ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್ಟಗೆ ಯೋಚಿಸಲು ಹತ್ತು ಸೂತ್ರಗಳು

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನಾವೆಲ್ಲಾ ಸ್ಕೂಲು–ಕಾಲೇಜಿಗೆ ಹೋಗಿ ಬುದ್ಧಿವಂತರಾಗುತ್ತೇವೆ ಎಂದು ಲೆಕ್ಕ. ಅಂದರೆ ವೈಜ್ಞಾನಿಕವಾಗಿ ಯೋಚಿಸಲು ಪ್ರಾರಂಭಿಸುತ್ತೇವೆ ಎಂದರ್ಥ. ಸ್ಕೂಲು–ಕಾಲೇಜುಗಳು ವೈಜ್ಞಾನಿಕ ಮನೋಭಾವನೆ ಎನ್ನುವಂಥ ರೀತಿಯ ಯಾವುದೋ ಒಂದು ವಿಶೇಷ ಶಕ್ತಿಯನ್ನು ಬೆಳೆಸುತ್ತವೆ ಎಂದು ನಮ್ಮ ನಂಬಿಕೆ. ಆದರೆ, ಇಲ್ಲೊಂದು ಎಡವಟ್ಟಿದೆ.

ವೈಜ್ಞಾನಿಕ ಚಿಂತನೆ ಎನ್ನುವ ಮಾದರಿಯ ಯಾವ ಚಿಂತನೆಯೂ ಈ ಪ್ರಪಂಚದಲ್ಲಿಲ್ಲ. ಅಥವಾ, ಹೀಗೆ ಯೋಚನೆ ಮಾಡಿದರೆ ಅದು ವೈಜ್ಞಾನಿಕ, ಹಾಗೆ ಯೋಚನೆ ಮಾಡಿದರೆ ಅದು ಅವೈಜ್ಞಾನಿಕ ಎನ್ನುವ ಯಾವ ಕಾಯ್ದೆ ಪುಸ್ತಕವೂ ಇಲ್ಲ. ಹಾಗಾಗಿ, ಈ ವೈಜ್ಞಾನಿಕ ಮನೋಭಾವದ ಹಿಂದೆ ಬಿದ್ದರೆ ಹಳ್ಳ ಹತ್ತುವುದು ಗ್ಯಾರಂಟಿ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಸ್ವಲ್ಪ ಚಾಲಾಕಿತನ ಉಪಯೋಗಿಸಬೇಕು.

ಅಂತಹ ಚಾಲಾಕಿತನದ ಹತ್ತು ಉಪಾಯಗಳು ಇಲ್ಲಿವೆ. ಆದರೆ, ಎಚ್ಚರ. ಇದು ಉಪಾಯಗಳು. ನಿಯಮಗಳಲ್ಲ. ಅಡ್ಡಾದಿಡ್ಡಿಯಾಗಿ ಬಳಸಿ ಇವು ಕೈಕೊಟ್ಟರೆ ಮತ್ತೆ ಬೇರೆಯವರು ಜವಾಬ್ದಾರರಲ್ಲ. ಸಾಮಾನ್ಯವಾಗಿ ಸ್ಕೂಲು–ಕಾಲೇಜುಗಳು ಕಲಿಸುವುದು ದಡ್ಡರ ಸೂತ್ರ. ಅದರಾಚೆಗೆ ಇರುವುದು ಜಾಣರ ಸೂತ್ರ.

ದಡ್ಡರ ಸೂತ್ರ 1: ಯಾವುದನ್ನು ಸರಿಯೆಂದು ಸಾಬೀತುಮಾಡಬಹುದೋ ಅದು ಮಾತ್ರ ವೈಜ್ಞಾನಿಕ.

ಜಾಣರ ಸೂತ್ರ 1: ಯಾವುದನ್ನು ತಪ್ಪೆಂದು ಸಾಬೀತುಮಾಡುವ ಸಾಧ್ಯತೆ ಇದೆಯೋ ಅದು ಮಾತ್ರ ವೈಜ್ಞಾನಿಕ.

ಸಾಮಾನ್ಯವಾಗಿ ವಿಜ್ಞಾನ ಎಂದರೆ ಸರಿ ಎಂದು ಸಾಬೀತು ಮಾಡಬಹುದಾದದ್ದು ಎಂದು ನಮ್ಮ ನಂಬಿಕೆ. ಆದರೆ ಇದು ಆಭಾಸಕ್ಕೆ ಈಡು ಮಾಡುತ್ತದೆ. ಒಂದು ಉದಾಹರಣೆ ನೋಡಿ. ಈಗ ನಾನೊಂದು ಹೊಸ ಸಿದ್ದಾಂತ ಮಂಡಿಸುತ್ತೇನೆ. ನನ್ನ ಎದುರಿಗಿರುವ ನೀರಿನ ಬಾಟಲಿಯನ್ನು ನನ್ನ ಬಲಗೈ ಉಪಯೋಗಿಸಿ ಮಾತ್ರವೇ ಜರುಗಿಸಲು ಸಾಧ್ಯ.

ಇದನ್ನು ಸರಿ ಎಂದು ಸಾಬೀತು ಪಡಿಸುವುದೂ ಸುಲಭ. ಒಂದಲ್ಲಾ ನೂರು ಬಾರಿ ಬೇಕಾದರೂ ನನ್ನ ಬಲಗೈ ಉಪಯೋಗಿಸಿಯೇ ಈ ಬಾಟಲಿಯನ್ನು ಜರುಗಿಸುತ್ತೇನೆ. ಇದರಿಂದ ನನ್ನ ಸಿದ್ಧಾಂತ ಸಾಬೀತಾಗುತ್ತದೆ ತಾನೆ? ಆದರೆ ನನ್ನ ಸಿದ್ದಾಂತ ಎಂದು ನಾನು ಕೊಟ್ಟ ಉದಾಹರಣೆ ಕೆಲಸಕ್ಕೆ ಬಾರದ ಒಂದು ಅಬದ್ಧ ಉದಾಹರಣೆ ತಾನೆ? ಹಾಗಾದರೆ, ಈ ವೈರುಧ್ಯಕ್ಕೆ ಪರಿಹಾರ ಏನು? ಸರಳ.

ಈ ನನ್ನ ಸಿದ್ದಾಂತವನ್ನು ತಪ್ಪು ಎಂದು ಸಾಬೀತು ಮಾಡಲು ಪ್ರಯತ್ನಿಸುವುದು. ಅಂದರೆ, ನನ್ನ ಎಡಗೈ ಉಪಯೋಗಿಸಿ ಒಮ್ಮೆ ಆ ಬಾಟಲಿಯನ್ನು ಜರುಗಿಸುವುದು. ಅದು ಆಗಲೂ ಜರುಗುತ್ತದೆ. ಅಂದಮೇಲೆ, ಬಲಗೈನಿಂದ ಮಾತ್ರ ಇದನ್ನು ಜರುಗಿಸಲು ಸಾಧ್ಯ ಎನ್ನುವ ಸಿದ್ಧಾಂತ ತಪ್ಪೆಂದು ಸಾಬೀತಾಗುತ್ತದೆ. ವಿಜ್ಞಾನ ಬೆಳೆಯುತ್ತದೆ. ಆದರೆ ಇಲ್ಲೊಂದು ವಿಷಯ ಗಮನಿಸಿ.

ಕೆಲವು ಸಿದ್ಧಾಂತಗಳನ್ನು ಏನು ಮಾಡಿದರೂ ತಪ್ಪೆಂದು ಸಾಬೀತುಪಡಿಸುವ ಸಾಧ್ಯತೆಯೇ ಇಲ್ಲ. ಈ ಪ್ರಪಂಚವನ್ನು ದೇವರು ಸೃಷ್ಟಿಸಿದ್ದು ಎನ್ನುವ ಸಿದ್ಧಾಂತವನ್ನು ಏನು ಮಾಡಿದರೂ ತಪ್ಪೆಂದು ಸಾಬೀತುಮಾಡಲು ಸಾಧ್ಯವಿಲ್ಲ. ಅಂದಮೇಲೆ, ಅದು ವೈಜ್ಞಾನಿಕ ಸಿದ್ಧಾಂತವೇ ಅಲ್ಲ. ಅದನ್ನು ವೈಜ್ಞಾನಿಕವಾಗಿ ಸರಿ ಎನ್ನಲೂ ಬರುವುದಿಲ್ಲ.

ತಪ್ಪು ಎನ್ನಲೂ ಬರುವುದಿಲ್ಲ. ಹೆಚ್ಚೆಂದರೆ, ಅಂತಹ ಮಾತಿಗೂ ವಿಜ್ಞಾನಕ್ಕೂ ಯಾವ ಸಂಬಂಧವೂ ಇಲ್ಲ ಎನ್ನಬಹುದಷ್ಟೆ. ಆದರೆ ನ್ಯೂಟನ್‌ನ ಸಿದ್ಧಾಂತ ತಪ್ಪೆಂದು ಇಲ್ಲಿಯವರೆಗೂ ಯಾರೂ ಸಾಬೀತು ಮಾಡಿರದಿದ್ದರೂ, ಹಾಗೆ ತಪ್ಪೆಂದು ಸಾಬೀತುಮಾಡುವ ಸಾಧ್ಯತೆಯಾದರೂ ಇದೆ. ಅಕಸ್ಮಾತ್ ಭಾರವಿರುವ ವಸ್ತುಗಳು ಹೊರಗಿನ ಯಾವುದೇ ಕಾರಣವೂ ಇಲ್ಲದೆ, ಬೀಳುವ ಬದಲು ತೇಲಿದರೆ, ನ್ಯೂಟನ್‌ನ ಸಿದ್ಧಾಂತ ತಪ್ಪು ಎಂದು ಸಾಬೀತು ಮಾಡಬಹುದು.

ಇಲ್ಲಯವರೆಗೂ ಹಾಗೆ ಯಾರೂ ಮಾಡಲು ಸಾಧ್ಯವಾಗದೇ ಇರುವುದರಿಂದ ನ್ಯೂಟನ್‌ನ ಸಿದ್ಧಾಂತ ಒಂದು ಬಲವಾದ ಸಿದ್ಧಾಂತ. (ಕ್ವಾಂಟಮ್ ವಿಜ್ಞಾನಗಳು ನ್ಯೂಟನ್ ಸಿದ್ಧಾಂತದ ಮಿತಿಗಳನ್ನು ತೋರಿಸಿಕೊಟ್ಟಿವೆ. ಆದರೆ ಅದು ನಮ್ಮ ಈ ಚಿತ್ರಣಕ್ಕೆ ಅಪ್ರಸ್ತುತವಾದ್ದರಿಂದ ಅದರ ಗೊಡವೆ ಸದ್ಯಕ್ಕೆ ಬೇಡ).

ಅಂತೆಯೇ, ಹೆಂಗಸರ ಶೋಷಣೆಗೆ ಪಿತೃಪ್ರಧಾನ ವ್ಯವಸ್ಥೆ ಕಾರಣ ಎನ್ನುವುದನ್ನೂ, ಚರಿತ್ರೆಯೆಲ್ಲಾ ವರ್ಗಸಂರ್ಘಷದ ಆಧಾರದ ಮೇಲೆ ನಡೆಯುತ್ತಿದೆ ಎನ್ನುವುದನ್ನೂ ಏನು ಮಾಡಿದರೂ ತಪ್ಪೆಂದು ಸಾಬೀತುಪಡಿಸುವ ಸಾಧ್ಯತೆ ಇಲ್ಲ. ಹಾಗಾಗಿಯೇ, ಅದು ಯಾವುದೂ ವೈಜ್ಞಾನಿಕ ಸಿದ್ಧಾಂತಗಳಲ್ಲ. ಅಂತಹ ಮಾತುಗಳಿಗೆ ಬೇರೆ ಯಾವುದೋ ರೀತಿಯ ಪ್ರಾಮುಖ್ಯ ಮತ್ತು ಪ್ರಸ್ತುತತೆ ಇರಬಹುದು. ಆದರೆ, ಅವನ್ನು ವೈಜ್ಞಾನಿಕ ಸಿದ್ಧಾಂತಗಳು ಎಂದು ನೋಡಲು ಬರುವುದಿಲ್ಲ.

ದಡ್ಡರ ಸೂತ್ರ 2: ಮೊದಲು ನಾವು ಅಜ್ಞಾನಿಗಳಾಗಿರುತ್ತೇವೆ. ಆಮೇಲೆ, ಸ್ವಲ್ಪ ಸ್ವಲ್ಪವೇ ಜ್ಞಾನಿಗಳಾಗುತ್ತೇವೆ.

ಜಾಣರ ಸೂತ್ರ 2: ಮೊದಮೊದಲು ನಾವು ತಪ್ಪು ಮಾಡುತ್ತೇವೆ. ನಿಧಾನವಾಗಿ ಅದರಿಂದ ಕಲಿಯುತ್ತೇವೆ.

ಆರಂಭದಲ್ಲಿ ಅಜ್ಞಾನಿಗಳಾಗಿದ್ದವರು ನಂತರ ಜ್ಞಾನಿಗಳಾಗುವುದು ಹೇಗೆ? ಒಂದೇ ಒಂದು ಪದವೂ ತಿಳಿಯದ ಮಗುವಿಗೆ ಮೊದಲ ಪದವನ್ನು ಕಲಿತುಕೊಳ್ಳುವ ಜ್ಞಾನ ಎಲ್ಲಿಂದ ಬಂತು? ಹಾಗಾದರೆ, ಮೊದಲ ಪದವನ್ನು ಕಲಿಯುವುದಕ್ಕಿಂತ ಮುಂಚಿನಿಂದಲೇ ಮೊದಲ ಪದವನ್ನು ಕಲಿಯುವುದಕ್ಕೆ ಬೇಕಾದ ಜ್ಞಾನ ಇತ್ತು ಎಂದಾದರೆ, ಮಗುವಿಗೆ ಚಿಕ್ಕಂದಿನಲ್ಲಿ ಮೊದಲ ಪದ ಇನ್ನೂ ತಿಳಿದಿರಲಿಲ್ಲ ಎನ್ನುವ ಮಾತಿನ ಅರ್ಥವೇನು?

ಇಂತಹ ಗೋಜಲುಗಳನ್ನೆಲ್ಲಾ ತಪ್ಪಿಸಿಕೊಳ್ಳಬೇಕೆಂದರೆ, ಕಲಿಕೆ ಎಂದರೆ ಏನನ್ನೋ ಮಾಡಲು ತೊಡಗುವುದು, ಮಾಡುತ್ತಲೇ, ಅದನ್ನು ಹೇಗೆ ಮಾಡಬೇಕು ಎನ್ನುವುದನ್ನೂ ಕಲಿಯುವುದು ಎಂದು ಅರಿಯಬೇಕು. ಮೊದಲು ಸೈದ್ಧಾಂತಿಕ ಆಮೇಲೆ ಪ್ರಾಯೋಗಿಕ ಅಥವಾ ಮೊದಲು ಪ್ರಾಯೋಗಿಕ ಆಮೇಲೆ ಸೈದ್ಧಾಂತಿಕ ಎನ್ನುವಂತಹ ಮಟ್ಟಗಳೆಲ್ಲಾ ಇಲ್ಲ. ಎರಡೂ ಯಾವಾಗಲೂ ಜೊತೆಜೊತೆಯೇ.

ದಡ್ಡರ ಸೂತ್ರ 3: ಒಬ್ಬ ಒಳ್ಳೆಯ ವಿಜ್ಞಾನಿಗೆ ಪ್ರಪಂಚದ ಬಗ್ಗೆ ತುಂಬಾ ತಿಳಿದಿರುತ್ತದೆ.

ಜಾಣರ ಸೂತ್ರ 3: ಮಾಡುತ್ತಿರುವ ಕೆಲಸದಲ್ಲಿ ಏನಾದರೂ ವ್ಯತ್ಯಾಸ ಕಂಡರೆ ಒಬ್ಬ ಒಳ್ಳೆಯ ವಿಜ್ಞಾನಿಗೆ ಇಲ್ಲಿ ಏನೋ ಸರಿ ಇಲ್ಲ ಎಂದು ಅನ್ನಿಸುತ್ತದೆ. ಆಮೇಲೆ, ಅದು ಯಾಕೆ ಹಾಗಾಯಿತು ಎಂದು ಹುಡುಕಾಡುವ ಕುತೂಹಲ ಇರುತ್ತದೆ.

ಎರಡನೇ ಸೂತ್ರವನ್ನು ಇನ್ನೊಮ್ಮೆ ಗಮನಿಸಿ. ಆಗ ಮೂರನೆಯದ್ದೂ ತಂತಾನೆ ಸರಿ ಎಂದು ತಿಳಿಯುತ್ತದೆ.

ದಡ್ಡರ ಸೂತ್ರ 4: ಬಹಳಷ್ಟು ಸಿದ್ಧಾಂತಗಳನ್ನು ತಿಳಿದುಕೊಳ್ಳುವುದು ಒಬ್ಬ ವಿಜ್ಞಾನಿಯ ಕೆಲಸ.

ಜಾಣರ ಸೂತ್ರ 4: ಒಂದೆರಡಾದರೂ ಹೊಸ ಸಿದ್ಧಾಂತಗಳನ್ನು ಕಟ್ಟುವುದು ಒಬ್ಬ ವಿಜ್ಞಾನಿಯ ಕೆಲಸ.

ನಮ್ಮ ದೇಶದ ದೊಡ್ಡದೊಡ್ಡ ವಿದ್ಯಾ ಸಂಸ್ಥೆಗಳ ಗೋಳು ಇದೇ. ಅವು ವಿದ್ಯಾರ್ಥಿಗಳಿಗೆ ಹಲವಾರು ಸಿದ್ಧಾಂತಗಳನ್ನು ಕಲಿಸುತ್ತವೆ. ತಾವು ಕಲಿಸಿದ್ದನ್ನು ಹುಡುಗರು ಸರಿಯಾಗಿ ಕಲಿತಿವೆಯೋ ಎಂದು ಖಾತರಿ ಮಾಡಿಕೊಳ್ಳಲು ಹಲವಾರು ಪರೀಕ್ಷೆಗಳನ್ನು ನಡೆಸುತ್ತವೆ. ಅದರಲ್ಲಿ 100ಕ್ಕೆ 99.99 ಪ್ರತಿಶತ ಅಂಕ ಪಡೆದವರನ್ನು ಬುದ್ಧಿವಂತರು ಎಂದು ರ‍್ಯಾಂಕ್ ಕೊಟ್ಟು ಸನ್ಮಾನಿಸುತ್ತವೆ. ಆದರೆ, ಇದರಲ್ಲೆಲ್ಲಾ ನಿಜವಾದ ಕಸುಬನ್ನೇ ಮರೆತಿರುತ್ತವೆ. ಪಾಶ್ಚಾತ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನಮ್ಮ ದೇಶದ ವಿದ್ಯಾರ್ಥಿಗಳ ರೀತಿ ಸಿಕ್ಕಾಪಟ್ಟೆ ವಿಚಾರಗಳೆಲ್ಲಾ ಗೊತ್ತಿರುವುದಿಲ್ಲ. ಆದರೆ, ಹೊಸ ಸಿದ್ಧಾಂತಗಳನ್ನು ಕಟ್ಟುವ, ಇರುವ ಸಿದ್ದಾಂತಗಳನ್ನು ಪ್ರಶ್ನೆಗೆ ಹಚ್ಚುವ ಕಸುಬು ಗೊತ್ತಿರುತ್ತದೆ. ಕೊನೆಗೆ, ಕಾಲೇಜಿನ ಚಿನ್ನದ ಪದಕ ನಮ್ಮವರಿಗೆ ಬರುತ್ತದೆ. ನೊಬೆಲ್ ಪ್ರಶಸ್ತಿ ಅವರಿಗೆ ಬರುತ್ತದೆ.

ದಡ್ಡರ ಸೂತ್ರ 5: ಐನ್‌ಸ್ಟೀನ್‌ಗೆ ಸಿಕ್ಕಾಪಟ್ಟೆ ಜಾಸ್ತಿ ಐಕ್ಯೂ ಅಥವಾ ಬುದ್ಧಿಶಕ್ತಿ ಇತ್ತು.

ಜಾಣರ ಸೂತ್ರ 5: ಐನ್‌ಸ್ಟೀನ್ ಭೌತಶಾಸ್ತ್ರದಲ್ಲಿ ಮಿಕ್ಕವರು ಕೇಳುತ್ತಿದ್ದ ಪ್ರಶ್ನೆಗಳಿಗಿಂತ ಹೆಚ್ಚು ಸರಳವಾದ, ಹೆಚ್ಚು ಮೂಲಭೂತವಾದ ಪ್ರಶ್ನೆಗಳನ್ನು ಕೇಳಿದವ.

ನೀವೇ ಎಲ್ಲೋ ಓದಿರುತ್ತೀರಿ. ಹತ್ತು ಹದಿನೈದು ವರ್ಷದ ಯಾವುದೋ ಮಗುವಿಗೆ ಐನ್‌ಸ್ಟೀನ್‌ಗಿಂತ ಜಾಸ್ತಿ ಬುದ್ಧಿ ಶಕ್ತಿ ಇತ್ತು ಎಂದು. ಅಂದರೇನು ಆ ಮಗು ಈಗ ಐನ್‌ಸ್ಟೀನನ್ನೂ ಮೀರಿಸಿ ಏನಾದರೂ ಸಾಧನೆ ಮಾಡಿಬಿಡುತ್ತದಾ? ಅಥವಾ ಐನ್‌ಸ್ಟೀನನಿಗಿಂತ ಕಡಿಮೆ ಐಕ್ಯೂ ಇದ್ದ ಅವನ ವಾರಗೆಯ ವಿಜ್ಞಾನಿಗಳೆಲ್ಲಾ ಏನು ಕಡಿಮೆ ಘಟಾನುಘಟಿಗಳಾ?

ಈ ಐಕ್ಯೂ ಇರುವುದು ಬೂಸ್ಟು, ಹಾರ್ಲಿಕ್ಸು ಕಂಪನಿಗಳ ಮಾರಾಟ ಹೆಚ್ಚಿಸಿಕೊಳ್ಳಲು ಅಷ್ಟೆ. ನಿಜವಾಗಿಯೂ ಐನ್‌ಸ್ಟೀನ್‌ನ ವಿಶೇಷ ಏನೆಂದರೆ ತನ್ನ ಕಾಲದ ಅತಿ ಮುಖ್ಯವಾದ ಭೌತಶಾಸ್ತ್ರದ ಪ್ರಶ್ನೆಗಳ ಕುರಿತು ಮಿಕ್ಕವರಿಗಿಂತ ಸರಳವಾದ ಮೂಲಭೂತವಾದ ಪ್ರಶ್ನೆಗಳನ್ನು ಕೇಳಿದ್ದು.

ಯಾವುದಾದರೂ ಆಧುನಿಕ ಭೌತಶಾಸವನ್ನು ಪರಿಚಯಿಸುವ ಪುಸ್ತಕ ಸಿಕ್ಕಿದರೆ ಓದಿ ನೋಡಿ. ಅವನ ಕ್ರಮದ ತಾಂತ್ರಿಕ ವಿವರಗಳು, ಲೆಕ್ಕಾಚಾರಗಳು ಇವೆಲ್ಲಾ ಅರ್ಥವಾಗದಿದ್ದರೂ, ಅವನ ಪ್ರಶ್ನೆಗಳಲ್ಲಿದ್ದ ಸರಳತೆ ಮತ್ತು ಸೌಂದರ್ಯ ಕಾಣಿಸುತ್ತದೆ.

ದಡ್ಡರ ಸೂತ್ರ 6: ನಾವು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.

ಜಾಣರ ಸೂತ್ರ 6: ನಾವು ಮಾಡಿದ ಕೆಲಸದಲ್ಲಿ ಏನಾದರೂ ತಪ್ಪು ನುಸುಳಿದೆಯಾ ಎಂದು ಮತ್ತೆ ಮತ್ತೆ ಪರೀಕ್ಷಿಸಬೇಕು.

ವೈಜ್ಞಾನಿಕ ಚಿಂತನೆ ಎನ್ನುವ ಒಂದು ಏಕರೂಪಿಯಾದ ಚಿಂತನೆ ಇಲ್ಲ. ಇರುವುದು ಏನಿದ್ದರೂ, ಆಯಾ ಸಂದರ್ಭಕ್ಕೆ ಸರಿಯಾದ ಒಂದಷ್ಟು ಎಚ್ಚರಿಕೆ. ಜೀವಶಾಸ್ತ್ರ, ರಸಾಯನಶಾಸ್ತ್ರ, ಸಮಾಜಶಾಸ್ತ್ರ – ಹೀಗೆ ಬೇರೆಬೇರೆ ಶಿಸ್ತುಗಳಲ್ಲಿ ಬೇರೆಬೇರೆ ರೀತಿಯ ಎಚ್ಚರಿಕೆಯನ್ನು ಪಾಲಿಸಬೇಕು. ಬೇರೆಬೇರೆ ರೀತಿಯ ವಿಚಾರಗಳ ಕುರಿತು ಗಮನ ಹರಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಯಾವ ವಿಚಾರದ ಬಗ್ಗೆಯಾದರೂ ಅದರಲ್ಲೇನಾದರೂ ತಪ್ಪು ಇರಬಹುದೇ ಎಂದು ಇನ್ನೊಮ್ಮೆ, ಮತ್ತೊಮ್ಮೆ ಪರೀಕ್ಷಿಸಬೇಕು ಅಷ್ಟೆ.

ದಡ್ಡರ ಸೂತ್ರ 7: ವಿಜ್ಞಾನ ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ.

ಜಾಣರ ಸೂತ್ರ 7: ವಿಜ್ಞಾನ ನಮ್ಮ ಪ್ರಶ್ನೆಗಳಿಗೆ ಇರುವುದರಲ್ಲಿ ಉತ್ತಮ ವಿವರಣೆಗಳನ್ನು ನೀಡುತ್ತದೆ.

ಸಮಸ್ಯೆಗಳನ್ನು ಪರಿಹರಿಸುವುದು ವಿಜ್ಞಾನದ ಕೆಲಸವಲ್ಲ. ನಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ರೂಪಿಸುವಾಗ ವಿಜ್ಞಾನದ ಕೆಲವು ವಿವರಣೆಗಳನ್ನು ಬಳಸಿಕೊಳ್ಳಬಹುದು. ಕ್ಯಾನ್ಸರ್ ಕಾಯಿಲೆಗೆ ಪರಿಹಾರ ಬೇಕೆಂದರೆ, ಜೀವಕೋಶಗಳ ಪುನರುತ್ಪತ್ತಿಯ ಕುರಿತಾದ ವಿವರಣೆಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಆದರೆ, ಪರಿಹಾರ ರೂಪಿಸಲು ಬರೀ ಅಷ್ಟೇ ಸಾಲುವುದಿಲ್ಲ. ಇನ್ನೂ ಹಲವಾರು ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಕೆಲವೊಮ್ಮೆ, ವಿಜ್ಞಾನಿಗಳಿಗೆ ವಿವರಣೆ ತಿಳಿಯುವುದಕ್ಕಿಂತ ಮುಂಚೆಯೇ ವೈದ್ಯರಿಗೆ ಪರಿಹಾರ ದೊರಕಿರುತ್ತದೆ. ಆ ಅನುಭವವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಸಾಧ್ಯವಾದರೆ, ಅದನ್ನೂ ಮತ್ತೆ ವಿಜ್ಞಾನದ ಪ್ರಯೋಗಗಳಿಗೆ ಒಡ್ಡಬೇಕು.

ದಡ್ಡರ ಸೂತ್ರ 8: ನಮ್ಮ ಧರ್ಮ ವೈಜ್ಞಾನಿಕವಾದದ್ದು. ನಮ್ಮ ಸಂಸ್ಕೃತಿ ವೈಜ್ಞಾನಿಕವಾದದ್ದು. ನಾನು ವೈಜ್ಞಾನಿಕ ವ್ಯಕ್ತಿ.

ಜಾಣರ ಸೂತ್ರ 8: ಕೇವಲ ನಮ್ಮ ವಿವರಣೆಗಳು ಮತ್ತು ಸಿದ್ಧಾಂತಗಳು ಮಾತ್ರ ವೈಜ್ಞಾನಿಕವಾಗಿರಲು ಸಾಧ್ಯ.
ಇತ್ತೀಚೆಗಂತೂ ಕಂಡಕಂಡದ್ದನ್ನೆಲ್ಲಾ ವೈಜ್ಞಾನಿಕ ಎಂದುಬಿಡುವ ಕಾಯಿಲೆ ಸ್ವಲ್ಪ ಜಾಸ್ತಿಯೇ ಆಗಿದೆ. ಧರ್ಮ, ಸಂಸ್ಕೃತಿ, ವ್ಯಕ್ತಿಗಳು, ಕಾರು, ಬಸ್ಸು, ಹಣ್ಣು, ತರಕಾರಿ, ಫೋನು, ಫ್ಯಾನು ಇವು ಯಾವುದೂ ವೈಜ್ಞಾನಿಕವೂ ಅಲ್ಲ. ಅವೈಜ್ಞಾನಿಕವೂ ಅಲ್ಲ. ಇವೆಲ್ಲ ವಸ್ತುಗಳು ಅಷ್ಟೆ. ವೈಜ್ಞಾನಿಕವಾಗಿರುವುದು ಅಥವಾ ಅವೈಜ್ಞಾನಿಕವಾಗಿರುವುದು ನಮ್ಮ ವಿವರಣೆಗಳು ಮಾತ್ರ.

ದಡ್ಡರ ಸೂತ್ರ 9: ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಲು ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು.

ಜಾಣರ ಸೂತ್ರ 9: ಒಬ್ಬ ಒಳ್ಳೆಯ ವಿದ್ಯಾರ್ಥಿಯಾಗಲು ಹೊಸ ಪ್ರಶ್ನೆಗಳನ್ನು ಎತ್ತುವುದನ್ನು ಕಲಿಯಬೇಕು.
ಸೂತ್ರ 4ನ್ನು ಮತ್ತೊಮ್ಮೆ ಗಮನಿಸಿ. ಮರೆತುಹೋಗಿರಬಹುದು.

ದಡ್ಡರ ಸೂತ್ರ 10: ವಿಜ್ಞಾನವೆಲ್ಲಾ ಸತ್ಯ.

ಜಾಣರ ಸೂತ್ರ 10: ಜ್ಞಾನವೆಂದರೇ ದೋಷದ ಸಾಧ್ಯತೆ ಇರುವಂಥದ್ದು ಎಂದರ್ಥ.

ವಿಜ್ಞಾನವೆಲ್ಲಾ ಸತ್ಯ ಎಂದುಕೊಂಡರೆ ಒಬ್ಬ ವಿಜ್ಞಾನಿಯಾದವನಿಗೆ ಏನು ಕೆಲಸ? ನಿಜವಾದ ವಿಜ್ಞಾನಿಯಾದವನು ತಾನು ಮಾಡುತ್ತಿರುವ ವಿಜ್ಞಾನದಲ್ಲಿ ದೋಷಗಳಿರಬಹುದು ಅಥವಾ ಮತ್ತೊಬ್ಬರ ವಿಜ್ಞಾನದಲ್ಲಿ ತಪ್ಪುಗಳಿರಬಹುದು ಎನ್ನುವ ಸಂಶಯ ಇರುವುದರಿಂದಲೇ ದಿನಾ ಬೆಳಿಗ್ಗೆ ಎದ್ದು ಪ್ರಯೋಗಾಲಯಕ್ಕೋ ವಿಶ್ವವಿದ್ಯಾಲಯಕ್ಕೋ ಹೋಗುವುದು. ಹಾಗಾಲ್ಲದೇ ತಾನು ಮಾಡುತ್ತಿರುವುದೆಲ್ಲಾ ಸತ್ಯ ಎಂದುಕೊಂಡುಬಿಟ್ಟರೆ ಅವನು ದಿನಾ ಬೆಳಿಗ್ಗೆ ಎದ್ದು ಟಿವಿ ಚಾನೆಲ್‌ನಲ್ಲಿ ಸತ್ಯೋಪದೇಶ ಕೊಡುತ್ತಾರಲ್ಲ ಅಂಥವರ ರೀತಿ ಆಗಬೇಕು.

ಗೊತ್ತಿರುವುದೆಲ್ಲಾ ತಪ್ಪು ಅಥವಾ ಸುಳ್ಳು ಎಂಬುದು ನನ್ನ ಮಾತಿನ ಅರ್ಥವಲ್ಲ. ಆದರೆ, ಜ್ಞಾನ ಎಂದರೇ ಯಾವುದು ನಮಗೆ ತಿಳಿದಿಲ್ಲವೋ ಅದನ್ನು ತಿಳಿದುಕೊಳ್ಳುವ ಪ್ರಯತ್ನ. ಆ ಪ್ರಯತ್ನ ಫಲಿಸಿಯೇ ಬಿಡುತ್ತವೆ ಎನ್ನುವ ಯಾವ ಖಾತರಿಯೂ ಇಲ್ಲ. ಹಾಗೆಲ್ಲಾ ಖಾತರಿ ಇದ್ದುಬಿಟ್ಟಿದ್ದರೆ, ಜ್ಞಾನಾರ್ಜನೆಗೆ ಏಕೆ ಅಷ್ಟು ಬೆಲೆ ಇರುತ್ತಿತ್ತು? ಯಾವುದನ್ನು ನಾವು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯೇ ಇಲ್ಲವೋ ಅದು ಜ್ಞಾನವೇ ಅಲ್ಲ. ವಿವರಣೆಗೆ ಮತ್ತೆ ಮೊದಲನೇ ಸೂತ್ರ ಓದಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT