ವೆಚ್ಚ ಕಡಿತದ ಪರಿಣಾಮ; ಸಾಕ್ಷ್ಯಚಿತ್ರ ಪ್ರದರ್ಶನ, ಸಂಗೀತ ಕಾರ್ಯಕ್ರಮಕ್ಕೆ ಕಂಟಕ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ವೆಚ್ಚ ಕಡಿತದ ಪರಿಣಾಮ; ಸಾಕ್ಷ್ಯಚಿತ್ರ ಪ್ರದರ್ಶನ, ಸಂಗೀತ ಕಾರ್ಯಕ್ರಮಕ್ಕೆ ಕಂಟಕ

Published:
Updated:
ವೆಚ್ಚ ಕಡಿತದ ಪರಿಣಾಮ; ಸಾಕ್ಷ್ಯಚಿತ್ರ ಪ್ರದರ್ಶನ, ಸಂಗೀತ ಕಾರ್ಯಕ್ರಮಕ್ಕೆ ಕಂಟಕ

ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಸಾಕ್ಷ್ಯಚಿತ್ರ ಪ್ರದರ್ಶನ ಭಾಗಶಃ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿದೆ.

ಉದ್ದೇಶಿತ ₹27 ಕೋಟಿ ವೆಚ್ಚವನ್ನು ₹10 ಕೋಟಿಗೆ ಸೀಮಿತಗೊಳಿಸಲು ಮುಖ್ಯಮಂತ್ರಿ ಸೂಚಿಸಿದ್ದರು. ಇದರಿಂದಾಗಿ, ಕಾರ್ಯಕ್ರಮ ಒಂದು ದಿನಕ್ಕೆ ಮೊಟಕುಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ತಮ್ಮ ನಿರ್ಮಾಣದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸದಿರಲು ನಿರ್ದೇಶಕ ಟಿ.ಎನ್‌. ಸೀತಾರಾಂ ನಿರ್ಧರಿಸಿದ ಬೆನ್ನಲ್ಲೆ, ಉಚಿತವಾಗಿ ಕಾರ್ಯಕ್ರಮ ನೀಡುವುದಾಗಿ ತಿಳಿಸಿದ್ದ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ ಕಾರ್ಯಕ್ರಮ ರದ್ದುಪಡಿಸಿದ್ದಾರೆ.

ವಿಧಾನಸೌಧ ಕಟ್ಟಡ ನಿರ್ಮಾಣ ಕುರಿತು ಮೂರು ಗಂಟೆ ಅವಧಿಯ ಸಾಕ್ಷ್ಯಚಿತ್ರ ನಿರ್ಮಿಸಿ ಪ್ರದರ್ಶಿಸಬೇಕಿದ್ದ ನಿರ್ದೇಶಕ ಗಿರೀಶ ಕಾಸರವಳ್ಳಿ, ಒಂದು ಗಂಟೆ ಅವಧಿಯ ಸಾಕ್ಷ್ಯ ಚಿತ್ರ ಪ್ರದರ್ಶಿಸುವುದಾಗಿ ತಿಳಿಸಿದ್ದಾರೆ.

ಸೀತಾರಾಂ ಅವರು ಏಳು ಭಾಗಗಳಲ್ಲಿ ನಿರ್ಮಿಸಿ, ಪ್ರದರ್ಶಿಸಬೇಕಿದ್ದ ಸಾಕ್ಷ್ಯಚಿತ್ರದ ಎರಡು ಭಾಗಗಳಷ್ಟೆ ನಿರ್ಮಾಣವಾಗಿದೆ. ನಿರ್ಮಾಣಕ್ಕೆ ನಿಗದಿಪಡಿಸಿದ್ದ ವೆಚ್ಚ ಕಡಿತಗೊಳಿಸಿದ ಪರಿಣಾಮ ಉಳಿದ ಐದು ಭಾಗಗಳನ್ನು ನಿರ್ಮಿಸಲು ಹಿಂದೇಟು ಹಾಕಿರುವ ಸೀತಾರಾಂ, ಸಿದ್ಧಗೊಂಡಿರುವ ಭಾಗವನ್ನು ವಿಧಾನಸಭಾ ಸಚಿವಾಲಯದ ಸುಪರ್ದಿಗೆ ಸೋಮವಾರ ಒಪ್ಪಿಸಿ, ಕೈತೊಳೆದುಕೊಳ್ಳಲು ನಿರ್ಧರಿಸಿದ್ದಾರೆ.

25ರಂದು ವಜ್ರ ಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು, ಅಂದು ಮಧ್ಯಾಹ್ನ 3 ಗಂಟೆಯಿಂದ 5ಗಂಟೆವರೆಗೆ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಸೀತಾರಾಂ, ಕಾಸರವಳ್ಳಿ ಮತ್ತು ಮಾಸ್ಟರ್‌ ಕಿಶನ್‌ ನಿರ್ದೇಶನದ ಸಾಕ್ಷ್ಯ ಚಿತ್ರಗಳ ಪ್ರದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ.

ಸೀತಾರಾಂ ನಿರ್ದೇಶನದಲ್ಲಿ ‘ಕರ್ನಾಟಕ ವಿಧಾನಮಂಡಲ ಶಾಸನ ಸಭೆ ನಡೆದು ಬಂದ ಹಾದಿ’ ಸಾಕ್ಷ್ಯಚಿತ್ರ ಪ್ರದರ್ಶಿಸಲು ನಿರ್ಧರಿಸಲಾಗಿದೆ. 1891ರಿಂದ ಸ್ವತಂತ್ರ ಭಾರತದವರೆಗಿನ ‘ಪ್ರಜಾ ಪ್ರತಿನಿಧಿ ಸಭೆ’ಯ ನಡಾವಳಿಯನ್ನು ಪರಿಚಯಿಸುವ ಎರಡು ಭಾಗಗಳು ಮತ್ತು ಮೊದಲ ಮುಖ್ಯಮಂತ್ರಿ ಕೆ.ಸಿ. ರೆಡ್ಡಿ ಅವರಿಂದ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿವರೆಗಿನ ಸ್ವಾತ್ರಂತ್ರ್ಯೋತ್ತರ ಕಾಲಘಟ್ಟಕ್ಕೆ ಸಂಬಂಧಿಸಿದ ಐದು ಭಾಗಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಸೀತಾರಾಂ ಅವರಿಗೆ ಒಪ್ಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೀತಾರಾಂ, ‘ನಾನು ನಿರ್ಮಿಸಿರುವುದು ಸಾಕ್ಷ್ಯ ಚಿತ್ರವಲ್ಲ. ಅಂದಿನ ಘಟನೆಗಳ ಮರುಸೃಷ್ಟಿ. ಅದರ ಎರಡು ಭಾಗಗಳು ಪೂರ್ಣಗೊಂಡಿವೆ. ಮುಂದಿನ ಭಾಗಗಳ ನಿರ್ಮಾಣ ಮುಂದುವರಿಸಬೇಕೆ, ಬೇಡವೇ ಎಂಬ ಬಗ್ಗೆ ಸರ್ಕಾರದಿಂದ ಈವರೆಗೂ ಯಾವುದೇ ಸೂಚನೆ ಬಂದಿಲ್ಲ. ಹೀಗಾಗಿ, ಈಗಾಗಲೇ ಸಿದ್ಧಗೊಂಡಿರುವ ಭಾಗಗಳನ್ನು ಸಚಿವಾಲಯಕ್ಕೆ ಒಪ್ಪಿಸುತ್ತೇನೆ’ ಎಂದರು.

ಸಾಕ್ಷ್ಯ ಚಿತ್ರ ನಿರ್ಮಾಣ ಸಂಬಂಧ ನಿರ್ದೇಶಕರ ಜೊತೆ ವಿಧಾನಸಭಾ ಸಚಿವಾಲಯ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಕಾರ್ಯಕ್ರಮದ ವೆಚ್ಚ ಕಡಿತಗೊಳಿಸಿದ ಪರಿಣಾಮ, ಒಪ್ಪಂದದಂತೆ ನಿಗದಿಪಡಿಸಿದ ಮೊತ್ತ ನೀಡಲು ಸಚಿವಾಲಯ ನಿರಾಕರಿಸಿದೆ. ಆದರೆ, ನಿರ್ಮಾಣ ವೆಚ್ಚಕ್ಕೆ ಸಂಬಂಧಪಟ್ಟಂತೆ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ಮುಂದೇನು ಮಾಡಬೇಕು ಎಂಬ ಪ್ರಶ್ನೆ ವಿಧಾನಸಭಾ ಸಚಿವಾಲಯದ ಅಧಿಕಾರಿಗಳಿಗೆ ಉದ್ಭವಿಸಿದೆ.

‘ಹಣಕಾಸು ಇಲಾಖೆಯ ಅನುಮೋದನೆ ಮೇರೆಗೆ ಒಪ್ಪಂದ ಮಾಡಿಕೊಂಡಿರುವುದು ನಿಜ. ನಿರ್ದೇಶಕರಿಗೆ ಮುಂಗಡ ಹಣವನ್ನೂ ಪಾವತಿಸಲಾಗಿದೆ. ವಜ್ರಮಹೋತ್ಸವದ ಮುಗಿದ ಬಳಿಕ ಈಗಾಗಲೇ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಮಾತುಕತೆ ನಡೆಸಲಾಗುವುದು. ಆದರೆ, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದು ವಿಧಾನಸಭಾ ಸಚಿವಾಲಯದ ಮೂಲಗಳು ತಿಳಿಸಿವೆ.

**

ರಿಕ್ಕಿ ಕೇಜ್ ಕಾರ್ಯಕ್ರಮ ರದ್ದು

‘ವಜ್ರಮಹೋತ್ಸವ ಸಂದರ್ಭದಲ್ಲಿ ಪರಿಸರ ಪ್ರಜ್ಞೆ ಮೂಡಿಸುವ ಸಂಗೀತ ಕಾರ್ಯಕ್ರಮ ನಡೆಸಿಕೊಡುವಂತೆ‌ ನನ್ನನ್ನು ಆಯೋಜಕರು ಕೇಳಿದಾಗ ಉಚಿತವಾಗಿ ನಡೆಸಿ ಕೊಡುವುದಾಗಿ ತಿಳಿಸಿದ್ದೆ. ಆರು ದೇಶಗಳಿಂದ ಮತ್ತು ರಾಜ್ಯದ ಹೆಸರಾಂತ ಕಲಾವಿದರನ್ನು ಕಾರ್ಯಕ್ರಮ ನೀಡಲು ಆಹ್ವಾನಿಸಿದ್ದೆ. ಆದರೆ, ಎರಡು ದಿನಗಳ ಕಾರ್ಯಕ್ರಮವನ್ನು ಒಂದು ‌ದಿನಕ್ಕೆ ಸೀಮಿತಗೊಳಿಸಿ, ಕೇವಲ ಎರಡು ಗಂಟೆ ಅವಧಿಗೆ ಮಿತಿಗೊಳಿಸಿದ್ದರಿಂದ ಕಾರ್ಯಕ್ರಮಕ್ಕೆ ಸಮಯ ಹೊಂದಿಸುವುದು ಕಷ್ಟವಾಗುತ್ತಿದೆ. ಹೀಗಾಗಿ, ಕಾರ್ಯಕ್ರಮ ನಡೆಸದಿರಲು ನಿರ್ಧರಿಸಿದ್ದೇನೆ’ ಎಂದು ರಿಕ್ಕಿ ಕೇಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

**

ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸುವಂತೆ ಗಿರೀಶ್‌ ಕಾಸರವಳ್ಳಿ, ಸೀತಾರಾಂ ಮತ್ತು ಮಾಸ್ಟರ್‌ ಕಿಶನ್‌ ಅವರಿಗೆ ಪತ್ರ ಬರೆಯಲಾಗಿದೆ.

–ಎಸ್. ಮೂರ್ತಿ, ವಿಧಾನಸಭೆ ಕಾರ್ಯದರ್ಶಿ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry