7

ಭಾರತದ ಅರ್ಥ ವ್ಯವಸ್ಥೆ ಬಲಿಷ್ಠ

Published:
Updated:
ಭಾರತದ ಅರ್ಥ ವ್ಯವಸ್ಥೆ ಬಲಿಷ್ಠ

ದಹೇಜ್‌, ಗುಜರಾತ್‌: ಅರ್ಥ ವ್ಯವಸ್ಥೆಯ ಸುಧಾರಣೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೃಢವಾಗಿ ಹೇಳಿದರು.

ನೋಟು ರದ್ದತಿಗೆ ಮತ್ತು ಜಿಎಸ್‌ಟಿ ಜಾರಿಗೆ ವಿರೋಧ ಪಕ್ಷಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿದರೂ ತಾವು ಎದೆಗುಂದಿಲ್ಲ ಎಂದು ಅವರು ಈ ಮೂಲಕ ಸ್ಪಷ್ಟಪಡಿಸಿದರು.

‘ಭಾರತದ ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಬಲಿಷ್ಠವಾಗಿವೆ. ಅದು ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ದಕ್ಷಿಣ ಗುಜರಾತ್‌ನ ದಹೇಜ್‌ ಮತ್ತು ಭಾವನಗರದ ಘೋಘಾ ನಡುವಣ ರೊ–ರೊ ಸಮುದ್ರಯಾನ ಸೇವೆಗೆ ಚಾಲನೆ ನೀಡಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ, ದೇಶದ ಅರ್ಥವ್ಯವಸ್ಥೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ. ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹ 30 ಸಾವಿರ ಕೋಟಿ ಡಾಲರ್‌ನಿಂದ (₹19.50 ಲಕ್ಷ ಕೋಟಿ) 40 ಸಾವಿರ ಕೋಟಿ ಡಾಲರ್‌ಗೆ (₹26 ಲಕ್ಷ ಕೋಟಿ) ಹೆಚ್ಚಿದೆ. ಅರ್ಥ ವ್ಯವಸ್ಥೆಯ ಮೂಲಭೂತ ಸಂಗತಿಗಳು ಬಲಿಷ್ಠವಾಗಿವೆ ಎಂದು ಹಲವು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ’ ಎಂದು ಅವರು ಹೇಳಿದರು.

ಮುಂದುವರಿಕೆ: ದೇಶದ ಅರ್ಥ ವ್ಯವಸ್ಥೆಯನ್ನು ಪ್ರಗತಿಯ ಹಾದಿಗೆ ಮರಳಿಸಲು ಸರ್ಕಾರ ಕೈಗೊಂಡಿರುವ ಉತ್ತೇಜನಾ ಕ್ರಮಗಳು ಇನ್ನೂ ಮುಂದುವರಿಯಲಿವೆ ಎಂದು ಅವರು ಹೇಳಿದರು.

ಜಿಎಸ್‌ಟಿ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಹೊಸ ತೆರಿಗೆ ವ್ಯವಸ್ಥೆಯಿಂದ ಸಾಗಣೆ ಕ್ಷೇತ್ರಕ್ಕೆ ತುಂಬಾ ಅನುಕೂಲವಾಗಿದೆ. ಈಗ ಟ್ರಕ್‌ಗಳನ್ನು ತೆರಿಗೆ ತಪಾಸಣೆ ಠಾಣೆಗಳಲ್ಲಿ ನಿಲ್ಲಿಸಬೇಕಾದ ಅಗತ್ಯ ಇಲ್ಲದಿರುವುದರಿಂದ ಕೋಟ್ಯಂತರ ರೂಪಾಯಿ ಉಳಿದಿದೆ’ ಎಂದು ಅವರು ಹೇಳಿದರು.

‘ನಿಗದಿತ ಸ್ಥಳ ತಲುಪಲು ಈ ಹಿಂದೆ ಐದು ದಿನಗಳನ್ನು ತೆಗೆದುಕೊಳ್ಳುತ್ತಿದ್ದ ಟ್ರಕ್‌ಗಳು ಈಗ ಮೂರು ದಿನಗಳಲ್ಲಿ ತಲುಪುತ್ತಿವೆ. ಇದರಿಂದಾಗಿ ಇಂಧನಕ್ಕಾಗಿ ಮಾಡುತ್ತಿದ್ದ ವೆಚ್ಚದಲ್ಲಿ ಭಾರಿ ಉಳಿತಾಯವಾಗಿದೆ. ಭ್ರಷ್ಟರ ಕೈಗೆ ಹಣ ಹೋಗುವುದೂ ನಿಂತಿದೆ’ ಎಂದು ಸೇರಿದ್ದ ಜನರನ್ನು ಅವರು ಪ್ರಶ್ನಿಸಿದರು.‌

**

ಯು‍ಪಿಎಯಿಂದ ಯೋಜನೆಗಳಿಗೆ ಅಡ್ಡಿ

ಘೋಘಾ: ಕಾಂಗ್ರೆಸ್‌ ನೇತೃತ್ವದ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಮೋದಿ, ‘ಹಿಂದಿನ ಸರ್ಕಾರವು ಪರಿಸರದ ಹೆಸರಿನಲ್ಲಿ ರೊ–ರೊ ಸಮುದ್ರಯಾನ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಅಡ್ಡಿ ಪಡಿಸಿತ್ತು’ ಎಂದು ಆರೋಪಿಸಿದರು.

‘ಅಂತಹ ಯೋಜನೆಗಳ ಕಡತಗಳನ್ನು ತೆಗೆಸುತ್ತಿದ್ದೇನೆ’ ಎಂದು ಹೇಳಿದರು.

‘2012ರಲ್ಲಿ ಸಮುದ್ರಯಾನ ಯೋಜನೆಗೆ ನಾನು ಶಂಕುಸ್ಥಾಪನೆ ನೆರವೇರಿಸಿದ್ದೆ. ಆದರೆ ಸಮುದ್ರಲ್ಲಿ ಕಾಮಗಾರಿ ನಡೆಸಲು ಆಗ ಕೇಂದ್ರ ಸರ್ಕಾರವನ್ನು ಅವಲಂಬಿಸಬೇಕಾಗಿತ್ತು. ಕೇಂದ್ರ ಸರ್ಕಾರದಲ್ಲಿ ಎಂತಹ ಜನರಿದ್ದರೆಂದರೆ, ಗುಜರಾತ್‌ ಕರಾವಳಿಯಲ್ಲಿ ಕಛ್‌ನ ವಾಪಿಯಿಂದ ಮಾಂಡ್ವಿವರೆಗಿನ ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ನಿರ್ಬಂಧ ಹೇರಿದ್ದರು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry