ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಪ್ರವೇಶದ ಕನಸು

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿಮೂರು ತಿಂಗಳ ಹಿಂದೆ ಅಂತರರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಫೆಡರೇಷನ್‌ (ಫಿಬಾ) ಆಯೋಜಿಸಿದ್ದ ಮಹಿಳಾ ಏಷ್ಯಾಕಪ್‌ನಲ್ಲಿ ಭಾರತ ತಂಡದವರು ಅಪೂರ್ವ ಸಾಧನೆ ಮಾಡಿದರು. ‘ಬಿ’ ಗುಂಪಿನಲ್ಲಿದ್ದ ತಂಡ ಗುಂಪು ಹಂತದ ಫೈನಲ್‌ನಲ್ಲಿ ಬಲಿಷ್ಠ ಕಜಕಸ್ತಾನವನ್ನು ಮಣಿಸಿ ‘ಎ’ ವಲಯಕ್ಕೆ ಲಗ್ಗೆ ಇರಿಸಿದ್ದರು. ಆ ಟೂರ್ನಿಯಲ್ಲಿ ಮಿಂಚಿದ ಆಟಗಾರ್ತಿಯರ ಹಾದಿಯಲ್ಲಿ ಹೆಜ್ಜೆ ಹಾಕಿರುವ ಕಿರಿಯರು ಕೂಡ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಈಗ ಸಜ್ಜಾಗಿದ್ದಾರೆ.

ಅಕ್ಟೋಬರ್‌ 22ರಿಂದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ 16 ವರ್ಷದೊಳಗಿನವರ ಏಷ್ಯಾಕಪ್ ಚಾಂಪಿಯನ್‌ಷಿಪ್‌ನಲ್ಲಿ ಕಣಕ್ಕೆ ಇಳಿಯಲಿರುವ ತಂಡ ಮುಂದಿನ ವರ್ಷದ ಜುಲೈನಲ್ಲಿ ಬೆಲಾರಸ್‌ನಲ್ಲಿ ನಡೆಯಲಿರುವ 17 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡುವ ಅರ್ಹತೆಯ ಕನಸು ಹೊತ್ತಿದ್ದಾರೆ.

2004ರಲ್ಲಿ ಫಿಬಾ ಆಶ್ರಯದ 18 ವರ್ಷದೊಳಗಿನವರ ಪುರುಷರ ಟೂರ್ನಿಗೆ ಆತಿಥ್ಯ ವಹಿಸಿದ್ದ ಬೆಂಗಳೂರಿಗೆ ಈ ವರ್ಷ ನಿರಂತರ ಎರಡು ಟೂರ್ನಿ ಆಯೋಜಿಸುವ ಅವಕಾಶ ಲಭಿಸಿದೆ. ಮೊದಲ ಟೂರ್ನಿಯಲ್ಲಿ ಹಿರಿಯರು ಮಿಂಚಿದ್ದರೆ ಎರಡನೇ ಟೂರ್ನಿಯಲ್ಲಿ ಕಿರಿಯರು ಸಾಧನೆ ಮಾಡಲು ಟೊಂಕ ಕಟ್ಟಿದ್ದಾರೆ. ಮಹಿಳೆಯರ ಏಷ್ಯಾಕಪ್‌ಗೆ ಪ್ರವೇಶ ಗಿಟ್ಟಿಸುವ ಕನಸು ಹೊತ್ತು 17 ಬಾರಿ ಶ್ರಮಿಸಿದ್ದ ಭಾರತ ತಂಡದವರಿಗೆ ಕಳೆದ ಬಾರಿಯಷ್ಟೇ ಯಶಸ್ತು ಸಿಕ್ಕಿತ್ತು. 18ನೇ ಪ್ರಯತ್ನದಲ್ಲಿ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿತ್ತು. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಯಶಸ್ಸನ್ನೂ ಕಂಡಿದ್ದು ಮುಂದಿನ ಬಾರಿ ಏಷ್ಯಾ ಕ‍ಪ್‌ನಲ್ಲಿ ‘ಎ’ ವಲಯದಿಂದ ಸ್ಪರ್ಧಿಸಲಿದೆ.

ಇದೇ ರೀತಿಯ ಇತಿಹಾಸ ರಚಿಸುವುದು 16 ವರ್ಷದೊಳಗಿನವರ ತಂಡದ ಉದ್ದೇಶ. ನಾಲ್ಕು ಬಾರಿ ಏಷ್ಯಾಕಪ್‌ನಲ್ಲಿ ಪಾಲ್ಗೊಂಡಿದ್ದ ತಂಡಕ್ಕೆ ವಿಶ್ವಕಪ್‌ಗೆ ಪ್ರವೇಶ ಗಿಟ್ಟಿಸುವ ಕನಸು ನನಸು ಮಾಡಿಕೊಳ್ಳಲು ಈ ವರೆಗೆ ಆಗಲಿಲ್ಲ. 2009ರಿಂದ ಏಷ್ಯಾ ಚಾಂಪಿಯನ್‌ಷಿಪ್‌ ನಡೆಯುತ್ತಿದೆ. ಅಗ್ರ ನಾಲ್ಕು ತಂಡಗಳು ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುತ್ತವೆ. ಮೊದಲ ಟೂರ್ನಿಯಲ್ಲಿ ಆರನೇ ಸ್ಥಾನ ಗಳಿಸಿದ್ದ ಭಾರತ ತಂಡ 2011 ಮತ್ತು 2013ರಲ್ಲಿ ಐದನೇ ಸ್ಥಾನ ಗಳಿಸಿತ್ತು. ಕಳೆದ ಬಾರಿ ನಂತರ ಆರನೇ ಸ್ಥಾನಕ್ಕೆ ಕುಸಿದಿದೆ. ಈ ಬಾರಿ ಸುಧಾರಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆದರೆ ಇತಿಹಾಸ ನಿರ್ಮಿಸಿದ ಶ್ರೇಯ ತಂಡದ್ದಾಗುತ್ತದೆ.
ಕಠಿಣ ಸವಾಲು

ಭಾರತದ ಕನಸು ಮಾಡುವುದು ಅಷ್ಟು ಸುಲಭವಲ್ಲ. ಈ ಹಾದಿಯಲ್ಲಿ ಕಠಿಣ ಸವಾಲುಗಳನ್ನು ಎದುರಿಸಲು ತಂಡ ಸಜ್ಜಾಗಬೇಕಿದೆ. ಮೊದಲ ಚಾಂಪಿಯನ್‌ಷಿಪ್‌ನಿಂದಲೇ ಆಧಿಪತ್ಯ ಸ್ಥಾಪಿಸಿರುವ ಚೀನಾ ಮತ್ತು ಜಪಾನ್‌ ಈ ಬಾರಿಯೂ ‌ಪ್ರಬಲ ಪೈಪೋಟಿ ಒಡ್ಡುವ ನಿರೀಕ್ಷೆ ಇದೆ.

ಹಾಲಿ ಚಾಂಪಿಯನ್‌ ಚೀನಾ ಒಟ್ಟು ಮೂರು ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ. ಜಪಾನ್ ಒಮ್ಮೆ ಪ್ರಶಸ್ತಿ ಗೆದ್ದಿದ್ದು ಮೂರು ಬಾರಿ ರನ್ನರ್ ಅಪ್ ಆಗಿದೆ. ಕೊರಿಯಾ ಮತ್ತು ಚೈನೀಸ್ ಥೈಪೆ ತಂಡಗಳು ಕೂಡ ಬಲಿಷ್ಠ ಶಕ್ತಿಗಳಾಗಿ ಮೆರೆದಿವೆ. ಗುಂಪು ಹಂತವನ್ನು ದಾಟುವುದು ಭಾರತಕ್ಕೆ ಕಠಿಣವಾಗದು.

ಯಾಕೆಂದರೆ ಈ ಹಂತದಲ್ಲಿ ತಂಡದ ಎದುರಾಳಿಗಳು ನೇಪಾಳ, ಇರಾನ್ ಮತ್ತು ಶ್ರೀಲಂಕಾ. ಈ ತಂಡಗಳನ್ನು ಮಣಿಸಿ ಮುಂದೆ ಸಾಗಿದರೆ ನಿಜವಾದ ಸವಾಲು ಎದುರಿಸಬೇಕಾಗಿದೆ. ಚೀನಾ, ಜಪಾನ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂಥ ತಂಡಗಳ ಸವಾಲನ್ನು ಎದುರಿಸಬೇಕು.

*

‘ಹಿರಿಯ’ ಸಾಧನೆಗೆ ರಹದಾರಿ
16 ಮತ್ತು 17 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ಗಳು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಮತ್ತು ಸಾಧನೆ ಮಾಡಲು ಅನೇಕ ಆಟಗಾರರಿಗೆ ರಹದಾರಿಯಾಗಿದೆ. ಜಪಾನ್‌ ಮತ್ತು ಚೀನಾದ ಆಟಗಾರ್ತಿಯರು ಈ ವಿಷಯದಲ್ಲಿ ಹೆಚ್ಚು ಗಮನ ಸೆಳೆದಿದ್ದಾರೆ.

2009ರಿಂದ 16 ವರ್ಷದೊಳಗಿನವರ ತಂಡದಲ್ಲಿದ್ದ ಜಪಾನ್‌ನ ಮನಾಮಿ ಫುಜಿಯೋಕ ಕಳೆದ ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಚೊಚ್ಚಲ ವಿಶ್ವಕಪ್‌ನಲ್ಲಿ ಅವರು ಸರಾಸರಿ 11 ಪಾಯಿಂಟ್ ಕಲೆ ಹಾಕಿ ಗಮನ ಸೆಳೆದಿದ್ದಾರೆ. ಮಿಯೆಕೊ ನಗೌಕ ಅವರು ಜಪಾನ್‌ ತಂಡದಲ್ಲಿ ಫುಜಿಯೋಕ ಅವರಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ.

ಇವರು ಕೂಡ 2009ರಿಂದ 16 ವರ್ಷದೊಳಗಿನವರ ತಂಡದಲ್ಲಿದ್ದು ಸರಾಸರಿ 10 ಪಾಯಿಂಟ್ ಕಲೆ ಹಾಕಿದ್ದಾರೆ. ಜಪಾನ್‌ನ ಯೂಕಿ ಮಿಯಾಜವಾ ಅವರೂ 2009ರಿಂದ 16 ವರ್ಷದೊಳಗಿನವರ ತಂಡದಲ್ಲಿದ್ದಾರೆ. ತಂಡದ ಪ್ರಮುಖ ಆರು ಆಟಗಾರರಲ್ಲಿ ಒಬ್ಬರಾಗಿದ್ದ ಅವರು ಕೂಡ ಪ್ರತಿ ಪಂದ್ಯದಲ್ಲಿ ತಲಾ 10 ಪಾಯಿಂಟ್ ಗಳಿಸಿದ್ದಾರೆ. ಈಗ ರಾಷ್ಟ್ರೀಯ ತಂಡಲ್ಲಿದ್ದಾರೆ.

ಚೀನಾದ ಲೀ ಮೆಂಗ್‌ ಈ ವರ್ಷ ರಾಷ್ಟ್ರೀಯ ತಂಡದಲ್ಲಿ ಮೂರು ಟೂರ್ನಿಗಳನ್ನು ಆಡಿದ್ದಾರೆ. ಈ ಅವಕಾಶಕ್ಕೆ ಅವರಿಗೆ ಹಾದಿಯೊದಗಿಸಿದ್ದು 16 ವರ್ಷದೊಳಗಿನವರ ಟೂರ್ನಿಗಳಲ್ಲಿನ ಅಮೋಘ ಸಾಮರ್ಥ್ಯ. 2009ರಿಂದ ತಂಡದಲ್ಲಿರುವ ಅವರು ಅತ್ಯುತ್ತಮ ಆಟದ ಮೂಲಕ ಗಮನ ಸೆಳೆದಿದ್ದರು.

ಚೀನಾದ ಲೀ ಯುವೆರಾ 2015ರಲ್ಲಿ 16 ವರ್ಷದೊಳಗಿನವರ ಟೂರ್ನಿಯಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. ಮೊದಲ ಟೂರ್ನಿಯಲ್ಲೇ ಅಪೂರ್ವ ಸಾಮರ್ಥ್ಯ ತೋರಿ ಗಮನ ಸೆಳೆದ ಅವರು ರಾಷ್ಟ್ರೀಯ ತಂಡಕ್ಕೆ ಸುಲಭವಾಗಿ ಆಯ್ಕೆಯಾಗಿದ್ದರು.

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT