ಅವರವರ ಭಕುತಿಗೆ...

ಬುಧವಾರ, ಜೂನ್ 19, 2019
28 °C

ಅವರವರ ಭಕುತಿಗೆ...

Published:
Updated:
ಅವರವರ ಭಕುತಿಗೆ...

ಸೂರ್ಯ–ನಮಸ್ಕಾರ ಅಂಕಣದ ‘ಚುನಾವಣಾ ಆಯೋಗದ ಸ್ತುತ್ಯರ್ಹ ಯತ್ನ’ ಬರಹದಲ್ಲಿ (ಪ್ರ.ವಾ., ಅ.18) ಒಂದೇ ಬಾರಿಗೆ ಚುನಾವಣೆ ನಡೆಸುವ ಚಿಂತನೆಯ ಕುರಿತು ಮೆಚ್ಚುಗೆಯಿದೆ. ಆದರೆ ಒಟ್ಟು ಲೇಖನ ಏಕಮುಖಿ ಮತ್ತು ಕೇಂದ್ರ ಸರ್ಕಾರದಲ್ಲಿ ಆಳುವ ಪಕ್ಷದ ಪರವಾದ ಮತ್ತು ಕಾಂಗ್ರೆಸ್ ಪಕ್ಷದ ವಿರೋಧವಾದ ದಿಕ್ಕಿನಲ್ಲಿದೆ. ‘ಕಾಂಗ್ರೆಸ್ ಪಕ್ಷ 1967ರಲ್ಲಿ ಹಲವು ರಾಜ್ಯಗಳಲ್ಲಿ ಸೋಲು ಕಂಡದ್ದರ ಪರಿಣಾಮವಾಗಿ ಹಲವು ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿ ಈ ಕಾಲಸಮನ್ವಯವನ್ನು ಕೆಡಿಸಿತು’ ಎಂದಿದ್ದಾರೆ.

ಕಾಂಗ್ರೆಸ್ ಮಾತ್ರ ಈ ಕೆಲಸ ಮಾಡಿದ್ದಲ್ಲ; ಕೃತ್ರಿಮತೆ, ಅಧಿಕಾರ ದಾಹ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಈ ದೇಶದ ರಾಜಕಾರಣದ ಮುಖ್ಯ ಪಕ್ಷಾತೀತ ಲಕ್ಷಣಗಳಾಗಿವೆ. 1977ರಲ್ಲಿ ಜನತಾ ಸರ್ಕಾರ ಬಂದಾಗ ದೇಶದ ಬಹುಪಾಲು ರಾಜ್ಯ ಸರ್ಕಾರಗಳನ್ನು ಬರ್ಖಾಸ್ತು ಮಾಡಿ ಅಲ್ಲಿ ಒಮ್ಮೆಗೇ ಚುನಾವಣೆಯನ್ನು ಘೋಷಿಸಿದ್ದನ್ನು ಮತ್ತು ಅದಾದ ಅನಂತರ ಎಲ್ಲಾ ಸರ್ಕಾರಗಳೂ ತಮಗಿಷ್ಟ ಬಂದಂತೆ ಶಾಸನ ಸಭೆಗಳನ್ನು ವಿಸರ್ಜಿಸಿ ಹೊಸತಾಗಿ ಚುನಾವಣೆಗೆ ಅನುವು ಮಾಡಿಕೊಟ್ಟದ್ದು ಲೇಖಕರಿಗೆ ತಿಳಿಯದ ಸಂಗತಿಯೇನಲ್ಲ.

