ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ದಶಕದ ನಂತರ ಪ್ರಶಸ್ತಿ ಪುಳಕ

ಏಷ್ಯಾಕಪ್ ವಿಜಯದ ಸಂಭ್ರಮದಲ್ಲಿ ಮಿಂದೆದ್ದ ಮನ್‌ಪ್ರೀತ್ ಬಳಗ
Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಢಾಕಾ: ಹತ್ತು ವರ್ಷಗಳ ಕಾಯುವಿಕೆಗೆ ಕೊನೆಗೂ ತೆರೆ ಬಿತ್ತು. ಏಷ್ಯಾ ಕಪ್ ಹಾಕಿ ಟೂರ್ನಿಯ ಪ್ರಶಸ್ತಿ ಎತ್ತಿ ಹಿಡಿದು ಭಾರತ ತಂಡ ಸಂಭ್ರಮಿಸಿತು. ಇಲ್ಲಿ ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ಬಳಗ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ ಮಲೇಷ್ಯಾವನ್ನು ಮಣಿಸಿತು. ಟೂರ್ನಿಯ ಇತಿಹಾಸದಲ್ಲಿ ಭಾರತ ಗಳಿಸಿದ ಮೂರನೇ ಪ್ರಶಸ್ತಿ ಇದು. 2007ರಲ್ಲಿ ಚೆನ್ನೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಕೊನೆಯದಾಗಿ ಪ್ರಶಸ್ತಿ ಎತ್ತಿ ಹಿಡಿದಿತ್ತು.

ಅತ್ಯಂತ ರೋಚಕ ಹೋರಾಟದಲ್ಲಿ ಉಭಯ ತಂಡದವರು ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿ ಗಮನ ಸೆಳೆದರು. ಆದರೆ 2–1 ಗೋಲುಗಳ ಅಂತರದಲ್ಲಿ ಗೆಲುವು ಭಾರತಕ್ಕೆ ಒಲಿಯಿತು. ಅಂತಿಮ ಕ್ಷಣಗಳಲ್ಲಿ ಮಲೇಷ್ಯಾ ಮರು ಹೋರಾಟ ನಡೆಸಿದರೂ ಭಾರತ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಚೆಂಡನ್ನು ಗುರಿ ಸೇರಿಸಲು ಸಾಧ್ಯವಾಗಲಿಲ್ಲ.

ಮೂರನೇ ನಿಮಿಷದಲ್ಲಿ ರಮಣ್‌ದೀಪ್ ಸಿಂಗ್ ಗಳಿಸಿಕೊಟ್ಟ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಭಾರತ ತಂಡಕ್ಕೆ ಲಲಿತ್ ಉಪಾಧ್ಯಾಯ 29ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿಕೊಟ್ಟರು. ಈ ಹಂತದಲ್ಲಿ ಮಲೇಷ್ಯಾ ನಿರಾಸೆಗೆ ಒಳಗಾದರೂ ಕೈಚೆಲ್ಲಲಿಲ್ಲ. ಮರು ಹೋರಾಟ ನಡೆಸಿದ ತಂಡಕ್ಕೆ 50ನೇ ನಿಮಿಷದಲ್ಲಿ ಶಾಹ್ರಿಲ್ ಶಾಬಾ ಗೋಲು ತಂದುಕೊಟ್ಟರು.

ಕೊನೆಯ ಹತ್ತು ನಿಮಿಷದಲ್ಲಿ ಪಂದ್ಯ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತದ ವಿರುದ್ಧ ಸಮಬಲ ಸಾಧಿಸಲು ಮಲೇಷ್ಯಾ ಹೋರಾಡಿತು. ಆದರೆ ಪ್ರಶಸ್ತಿ ಕಸಿದುಕೊಳ್ಳಲು ಭಾರತದ ರಕ್ಷಣಾ ವಿಭಾಗ ಅನುವು ಮಾಡಿಕೊಡಲಿಲ್ಲ.

ಮೊದಲ ಗೋಲಿಗೆ ಕಾರಣರಾದ ಸುನಿಲ್‌

ಭಾರತದ ಮೊದಲ ಗೋಲಿಗೆ ಕನ್ನಡಿಗ ಎಸ್‌.ವಿ.ಸುನಿಲ್ ಕಾರಣರಾದರು. ಗೋಲು ಪೆಟ್ಟಿಗೆಯತ್ತ ಅವರು ಬಾರಿಸಿದ ಚೆಂಡು ಕಂಬಕ್ಕೆ ತಾಗಿ ವಾಪಸಾಗಿತ್ತು. ಈ ಸಂದರ್ಭವನ್ನು ಬಳಸಿಕೊಂಡ ರಮಣ್‌ ದೀಪ್ ಸಿಂಗ್ ಚೆಂಡನ್ನು ವಾಪಸ್ ಗೋಲುಪೆಟ್ಟಿಗೆಯತ್ತ ಅಟ್ಟಿದರು. ಅವರ ಗುರಿ ತಪ್ಪಲಿಲ್ಲ. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಭಾರತಕ್ಕೆ ಸುವರ್ಣಾವಕಾಶವೊಂದು ಒದಗಿತ್ತು. ಆದರೆ ಚಿಂಗ್ಲೆನ್ಸಾನಾ ಸಿಂಗ್ ಬಾರಿಸಿದ ಚೆಂಡು ಗುರಿ ಸೇರಲಿಲ್ಲ.

ಒಂದು ಗೋಲಿನ ಹಿನ್ನಡೆ ಅನುಭವಿಸಿದ್ದರೂ ಮಲೇಷ್ಯಾ ಪಟ್ಟುಬಿಡದೆ ಕಾದಾಡಿತು. 13ನೇ ನಿಮಿಷದಲ್ಲಿ ತಂಡಕ್ಕೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಅದನ್ನು ಸದುಪಯೋಗ ಮಾಡಿಕೊಳ್ಳಲು ಭಾರತ ತಂಡದವರು ಅನುವು ಮಾಡಿಕೊಡಲಿಲ್ಲ. ಇದರ ಬೆನ್ನಲ್ಲೇ ಭಾರತಕ್ಕೂ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಹರ್ಮನ್‌ಪ್ರೀತ್ ಸಿಂಗ್ ಅವರ ಪ್ರಯತ್ನವನ್ನು ಮಲೇಷ್ಯಾದ ರಜೀ ರಹೀಮ್‌ ವಿಫಲಗೊಳಿಸಿದರು. ನಂತರ ಆಕಾಶದೀಪ್ ಸಿಂಗ್ ಮತ್ತು ಅಮಿತ್ ರೋಹಿದಾಸ್ ನಡೆಸಿದ ಶ್ರಮವನ್ನು ಎದುರಾಳಿ ತಂಡದ ಗೋಲ್‌ಕೀಪರ್ ಕುಮಾರ್ ಸುಬ್ರಹ್ಮಣ್ಯಂ ವಿಫಲಗೊಳಿಸಿದರು. ಮೊದಲರ್ಧ ಮುಗಿಯಲು ಸ್ವಲ್ಪ ಹೊತ್ತು ಬಾಕಿ ಇರುವಾಗ ಸುಮಿತ್ ಅವರ ರಿವರ್ಸ್ ಹಿಟ್‌ ಕ್ರಾಸ್‌ನಲ್ಲಿ ಲಲಿತ್‌ ಭಾರತದ ಮುನ್ನಡೆ ಹೆಚ್ಚಿಸಿದರು.

ಹೊಸ ತರಬೇತುದಾರನ ‘ಗೆಲುವು’

ಶೋರ್ಡ್ ಮ್ಯಾರಿಜ್ ಕೋಚ್ ಹುದ್ದೆ ಅಲಂಕರಿಸಿದ ನಂತರದ ಮೊದಲ ದೊಡ್ಡ ಸವಾಲಾಗಿತ್ತು ಈ ಟೂರ್ನಿ. ಅದನ್ನು ಮೆಟ್ಟಿ ನಿಂತು ತಂಡವನ್ನು ಮುನ್ನಡೆಸಿದ ಮ್ಯಾರಿಜ್ ಅವರ ಗೆಲುವು ಕೂಡ ಆಗಿದೆ ಇದು. ಟೂರ್ನಿಯಲ್ಲಿ ಒಂದೂ ಸೋಲು ಕಾಣದ ಭಾರತ ತಂಡ ಕೊರಿಯಾ ವಿರುದ್ಧದ ಸೂಪರ್ 4 ಹಂತದ ಪಂದ್ಯದಲ್ಲಿ ಡ್ರಾ ಸಾಧಿಸಿದ್ದು ಬಿಟ್ಟರೆ ಉಳಿದೆಲ್ಲ ಪಂದ್ಯಗಳನ್ನು ಗೆದ್ದಿತ್ತು. ಈ ಹಂತದಲ್ಲಿ ಮಲೇಷ್ಯಾ ವಿರುದ್ಧವೂ ಭಾರತ 6–2ರಿಂದ ಗೆದ್ದಿತ್ತು.

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ 6–3ರಿಂದ ಕೊರಿಯಾವನ್ನು ಮಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT