೆದುಕೊಂಡರೆ ಸಾಕು. ಹೀಗೆ, ಮಾಡುವುದರಿಂದ ನೀವು ಓದಿದ ಪ್ರತಿ ವಿಷಯದ ಪ್ರತಿ ಅಧ್ಯಾಯಕ್ಕೆ ನಿಮ್ಮ ಬಳಿ ಸಾರಾಂಶದ ಹಾಳೆಗಳು ಸಿದ್ಧವಾಗುತ್ತವೆ. ಮುಂದೆ, ಅದೇ ವಿಷಯ ಅಥವಾ ಅಧ್ಯಾಯವನ್ನು ಮತ್ತೊಮ್ಮೆ ಓದುವ ಮುನ್ನ ಈ ಸಾರಾಂಶದ ಹಾಳೆಗಳನ್ನು ಪರಾಮರ್ಷಿಸಿ. ಇದರಿಂದ, ನೀವು ಕಳೆದ ಬಾರಿ ಓದಿದ್ದರಲ್ಲಿ ಎಷ್ಟು ನಿಮ್ಮ ನೆನಪಿನಲ್ಲಿ ಉಳಿದಿದೆ ಎಂಬುದು ನಿಮಗೇ ತಿಳಿಯುತ್ತದೆ. ಅಗತ್ಯ ಬಿದ್ದಲ್ಲಿ, ಅದೇ ಅಧ್ಯಾಯವನ್ನು ಇನ್ನೊಮ್ಮೆ ಪುನರ್ಮನನ ಮಾಡಿಕೊಳ್ಳಿ. ಹೀಗೆ ಪ್ರತಿ ಬಾರಿ ಮಾಡುವುದರಿಂದ ಓದಿರುವ ಅಧ್ಯಾಯದ ಎಲ್ಲ ಅಂಶಗಳನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವಾಗುತ್ತದೆ. ಪ್ರತಿಯೊಂದೂ ವಿಷಯದ ಪ್ರತಿ ಅಧ್ಯಾಯವನ್ನು ಓದಿ ಮುಗಿಸಿದ ನಂತರ ಅದಕ್ಕೆ ಈ ರೀತಿಯ ಸಾರಾಂಶದ ಹಾಳೆಗಳನ್ನು ಸಿದ್ಧಪಡಿಸಿಕೊಳ್ಳಿ. ಪರೀಕ್ಷೆ ಹತ್ತಿರ ಬಂದಂತೆಲ್ಲಾ ಈ ಸಾರಾಂಶದ ಹಾಳೆಗಳು ನೀವು ಓದಿದ್ದನ್ನು ನೆನಪಿಸಿಕೊಳ್ಳಲು ನಿಮಗೆ ಹೆಚ್ಚು ಉಪಯೋಗಕ್ಕೆ ಬರುತ್ತವೆ.

ನೀವು ಓದಿದ ವಿಷಯ ಅಥವಾ ಅಧ್ಯಾಯದಲ್ಲಿದ್ದ ವಿವರವಾದ ಮಾಹಿತಿಯನ್ನು ಒಂದು ಚಿತ್ರ ಅಥವಾ ನಕ್ಷೆಯ ಮೂಲಕ ಸಂಕ್ಷೇಪಿಸಿ ಬರೆದಿಟ್ಟುಕೊಳ್ಳುವುದು ಒಂದು ಉತ್ತಮವಾದ ಅಭ್ಯಾಸ. ಉದಾಹರಣೆಗೆ, ಮಾನವನಲ್ಲಿ ಆಹಾರವು ಜೀರ್ಣವಾಗುವ ಕ್ರಿಯೆಯ ವಿವರವನ್ನು ಓದಿದ್ದೀರಿ ಎಂದಿಟ್ಟುಕೊಳ್ಳಿ. ಇದನ್ನು ನೆನಪಿಟ್ಟುಕೊಳ್ಳುವುದು ಹೇಗೆ? ಮಾನವನ ಜೀರ್ಣಾಂಗ ವ್ಯವಸ್ಥೆಯ ಸರಳ ಚಿತ್ರವೊಂದನ್ನು ಬರೆದು ಭಾಗಗಳನ್ನು ಗುರುತಿಸಿ. ಪ್ರತಿ ಭಾಗದ ಹೆಸರಿನ ಪಕ್ಕದಲ್ಲಿ ಅದರ ಕಾರ್ಯದ ವಿವರವನ್ನು ಪದಗಳಲ್ಲಿ ಸೂಚಿಸಿ. ಈ ಚಿತ್ರವನ್ನು ನೋಡಿದಾಗಲೆಲ್ಲಾ ನಿಮಗೆ ಇಡೀ ಜೀರ್ಣಕ್ರಿಯೆ ನೆನಪಿಗೆ ಬರುತ್ತದೆ. ನಿಮ್ಮ ಮೆದುಳಿಗೆ ಪುಟಗಟ್ಟಲೆ ಮಾಹಿತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕಿಂತ ಚಿತ್ರವೊಂದನ್ನು ನೆನಪಿಟ್ಟುಕೊಳ್ಳುವುದು ಸುಲಭ.ಗಣಿತದಂಥ ವಿಷಯವಾದರೆ,

* ಫಾರ್ಮುಲಾಗಳನ್ನು ಬರೆದಿಟ್ಟುಕೊಳ್ಳಿ:
ಅದೇ ರೀತಿ, ಪ್ರತಿಯೊಂದು ಅಧ್ಯಾಯದಲ್ಲಿರುವ ಮಾಹಿತಿಯ ಸಾರಾಂಶವನ್ನು ಒಂದು ರೇಖಾನಕ್ಷೆಯ ಮೂಲಕವೂ ಬರೆದಿಟ್ಟುಕೊಳ್ಳಬಹುದು. ಒಂದು ಇಡೀ ಅಧ್ಯಾಯದಲ್ಲಿರುವ ಮಾಹಿತಿಯನ್ನು ಕೆಲವೇ ಪದಗಳನ್ನು ಬಳಸಿ, ಒಂದು ನಕ್ಷೆಯ ರೂಪದಲ್ಲಿ ಒಂದು ಪುಟದಲ್ಲಿ ಸಂಕ್ಷೇಪಿಸಬಹುದು. ಇದಕ್ಕೆ ಸಿದ್ಧಾಂತ ನಕ್ಷೆ (ಕಾನ್ಸೆಪ್ಟ್ ಮ್ಯಾಪ್) ಎಂದು ಹೆಸರು. ಈ ರೀತಿಯಲ್ಲಿ ಯಾವುದೇ ವಿಷಯದ ಯಾವುದೇ ಮಾಹಿತಿಯನ್ನು ತಯಾರಿಸಿ ಇಟ್ಟುಕೊಳ್ಳಬಹುದು. ಸಂಕೀರ್ಣ ವಿಷಯ ಅಥವಾ ಮಾಹಿತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಕ್ಕೆ ಇದು ಅತ್ಯಂತ ಉಪಯುಕ್ತ ಮಾರ್ಗ. ಹೀಗೆ ಬರೆದಿಟ್ಟುಕೊಂಡಿರುವುದನ್ನು ಆಗಾಗ್ಗೆ ತೆಗೆದು ನೋಡುವುದರಿಂದ ಹಾಗೂ ಪುನರ್ಮನನ ಮಾಡುವುದರಿಂದ, ಮೆದುಳಿನಲ್ಲಿ ಅದು ಸುಲಭವಾಗಿ ನೆನಪಿನ ರೂಪದಲ್ಲಿ ಸಂಗ್ರಹವಾಗುತ್ತದೆ.

ಕೆಲವೊಮ್ಮೆ, ಮಾಹಿತಿ ಸಂಕೀರ್ಣವಾಗಿ ಮತ್ತು ದೀರ್ಘವಾಗಿ ಇರಬಹುದು. ಅಂಥ ಸಂದರ್ಭಗಳಲ್ಲಿ ಅದನ್ನು ತುಂಡರಿಸಿ ಸಣ್ಣ ಹಾಗೂ ಸರಳ ಮಾಹಿತಿಯನ್ನಾಗಿ ಪರಿವರ್ತಿಸಿಕೊಳ್ಳಿ. ಇಂಥ ಯಾವುದೇ ಸಂದರ್ಭದಲ್ಲಿ ಪೂರ್ತಿ ವಾಕ್ಯಗಳ ಬದಲಿಗೆ, ಕೇವಲ ತಾಂತ್ರಿಕ ಪದಗಳನ್ನು ಮಾತ್ರ ಬರೆದಿಟ್ಟುಕೊಳ್ಳಿ.

* ಸಹಪಾಠಿಗಳೊಂದಿಗೆ ಚರ್ಚಿಸಿ: ನೀವು ಓದಿದ ವಿಷಯವನ್ನು ನಿಮ್ಮ ಸಹಪಾಠಿಗಳೊಂದಿಗೆ ಚರ್ಚಿಸುವುದು ನಿಮ್ಮ ನೆನಪಿನ ಶಕ್ತಿಯನ್ನು ಸುಧಾರಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ನಿಮಗೆ ಅತ್ಯಂತ ಆಪ್ತರಾದ ಸಹಪಾಠಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಇಬ್ಬರೂ ಒಂದೇ ರೀತಿಯ ವೇಳಾಪಟ್ಟಿ ಹಾಕಿಕೊಂಡರೆ ಒಳ್ಳೆಯದು. ಪ್ರತಿ ದಿನ ನೀವಿಬ್ಬರು ಓದಿದ ವಿಷಯ ಅಥವಾ ಅಧ್ಯಾಯದ ಬಗ್ಗೆ ಸಂಜೆ ಇಬ್ಬರೂ ಕೆಲವು ನಿಮಿಷಗಳ ಕಾಲ ಸೇರಿ ಚರ್ಚಿಸಿ. ಯಾರು ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೋ ಅವರು ಇನ್ನೊಬ್ಬರಿಗೆ ವಿವರಿಸಲಿ. ಹೀಗೆ ಮಾಡುವುದರಿಂದ, ಓದಿದ್ದನ್ನು ಪುನರ್ಮನನ ಮಾಡಿಕೊಂಡಂತಾಗುತ್ತದೆ. ಪರಸ್ಪರ ಇಬ್ಬರೂ ಅದರ ಪ್ರಯೋಜನವನ್ನು ಪಡೆದಂತಾಗುತ್ತದೆ. ಇದನ್ನು ಒಂದು ಸಣ್ಣ ಗುಂಪು ಚಟುವಟಿಕೆಯನ್ನಾಗಿಯೂ ಮಾಡಬಹುದು. ಆದರೆ, ಯಾವುದೇ ಕಾರಣಕ್ಕೂ ಅಲ್ಲಿ ಅನವಶ್ಯ ವಿಷಯಗಳ ಬಗ್ಗೆ ಚರ್ಚೆ, ಕಾಲಹರಣವಾಗದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗುತ್ತದೆ. ಹೀಗಾದಾಗಲೇ ಓದಿದ್ದು ಮರೆತು ಹೋಗುವುದು.

* ಉತ್ತಮವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಿ: ಉಪಯುಕ್ತವಲ್ಲದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ವೃಥಾ ಕಾಲಹರಣ ಮಾಡಿದಂತೆ. ಅದರಿಂದ ದೇಹಕ್ಕಾಗಲೀ, ಮೆದುಳಿಗಾಗಲೀ ಯಾವುದೇ ಪ್ರಯೋಜನವಿಲ್ಲ. ಅದರ ಬದಲಿಗೆ, ನಿಮ್ಮ ಮೆದುಳನ್ನು ಚುರುಕುಗೊಳಿಸುವಂಥ ಉತ್ತಮ, ಉಪಯುಕ್ತ ಹವ್ಯಾಸಗಳ ಕಡೆ ಗಮನ ಹರಿಸಿ. ವೃತ್ತಪತ್ರಿಕೆಗಳಲ್ಲಿ ಕಾಣುವ ಪದಬಂಧವನ್ನು ಪ್ರತಿ ನಿತ್ಯ ಬಿಡಿಸುವುದು, ರಸಪ್ರಶ್ನೆಯಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಇಲ್ಲವೆ, ಚೆಸ್‌ನಂಥ ಆಟಗಳನ್ನು ಆಡುವುದು ನಿಮ್ಮ ಮೆದುಳಿನ ವಿಶ್ಲೇಷಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ.

* ಆರೋಗ್ಯದ ಕಡೆ ಗಮನ ಕೊಡಿ: ನೆನಪು ಮತ್ತು ಆರೋಗ್ಯ ಒಂದಕ್ಕೊಂದು ಪೂರಕ. ನಿಮ್ಮ ದೇಹದ ಆರೋಗ್ಯ ನಿಮ್ಮ ಮೆದುಳಿನ ಆರೋಗ್ಯವನ್ನು ಸೂಚಿಸುತ್ತದೆ ಎಂಬ ಮಾತೊಂದಿದೆ. ಹೀಗಾಗಿ, ಆರೊಗ್ಯದ ಕಡೆ ಹೆಚ್ಚು ಗಮನ ಕೊಡಿ. ಸಾಕಷ್ಟು ನಿದ್ರೆ, ವಿಶ್ರಾಂತಿ ದೇಹಕ್ಕೆ ಅತ್ಯವಶ್ಯ. ಉತ್ತಮವಾದ ಪೋಷಕಾಂಶಯುಕ್ತ ಅಹಾರವನ್ನು ಕಾಲ ಕಾಲಕ್ಕೆ ಸರಿಯಾಗಿ ಸೇವಿಸಿ. ಯಾವುದೇ ಕಾರಣಕ್ಕೆ ಸಮಯ ತಪ್ಪಿ ಆಹಾರ ಸೇವನೆ ಮಾಡಬೇಡಿ. ವೈದ್ಯಶಾಸ್ತ್ರದಲ್ಲಿ ಹೇಳುವಂತೆ. ನಿಮ್ಮ ಆಹಾರನಾಳ ನಿಮ್ಮ ಎರಡನೇ ಮೆದುಳಿನಂತೆ. ಅದರ ಆರೋಗ್ಯ ಕೆಡದಂತೆ ನೋಡಿಕೊಳ್ಳಿ.

ನಿಮ್ಮ ದೇಹದ ಶೇ.25ರಷ್ಟು ಭಾಗ ನೀರಿನಿಂದ ಕೂಡಿದೆ. ಇದರಲ್ಲಿ, ಶೇ.2ರಷ್ಟು ನೀರು ನಷ್ಟವಾದರೂ ಅದರಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಇದು ನಿಮ್ಮ ನೆನಪಿನ ಶಕ್ತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೀಗಾಗಿ, ನಿತ್ಯ ಕನಿಷ್ಠ ಐದಾರು ಲೋಟಗಳಷ್ಟು ನೀರನ್ನು ಕುಡಿಯಿರಿ.

ಮೇಲೆ ಹೇಳಿದ ಪ್ರತಿಯೊಂದು ಅಂಶದ ಕಡೆ ಗಮನಕೊಡಿ. ಅವುಗಳನ್ನು ನಿಮ್ಮ ಅಧ್ಯಯನ ವಿಧಾನದಲ್ಲಿ ಅಳವಡಿಸಿಕೊಳ್ಳಿ. ನಿಮ್ಮ ನೆನಪಿನ ಶಕ್ತಿಯನ್ನು ಉತ್ತಮಗೊಳಿಸಿಕೊಂಡು ಯಶಸ್ಸನ್ನು ನಿಮ್ಮದಾಗಿಸಿಕೊಳ್ಳಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry