ಭಾನುವಾರ, ನವೆಂಬರ್ 17, 2019
27 °C

ಶಿಕ್ಷಕರ ಗೈರುಹಾಜರಾತಿ

Published:
Updated:
ಶಿಕ್ಷಕರ ಗೈರುಹಾಜರಾತಿ

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಕರ ಗೈರುಹಾಜರಾತಿಯ ಪ್ರಮಾಣ ಉಲ್ಬಣಿಸುತ್ತಿರುವ ಕುರಿತು ವಿಸ್ತೃತ ಮಟ್ಟದ ಚರ್ಚೆಗಳಾಗುತ್ತಿದ್ದು ಶಿಕ್ಷಣಾಸಕ್ತರ, ಅದರಲ್ಲೂ ಮುಖ್ಯವಾಗಿ ನೀತಿ ನಿರೂಪಕರ ಮತ್ತು ಸಂಶೋಧಕರ ಗಮನ ಸೆಳೆದಿದೆ. ಈ ವಿಷಯದ ಬಗೆಗಿನ ಬಹುತೇಕ ಎಲ್ಲ ಪ್ರಚಲಿತ ನಿರೂಪಣೆಗಳೂ ಸರ್ಕಾರಿ ಶಾಲಾ ವ್ಯವಸ್ಥೆಯ ದೌರ್ಬಲ್ಯಗಳಿಗೆ ಶಿಕ್ಷಕರ ಗೈರುಹಾಜರಾತಿಯೇ ಮೂಲ ಕಾರಣವೆಂಬ ವಾದವನ್ನು ಮುಂದಿರಿಸಿ ಶಿಕ್ಷಕರ ಮೇಲೆ ಗೂಬೆ ಕೂರಿಸುವ ಯತ್ನಗಳನ್ನು ಮಾಡುತ್ತಿವೆ. ಅಲ್ಲದೆ ಈ ಜ್ವಲಂತ ಸಮಸ್ಯೆಗೆ ಪರಿಹಾರೋಪಾದಿಯಾಗಿ ಶಿಕ್ಷಕರನ್ನು ನಿಯಂತ್ರಣಕ್ಕೊಳಪಡಿಸಬೇಕೆಂಬ ಆಲೋಚನೆಗಳು ಆಡಳಿತಾತ್ಮಕ ವಲಯಗಳಲ್ಲಿ ಗರಿಗೆದರುತ್ತಿರುವುದು ಕಳವಳಕಾರಿ ಬೆಳವಣಿಗೆ. ಕೇಂದ್ರ ಸರ್ಕಾರದ 2016-17ರ ಆರ್ಥಿಕ ಸಮೀಕ್ಷೆಯಲ್ಲಿ ಶಿಕ್ಷಕರ ಗೈರು ಹಾಜರಾತಿಯ ಮೇಲೆ ಕಡಿವಾಣ ಹಾಕಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಬೇಕೆಂದು ಮಾಡಿರುವ ಪ್ರಸ್ತಾವನೆ ಈ ವಾದಕ್ಕೆ ಪುಷ್ಟಿ ನೀಡುತ್ತದೆ.

ಹೊಸ ಆಧ್ಯಯನ ಹೇಳುವುದೇನು?

ಶಿಕ್ಷಕರ ಗೈರು ಹಾಜರಾತಿಯನ್ನು ಸೂಕ್ಷ್ಮವಾಗಿ ಅರಿಯಲು ಮತ್ತು ಈ ಬಗೆಗಿನ ವಾಸ್ತವ ಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಸುಮಾರು ಎರಡು ದಶಕಗಳಿಂದಲೂ ಸರ್ಕಾರಿ ಶಾಲಾ ಶಿಕ್ಷಣ ವ್ಯವಸ್ಥೆಯೊಂದಿಗೆ ತಳಹಂತದಲ್ಲಿ ತೊಡಗಿಸಿಕೊಂಡಿರುವ ಅಜೀಂ ಪ್ರೇಂಜಿ ಫೌಂಡೇಶನ್, ತಾನು ಕಾರ್ಯೋನ್ಮುಖವಾಗಿರುವಂತಹ ಭಾರತದ ಆರು ರಾಜ್ಯಗಳಾದ ಕರ್ನಾಟಕ, ಛತ್ತೀಸಗಢ, ಮಧ್ಯ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಉತ್ತರಾಖಂಡದ ಅತಿ ಹಿಂದುಳಿದ ಭಾಗಗಳ 619 ಗ್ರಾಮೀಣ ಶಾಲೆಗಳ 2861 ಶಿಕ್ಷಕರನ್ನೊಳಗೊಂಡ ವಿಸ್ತೃತ ಸಂಶೋಧನೆಯೊಂದನ್ನು ಇತ್ತೀಚೆಗೆ ಕೈಗೊಂಡಿತು.

ಸಂಶೋಧನೆಗೆ ಆಯ್ಕೆ ಮಾಡಿಕೊಂಡ ಪ್ರಶ್ನೆಗಳು:

* ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಗೈರು ಹಾಜರಾತಿಗೆ ಇರುವ ಮುಖ್ಯ ಕಾರಣಗಳೇನು?

* ಶಿಕ್ಷಕರ ಗೈರು ಹಾಜರಾತಿಯ ಪ್ರಮಾಣವೆಷ್ಟು?

ಸಂಶೋಧನೆಯಿಂದ ಹೊರಹೊಮ್ಮಿದ ಮುಖ್ಯಾಂಶಗಳು:

ಪ್ರಚಲಿತ ನಿರೂಪಣೆಗಳು ಬಿಂಬಿಸಿರುವ ಅಂಶಗಳಿಗಿಂತ ವ್ಯತಿರಿಕ್ತವಾದ ವಾಸ್ತವಾಂಶಗಳನ್ನು ಮಾರ್ಚ್2017ರ ಈ ಸಂಶೋಧನಾ ವರದಿ ಹೊರಹಾಕಿದೆ.

* ಶಿಕ್ಷಕರ ಗೈರು ಹಾಜರಾತಿಯ ಒಟ್ಟಾರೆ ಪ್ರಮಾಣ ಶೇ 18.9ರಷ್ಟಿದ್ದು ಅದರಲ್ಲಿ ಕಾರಣರಹಿತ ಗೈರುಹಾಜರಾತಿಯ ಪ್ರಮಾಣ ಕೇವಲ ಶೇ 2.5 ರಷ್ಟಿದೆ. (2016 ರಲ್ಲಿ ಮುರಳೀಧರನ್ ಮತ್ತು ಇತರರು ಕೈಗೊಂಡ ಅಧ್ಯಯನಗಳೂ ಸಹ ಈ ಪ್ರಮಾಣವನ್ನು ಶೇ 4 ರಿಂದ ಶೇ 5 ರಷ್ಟಿರುವುದನ್ನು ದಾಖಲಿಸಿವೆ).

* ತರಗತಿಗಳಿಂದ ಶಿಕ್ಷಕರ ಅನುಪಸ್ಥಿತಿಗೆ ಇರುವ ಇನ್ನಿತರ ಪ್ರಮುಖ ಕಾರಣಗಳು ಮತ್ತು ಅವುಗಳಿಗೆ ಸಂಬಂಧಿಸಿದ ಶೇಕಡಾವಾರು ಪ್ರಮಾಣ ಹೀಗಿವೆ:

* ಶಿಕ್ಷಕರು ಪಡೆಯುವ ನ್ಯಾಯಯುತ (ಸಾಂದರ್ಭಿಕ, ವೈದ್ಯಕೀಯ) ರಜೆಗಳು - ಶೇ 9.1%

* ಅಧಿಕೃತ ಶೈಕ್ಷಣಿಕ ಕರ್ತವ್ಯಗಳು (ತಾತ್ಕಾಲಿಕವಾಗಿ ಬೇರೆ ಶಾಲೆಗೆ ನಿಯೋಜಿಸಲ್ಪಡುವುದು, ತರಬೇತಿಗಳು ಮತ್ತು ಸಮೂಹ ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸುವುದು, ಇತ್ಯಾದಿ)- ಶೇ 3.8%

* ಇತರ ಅಧಿಕೃತ ಆಡಳಿತಾತ್ಮಕ ಕರ್ತವ್ಯಗಳು (ಬಿಸಿಯೂಟ, ವಿಶೇಷ ಅಗತ್ಯಗಳುಳ್ಳ ಮಕ್ಕಳ ಕುರಿತಾದ ಮಾಹಿತಿ ಸಂಗ್ರಹ, ಇಲಾಖೆಯ ಹಲವು ಯೋಜನೆಗಳ ಅನುಷ್ಠಾನ, ಮುಂತಾದವು) - ಶೇ 2.1 %

* ಇತರ ಅಧಿಕೃತ ಇಲಾಖಾ ಕರ್ತವ್ಯಗಳು (ಚುನಾವಣೆ ಕರ್ತವ್ಯ, ಆರೋಗ್ಯ ಮತ್ತು ಇತರ ಇಲಾಖೆಗಳ ಕರ್ತವ್ಯಗಳು, ಪಂಚಾಯಿತಿ ಸಭೆಗಳು, ಇತ್ಯಾದಿ)- ಶೇ 0.9%.

ಇದರಿಂದ ಸ್ಪಷ್ಟವಾಗಿ ನಮಗೆ ತಿಳಿದು ಬರುವ ಒಳನೋಟವೇನೆಂದರೆ, ತರಗತಿ ಕೋಣೆಯಿಂದ ಹೊರಗುಳಿಯುವುದಕ್ಕೆ ಶಿಕ್ಷಕರ ಕರ್ತವ್ಯ ಲೋಪವೇ ಮುಖ್ಯವಾಗಿರದೆ, ಶಿಕ್ಷಣ ವ್ಯವಸ್ಥೆ ಅವರ ಮೇಲೆ ಹೊರಿಸುವ ಅನೇಕ ಶಿಕ್ಷಣೇತರ ಜವಾಬ್ದಾರಿಗಳೇ ಕಾರಣವಾಗಿರುವುದು. ಆಗಿಂದಾಗ್ಗೆ ಶಿಕ್ಷಕರು ನ್ಯಾಯಯುತ ಕಾರಣಗಳಿಗಾಗಿ ತರಗತಿಗಳ ಪಾಠ-ಪ್ರವಚನಗಳಿಂದ ದೂರವುಳಿಯುವ ಅನಿರ್ವಾಯತೆಯಿದ್ದು, ಶಿಕ್ಷಕರು ವಿನಾಕಾರಣ ಗೈರು ಹಾಜರಾಗುತ್ತಿದ್ದಾರೆಂಬ ಪಡಿಯಚ್ಚಿನಚಿತ್ರವನ್ನು (ಸ್ಟೀರಿಯೊ ಟೈಪ್) ಮೂಡಿಸಿ, ವಿಸ್ತೃತವಾಗಿ ಅದನ್ನೇ ಜನಜನಿತವಾಗಿಸುತ್ತಿರುವುದು ಶಿಕ್ಷಕರನ್ನು ಅವಮಾನಿಸಿದಂತೆಯೇ ಸರಿ.

ಈ ಪ್ರತಿಮೆಗೆ ತೀರ ವಿಭಿನ್ನವಾಗಿ ಶಿಕ್ಷಕರು ಪ್ರತಿಕೂಲ ಸವಾಲುಗಳ ನಡುವೆಯೂ ಬದ್ಧತೆಯಿಂದ ತಮ್ಮ ಕೆಲಸ ನಿರ್ವಹಿಸುತ್ತಿದ್ದು, ಸಾಮಾಜಿಕವಾಗಿ ಅವಕಾಶ ವಂಚಿತ, ಪ್ರತ್ಯೇಕಿಸಲ್ಪಟ್ಟ ಸಮುದಾಯಗಳ ಮಕ್ಕಳ ಅಗತ್ಯಗಳು ಮತ್ತು ಸಾಂದರ್ಭಿಕ ಹಿನ್ನೆಲೆಗಳನ್ನರಿತು ಅವರ ಏಳ್ಗೆಗೆ ಸಂವೇದನಾಶೀಲತೆಯಿಂದ ಸ್ಪಂದಿಸುತ್ತಿದ್ದಾರೆ. ಶಾಲೆಗಳಲ್ಲಿ ಮಗು ಸ್ನೇಹಿ ವಾತಾವರಣವನ್ನು ನಿರ್ಮಿಸಿ, ತಮ್ಮ ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಅಪೇಕ್ಷಿತ ಮನುಷ್ಯರನ್ನಾಗಿ ರೂಪಿಸಬೇಕೆಂಬ ಸ್ಪಷ್ಟ ಶೈಕ್ಷಣಿಕ ಪರಿಕಲ್ಪನೆಯನ್ನು ಹೊಂದಿದ್ದಾರೆ.

ಗುಣಾತ್ಮಕ ಅಂಶಗಳ ಮಹತ್ವ

ಸಂಶೋಧನೆಯ ಉದ್ದೇಶ, ಕೇವಲ ಸಂಖ್ಯಾಶಾಸ್ತ್ರದ ಆಯಾಮದ ಮೇಲಷ್ಟೇ ಅಧ್ಯಯನವನ್ನು ಕೇಂದ್ರೀಕರಿಸದೆ, ಗುಣಾತ್ಮಕ ನೆಲೆಯಲ್ಲಿ ಕೂಡ ಆಯ್ದ ಕೆಲವು ಶಿಕ್ಷಕರ ಕುರಿತಾದ ಜನಾಂಗ ಶಾಸ್ತ್ರೀಯ (ಎಥ್ನೋಗ್ರಫಿ) ವಿಧಾನದ ಅಧ್ಯಯನ ಕೈಗೊಂಡು, ಶಾಲಾ ಅವಧಿಯಲ್ಲಿ ಶಿಕ್ಷಕರು ತಮ್ಮ ಹಾಜರಾತಿಯನ್ನು ಹೇಗೆ ನಿರ್ವಹಿಸುತ್ತಾರೆ? ಅವರು ಬೋಧನೆಯಲ್ಲಿ ತೊಡಗಿಕೊಳ್ಳದ ಸಮಯದಲ್ಲೂ ಶೈಕ್ಷಣಿಕ ಗುಣಮಟ್ಟವನ್ನು ಹೇಗೆ ಕಾಯ್ದಿರಿಸಿಕೊಳ್ಳುತ್ತಾರೆ? ದೈನಂದಿನ ಸವಾಲುಗಳನ್ನು ಅವರು ಹೇಗೆ ಎದುರಿಸುತ್ತಾರೆ? ಎಂಬೀ ಅಂಶಗಳ ಬಗ್ಗೆಯೂ ಪ್ರತ್ಯಕ್ಷವಾಗಿ ನೋಡಿ ತಿಳಿಯುವುದಾಗಿತ್ತು. ಪ್ರಚಲಿತ ಚರ್ಚೆಗಳು ಸಂಪೂರ್ಣವಾಗಿ ನಿರ್ಲಕ್ಷಿಸಿರುವ, ಆದರೆ ಶಿಕ್ಷಕರ ವೃತ್ತಿ ನಿರ್ವಹಣೆಗೆ ಪ್ರೇರಕ ಶಕ್ತಿಯಾಗಿರುವ ಸ್ವಾಯತ್ತತೆಯೇ ನಮ್ಮ ಸಂಶೋಧಕರು ಶಿಕ್ಷಕರೊಂದಿಗೆ ನಡೆಸಿದ ಪ್ರಕರಣ ಅಧ್ಯಯನಗಳಲ್ಲಿ ಹೊರಹೊಮ್ಮಿ ಬಂದಿರುವುದು ಶಿಕ್ಷಕರಿಗೆ ಒದಗಿಸಬೇಕಾದ ಪೂರಕ ವಾತಾವರಣದತ್ತ ದೃಷ್ಟಿಹರಿಸುತ್ತದೆ.

ಅಂತಿಮ ಮಾತು

ಅನೇಕ ವೈಯಕ್ತಿಕ ತೊಂದರೆಗಳು, ಸಾಂದರ್ಭಿಕ ಸವಾಲುಗಳು, ವ್ಯವಸ್ಥೆಯ ಕಾರಣದಿಂದುಂಟಾಗುವ ಸಂಕಷ್ಟಗಳ ನಡುವೆಯೂ ವೃತ್ತಿಪ್ರೀತಿ ಮತ್ತು ಬದ್ಧತೆಯಿಂದ ತೊಡಗಿಸಿಕೊಂಡಿರುವ ಲಕ್ಷಾಂತರ ಶಿಕ್ಷಕರ ದಿನನಿತ್ಯದ ವಾಸ್ತವಗಳನ್ನು ನಿರ್ಲಕ್ಷಿಸಿ, ಅವರಿಗೆ ಅಸುರಕ್ಷಿತ ವಾತಾವರಣವನ್ನು ನಿರ್ಮಿಸುವ ಅರ್ಥಹೀನ ಉತ್ತರದಾಯಿತ್ವದ ಕ್ರಮಗಳನ್ನು ಕೂಡಲೇ ಕೈಬಿಟ್ಟು, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ದೂರಗಾಮಿ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ನೀತಿ ನಿರೂಪಕರು ಮತ್ತು ಶಿಕ್ಷಣ ಇಲಾಖೆ ಮುಂದಾಗಬೇಕಾಗಿದೆ.

ಸೇವಾಪೂರ್ವ ಶಿಕ್ಷಕರ ತರಬೇತಿಯ ಬಲಪಡಿಸುವಿಕೆ, ಕಡಿಮೆ ಶಿಕ್ಷಕರಿರುವ ಶಾಲೆಗಳಿಗೆ ಆದ್ಯತೆಯ ಮೇಲೆ ಶಿಕ್ಷಕರ ನಿಯೋಜನೆ, ಶಿಕ್ಷಕರಿಗೆ ಶೈಕ್ಷಣಿಕ ಬೆಂಬಲವನ್ನೊದಗಿಸಲು ಇರುವ ಸಾಂಸ್ಥಿಕ ವ್ಯವಸ್ಥೆಗಳನ್ನು ಗಟ್ಟಿಗೊಳಿಸುವುದು, ಶೈಕ್ಷಣಿಕವಲ್ಲದ ಹೊರೆಯನ್ನು ಕಡಿಮೆ ಮಾಡುವುದು, ಶಿಕ್ಷಕರು ಮಾಡುವ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹಿಸಿ ಅವರ ವೃತ್ತಿ ಬೆಳವಣಿಗೆಗೆ ವಿಪುಲ ಅವಕಾಶಗಳನ್ನೊದಗಿಸುವುದು, ಇವೇ ಶೈಕ್ಷಣಿಕ ಸುಧಾರಣೆಗೆ ಆದ್ಯತೆಯ ಮೇಲೆ ಗಮನ ನೀಡಬೇಕಾದ ಅಂಶಗಳು.

(ಲೇಖಕ : ಸಹ ನಿರ್ದೇಶಕರು - ಕನ್ನಡ ಉಪಕ್ರಮಗಳು; ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯ)

ಪ್ರತಿಕ್ರಿಯಿಸಿ (+)