ಎರಡು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅನಂತರ ಅವುಗಳಲ್ಲೊಂದನ್ನು ತ್ಯಜಿಸಿ ಅಲ್ಲಿ ಮರುಚುನಾವಣೆ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟವರು ಯಾರು? ಎಲ್ಲಾ ರಾಜಕಾರಣಿಗಳು. ಇಲ್ಲಿ ಪಕ್ಷಭೇದವಿಲ್ಲ. ಈಚೆಗೆ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಾಗಿ ಪಕ್ಷದಿಂದ ಆಯ್ಕೆಯಾದವರು ಸಂಸದರು. ಅವರಿಂದಾಗಿ ರಾಜ್ಯ-ಕೇಂದ್ರ ಎರಡೂ ಕಡೆ ಮರು ಚುನಾವಣೆಗಳು ನಡೆಯಬೇಕಾದ ಅನಿವಾರ್ಯತೆಯುಂಟಾಗಿ ಸಾರ್ವಜನಿಕ ಬೊಕ್ಕಸಕ್ಕೆ, ಆ ಮೂಲಕ ತೆರಿಗೆದಾರರಿಗೆ ಹೊರೆ ಮಾಡಿದವರು ಯಾರು? ಅರುಣಾಚಲ ಪ್ರದೇಶ, ಉತ್ತರಾಖಂಡ ಮುಂತಾದ ರಾಜ್ಯಗಳ ಆಡಳಿತವನ್ನು ಪಲ್ಲಟಗೊಳಿಸಿದ ಪ್ರಯತ್ನಗಳು ಸರಿಯೇ?

ಅಷ್ಟೇ ಅಲ್ಲ, ಈ ‘ಸ್ತುತ್ಯರ್ಹ ಯತ್ನ’ವನ್ನು ಹೊಗಳುವ ಭರದಲ್ಲಿ ಲೇಖಕರು ಮೊನ್ನೆ ಮೊನ್ನೆ ಹಿಮಾಚಲ ಪ್ರದೇಶಕ್ಕೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸುವಾಗ ಈ ಸಮನ್ವಯ ಸಿದ್ಧಾಂತಕ್ಕೆ ಪೂರಕವಾಗಿ ಗುಜರಾತಿಗೂ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲು ಚುನಾವಣಾ ಆಯೋಗ ಮರೆತದ್ದನ್ನು ನೆನಪು ಮಾಡಿಕೊಳ್ಳಲಿಲ್ಲವೇಕೆ?

ಕೊನೆಯ ಮಾತು: ಎಲ್ಲದಕ್ಕೂ ‘ಲಿಂಕಿಸುವ’ ಆಧಾರವನ್ನು ಮತದಾರರ ಪಟ್ಟಿಗೆ ಜೋಡಿಸುವುದಕ್ಕೆ, ಆಳುವ ಪಕ್ಷವೂ ಸೇರಿ ಯಾವ ಪಕ್ಷಗಳೂಒಪ್ಪುತ್ತಿಲ್ಲವೇಕೆ? ಕಳ್ಳಮತದಾನ ನಿಂತುಹೋಗುತ್ತದೆ ಎಂಬುದಕ್ಕಾಗಿಯೇ? ಕ್ರಿಮಿನಲ್ ಕೇಸುಗಳಿರುವ, ಬ್ಯಾಂಕು ಮತ್ತಿತರ ಸಾರ್ವಜನಿಕ ಹಣಕಾಸುಸಂಸ್ಥೆಗಳಲ್ಲಿ ಸುಸ್ತಿದಾರರಾಗಿರುವ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯಬೇಕೆಂಬ ಚುನಾವಣಾ ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಹೊರಬಾಗಿಲಿನಲ್ಲೇ ತಡೆದು ಒದ್ದು ಕಳಿಸಿದ್ದೇಕೆ?

ಎಲ್ಲವೂ ಅವರವರ ಅನುಕೂಲಕ್ಕೆ; ಅವರವರ ಭಕುತಿಗೆ. ಪ್ರಜ್ಞಾವಂತರು ಪ್ರಜ್ಞಾಶೂನ್ಯರಾಗಿರುವುದೇ ಈ ದೇಶದ ದುರಂತಕ್ಕೆ ಕಾರಣ ಅನ್ನಿಸುವುದಿಲ್ಲವೇ?

–ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಮಡಿಕೇರಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry