ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಗೀತ ನಿರ್ದೇಶಕನಾದ ಮೇಲೆಯೇ ಸಂಗೀತ ಕಲಿತೆ’

Last Updated 22 ಅಕ್ಟೋಬರ್ 2017, 20:03 IST
ಅಕ್ಷರ ಗಾತ್ರ

'ನಾನು ದೊಡ್ಡ ಸಿನಿಮಾ ನಿರ್ದೇಶಕನಾಗಬೇಕು. ಸಿನಿಮಾ ಮಾಡಬೇಕು... ಸಿನಿಮಾ... ಸಿನಿಮಾ... ಬಾಲ್ಯದಲ್ಲೇ ಹೀಗೊಂದು ಗೀಳು ಅಂಟಿಸಿಕೊಂಡಿದ್ದೆ. ಚಿಕ್ಕ ವಯಸ್ಸಿನಲ್ಲಿ ತಂದೆ ಶಿವಣ್ಣ ಭಟ್ ತೀರಿಕೊಂಡಿದ್ದರು. ನಮ್ಮ ಹುಟ್ಟೂರು ಪುತ್ತೂರು ಹತ್ತಿರದ ವಿಟ್ಲ. ಪ್ರೌಢಶಾಲೆಯಿಂದಲೇ ಹಾಡು ಬರೆಯುತ್ತಿದ್ದೆ. ಅಕ್ಕ ಸುಮಿತ್ರಾಗೆ ಬೆಂಗಳೂರಿನ ಬ್ಯಾಂಕ್‌ ಒಂದರಲ್ಲಿ ಕೆಲಸ ಸಿಕ್ಕಿತ್ತು. ಅವರೊಂದಿಗೆ ನಾನು, ಅಮ್ಮ ಪದ್ಮಾವತಿ ಬೆಂಗಳೂರಿಗೆ ಬಂದೆವು.

ಇಲ್ಲಿಗೆ ಬಂದು ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಹುಡುಕಲು ಆರಂಭಿಸಿದೆ. ನನಗೆ ಕಾರ್ಟೂನ್ ಬರೆಯುವುದರಲ್ಲೂ ಆಸಕ್ತಿ ಇತ್ತು. ಮೂವಿಲ್ಯಾಂಡ್‌ ಟಾಕೀಸ್ ಹತ್ತಿರ ದೊಡ್ಡದೊಡ್ಡ ಕಟೌಟ್‌ ಬರೀತಿದ್ದರು. ಇಲ್ಲಿ ಕೆಲಸಕ್ಕೆ ಸೇರಿದರೆ ಸಿನಿಮಾ ಕ್ಷೇತ್ರದ ಜನ ಪರಿಚಯವಾಗಬಹುದು ಎಂದುಕೊಂಡು, ನಾನು ಬರೆದ ಕಾರ್ಟೂನ್‌ಗಳನ್ನು ತೋರಿಸಿ ಕೆಲಸ ಕೇಳಿದೆ. ಅಲ್ಲಿದ್ದವರು, 'ಅದೇ ಬೇರೆ, ಇದೇ ಬೇರೆ. ನೀವು ಪತ್ರಿಕೆಗೆ ಸೇರಿಕೊಳ್ಳಿ' ಎಂದು ಸಲಹೆ ನೀಡಿದರು. ಗೆಳೆಯ ಸುಧಾಕರ್‌ ಬನ್ನಂಜೆ ಸಹಾಯದಿಂದ ‘ಜನವಾಣಿ’ಯಲ್ಲಿ ಕಾರ್ಟೂನಿಸ್ಟ್‌ ಆಗಿ ಸೇರಿಕೊಂಡೆ.

‘ಜನವಾಣಿ’ ಪತ್ರಿಕೆಯ ಕಚೇರಿ ಇದ್ದಿದ್ದು ಗಾಂಧಿನಗರದಲ್ಲಿ. ಅದರ ಸಮೀಪದಲ್ಲಿಯೇ ಸಿನಿಮಾ ವಿತರಕರ ಕಚೇರಿಗಳು ಇದ್ದವು. ಆಗ ನಮ್ಮ ಕಚೇರಿಗೆ ‘ಅಪರಿಚಿತ’ ಚಿತ್ರದ ಛಾಯಾಗ್ರಾಹಕ ಅರವಿಂದ್ ಬಂದರು. ಹಿಂದಿನ ದಿನವಷ್ಟೇ ‘ಅಪರಿಚಿತ’ ಸಿನಿಮಾ ನೋಡಿ ನಾನು ಥ್ರಿಲ್ ಆಗಿದ್ದೆ. ಆಗಿನ ಕಾಲಕ್ಕೆ ಅದೊಂದು ಪ್ರಯೋಗಾತ್ಮಕ ಸಿನಿಮಾ. ‘ಸಾರ್ 'ಅಪರಿಚಿತ' ಸೂಪರ್ ಆಗಿದೆ, ನಿರ್ದೇಶಕ ಕಾಶಿನಾಥ್‌ ಅವರನ್ನು ಪರಿಚಯ ಮಾಡಿಸಿ’ ಎಂದು ಅರವಿಂದ್ ಅವರನ್ನು ಕೇಳಿಕೊಂಡೆ. ಅವರು ಕಾಶಿನಾಥ್‌ ಅವರಿಗೆ ಪರಿಚಯ ಮಾಡಿಕೊಟ್ಟರು.

‘ಇವನು ಸಿನಿಮಾ ನಂಬಿಕೊಂಡು ಹಾಳಾಗುತ್ತಿದ್ದೇನೆ. ಪತ್ರಿಕೆಯಲ್ಲಿ ಕಾರ್ಟೂನಿಸ್ಟ್‌ ಆಗಿ ಏನು ‘ವರ್ಕೌಟ್‌’ ಆಗುತ್ತಿಲ್ಲ’ ಎಂದು ನಮ್ಮ ಭಾವ ಕೆಂಪೇಗೌಡನಗರದಲ್ಲಿ ದಿನಸಿ ಅಂಗಡಿ ಹಾಕಿಕೊಟ್ಟರು. ಅಲ್ಲೂ ನಾನು ಸಿನಿಮಾ ಧ್ಯಾನಿಸುತ್ತಾ, ನೊಣ ಹೊಡೆದುಕೊಂಡು ಕೂತಿದ್ದೆ. ಅಲ್ಲಿ ನಮ್ಮ ಅಂಗಡಿಗೆ ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಬರುತ್ತಿದ್ದರು. ಅವರೊಂದಿಗೆ ಹೆಚ್ಚು ಒಡನಾಟ ಬೆಳೆಯಿತು. ಸುವರ್ಣ ಕೂಡ ಒಂದು ಸಿನಿಮಾ ಮಾಡಬೇಕು ಎಂದುಕೊಂಡಿದ್ದರು. ಆ ಸಿನಿಮಾಗೆ ನಾನು ಹಾಡು ಬರೆಯಬೇಕು ಎಂಬ ನಿರ್ಧಾರವಾಯ್ತು.

ನಾನೇ ಟ್ಯೂನ್ ಮಾಡಿ ಸಾಹಿತ್ಯ ಬರೆದು ಹಾಡುತ್ತಿದ್ದೆ. ನನಗೆ ಸ್ವರಜ್ಞಾನವಿಲ್ಲ. ಸಂಗಿತ ಗೊತ್ತಿಲ್ಲ. ಅಪ್ಪಿತಪ್ಪಿಯೂ ಸಂಗೀತ ನಿರ್ದೇಶಕನಾಗಬೇಕು ಎಂಬ ಆಸೆಯೂ ಇರಲಿಲ್ಲ. ಹೇಗೆ ನನ್ನೊಳಗೆ ಟ್ಯೂನ್ ಹುಟ್ಟುತ್ತಿತ್ತೋ ಗೊತ್ತಿಲ್ಲ. ಫ್ರೌಢಶಾಲೆಯಲ್ಲಿ ಬರೆದ ಹಾಡುಗಳನ್ನು ಇವತ್ತು ನೋಡಿದರೂ ಟ್ಯೂನ್ ನೆನಪಾಗುತ್ತದೆ.

ಅಷ್ಟರಲ್ಲಿ ನಾನು ‘ಜನವಾಣಿ’ ಪತ್ರಿಕೆ ಬಿಟ್ಟು, ದಿನಸಿ ಅಂಗಡಿಯಲ್ಲೂ ಲಾಸ್‌ ಆಗಿ, ‘ಸಂಜೆವಾಣಿ’ಗೆ ಸೇರಿದ್ದೆ. ಸುಂದರನಾಥ್ ಸುವರ್ಣ ಅವರು ಕಾಶಿನಾಥ್ ಅವರ ‘ಅನುಭವ’ ಸಿನಿಮಾಕ್ಕೆ ಛಾಯಾಗ್ರಾಹಕರಾದರು. ಅವರು ನಾನು ಹಾಡು ಬರೆಯುವುದರ ಬಗ್ಗೆ ಕಾಶಿನಾಥ್‌ ಬಳಿ ಹೇಳಿದ್ದರು ಎನಿಸುತ್ತದೆ.

ಒಂದು ದಿನ ‘ಸಂಜೆವಾಣಿ’ ಕಚೇರಿಗೆ ‘ಅನುಭವ’ ಸಿನಿಮಾ ಮ್ಯಾನೇಜರ್‌ ಶಿವರಾಜ್ ಫೋನ್ ಮಾಡಿ ಬೇಗ ಹೋಟೆಲ್ ವುಡ್‌ಲ್ಯಾಂಡ್‌ಗೆ ಬನ್ನಿ ಎಂದರು, ಹೋದೆ. ಅಲ್ಲಿ ಸಂಗೀತ ನಿರ್ದೇಶಕರಾದ ಎಲ್.ವೈದ್ಯನಾಥನ್ ಟ್ಯೂನ್ ಮಾಡುತ್ತಾ ಕೂತಿದ್ದರು. ಅಲ್ಲಿಯೇ ಇದ್ದ ಕಾಶಿನಾಥ್‌ ಅವರು ‘ಹಾಡು ಬರೀತೀರೇನ್ರೀ’ ಎಂದರು. ಆಗ ಬರೆದಿದ್ದೇ ‘ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ...’ ಇದು ನಾನು ಬರೆದ ಮೊದಲ ಹಾಡು. ಕಾಶಿನಾಥ್‌ ಅವರಿಗೆ ಇಷ್ಟವಾಗಿ ಅದೇ ಸಿನಿಮಾಕ್ಕೆ ಮತ್ತೊಂದು ಹಾಡು ಬರೆಯಲು ಹೇಳಿದರು. ‘ಕಾಮನ ದುಂಬಿಯ ಝೇಂಕಾರ’ ಬರೆದೆ.

ಸಾಹಿತ್ಯ ಓದುವ ಅಭ್ಯಾಸ ನನಗೆ ಸಣ್ಣ ವಯಸ್ಸಿನಿಂದಲೂ ಇತ್ತು. ಹೆಚ್ಚಾಗಿ ಕವಿತೆಗಳನ್ನು, ದಿನಕರ ದೇಸಾಯಿ ಅವರ ಸಣ್ಣ ಕಥೆಗಳನ್ನು ಓದುತ್ತಿದ್ದೆ. ಕವಿತೆ ಓದು ನನ್ನಲ್ಲಿ ಪದ ಸಂಪತ್ತನ್ನು ಹೆಚ್ಚಿಸಿತು.

ನಂತರ ಸುಂದರನಾಥ್ ಸುವರ್ಣ ಅವರು ‘ಆರಂಭ’ ಸಿನಿಮಾ ನಿರ್ದೇಶನ ಮಾಡಿದರು. ಅದರಲ್ಲಿ ನಾನು ಹಾಡು ಬರೆದೆ. ನಂತರ ಅವರು ನಿರ್ದೇಶನ ಮಾಡಿದ ‘ಅಗ್ನಿಪರ್ವ’, ‘ನೀ ನನ್ನ ದೈವ’, ‘ಕಿಲಾಡಿ ತಾತಾ’, ‘ಟೈಗರ್ ಗಂಗು’ ಸಿನಿಮಾಗಳ ಎಲ್ಲಾ ಹಾಡುಗಳನ್ನು ನಾನೇ ಬರೆದೆ. ಆಸ್ಥಾನ ಕವಿ ಎಂದು ತಮಾಷೆ ಮಾಡುತ್ತಿದ್ದರು. ಈ ನಡುವೆ ಛಾಯಾಗ್ರಾಹಕ ಗೌರಿ ಶಂಕರ್ ಅವರ ಪರಿಚಯವಾಯ್ತು. ಅವರು ಮಾಡಿದ ‘ಏಳು ಸುತ್ತಿನ ಕೋಟೆ’ ಸಿನಿಮಾಗೆ ‘ಸಂತಸ ಅರಳುವ ಸಮಯ...’ ಹಾಡು ಬರೆದೆ. ಅದು ಕ್ಲಿಕ್ ಆಯ್ತು. ಆಗ ನಾನು ಬರೆದ ಹಾಡುಗಳೆಲ್ಲವೂ ಒಳ್ಳೆಯ ಹೆಸರು ತಂದುಕೊಟ್ಟವು.

ಹಾಡು ಬರೆಯುವುದರಲ್ಲೇ ಹೆಚ್ಚು ಬ್ಯುಸಿ ಆದೆ. ಆದರೆ ಸಿನಿಮಾ ನಂಬಿಕೊಂಡು ಕೆಲಸ ಬಿಡುವಷ್ಟು ಧೈರ್ಯ ಬಂದಿರಲಿಲ್ಲ. ನಂತರ ಮಂಗಳೂರಿನ ‘ಮುಂಗಾರು’ ಪತ್ರಿಕೆ ಸೇರಿದೆ. ನನಗೂ ಪತ್ರಿಕೆ ಮ್ಯಾನೇಜ್‌ಮೆಂಟ್‌ಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯವಾಗಿ ಕೆಲಸ ಬಿಟ್ಟೆ.

ಕಾಶಿನಾಥ್ ಅವರ ಮನೆ ಮೇಲೆ ರೂಂ ಇತ್ತು. ಅಲ್ಲೇ ನನ್ನ ವಾಸ. ಊಟ ತಿಂಡಿಯನ್ನೂ ಕೊಡುತ್ತಿದ್ದರು. ನಂತರ ‘ಅನಂತನ ಅವಾಂತರ’ ಸಿನಿಮಾ ನನ್ನ ಬದುಕಿಗೆ ದೊಡ್ಡ ಟರ್ನಿಂಗ್‌ ಪಾಯಿಂಟ್ ನೀಡಿತು. ಈ ಸಿನಿಮಾದಿಂದಾಗಿ ಉಪೇಂದ್ರ, ಹಂಸಲೇಖ ಪರಿಚಯವಾದರು. ಪ್ರತಿದಿನ ಹಂಸಲೇಖ ಅವರು ರೆಕಾರ್ಡಿಂಗ್ ಮಾಡುತ್ತಿದ್ದ ಸ್ಟುಡಿಯೊಗಳಿಗೆ ಹೋಗುತ್ತಿದ್ದೆ. ಬಿಡುವಾದಾಗ ಕಾಶಿನಾಥ್ ಅವರೊಂದಿಗೆ ಸಿನಿಮಾ ಚರ್ಚೆ.

ಈ ಸಂದರ್ಭದಲ್ಲಿ ಎಲ್.ಎನ್.ಶಾಸ್ತ್ರಿ ನನಗೆ ಪರಿಚಯವಾದರು. ನಂತರ ಅವರೂ ನನ್ನ ರೂಮಿನಲ್ಲೇ ಉಳಿದುಕೊಂಡಿದ್ದರು. ಆಗ ಎಲ್‌.ಎನ್.ಶಾಸ್ತ್ರಿ ನನ್ನನ್ನು ಪ್ರಮೋಟ್ ಮಾಡುವ ಒಂದು ಆಲ್ಬಂ ಮಾಡುವ ಎಂದರು. ಅವರೇ ಮಂಡ್ಯದಿಂದ ಸಾಲ ಮಾಡಿ ಹನ್ನೊಂದು ಸಾವಿರ ಹಣ ತಂದರು. ಹೀಗೆ ನಾನು ಸಂಗೀತ ನಿರ್ದೇಶನ ಮಾಡಿದ ‘ಓ ಕುಸುಮ ಬಾಲೆ’ ಎಂಬ ಆಲ್ಬಂ ಬಂತು.

ನಂತರ ಉಪೇಂದ್ರ ‘ತರ್ಲೆ ನನ್ಮಗ’ ಸಿನಿಮಾ ನಿರ್ದೇಶನ ಕೈಗೆತ್ತಿಕೊಂಡರು. ನಾನು ಈ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡೆ. ಈ ಸಿನಿಮಾಗೆ ಸಂಗೀತ ನಿರ್ದೇಶಕರಾಗಿ ಬುಕ್‌ ಆಗಿದ್ದವರು ಕೈಕೊಟ್ಟರು. ಆಗ ಉಪೇಂದ್ರ ಸಿನಿಮಾ ನಿರ್ಮಾಪಕರಾದ ಆರ್‌.ಎಸ್.ಗೌಡ್ರ, ಕೋಟಿಗೊಬ್ಬ ಬಾಬು ಅವರ ಬಳಿ ವಿ.ಮನೋಹರ್‌ ಅವರ ಕೈಯಲ್ಲೇ ಸಂಗೀತ ಮಾಡಿಸಿ ಎಂದು ಕೇಳಿಕೊಂಡರು. ಅವರೂ ಒಪ್ಪಿದರು. ಆದರೆ ನನಗೆ ಭಯವಾಯ್ತು. ನಾನು ಸಂಗೀತ ಕಲಿತಿರಲ್ಲ. ಶಾಸ್ತ್ರೀಯವಾಗಿ ಕಲಿಯದೆ ಸಂಗೀತ ನಿರ್ದೇಶನ ಮಾಡುವುದು ತಪ್ಪು ಎನ್ನುವುದು ನನ್ನ ಮನಸ್ಸಿನಲ್ಲಿ ಇತ್ತು.

ಅಂದು ನಾನು ಮತ್ತು ಉಪೇಂದ್ರ ಗಾಂಧಿಬಜಾರ್‌ನಿಂದ ಜಯನಗರವರೆಗೆ ನಡೆದುಕೊಂಡು ಬಂದೆವು. ದಾರಿ ಉದ್ದಕ್ಕೂ ಉಪೇಂದ್ರ ನನ್ನನ್ನು ಚೆನ್ನಾಗಿ ಬೈದು ಸಂಗೀತ ನಿರ್ದೇಶನ ಮಾಡುವಂತೆ ಒಪ್ಪಿಸಿದರು. ನಟ ಜಗ್ಗೇಶ್‌ ಅವರಿಗೆ ನಾನು ಮಾಡಿದ ಸಂಗೀತ ಇಷ್ಟವಾಯ್ತು. ಮುಂದೆ ‘ಭಂಡ ನನ್ನ ಗಂಡ’ ಸಿನಿಮಾಕ್ಕೂ ನಾನೇ ಸಂಗೀತ ನಿರ್ದೇಶನ ಮಾಡಿದೆ. ಅದರಲ್ಲಿನ ‘ಅಂತಿಂಥ ಗಂಡು ನಾನಲ್ಲ...’ ಹೆಚ್ಚು ಜನಪ್ರಿಯವಾಯಿತು.

ನಂತರ ಜಗ್ಗೇಶ್‌ ಹೋದಲ್ಲೆಲ್ಲಾ ವಿ.ಮನೋಹರ್ ಚೆನ್ನಾಗಿ ಸಂಗೀತ ಮಾಡ್ತಾರೆ ಎಂದು ಹೇಳಿಕೊಂಡು ಬಂದರು. ಅದೂ ನನಗೆ ವರವಾಯ್ತು. ಜತೆಗೆ ನನ್ನ ಗುರುಗಳಾದ ಹಂಸಲೇಖ, ಕಾಶಿನಾಥ್ ಅವರ ಆಶೀರ್ವಾದವೂ ಇತ್ತು. ಹೀಗೆ ನಾನು ಸಂಗೀತ ನಿರ್ದೇಶಕನಾಗಿಯೇ ಬಿಟ್ಟೆ. ಸಂಗೀತ ನಿರ್ದೇಶಕನಾದ ಮೇಲೆಯೇ ನಾನು ಸಂಗೀತ ಕಲಿತದ್ದು. ಶಂಕರ ಶಾನಭೋಗ್‌ ಅವರಿಂದ ಶಾಸ್ತ್ರೀಯವಾಗಿ ಒಂದಿಷ್ಟು ಸಂಗೀತ ಕಲಿತೆ.

ಆದರೆ ಸಿನಿಮಾ ನಿರ್ದೇಶಕನಾಗಬೇಕು ಎನ್ನುವ ನನ್ನ ಹೆಬ್ಬಯಕೆ ಮನಸ್ಸಿನಲ್ಲೇ ಉಳಿದಿತ್ತು. ‘ಯಕ್ಷ’ ಸಿನಿಮಾದ ನಿರ್ದೇಶಕ ರಮೇಶ್‌ ರಾವ್ ಪರಿಚಯವಾಯ್ತು. ಅವರು ನಿರ್ಮಾಪಕರಾದ ಪಲ್ಲವಿ ಪ್ರಕಾಶ್‌, ಶೈಲೇಶ್‌ ವೈಭವ್ ಅವರನ್ನು ಪರಿಚಯ ಮಾಡಿಕೊಟ್ಟರು. ಆಗ ನನ್ನ ಕಥೆಗಳನ್ನೆಲ್ಲಾ ಮತ್ತೆ ಓದಿದೆ. ಯಾವುದೂ ಸಮಾಧಾನವಾಗಲಿಲ್ಲ.

‘ಅನುರಾಗ ಸಂಗಮ’ ಸಿನಿಮಾದಿಂದ ರಮೇಶ್ ಅರವಿಂದ್‌ ನನಗೆ ಹತ್ತಿರವಾಗಿದ್ದರು. ಅವರ ಬಳಿ ಹೋಗಿ ಮಾತನಾಡಿದೆ. ಅವರು ಚೆನ್ನೈನ ಪ್ರಸಿದ್ಧ ನಿರ್ದೇಶಕರಾದ ಕೆ.ಬಾಲಚಂದ್ರನ್ ಅವರನ್ನು ಪರಿಚಯಿಸಿದರು. ಅವರು ಅನಂತು ಎಂಬ ಕಥೆಗಾರರನ್ನು ಪರಿಚಯ ಮಾಡಿಕೊಟ್ಟರು. ಅವರು ಕೊಟ್ಟ ಕಥೆಯನ್ನು ಮತ್ತೊಂದಿಷ್ಟು ತಿದ್ದಿ ‘ಓ ಮಲ್ಲಿಗೆ’ ಸಿನಿಮಾ ಮಾಡಿದೆ. ನಂತರ ‘ಇಂದ್ರ ಧನುಷ್’ ಸಿನಿಮಾ ನಿರ್ದೇಶನ ಮಾಡಿದೆ. ಅದು ಸೋತಿತು. ಅಂದಿನಿಂದ ಇಂದಿಗೆ 18 ವರ್ಷವಾಯ್ತು ಯಾವುದೇ ಸಿನಿಮಾ ನಿರ್ದೇಶನ ಮಾಡಲಿಲ್ಲ.

ನಾನು ರಿಮೇಕ್‌ ಸಿನಿಮಾ ಮಾಡಲ್ಲ. ಹೊಸ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಬೇಕು ಎಂಬ ಹಂಬಲವಿದೆ. ಸಂಗೀತ ನಿರ್ದೇಶಕನಾದ ಕಾರಣ, ಸಿನಿಮಾ ನಿರ್ದೇಶನ ಮಾಡಲು ನನಗೆ ಹೆಚ್ಚು ಅವಕಾಶಗಳೇ ಸಿಗಲಿಲ್ಲ. ಈ ನೋವು ಹಾಗೆ ಉಳಿದಿದೆ. ಆದರೆ ಇನ್ನೂ ಆಶಾವಾದಿಯಾಗಿದ್ದೇನೆ.

ಕಿರುತೆರೆ ಪ್ರವೇಶ
ಸಿನಿಮಾಗಳಲ್ಲಿ ತೊಡಗಿಕೊಳ್ಳುವುದರ ಜತೆ ಟಿ.ವಿ. ಧಾರಾವಾಹಿಗಳಿಗೂ ಟೈಟಲ್ ಹಾಡು ಬರೆದೆ, ಸಂಗೀತ ನೀಡಿದೆ. ‘ದಂಡಪಿಂಡಗಳು’, ‘ಪಾಪಾ ಪಾಂಡು’, ‘ಸಿಲ್ಲಿ ಲಲ್ಲಿ’, ‘ಪಾಂಡುರಂಗ ವಿಠಲ’, ‘ಪಾರ್ವತಿ ಪರಮೇಶ್ವರ’, ‘ಉಯ್ಯಾಲೆ’, ‘ಮೌನ ರಾಗ’ ಸೇರಿದಂತೆ ಹಲವು ಧಾರಾವಾಹಿಗಳಿಗೆ ಸಂಗೀತ ನೀಡಿದೆ. ನನ್ನೊಳಗಿನ ಹಾಸ್ಯ ಪ್ರಜ್ಞೆಯಿಂದ ಬಂದ ಸಾಹಿತ್ಯ ಹೆಚ್ಚು ಜನಪ್ರಿಯತೆ ಪಡೆಯಿತು. ‘ಮಜಾ ಟಾಕೀಸ್’ ಮಹತ್ತರ ಬದಲಾವಣೆಯನ್ನು ನನ್ನ ಬದುಕಿಗೆ ನೀಡಿತು. ಇದರಲ್ಲಿನ ‘ಭಟ್ರು’ ಪಾತ್ರ ಪಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ಇಷ್ಟಪಟ್ಟರು.

*

ನೆಮ್ಮದಿ ತಂದ ಸಂಸಾರ
2004ರವರೆಗೆ ನಾನು ಬ್ರಹ್ಮಚಾರಿಯಾಗಿದ್ದೆ. ಮದುವೆಯಾಗುವ ಆಲೋಚನೆ ಇರಲಿಲ್ಲ. ‘ಇಂದ್ರ ಧನುಷ್’ ಸಿನಿಮಾ ಮಾಡಿ ಸೋತ ಮೇಲೆ ಖಿನ್ನತ ಆವರಿಸಿತ್ತು. ಗೆಳೆಯರು, ಹಿತೈಷಿಗಳು ಮದುವೆಯಾಗುವಂತೆ ಒತ್ತಾಯಿಸಿದರು. ಗೆಳೆಯರೊಬ್ಬರು ಸೂಚಿಸಿದ ಹುಡುಗಿಯೊಂದಿಗೆ ಚರ್ಚಿಸಿದೆ. ಜಾತಿ; ಜಾತಕ ನೋಡದೆ ಪಳನಿಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮದುವೆಯಾದೆ.

ಮಗಳಿಗೆ ಕಾವ್ಯಾತ್ಮಕವಾಗಿ ಹೆಸರು ಇಡಬೇಕು ಎಂದು ಹಲವು ದಿನ ಯೋಚಿಸಿದೆ. ಕೊನೆಗೆ ನನ್ನ ಹೆಂಡತಿಗೆ ಸಿಟ್ಟು ಬಂದು ಶಾರ್ವರಿ ಎಂದು ಹೆಸರಿಟ್ಟಳು. ನಾನು ನನ್ನ ತಾಯಿ ಪದ್ಮಾವತಿ ಹೆಸರು ನೆನಪಿಸುವಂತೆ ಇರಲಿ ಎಂದು ಪದ್ಮಾ ಶಾರ್ವರಿ ಎಂದು ಬದಲಿಸಿದೆ.

ಗೆಳೆಯರೆಲ್ಲಾ 'ಏನಿದು ಶಾರ್ವರಿ?' ಎಂದು ಕೇಳುತ್ತಿದ್ದರು. ಆಗ ನಾನು ‘ಶರಣರ ಕಾಯೇ ಚಾಮುಂಡೇಶ್ವರಿ, ಶಂಕರಿ ಶಾರ್ವರಿ ಶ್ರೀ ಭುವನೇಶ್ವರಿ’ ಎಂದು ಹಾಡುತ್ತಾ ತಮಾಷೆ ಮಾಡುತ್ತಿರುತ್ತೇನೆ.

ಪರಿಚಯ
ಹುಟ್ಟಹಬ್ಬ: ಫೆಬ್ರವರಿ 8
ತಂದೆ: ಶಿವಣ್ಣ ಭಟ್
ತಾಯಿ: ಪದ್ಮಾವತಿ
ಪತ್ನಿ: ವೇಣಿ ಮನೋಹರ್
ಮಗಳು: ಪದ್ಮಾ ಶಾರ್ವರಿ
ಸಂಗೀತ ನಿರ್ದೇಶನ ಮಾಡಿದ ಜನಪ್ರಿಯ ಸಿನಿಮಾಗಳು: ತರಲೆ ನನ್ಮಗ, ಭಂಡ ನನ್ನ ಗಂಡ, ಜನುಮದ ಜೋಡಿ, ಜೋಡಿ ಹಕ್ಕಿ, ಸೂರ್ಯವಂಶ, ಓ ಮಲ್ಲಿಗೆ, ಕುರುಬನ ರಾಣಿ, ಉಲ್ಟಾಪಲ್ಟಾ, ಚಿಗುರಿದ ಕನಸು, ದುನಿಯಾ, ಕಿರಾತಕ
ನಿರ್ದೇಶನ ಮಾಡಿದ ಸಿನಿಮಾ: ಓ ಮಲ್ಲಿಗೆ, ಇಂದ್ರ ಧನುಷ್
ಇಮೇಲ್‌ ವಿಳಾಸ: ಮೊ 9449854595, ಇಮೇಲ್- vmanu8@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT