ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಗಡುವು ಸಮೀಪ– ಗುಂಡಿಗಳು ಹಾಗೇ ಉಳಿದಿವೆ

Published:
Updated:
ಗಡುವು ಸಮೀಪ– ಗುಂಡಿಗಳು ಹಾಗೇ ಉಳಿದಿವೆ

ಬೆಂಗಳೂರು: ನಗರದ ಎಲ್ಲ ರಸ್ತೆ ಗುಂಡಿಗಳನ್ನು ಇದೇ 25ರೊಳಗೆ ಮುಚ್ಚುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಗಡುವು ಸಮೀಪಿಸಿದೆ. ಆದರೆ, ಎಲ್ಲ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಯಿಂದ ಸಾಧ್ಯವಾಗಿಲ್ಲ.

‘ನಗರದಲ್ಲಿ ಸುಮಾರು 16 ಸಾವಿರ ರಸ್ತೆ ಗುಂಡಿಗಳಿದ್ದು, ಶೇ 75ರಷ್ಟು ಗುಂಡಿಗಳನ್ನು ಮುಚ್ಚಲಾಗಿದೆ. ನಿರಂತರವಾಗಿ ಮಳೆ ಬೀಳುತ್ತಿದ್ದರಿಂದ ಸಕಾಲದಲ್ಲಿ ಇವುಗಳನ್ನು ಮುಚ್ಚಲು ಸಾಧ್ಯವಾಗಲಿಲ್ಲ. ಆದಾಗ್ಯೂ ರಾತ್ರಿ ವೇಳೆ ಗುಂಡಿಗಳನ್ನು ಮುಚ್ಚಿದ್ದೇವೆ. ಐದು ದಿನಗಳಿಂದ ಮಳೆ ಬೀಳುತ್ತಿಲ್ಲ. ಹೀಗಾಗಿ ಈ ಕಾರ್ಯಕ್ಕೆ ವೇಗ ಸಿಕ್ಕಿದೆ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

‘ಗುಂಡಿ ಬಿದ್ದಿರುವ ಕುರಿತು ಸಾರ್ವಜನಿಕರಿಂದಲೂ ಮಾಹಿತಿ ಪಡೆಯುತ್ತಿದ್ದೇವೆ. ಎಲ್ಲ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕರು ಸಲಹೆ ನೀಡುತ್ತಿದ್ದಾರೆ. ಆದರೆ, ಸಂಪನ್ಮೂಲದ ಕೊರತೆ ಇದೆ. ಹೀಗಾಗಿ ಕೆಲ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸುತ್ತಿದ್ದೇವೆ’ ಎಂದರು.

3,116 ಹೊಸ ಗುಂಡಿ ಸೇರ್ಪಡೆ:

ನಗರದಲ್ಲಿ ಎಷ್ಟು ರಸ್ತೆ ಗುಂಡಿಗಳಿವೆ ಎಂಬುದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ನಿಖರವಾಗಿ ಹೇಳುತ್ತಿಲ್ಲ. ಆದರೆ, ರಸ್ತೆ ಗುಂಡಿ ಮುಚ್ಚುವ ಕುರಿತ ಪ್ರಗತಿ ಪರಿಶೀಲನಾ ಸಭೆ ಭಾನುವಾರ ನಡೆದಿದ್ದು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.

‘ನಗರದಲ್ಲಿ ಒಟ್ಟು 19,725 ಗುಂಡಿಗಳು ಬಿದ್ದಿವೆ. ಇದರಲ್ಲಿ 3,116 ಹೊಸ ಗುಂಡಿಗಳು ಸೇರಿವೆ’ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದರು.

ರಸ್ತೆ ಗುಂಡಿ ಮುಚ್ಚಿಲ್ಲ: ಜನರ ಆರೋಪ

‘ಕೆಲ ಪ್ರಮುಖ ರಸ್ತೆಗಳು ಹಾಗೂ ವಾರ್ಡ್‌ ಮಟ್ಟದ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿಲ್ಲ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ನಾಗರಬಾವಿ, ಮಾಗಡಿ ರಸ್ತೆ, ಇನ್ಫೆಂಟ್ರಿ ರಸ್ತೆ, ಶಿವಾಜಿನಗರ, ಸಿ.ಎಂ.ಎಚ್‌ ರಸ್ತೆ, ಕೆ.ಎಚ್.ರಸ್ತೆ, ಜಯನಗರ, ಕೋರಮಂಗಲ, ಬನ್ನೇರುಘಟ್ಟ ರಸ್ತೆ ಮತ್ತು ಮೈಸೂರು ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಬೇಕಿದೆ’ ಎಂದು ಒತ್ತಾಯಿಸಿದ್ದಾರೆ.

Post Comments (+)