ಸೋಮವಾರ, ಸೆಪ್ಟೆಂಬರ್ 16, 2019
29 °C

ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ಪೂರ್ವಸಿದ್ಧತಾ ಸಭೆ ಇಂದು

Published:
Updated:
ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ಪೂರ್ವಸಿದ್ಧತಾ ಸಭೆ ಇಂದು

ಬೆಂಗಳೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನ. 19ರಿಂದ ಮೂರು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಅದರ ಪೂರ್ವಸಿದ್ಧತೆಗಾಗಿ ಸಚಿವರು, ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು ಮತ್ತು ಸ್ಥಳೀಯ ಘಟಕಗಳ ಪ್ರಮುಖರ ಸಭೆ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ (ಅ.23) ನಡೆಯಲಿದೆ.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು, ಮುಂದಿನ ಚುನಾವಣೆಯ ಟಿಕೆಟ್‌ ಆಕಾಂಕ್ಷಿಗಳು, ಜಿಲ್ಲಾ ಮತ್ತು ಬ್ಲಾಕ್‌ ಘಟಕಗಳ ಅಧ್ಯಕ್ಷರು ಭಾಗವಹಿಸುವರು.

19ರಂದು ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ನಡೆಯಲಿದೆ. ಮರುದಿನ ಶಿವಮೊಗ್ಗದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶ, 21ರಂದು ಕುಮಟಾದಲ್ಲಿ ಕೆಪಿಸಿಸಿ ಮೀನುಗಾರರ ಘಟಕದ ವತಿಯಿಂದ ಮೀನುಗಾರರ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ರಾಹುಲ್‌ ಭಾಗವಹಿಸಲಿದ್ದಾರೆ.

‘ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಸಂಘಟಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಪ್ರಚಾರ ನೀಡಲು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಕಾರ್ಯಕರ್ತರನ್ನು ಕರೆತರುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಕಾರ್ಯಕ್ರಮಗಳ ಯಶಸ್ವಿಗೆ ಕೈಗೊಳ್ಳಬೇಕಾದ ಕ್ರಮಗಳ ಜೊತೆಗೆ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಕಾರ್ಯಕ್ರಮ ಆಯೋಜಿಸಿರುವ ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ರಾಹುಲ್ ಪ್ರವಾಸದಿಂದ ಕಮಲ ಪಕ್ಷದ ಭದ್ರಕೋಟೆಗಳಲ್ಲಿ  ಕಾಂಗ್ರೆಸ್ ಪರ ಅಲೆ ಎಬ್ಬಿಸುವ ಜೊತೆಗೆ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

**

ಕಾರ್ಮಿಕ ವಲಯದ ನಾಲ್ವರಿಗೆ ಟಿಕೆಟ್‌: ಕೆಪಿಸಿಸಿ ಕಾರ್ಮಿಕ ಘಟಕ ಆಗ್ರಹ

ಬೆಂಗಳೂರು: ‘ಕಾರ್ಮಿಕ ವಲಯವನ್ನು ಪ್ರತಿನಿಧಿಸುವ ಕನಿಷ್ಠ ನಾಲ್ವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ನೀಡಬೇಕು’ ಎಂಬ ಬೇಡಿಕೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಾರ್ಮಿಕ ಘಟಕ ಮುಂದಿಟ್ಟಿದೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಮಿಕ ಘಟಕದ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಎಸ್‌.ಎಸ್‌. ಪ್ರಕಾಶಂ, ‘ಕಾರ್ಮಿಕ ವಲಯದ ಪ್ರತಿನಿಧಿಗಳಿಗೆ 10 ವಿಧಾನಸಭಾ ಕ್ಷೇತ್ರಗಳನ್ನು ಮೀಸಲಿಡುವಂತೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ನಾಲ್ವರಿಗಾದರೂ ಟಿಕೆಟ್‌ ನೀಡುವಂತೆ ಒತ್ತಾಯಿಸಲಾಗಿದೆ’ ಎಂದರು.

‘ಮಂಗಳೂರು ಕ್ಷೇತ್ರದಿಂದ ರಾಕೇಶ್‌ ಮಲ್ಲಿ, ಸಿ.ವಿ. ರಾಮನ್‌ನಗರದಿಂದ ಡಿ. ರಮೇಶ್‌, ಕೊಡಗಿನಿಂದ ಶಶಿಧರ್‌, ರಾಜಾಜಿನಗರದಿಂದ ನಾನು ಟಿಕೆಟ್‌ ಆಕಾಂಕ್ಷಿಗಳಾಗಿದ್ದೇವೆ’ ಎಂದು ಅವರು ತಿಳಿಸಿದರು.

‌‘ಕೆಪಿಸಿಸಿ ಸೂಚನೆಯಂತೆ ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ಶೀಘ್ರದಲ್ಲಿ ಕಾರ್ಮಿಕ ಘಟಕಗಳ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು. ಸರ್ಕಾರದ ಸಾಧನೆಗಳನ್ನು ಕಾರ್ಮಿಕ ವರ್ಗದವರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಬಲಪಡಿಸಲು ತೀರ್ಮಾನಿಸಲಾಗಿದೆ’ ಎಂದೂ ಅವರು ವಿವರಿಸಿದರು.

Post Comments (+)