ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಢೋಂಗಿಗಳ ಪಕ್ಷ: ಸಿದ್ದರಾಮಯ್ಯ

ಟಿಪ್ಪು ಜಯಂತಿಯಲ್ಲಿ ಕ್ಷುಲ್ಲಕ ರಾಜಕೀಯ: ಸಿಎಂ ಆರೋಪ
Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಂಗಳೂರು: ‘ಬಿಜೆಪಿ ಢೋಂಗಿಗಳ ಪಕ್ಷ. ಹೇಳುವುದೇ ಒಂದು, ಮಾಡುವುದೇ ಇನ್ನೊಂದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಬಂಟ್ವಾಳದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.

‘ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ಮಾಡುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಆಧಾರರಹಿತ ಆರೋಪ ಮಾಡುವುದು ಕಳ್ಳರಿಂದ ಮಾತ್ರ ಸಾಧ್ಯ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಬ್ ಕಾ ಸಾಥ್- ಸಬ್ ಕಾ ವಿಕಾಸ್, ಮನ್ ಕಿ ಬಾತ್ ಕೇವಲ ಪ್ರಚಾರ. ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸರ್ಕಾರಕ್ಕೆ ಪತ್ರ ಬರೆದು, ನನ್ನ ಹೆಸರು ಹಾಕದಂತೆ ಹೇಳುತ್ತಾರೆ. ಇದು ಸಂವಿಧಾನದ ಮೇಲಿರುವ ಗೌರವವೇ’ ಎಂದು ಪ್ರಶ್ನಿಸಿದರು.

‘ಆರ್‌ಎಸ್‌ಎಸ್‌ನವರು ದೇಶ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಕುಮ್ಮಕ್ಕು ನೀಡುತ್ತಿದ್ದಾರೆ. ಇದನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು’ ಎಂದು ಹೇಳಿದರು.

ತಳ್ಳಾಟ: ಮುರಿದ ಬಾಗಿಲು

ಬಂಟ್ವಾಳ ಮಿನಿ ವಿಧಾನಸೌಧ ಉದ್ಘಾಟನೆಯ ಸಂದರ್ಭದಲ್ಲಿ ಕಾರ್ಯಕರ್ತರ ನೂಕುನುಗ್ಗಲು ಉಂಟಾಗಿದ್ದು, ಮಿನಿ ವಿಧಾನಸೌಧದ ಬಾಗಿಲು ಮುರಿಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಿನಿ ವಿಧಾನಸೌಧ ಉದ್ಘಾಟಿಸಿ ಒಳಗೆ ಹೋಗುತ್ತಿದ್ದಂತೆಯೇ, ಕಾರ್ಯಕರ್ತರೂ ಅವರನ್ನು ಹಿಂಬಾಲಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಕೆಲ ಪೊಲೀಸರು, ಬಾಗಿಲು ಮುಚ್ಚಲು ಯತ್ನಿಸಿದರು. ಇದರಿಂದ ನೂಕುನುಗ್ಗಲು ಉಂಟಾಯಿತು. ಕೊನೆಗೆ ಹೊಸ ಬಾಗಿಲೇ ಮುರಿಯಿತು. ಜನರನ್ನು ಚದುರಿಸಲು ಪೊಲೀಸರು ಲಘುವಾಗಿ ಲಾಠಿ ಬೀಸಬೇಕಾಯಿತು. ನೂಕುನುಗ್ಗಲಿನಲ್ಲಿ ಪೋಟೋಗ್ರಾಫರ್ ಒಬ್ಬರು ಕೆಳಕ್ಕೆ ಬಿದ್ದರು.

ಸಿಎಂ ತೆರಳಿದ ಬಳಿಕ ವಾಸ್ತು ಹೋಮ!

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್‌ನಲ್ಲಿ ಉದ್ಘಾಟನೆಗೊಂಡ ₹10 ಕೋಟಿ ವೆಚ್ಚದ ಮಿನಿ ವಿಧಾನಸೌಧ ಕಟ್ಟಡದಲ್ಲಿ ಭಾನುವಾರ ಸಂಜೆ ವಾಸ್ತುಪೂಜೆ, ಹೋಮ ನಡೆದವು.

ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ, ಅನೇಕ ಸಚಿವರು ಸೇರಿ, ಮಿನಿ ವಿಧಾನಸೌಧವನ್ನು ಸಾಂಕೇತಿಕವಾಗಿ ರಿಬ್ಬನ್‌ ಕತ್ತರಿಸುವ ಮೂಲಕ ಉದ್ಘಾಟಿಸಿದ್ದರು. ಸಾರ್ವಜನಿಕ ಸಮಾರಂಭ ಮುಗಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ತೆರಳಿದ ಬಳಿಕ, ಮಿನಿ ವಿಧಾನಸೌಧದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹೋಮ ನಡೆಸಲಾಯಿತು. ವಾಸ್ತು ಪೂಜೆ ಸಹಿತ ರಕ್ಷೊಘ್ನ ಹೋಮ ಮತ್ತಿತರ ಧಾರ್ಮಿಕ ಕಾರ್ಯಗಳನ್ನು ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅರ್ಚಕ ಮಹೇಶ ಭಟ್ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT