ಜಿಎಸ್‌ಟಿ ದರ ಬದಲಾವಣೆ ಅಗತ್ಯ: ಆಧಿಯಾ ಪ್ರತಿಪಾದನೆ

ಬುಧವಾರ, ಜೂನ್ 19, 2019
29 °C

ಜಿಎಸ್‌ಟಿ ದರ ಬದಲಾವಣೆ ಅಗತ್ಯ: ಆಧಿಯಾ ಪ್ರತಿಪಾದನೆ

Published:
Updated:
ಜಿಎಸ್‌ಟಿ ದರ ಬದಲಾವಣೆ ಅಗತ್ಯ: ಆಧಿಯಾ ಪ್ರತಿಪಾದನೆ

ನವದೆಹಲಿ: ಜನ ಸಾಮಾನ್ಯರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲಿನ ಹೊರೆ ತಗ್ಗಿಸಲು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ದರಗಳಲ್ಲಿ ಸಂಪೂರ್ಣ ಬದಲಾವಣೆ ತರುವ ಅಗತ್ಯ ಇದೆ ಎಂದು ರೆವೆನ್ಯೂ ಕಾರ್ಯದರ್ಶಿ ಹಸ್ಮುಖ ಆಧಿಯಾ ಪ್ರತಿಪಾದಿಸಿದ್ದಾರೆ.

‘ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ನಾಲ್ಕು ತಿಂಗಳು ಪೂರ್ಣಗೊಳ್ಳುತ್ತಿದೆ. ಪ್ರತಿಯೊಬ್ಬರಿಗೂ  ಹೊಸ ವ್ಯವಸ್ಥೆಯಾಗಿರುವುದರಿಂದ ಇದು ಸ್ಥಿರಗೊಳ್ಳಲು ಒಂದು ವರ್ಷ ಬೇಕಾಗಬಹುದು’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ವಿವಿಧ ಬಗೆಯ ಸರಕು ಮತ್ತು ಸೇವೆಗಳನ್ನು ವಿಭಿನ್ನ ತೆರಿಗೆ ಹಂತಗಳ ವ್ಯಾಪ್ತಿಯಲ್ಲಿ ತಂದಿರುವುದರಿಂದ ಜನಸಾಮಾನ್ಯರು ಹಾಗೂ ಸಣ್ಣ ಪ್ರಮಾಣದ ವಹಿವಾಟುದಾರರ ಮೇಲೆ ದೊಡ್ಡ ಹೊರ ಬಿದ್ದಿದೆ. ಇಂತಹ ತೆರಿಗೆ ಹೊರೆ ತಗ್ಗಿಸಿದರೆ ಮಾತ್ರ ಜಿಎಸ್‌ಟಿ ಅಳವಡಿಕೆಗೆ ಹೆಚ್ಚಿನ ಒಲವು ಮತ್ತು ತೆರಿಗೆ ಪಾವತಿಯ ಬದ್ಧತೆಯಲ್ಲಿ ಹೆಚ್ಚಳ ಕಾಣಬಹುದು.

‘ವಿವಿಧ ಬಗೆಯ ಸರಕುಗಳನ್ನು ವಿಭಿನ್ನ ತೆರಿಗೆ ಹಂತಗಳ ವ್ಯಾಪ್ತಿಗೆ ತಂದಿರುವುದನ್ನು ಇನ್ನಷ್ಟು ಸರಳೀಕರಣಗೊಳಿಸಬೇಕಾಗಿದೆ. ಈ ಸಂಬಂಧ ಪ್ರತ್ಯೇಕ ಸಮಿತಿಯನ್ನೇ ರಚಿಸಲಾಗಿದೆ. ನವೆಂಬರ್‌ 10ರಂದು ಗುವಾಹಟಿಯಲ್ಲಿ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಅಥವಾ ಸಭೆಯ ನಂತರದ ದಿನಗಳಲ್ಲಿ ಈ ಬಗ್ಗೆ ನಿರ್ಧಾರಕ್ಕೆ ಬರುವ ನಿರೀಕ್ಷೆ ಇದೆ.

‘ವರಮಾನ ನಷ್ಟ ಸೇರಿದಂತೆ ವಿವಿಧ ಅಂಕಿ ಅಂಶಗಳನ್ನು ಸಮಿತಿಯು ಕಲೆಹಾಕಿ ಪರಿಶೀಲಿಸಿದ ನಂತರವೇ ತೆರಿಗೆ ದರಗಳನ್ನು ಸಮಗ್ರವಾಗಿ ಪರಾಮರ್ಶಿಸಲಾಗುವುದು. ಮೌಲ್ಯವರ್ಧಿತ ತೆರಿಗೆ ವ್ಯವಸ್ಥೆ (ವ್ಯಾಟ್‌) ಜಾರಿಗೆ ತಂದಾಗಲೂ ಇದೇ ಬಗೆಯ ವಿರೋಧ ಕಂಡುಬಂದಿತ್ತು. ಅದಕ್ಕಿಂತ ಹೆಚ್ಚಿನ ವಿರೋಧ ಈಗ ಕಂಡು ಬರುತ್ತಿದೆ’ ಎಂದು ಹೇಳಿದ್ದಾರೆ.

ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯ ಜಾರಿಯ ಆರಂಭಿಕ ದಿನಗಳಲ್ಲಿ ಕೆಲ ಅಡಚಣೆಗಳು ಮತ್ತು ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಿವೆ. ಅವುಗಳನ್ನೆಲ್ಲ ಬಗೆಹರಿಸಲು ಜಿಎಸ್‌ಟಿ ಮಂಡಳಿಯು ನಿರಂತರವಾಗಿ ಪ್ರಯತ್ನಿಸುತ್ತಲೇ ಇದೆ. ತೆರಿಗೆ ಪಾವತಿಸಲು ಮತ್ತು ರಿಟರ್ನ್ಸ್‌ ಸಲ್ಲಿಸಲು ಸಣ್ಣ ಮತ್ತು ಮಧ್ಯಮ ವಹಿವಾಟುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ದೂರಮಾಡಿ ಜಿಎಸ್‌ಟಿಯು ಕೈಗಾರಿಕಾ ಸ್ನೇಹಿಯನ್ನಾಗಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry