ವಿನಾಯಕ ನಗರ; ದುರ್ನಾತದ ಆಗರ

ಮಂಗಳವಾರ, ಜೂನ್ 25, 2019
22 °C

ವಿನಾಯಕ ನಗರ; ದುರ್ನಾತದ ಆಗರ

Published:
Updated:
ವಿನಾಯಕ ನಗರ; ದುರ್ನಾತದ ಆಗರ

ಬಾಗಲಕೋಟೆ: ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ ಎಂಬಂತೆ ನಗರದ ಹೃದಯಭಾಗದಲ್ಲಿ ಇದ್ದರೂ ಇಲ್ಲಿನ ಹಳೇ ಬಾಗಲಕೋಟೆಯ ವಿನಾಯಕ ನಗರದ ನಿವಾಸಿಗಳು ಮಾತ್ರ ಮೂಲ ಸೌಕರ್ಯಗಳಿಂದ ಮಾರುದೂರ ಇದ್ದಾರೆ.

ಒಳಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆಗೆ ಗುಂಡಿ ಅಗೆದು ಅವುಗಳನ್ನು ಸರಿಯಾಗಿ ಮುಚ್ಚದ ಕಾರಣ ರಸ್ತೆ–ಗುಂಡಿಗಳ ನಡುವೆ ವ್ಯತ್ಯಾಸ ಕಾಣದಂತಾಗಿದೆ. ಖಾಲಿ ನಿವೇಶನ ಹಾಗೂ ಜಮೀನಿನಲ್ಲಿ ಬೆಳೆದು ನಿಂತ ಮುಳ್ಳುಕಂಟಿ ಇಡೀ ಪ್ರದೇಶದ ನೈರ್ಮಲ್ಯವನ್ನು ಅಣಕಿಸುವಂತಿದೆ.

ಒಳಚರಂಡಿ ಸಂಪರ್ಕದ ಚೇಂಬರ್ ಅಲ್ಲಲ್ಲಿ ಕಟ್ಟಿದ್ದು, ಶೌಚದ ನೀರು ನೇರವಾಗಿ ರಸ್ತೆ ಹಾಗೂ ಖಾಲಿ ನಿವೇಶನಗಳಿಗೆ ಹರಿಯುವುದರಿಂದ ಎಲ್ಲೆಡೆ ದುರ್ನಾತ ಹರಡಿದೆ. ಜೊತೆಗೆ ಸೊಳ್ಳೆ ,ಹಂದಿ, ನಾಯಿ ಹಾಗೂ ನೊಣಗಳ ನೆಚ್ಚಿನ ತಾಣವಾಗಿ ಬದಲಾಗಿದೆ. ಪಕ್ಕದ ರೈಲ್ವೆ ಇಲಾಖೆ ವಸತಿ ಗೃಹಗಳ ಮಲಿನ ನೀರು ವಿನಾಯಕ ನಗರವನ್ನು ಹಾಯ್ದು ಹೋಗುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಅಳಲು ಕೇಳುವವರಿಲ್ಲ: ನಗರಸಭೆಯ 10ನೇ ವಾರ್ಡ್‌ ವ್ಯಾಪ್ತಿಯ ಈ ಪ್ರದೇಶವನ್ನು ಇಬ್ಬರು ಸದಸ್ಯರು ಪ್ರತಿನಿಧಿಸುತ್ತಾರೆ. ನಗರಸಭೆಯೊಂದಿಗೆ ಬಿಟಿಡಿಎ ಕೂಡ ವಿನಾಯಕ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವ ಹೊಣೆ ಹೊತ್ತಿದೆ. ಆದರೆ ಎರಡೂ ಸಂಸ್ಥೆಗಳ ನಡುವಿನ ಹೊಣೆಗಾರಿಕೆಯ ಹೊಯ್ದಾಟದಲ್ಲಿ ನಿವಾಸಿಗಳು ಮಾತ್ರ ಸೌಲಭ್ಯ ವಂಚಿತರಾಗಿದ್ದಾರೆ.

ನಗರದ ಮಧ್ಯಭಾಗದಲ್ಲಿರುವ ವಿನಾಯಕನಗರದಲ್ಲಿ 400ಕ್ಕೂ ಹೆಚ್ಚು ಮನೆಗಳಿವೆ. ಪ್ರತಿಷ್ಟಿತ ಖಾಸಗಿ ಆಸ್ಪತ್ರೆಗಳು, ಶಾಲೆಗಳು ಈ ಪ್ರದೇಶದಲ್ಲಿದ್ದು, ರೈಲು, ಬಸ್‌ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೂ ವಿನಾಯಕ ನಗರದ ಮೂಲಕ ಹಾಯ್ದು ಹೋಗಿದೆ. ಇದರಿಂದ ಸ್ಥಳೀಯ ನಿವಾಸಿಗಳಲ್ಲದೇ ಆ ಪ್ರದೇಶದಲ್ಲಿ ಹಾದು ಹೋಗುವ ಪಾದಚಾರಿಗಳು, ವಾಹನ ಸವಾರರಿಗೂ ಅಲ್ಲಿನ ಅನೈರ್ಮಲ್ಯ ವಾತಾವರಣದ ಅನುಭವ ಆಗುತ್ತಿದೆ.

ಡೆಂಗಿ, ಚಿಕೂನ್‌ಗುನ್ಯ ಸಾಮಾನ್ಯ: ‘ವಿನಾಯಕ ನಗರದಲ್ಲಿ ಸ್ವಚ್ಛತೆಯ ಕೊರತೆಯಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಪ್ರತಿ ಮನೆಯಲ್ಲೂ ಡೆಂಗಿ ಹಾಗೂ ಚಿಕೂನ್‌ಗುನ್ಯಾ ರೋಗಿಗಳು ಕಾಣಸಿಗುತ್ತಾರೆ. ಸುತ್ತಲಿನ ಖಾಲಿ ಪ್ರದೇಶದಲ್ಲಿ ಜಾಲಿ ಗಿಡಗಳು ಬೆಳೆದಿದ್ದು, ಕೆಲವರು ಶೌಚಾಲಯದ ಗಲೀಜು ನೀರನ್ನು ನೇರವಾಗಿ ಅಲ್ಲಿಗೆ ಬಿಡುತ್ತಿದ್ದಾರೆ. ಇದರಿಂದ ಇಡೀ ಪ್ರದೇಶ ದುರ್ನಾತದಿಂದ ಕೂಡಿರುತ್ತದೆ’ ಎಂದು ಸ್ಥಳೀಯರಾದ ನಾಗಯ್ಯ ವಿರಕ್ತಮಠ ಆರೋಪಿಸುತ್ತಾರೆ.

ಒಳಚರಂಡಿ ಪೈಪ್‌ಜೋಡಣೆ ಹಾಗೂ ಕುಡಿಯುವ ನೀರಿನ ಪೈಪ್‌ ಹಾಕಲು ಗುಂಡಿ ತೋಡಿದವರು ಸರಿಯಾಗಿ ಮುಚ್ಚಿ ಸಮತಟ್ಟು ಮಾಡಲಿಲ್ಲ. ಮಳೆ ಬಂದು ಅಲ್ಲೆಲ್ಲಾ ಕೆಸರಿನ ರೊಜ್ಜು ಹೆಚ್ಚಿ ವಾಹನಗಳ ಓಡಾಟದಿಂದ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಚೆನ್ನಾಗಿದ್ದ ರಸ್ತೆಗಳನ್ನು ಹಾಳು ಮಾಡಿದ್ದಾರೆ. ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಬಿಟಿಡಿಎ ನೋಡಿಕೊಳ್ಳುತ್ತದೆ. ಈಗ ಮಾಡಿರುವ ಹಾನಿಗೆ ಯಾರು ಜವಾಬ್ದಾರಿ ಎಂದು ವಿರಕ್ತಮಠ ಪ್ರಶ್ನಿಸುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry