ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಗಳ ಹುಟ್ಟಡಗಿಸುವ ಪಟಾಕಿ ಸದ್ದು!

ಜನರಿಗೆ ಮೋಜಿನಾಟ, ಬಾನಾಡಿಗಳಿಗೆ ನರಳಾಟ
Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರು ಮೋಜಿಗಾಗಿ ಹಚ್ಚಿದ ಪಟಾಕಿ ನಗರದಲ್ಲಿ ಅನೇಕ ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ತಂದಿದೆ. ಅನಿರೀಕ್ಷಿತ ಸದ್ದಿನಿಂದ ಆಘಾತಕ್ಕೊಳಗಾದ ಅನೇಕ ಪಕ್ಷಿಗಳನ್ನು ವನ್ಯಜೀವಿ ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.

‘ಪಟಾಕಿ ಸದ್ದಿನಿಂದ ಗಲಿಬಿಲಿಗೊಳಗಾಗುವ ಹಕ್ಕಿಗಳು ಜೀವಭಯದಿಂದ ನರಳುತ್ತವೆ. ಮನಬಂದಂತೆ ಹಾರಾಡುತ್ತವೆ. ರಾತ್ರಿ ವೇಳೆ ಯಾವ ಕಡೆ ಹಾರಬೇಕೆಂದು ತಿಳಿಯದೆ ಕಟ್ಟಡಗಳಿಗೆ ಡಿಕ್ಕಿ ಹೊಡೆಯುತ್ತವೆ. ವಾಹನಗಳ ಚಕ್ರದಡಿ ಸಿಲುಕಿ ಸಾಯುತ್ತವೆ. ಭಾರಿ ಪ್ರಮಾಣದ ಸದ್ದು ಅವುಗಳ ಹೃದಯಾಘಾತಕ್ಕೂ ಕಾರಣವಾಗಬಲ್ಲುದು’ ಎನ್ನುತ್ತಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕ ಎ.ಪ್ರಸನ್ನ ಕುಮಾರ್‌.

‘ನಗರದಲ್ಲಿ ಅಪಾಯಕ್ಕೆ ಸಿಲುಕಿದ ವನ್ಯಜೀವಿಗಳ ರಕ್ಷಣೆಗೆ ಧಾವಿಸುವಂತೆ ಆಗೊಮ್ಮೆ ಈಗೊಮ್ಮೆ ದೂರವಾಣಿ ಕರೆ ಬರುತ್ತದೆ. ಆದರೆ, ದೀಪಾವಳಿ ಸಂದರ್ಭದಲ್ಲಿ ಇಂತಹ ಕರೆಗಳ ಸಂಖ್ಯೆ ನಾಲ್ಕೈದು ಪಟ್ಟು ಹೆಚ್ಚು ಇರುತ್ತದೆ. ಈ ಬಾರಿ ದೀಪಾವಳಿ ವೇಳೆ 50ಕ್ಕೂ ಹೆಚ್ಚು ಕರೆಗಳು ಬಂದಿವೆ. ನಾನು 25ಕ್ಕೂ ಅಧಿಕ ಪಕ್ಷಿಗಳನ್ನು ರಕ್ಷಿಸಿದ್ದೇನೆ. ಕೆಲವೆಡೆ ನಾನು ಸ್ಥಳಕ್ಕೆ ಧಾವಿಸುವಷ್ಟರಲ್ಲೇ ಪಕ್ಷಿಗಳು ಅಸುನೀಗಿದ್ದವು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಲ್ಕೈದು ದಿನಗಳಲ್ಲಿ ರಾಜಾಜಿನಗರ ಹಾಗೂ ಗಾಂಧಿನಗರದಲ್ಲಿ ಕೋಗಿಲೆಗಳನ್ನು, ಕೆ.ಆರ್‌.ರಸ್ತೆ ಹಾಗೂ ಎಂ.ಜಿ.ರಸ್ತೆಯಲ್ಲಿ ಹದ್ದುಗಳನ್ನು, ಕೆ.ಆರ್‌.ರಸ್ತೆಯಲ್ಲಿ ಗರುಡ ಹಾಗೂ ಗಿಡುಗಗಳನ್ನು, ನ್ಯಾಷನಲ್‌ ಕಾಲೇಜು ಬಳಿ ಟಿಟ್ಟಿಭ ಹಕ್ಕಿಯನ್ನು, ಹೆಬ್ಬಾಳ ಬಳಿ ಬಿಳಿ ಕೊಕ್ಕರೆಯನ್ನು, ವಿದ್ಯಾಪೀಠ ವೃತ್ತದ ಬಳಿ ಹಾಗೂ ಮಾನ್ಯತಾ ಟೆಕ್‌ಪಾರ್ಕ್‌ ಬಳಿ ಗದ್ದೆ ಕೊಕ್ಕರೆಯನ್ನು ರಕ್ಷಿಸಿದ್ದೇನೆ. ಸಿಲ್ಕ್‌ಬೋರ್ಡ್‌ ಬಳಿ ಸಿಕ್ಕಿದ ಮಿಂಚುಳ್ಳಿಗೆ ಚಿಕಿತ್ಸೆ ನೀಡಿದ್ದೇನೆ. ಅನೇಕ ಕಡೆ ಪಾರಿವಾಳಗಳನ್ನು ರಕ್ಷಣೆ ಮಾಡಿದ್ದೇನೆ’ ಎಂದು ಅವರು ತಿಳಿಸಿದರು.

‘ಕೆಂಗೇರಿ, ಹೆಬ್ಬಾಳ ಹಾಗೂ ಬನ್ನೇರುಘಟ್ಟದಲ್ಲಿ ವನ್ಯಜೀವಿ ಪುನರ್ವಸತಿ ಕೇಂದ್ರಗಳಿವೆ. ರಕ್ಷಣೆ ಮಾಡಿದ ಹಕ್ಕಿಗಳಿಗೆ ಈ ಕೇಂದ್ರಗಳಲ್ಲಿ ಆರೈಕೆ ನೀಡಿ ಮತ್ತೆ ಹೊರಗೆ ಬಿಡುತ್ತೇವೆ’ ಎಂದರು.

‘ಹದ್ದು, ಗಿಡುಗ, ಕೋಗಿಲೆ, ಪಾರಿವಾಳ ಹಾಗೂ ಕಾಗೆಗಳು ನಗರದ ಬದುಕಿನ ಶೈಲಿಗೆ ಒಗ್ಗಿಕೊಂಡ ಪಕ್ಷಿಗಳು. ಈ ಬಾರಿ ನಗರದಲ್ಲಿ ಟಿಟ್ಟಿಭ ಹಕ್ಕಿ ಸಿಕ್ಕಿದ್ದು ವಿಶೇಷ’ ಎಂದರು.

‘ಮೈಸೂರು ರಸ್ತೆಯಲ್ಲಿ ಕೆಂಬೂತ ಹಕ್ಕಿಯನ್ನು ರಕ್ಷಿಸುವಂತೆ ಕರೆ ಬಂದಿತ್ತು. ನಾನು ತಲುಪುವಷ್ಟರಲ್ಲೇ ಅದು ಕೊನೆಯುಸಿರೆಳೆದಿತ್ತು. ಈ ಹಕ್ಕಿಯೂ ನಗರದಲ್ಲಿ ಕಾಣಸಿಗುವುದು ಅಪರೂಪ’ ಎಂದು ಅವರು ತಿಳಿಸಿದರು.

ಅಳಿಲು ಅಳಲು: ಪಟಾಕಿ ಸದ್ದಿನಿಂದ ಅಳಿಲುಗಳು ಭಾರಿ ಸಂಖ್ಯೆಯಲ್ಲಿ ಸಾಯುತ್ತವೆ. ಅವುಗಳು ಕೂಡಾ ತುಂಬಾ ದುರ್ಬಲ ಜೀವಿಗಳು. ಅವು ಹೆಚ್ಚು ಸದ್ದುಗದ್ದಲ ಇಲ್ಲದ ಜಾಗವನ್ನು ಹುಡುಕಿ ಗೂಡುಕಟ್ಟಿಕೊಳ್ಳುತ್ತವೆ. ಪಟಾಕಿಯ ಸದ್ದನ್ನು ತಾಳಿಕೊಳ್ಳುವ ಗಟ್ಟಿ ಹೃದಯ ಅವುಗಳಿಗಿಲ್ಲ ಎಂದು ಅವರು ವಿವರಿಸಿದರು.

‘ನಗರದ ಜಿಕೆವಿಕೆ, ಭಾರತೀಯ ವಿಜ್ಞಾನ ಸಂಸ್ಥೆ, ಜ್ಞಾನಭಾರತಿಯಲ್ಲಿ ಈಗಲೂ ದಟ್ಟಹಸಿರು ಉಳಿದಿದೆ. ಇಲ್ಲಿ ಕಾಡುಪಾಪದಂತಹ ವನ್ಯಜೀವಿಗಳು ಕಾಣಸಿಗುತ್ತವೆ. ನಾನು ಈ ಹಿಂದೆ ದೀಪಾವಳಿ ಸಂದರ್ಭದಲ್ಲಿ ಅನೇಕ ಕಾಡುಪಾಪಗಳನ್ನು ರಕ್ಷಿಸಿದ್ದೆ. ಈ ಬಾರಿ ಪಟಾಕಿಯ ಗದ್ದಲ ಕಡಿಮೆ ಇತ್ತು’ ಎನ್ನುತ್ತಾರೆ ವನ್ಯಜೀವಿ ಕಾರ್ಯಕರ್ತ ಆರ್‌.ಶರತ್‌ಬಾಬು.

**

‘ಅಸಹಜ ಸದ್ದಿನಿಂದ ಹಕ್ಕಿಗಳಿಗೆ ಗಲಿಬಿಲಿ’

‘ಹಕ್ಕಿಗಳು ಸೂಕ್ಷ್ಮ ಜೀವಿಗಳು. ಅವುಗಳ ಸಂವಹನ ನಡೆಯುವುದೇ ಸದ್ದಿನ ಮೂಲಕ. ಅಸಹಜವಾಗಿ ಎದುರುಗೊಳ್ಳುವ ಪಟಾಕಿ ಸದ್ದು ಅವುಗಳು ಗಲಿಬಿಲಿಗೊಳ್ಳುವಂತೆ ಮಾಡುತ್ತದೆ’ ಎನ್ನುತ್ತಾರೆ ಪಕ್ಷಿಶಾಸ್ತ್ರಜ್ಞ ಡಾ.ಎನ್‌.ಎ.ಮಧ್ಯಸ್ಥ.

‘ಕೆಲವು ಜಾತಿಯ ಹಕ್ಕಿಗಳಿಗೆ ಈಗ ಸಂತಾನೋತ್ಪತ್ತಿಯ ಸಮಯ. ಇಂತಹ ಸಮಯದಲ್ಲಿ ಅವು ಶಿಳ್ಳೆ ಹಾಡುಗಳ ಮೂಲಕ ಪರಸ್ಪರ ಮಾತನಾಡಿಕೊಳ್ಳುತ್ತವೆ. ಪಟಾಕಿಯ ಸದ್ದು ಅವುಗಳ ಜೀವನಚಕ್ರವನ್ನೇ ಬುಡಮೇಲು ಮಾಡುತ್ತದೆ’ ಎಂದು ಅವರು ವಿವರಿಸಿದರು.

‘ಪಟಾಕಿಗಳಿಂದ ಉಂಟಾಗುವ ಕಂಪನವೂ ಪಕ್ಷಿಗಳಿಗೆ ಹಾನಿ ಉಂಟು ಮಾಡಬಲ್ಲುದು’ ಎಂದರು.

‘ಪಕ್ಷಿಗಳು ಮಾತ್ರ ಅಲ್ಲ, ಇತರ ವನ್ಯಜೀವಿಗಳಿಗೂ ಭಾರಿ ಸದ್ದು ಕುತ್ತು ತರಬಲ್ಲುದು. ಉದಾಹರಣೆಗೆ ಆಫ್ರಿಕಾದ ಮರುಭೂಮಿಯ ಕಪ್ಪೆಗಳು ಸಾಮಾನ್ಯವಾಗಿ ಗುಡುಗು ಸಿಡಿಲು ಬರುವ ಸಂದರ್ಭದಲ್ಲಿ ಸಂತಾನೋತ್ಪತ್ತಿಗಾಗಿ ಪೊಟರೆಗಳಿಂದ ಹೊರಗೆ ಬರುತ್ತವೆ. ಅಲ್ಲಿ ಗ್ರಾನೈಟ್‌ ಗಣಿಗಾರಿಕೆಗೆ ಬಳಸುವ ಸ್ಫೋಟಕಗಳ ಸದ್ದು ಅವುಗಳ ಬದುಕಿನ ಕ್ರಮವನ್ನೇ ಬದಲಾಯಿಸಿದೆ’ ಎಂದು ಅವರು ಉದಾಹರಣೆ ನೀಡಿದರು. 

**

‘ಗೂಬೆಗಳು ಸತ್ತಿದ್ದು ಹೆಚ್ಚು’

‘ಪಟಾಕಿ ಸದ್ದಿನಿಂದ ಅತಿ ಹೆಚ್ಚು ಸಂಕಟ ಎದುರಾಗುವುದು ಗೂಬೆಗಳಿಗೆ. ಏಕೆಂದರೆ, ಅವು ನಿಶಾಚರಿಗಳು. ರಾತ್ರಿ ವೇಳೆ ಸುಡುವ ಪಟಾಕಿ ಅವುಗಳ ದೈನಂದಿನ ಜೀವನಕ್ರಮವನ್ನೇ ಬುಡಮೇಲು ಮಾಡಿಬಿಡುತ್ತದೆ’ ಎನ್ನುತ್ತಾರೆ ಪ್ರಸನ್ನ ಕುಮಾರ್‌.

‘ದೀಪಾವಳಿ ಸಂದರ್ಭದಲ್ಲಿ ಆರು ಕಡೆ ಗೂಬೆಗಳನ್ನು ಸಂರಕ್ಷಣೆ ಮಾಡಿದ್ದೇನೆ. ಇವೆಲ್ಲವೂ ಕಣಜ ಗೂಬೆಗಳು. ಸರ್ಜಾಪುರ ರಸ್ತೆ, ಬಾಣಸವಾಡಿ, ನಾಗರಬಾವಿ, ಸುಮನಹಳ್ಳಿ, ಮಾನ್ಯತಾ ಟೆಕ್‌ಪಾರ್ಕ್‌ ಹಾಗೂ ಗೋವಿಂದರಾಜಪುರದ ಬಳಿ ಗೂಬೆಗಳನ್ನು ಬದುಕಿಸಿದ್ದೇನೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT