7

‘ಎಂಎಫ್‌’ ಹೂಡಿಕೆ; ಜಾಗ್ರತೆ ಅಗತ್ಯ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆಯಲ್ಲಿ ಎಲ್ಲವೂ ಚಂಚಲ. ಈ ಚಂಚಲತೆಗೆ ವೈವಿಧ್ಯಮಯವಾದ ಅನೇಕ ಕಾರಣಗಳಿರುತ್ತವೆ. ಮುಖ್ಯವಾಗಿ ನಮಗೆ ಬೇಕಾಗಿರುವುದನ್ನು ಮೌಲ್ಯಾಧಾರಿತ ಮಟ್ಟದಲ್ಲಿ ಖರೀದಿಸುವ ಮತ್ತು ಮೌಲ್ಯವರ್ಧಿತ ಹಂತದಲ್ಲಿ ನಿರ್ಗಮಿಸುವ ಸಮಯ ಪ್ರಜ್ಞೆಯ ಅಗತ್ಯವೂ ಹೆಚ್ಚಿರುತ್ತದೆ. ಉಳಿದಂತೆ ಇತರೆ ವಿಶ್ಲೇಷಣೆಗಳು ಪೂರಕ ಅಂಶಗಳಾಗಿರುತ್ತವೆ.

ಸೂಕ್ತ ಸಮಯದವರೆಗೂ ಕಾಯುವ ಸಂಯಮ, ತಾಳ್ಮೆ ಸಹ ಅವಶ್ಯಕ.  ಒಂದು ಷೇರು ಕೊಳ್ಳುವಾಗ ಮೊದಲು ಅದು ಉತ್ತಮವಾಗಿರಬೇಕು. ಉತ್ಪಾದನೆ, ಆಡಳಿತ ಮಂಡಳಿಯ ಸ್ನೇಹಮಯಿ ಗುಣ, ಕಂಪೆನಿಯ ಕಾರ್ಯ ವೈಖರಿ, ಮುಂತಾದವುಗಳೊಂದಿಗೆ ಆ ಷೇರಿನ ಪೇಟೆಯ ದರವು ಕುಸಿತಕ್ಕೊಳಗಾದಾಗ ಧೃತಿಗೆಡದೆ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅವಶ್ಯಕ ಸಂಗತಿಯಾಗಿದೆ.

ಅದೇ ರೀತಿ ಒಂದು ಷೇರು ಅನಿರೀಕ್ಷಿತವಾದ ಮಟ್ಟದ ಏರಿಕೆ ಕಂಡಾಗ ಭಾವನಾತ್ಮಕ ಬಾಂಧವ್ಯಕ್ಕೆ ಅವಕಾಶ ನೀಡದೆ ಲಾಭದ ನಗದೀಕರಣಕ್ಕೆ ಆದ್ಯತೆ ನೀಡಿದಲ್ಲಿ ಫಲಿತಾಂಶ ಉತ್ತಮವಾಗಿರುತ್ತದೆ. ಇಂತಹ ಏರಿಳಿತಗಳು ಪದೇ ಪದೇ ನಡೆದು ಹತ್ತಾರು ಅವಕಾಶಗಳು ಸೃಷ್ಟಿಯಾಗುವುದಕ್ಕೆ ಇಂದಿನ ದಿನಗಳು ಪ್ರೇರಣೆಯಾಗಿವೆ. ಇದಕ್ಕೆ  ಅಲ್ಪ ಬಡ್ಡಿಯುಗದಲ್ಲಿ ಜನತೆ ತಮ್ಮಲ್ಲಿರುವ ಹಣವನ್ನು ಹೂಡಿಕೆಯೊಂದಿಗೆ ಬೆಳೆಸಲು ಮ್ಯೂಚುವಲ್ ಫಂಡ್ ಎಸ್‌ಐಪಿ ಉತ್ತಮ ಮಾರ್ಗ ಎಂಬ ಭ್ರಮೆಯಿಂದ ಹೊರ ಬರಲು ಹರಿದುಬರುತ್ತಿರುವ ಹಣದ ಪ್ರವಾಹವು ಕಾರಣವಾಗಿದೆ.  ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿಯೂ ಸಹ ಅರಿತು ಹೂಡಿಕೆ ಮಾಡಬೇಕು.

ಇದರಲ್ಲಿ ಸಾವಿರಾರು ಯೋಜನೆಗಳಿದ್ದು ಯಾವುದು ತಮಗೆ ಸೂಕ್ತ ಎಂಬುದನ್ನು ತಿಳಿದು ಹೂಡಿಕೆ ಮಾಡಬೇಕು. ಈ ಗಾತ್ರದ ಹಣದ ಒಳಹರಿವು ಎಂತಹ ಪ್ರಭಾವಿ ಎಂಬುದಕ್ಕೆ ಭಾರ್ತಿ ಏರ್‌ಟೆಲ್‌ನ ಷೇರಿನ ಬೆಲೆ ಗಮನಿಸಿದಾಗ ತಿಳಿಯುವುದು.  ದೂರಸಂಪರ್ಕ ವಲಯದ ಈ ಕಂಪೆನಿಯ ಷೇರು ಸುಮಾರು ಒಂಬತ್ತು ವರ್ಷಗಳ ನಂತರ ₹480 ರ ಸಮೀಪಕ್ಕೆ ಜಿಗಿದಿದೆ. ಕೇವಲ ಒಂದೇ  ತಿಂಗಳಲ್ಲಿ ಷೇರಿನ ಬೆಲೆ ₹370 ರ ಸಮೀಪದಿಂದ ₹480 ಕ್ಕೆ ಜಿಗಿದಿರುವುದಕ್ಕೆ ಕೇವಲ ಈ ಕಂಪೆನಿ ಟಾಟಾ ಟೆಲಿಸರ್ವಿಸಸ್ ಕಂಪೆನಿ ಚಟುವಟಿಕೆ ವಹಿಸಿಕೊಂಡಿರುವುದಾಗಿದೆ. ಈ ತಿಂಗಳ 31 ರಂದು ಕಂಪೆನಿಯ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿರುವಾಗ ಈ ಗರಿಷ್ಠ ಬೆಲೆ ಸ್ಥಿರತೆ ಕಂಡುಕೊಳ್ಳಬಹುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಅವೆನ್ಯೂ ಸೂಪರ್ ಮಾರ್ಟ್ಸ್ ಲಿಮಿಟೆಡ್ ಕಂಪೆನಿ, ದಿ ಮಾರ್ಟ್ ಎಂಬ ನಾಮಾಂಕಿತದ ಮಾಲ್ ಗಳನ್ನು ಹೊಂದಿದೆ. ಈ ಕಂಪೆನಿ ತನ್ನ ತ್ರೈಮಾಸಿಕ ಫಲಿತಾಂಶವನ್ನು ಈ ತಿಂಗಳ 14 ರಂದು ಪ್ರಕಟಿಸಿದೆ.

ಸೋಜಿಗವೆಂದರೆ 13 ರಂದು ಈ ಕಂಪೆನಿಯ ಷೇರಿನ ಬೆಲೆ ₹1,289 ರ ವಾರ್ಷಿಕ ಗರಿಷ್ಠ ತಲುಪಿತ್ತು. ಉತ್ತಮ ಅಂಕಿ ಅಂಶಗಳನ್ನು ಪ್ರಕಟಿಸಿದ ನಂತರವೂ ಷೇರಿನ ಬೆಲೆಯೂ ಮಾರಾಟದ ಒತ್ತಡದಿಂದ ₹1,135 ರವರೆಗೂ ಕುಸಿದು ₹1,167 ರಲ್ಲಿದೆ. ಇದು ಪ್ರಾಫಿಟ್ ಬುಕ್‌ಗೆ ಪೇಟೆ ನೀಡಿದ ಆದ್ಯತೆಯಾಗಿದೆ.

ಸ್ಪೆಷಾಲಿಟಿ ಕೆಮಿಕಲ್ ಸಮೂಹದ ಬಿಎಎಸ್‌ಎಫ್ ಷೇರಿನ ಬೆಲೆ ಈ ವಾರವೂ ಹೆಚ್ಚಿನ ಏರಿಳಿತ ಪ್ರದರ್ಶಿಸಿದೆ. ಮಂಗಳವಾರ ಷೇರಿನ ಬೆಲೆ ₹1,681 ರಿಂದ ₹1,865 ರ ಅಂತರದಲ್ಲಿ ಏರಿಳಿತ ಪ್ರದರ್ಶಿಸಿದೆ. ಈ ರೀತಿಯ ಏರಿಳಿತಕ್ಕೆ ವಿತ್ತೀಯ ಸಂಸ್ಥೆಯೊಂದು ನೀಡಿದ ಕೊಳ್ಳುವ ರೇಟಿಂಗ್ ಕಾರಣವಾಗಿದೆ.

ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ ಕಂಪೆನಿಯ ಷೇರಿನ ಬೆಲೆಯು ಹಿಂದಿನ ತ್ರೈಮಾಸಿಕ ಫಲಿತಾಂಶದ ನಂತರ ಕುಸಿತಕ್ಕೊಳಗಾಗಿ ಹಿಂದಿನ ಒಂದು ತಿಂಗಳಲ್ಲಿ  ₹ 1,022 ರವರೆಗೂ ಕುಸಿದಿತ್ತು. ಈ ವಾರ ಚೇತರಿಕೆ ಕಂಡು ₹1,171 ರ ಗರಿಷ್ಠ ಮಟ್ಟ ತಲುಪಿದೆ. ಇದು ತ್ರೈಮಾಸಿಕ ಫಲಿತಾಂಶದ ಮುನ್ನಾ ದಿನಗಳಲ್ಲಿ ಕಂಡುಬರುತ್ತಿಹ ವ್ಯಾಲ್ಯೂ ಪಿಕ್ ಚಟುವಟಿಕೆಯಾಗಿದೆ.

ಗುರುವಾರದ ಮುಹೂರ್ತ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು ವಾರ್ಷಿಕ ಗರಿಷ್ಠದ ದಾಖಲೆ ನಿರ್ಮಿಸಬಹುದೆಂಬ ನಿರೀಕ್ಷೆ ಇತ್ತು.  ಆದರೆ ಪೇಟೆ ಪ್ರದರ್ಶಿಸಿದ್ದೆ ಬೇರೆ. ಅಂದು 194 ಅಂಶಗಳ ಕುಸಿತಕ್ಕೊಳಗಾಯಿತು.  ಒಟ್ಟಾರೆ ನಾಲ್ಕು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು 42 ಅಂಶಗಳ ಇಳಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ₹1,809 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ವದೇಶಿ ವಿತ್ತೀಯ ಸಂಸ್ಥೆಗಳು ₹2,026 ಕೋಟಿ ಷೇರು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯವು ₹138.84 ಲಕ್ಷ ಕೋಟಿಗೆ ಏರಿಕೆ ಕಂಡಿತ್ತು.

ಹೊಸ ಷೇರು:

* ಪ್ರತಿ ಷೇರಿಗೆ ₹1,650 ರಂತೆ ಸಾರ್ವಜನಿಕ ವಿತರಣೆ ಮಾಡಿದ ಇಂಡಿಯನ್ ಎನರ್ಜಿ ಎಕ್ಸ್ ಚೇಂಜ್ ಲಿಮಿಟೆಡ್ ಕಂಪೆನಿಯ ಷೇರುಗಳು  23 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಬಿ ಗುಂಪಿನಲ್ಲಿ ವಹಿವಾಟಿಗೆ

ಬಿಡುಗಡೆಯಾಗಲಿವೆ.

* ಮಿಡ್ ಈಸ್ಟ್ ಇಂಟೆಗ್ರೇಟೆಡ್ ಸ್ಟಿಲ್ಸ್ ಲಿಮಿಟೆಡ್ ಕಂಪೆನಿ ಷೇರುಗಳು 18ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.

* ಮಹೀಂದ್ರಾ ಲಾಜಿಸ್ಟಿಕ್ಸ್ ಲಿಮಿಟೆಡ್ ಕಂಪೆನಿ ಈ ತಿಂಗಳ 31 ರಿಂದ ನವೆಂಬರ್ 2 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದ್ದು, ವಿತರಣೆ ಬೆಲೆ ಮತ್ತು ಅರ್ಜಿ ಸಲ್ಲಿಸಬೇಕಾದ ಷೇರುಗಳ ಸಂಖ್ಯೆಯನ್ನು ವಿತರಣೆಗೆ ಐದು ದಿನ ಮುಂಚೆ ಪ್ರಕಟಿಸಲಾಗುವುದು.

ಲಾಭಾಂಶ: ಸಾಸ್ಕಿನ್ ಟೆಕ್ನಾಲಜಿಸ್ ಪ್ರತಿ ಷೇರಿಗೆ ₹2.50 (ನಿ. ದಿ: ಅಕ್ಟೊಬರ್ 26).

ಕಾಲ್ಗೇಟ್ ಪಾಲ್ಮೊಲೀವ್ ಪ್ರತಿ ಷೇರಿಗೆ ₹4 (ಮು ಬೆ ₹1), ದಿವಾನ್ ಹೌಸಿಂಗ್ ಫೈನಾನ್ಸ್ ಪ್ರತಿ ಷೇರಿಗೆ ₹3,  ಕ್ರಿಸಿಲ್ ₹ 6 (ಮು ಬೆ ₹1),

ಮುಖಬೆಲೆ ಸೀಳಿಕೆ: ಸಿಂಗರ್ ಇಂಡಿಯಾ ಕಂಪೆನಿ ನವೆಂಬರ್ 6 ರಂದು  ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

(9886313380. ಸಂಜೆ 4.30 ರನಂತರ)

**

ವಾರದ ವಿಶೇಷ

ದೀಪಾವಳಿಯ ಡಿಸ್ಕೌಂಟ್ ಸಂಭ್ರಮ ನಿಧಾನವಾಗಿ ಕ್ಷೀಣಿಸುತ್ತಲಿದೆ. ಮತ್ತೊಂದೆಡೆ ವಾಹನಗಳ ಖರೀದಿಗೆ ಅತಿ ಹೆಚ್ಚಿನ ರಿಯಾಯಿತಿ, ಟೈರ್ ಖರೀದಿಸ

ಬೇಕಾದರೆ ಹಳೆ ಟೈರ್ ಗೆ ಎಕ್ಸ್ಚೇಂಜ್ ಆಫರ್,  ದೀಪಾವಳಿ ಪ್ರಯುಕ್ತ ಪೊರಕೆ ಖರೀದಿಸಿದರೂ ಸಹ ವಿಶೇಷ ಡಿಸ್ಕೌಂಟ್.

ಈ ರೀತಿ ವೈವಿಧ್ಯಮಯ ಆಫರ್‌ಗಳು ಗ್ರಾಹಕರಿಗೆ, ಅವಶ್ಯಕತೆ ಇಲ್ಲದಿದ್ದರೂ ಕೊಳ್ಳಲು ಪ್ರೇರಣೆ ನೀಡುವ ಯೋಜನೆಗಳು ಈಗಿನ ವರ್ಷಗಳಲ್ಲಿ ಸಾಮಾನ್ಯವಾಗಿವೆ.  ಈ ಸಂದರ್ಭದಲ್ಲಿ ಗ್ರಾಹಕರು ಖರೀದಿಸುವ ಸಾಮಗ್ರಿಗಳ ಗುಣಮಟ್ಟವನ್ನು ಮರೆತು ಕೇವಲ ಡಿಸ್ಕೌಂಟ್ ಕಡೆ ಹೆಚ್ಚು ಆಸಕ್ತಿ ವಹಿಸುವಂತಾಗುತ್ತದೆ. ಈ ಡಿಸ್ಕೌಂಟ್ ಹಾವಳಿ ತಯಾರಕರಿಗೆ ತಗಲಿರುವ ಉತ್ಪಾದನಾ ವೆಚ್ಚವನ್ನು ಸಹ ಮರೆಮಾಚುವ ಮಟ್ಟದಲ್ಲಿದೆ.

2012ರಲ್ಲಿ ನಡೆದಿದ್ದ ಜಾಗತಿಕ ಆರ್ಥಿಕ ಸಾಕ್ಷರತಾ ಸಮ್ಮೇಳನದಲ್ಲಿ ವಿವಿಧ ದೇಶಗಳ ಆರ್ಥಿಕ ಸಾಕ್ಷರತಾ ಮಟ್ಟ ಮಾಪನಮಾಡಲಾಗಿತ್ತು.  ಆ ಸಂದರ್ಭದಲ್ಲಿ ಬ್ರೆಜಿಲ್ ದೇಶವು ಶೇ 50.40ರ ಆರ್ಥಿಕ ಸಾಕ್ಷರತೆಯೊಂದಿಗೆ ಪ್ರಥಮ ಸ್ಥಾನದಲ್ಲಿತ್ತು. ನಂತರದಲ್ಲಿ ಮೆಕ್ಸಿಕೊ ಶೇ 47.8  ಆಸ್ಟ್ರೇಲಿಯಾ ಶೇ 46.3, ಅಮೆರಿಕ .6 ರಷ್ಟು ಆರ್ಥಿಕ ಸಾಕ್ಷರತೆಯನ್ನು ಹೊಂದಿದ್ದು, ಭಾರತವು ಶೇ 35ರಷ್ಟು ಆರ್ಥಿಕ ಸಾಕ್ಷರತೆಯೊಂದಿಗೆ 23ನೇ ಸ್ಥಾನದಲ್ಲಿತ್ತು. ಪಾಕಿಸ್ತಾನವು ಶೇ27.3 ರಷ್ಟು ಆರ್ಥಿಕ ಸಾಕ್ಷರತೆಯಿಂದ 28 ನೇ ಸ್ಥಾನದಲ್ಲಿತ್ತು.

2016 ರಲ್ಲಿನ ಅಂಕಿ ಅಂಶಗಳ ಪ್ರಕಾರ ನಾರ್ವೆ, ಡೆನ್ಮಾರ್ಕ್, ಸ್ವೀಡನ್ ದೇಶಗಳು ಶೇ71 ರಷ್ಟರ ಆರ್ಥಿಕ ಸಾಕ್ಷರತೆಯೊಂದಿಗೆ ಮೊದಲ ಸ್ಥಾನದಲ್ಲಿವೆ. ಆಸ್ಟ್ರೇಲಿಯಾ ಶೇ64 ರಷ್ಟು ಆರ್ಥಿಕ ಸಾಕ್ಷರತೆಯಿಂದ 9ನೆ ಸ್ಥಾನದಲ್ಲಿದೆ. ಅಮೆರಿಕ ಶೇ57ರಷ್ಟು ಆರ್ಥಿಕ ಸಾಕ್ಷರತೆಯಿಂದ 14 ನೇ ಸ್ಥಾನದಲ್ಲಿದೆ. ಆದರೆ ಭಾರತದ ಸ್ಥಾನವು ಶೇ24 ರಷ್ಟು ಆರ್ಥಿಕ ಸಾಕ್ಷರತೆಗೆ ಕುಸಿದ ಕಾರಣ 121 ನೇ ಸ್ಥಾನಕ್ಕೆ ಕುಸಿದಿದೆ.

ನಮ್ಮಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿದ್ದರೂ ಸಹ ಆರ್ಥಿಕ ಸಾಕ್ಷರತಾ ಗುಣಮಟ್ಟ ಕುಸಿದಿರುವುದಕ್ಕೆ ನಮ್ಮ ಡಿಸ್ಕೌಂಟ್ ವ್ಯಾಮೋಹವು ಪ್ರಮುಖ ಕಾರಣವೆನ್ನಬಹುದಲ್ಲವೇ? ಡಿಸ್ಕೌಂಟ್ ನೊಂದಿಗೆ ಖರೀದಿಸುವ ಸಾಮಗ್ರಿಗಳ ಗುಣಮಟ್ಟವನ್ನು ಸಹ ಗಮನಿಸುವುದು ಉತ್ತಮವಾಗಿದೆ. ವಿತ್ತೀಯ ಪೇಟೆಗಳ ಚಟುವಟಿಕೆಯ ಸಂದರ್ಭದಲ್ಲೂ ಸಹ ಬ್ರೋಕಿಂಗ್ ಸಂಸ್ಥೆ ಒದಗಿಸಬಹುದಾದ ಸೇವೆಗಳ ಬಗ್ಗೆ ಗಮನಿಸದೆ ಕೇವಲ ಕಡಿಮೆ ಬ್ರೋಕರೇಜ್ ಎಂಬ ಪದಕ್ಕೆ ಜೋತುಬಿದ್ದು ತಮ್ಮ ಹಣವನ್ನು ಆಪತ್ತಿಗೆ ಸಿಲುಕಿಸಿದ ಅನೇಕ ಉದಾಹರಣೆಗಳು ಉಂಟು. ಆರ್ಥಿಕ ಸಾಕ್ಷರತೆಯೊಂದಿಗೆ ಮಾತ್ರ ಸುರಕ್ಷತೆ ಸಾಧಿಸಲು ಸಾಧ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry