ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌರ್ಯದ ಬೀಡು ಕಿತ್ತೂರು

Last Updated 23 ಅಕ್ಟೋಬರ್ 2017, 5:10 IST
ಅಕ್ಷರ ಗಾತ್ರ

ಕಿತ್ತೂರು ಬೆಳಗಾವಿ ಜಿಲ್ಲೆಯ ಒಂದು ಪ್ರಮುಖ ಊರು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡ-ಬೆಳಗಾವಿ ನಡುವೆ ಇದೆ. 12ನೇ ಶತಮಾನದ ಹೊತ್ತಿಗೇ ಈ ಊರು ಇತ್ತು ಎನ್ನುವುದು ಇಲ್ಲಿನ ಬಸವೇಶ್ವರ ದೇವಾಲಯದ ಶಾಸನದಿಂದ ತಿಳಿದುಬರುತ್ತದೆ. ಗೋವಾದ ಕದಂಬರ ವೀರ ಜಯಕೇಶಿಯ 15ನೇ ಆಳ್ವಿಕೆಯ ವರ್ಷಕ್ಕೆ ಸೇರಿದ ಈ ಶಾಸನದಲ್ಲಿ ಕಿತ್ತೂರಿನ ಹೆಸರಿದೆ. ಆಗ ಇಲ್ಲಿ ಭವ್ಯವಾದ ದೇವಾಲಯ ಕಟ್ಟಿಸಿ, ಅದಕ್ಕೆ ದತ್ತಿ ಬಿಟ್ಟ ವಿಷಯವನ್ನು ಆ ಶಾಸನ ತಿಳಿಸುತ್ತದೆ.

ಕಿತ್ತೂರು ಪ್ರಸಿದ್ಧಿಗೆ ಬಂದುದು 16ನೇ ಶತಮಾನದಿಂದೀಚೆಗೆ. ಯೂಸುಫ್ ಖಾನನ ಜಹಗೀರಿಯಲ್ಲಿ ಸೇರಿದ್ದ ಈ ಊರು 16ನೇ ಶತಮಾನದ ಕಡೆಯ ಹೊತ್ತಿಗೆ  ಒಂದು ಪುಟ್ಟ ಸಂಸ್ಥಾನದ ಮುಖ್ಯ ಪಟ್ಟಣವಾಗಿ ಬೆಳೆಯಿತು. ಇಲ್ಲಿಗೆ ಬಿಜಾಪುರದ ಸೈನ್ಯದೊಡನೆ ಬಂದ ಹಿರೇಮಲ್ಲ, ಚಿಕ್ಕಮಲ್ಲರು ಇಂದಿನ ವಿಜಯಪುರದ ಸುಲ್ತಾನರಿಂದ ಕಿತ್ತೂರು ಸಂಸ್ಥಾನವನ್ನು ದತ್ತಿ ಪಡೆದು ಕಿತ್ತೂರು ದೇಸಾಯರ ಮನೆತನ ಸ್ಥಾಪಿಸಿದರು.

ಬಿಜಾಪುರದ ಸುಲ್ತಾನರು, ಮರಾಠರು, ಸವಣೂರಿನ ನವಾಬರು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‌ ಅವರ ನಡುವೆ ಕೈ ಬದಲಾಯಿಸಿ ಈ ಊರು ಹಲವು ಯುದ್ಧಗಳನ್ನು ಕಂಡಿತು. ಕಿತ್ತೂರು ದೇಸಾಯಿ ಮನೆತನ ಚನ್ನಮ್ಮನ ವೀರ ಹೋರಾಟದ ನಂತರ ಬ್ರಿಟಿಷರ ಆಳ್ವಿಕೆಗೆ ಸೇರಿತು. ಮುಂಬೈ ಪ್ರಾಂತ್ಯದ ಭಾಗವಾಯಿತು.

ರೇಷ್ಮೆ ಬಟ್ಟೆಗಳಿಗೆ ಪ್ರಸಿದ್ಧಿ
ಬ್ರಿಟಿಷರು ದೇಶಬಿಟ್ಟು ಹೋದ ನಂತರ ಈ ಊರು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಮೇಲೆ ಮತ್ತೆ ಪ್ರಾಮುಖ್ಯತೆ ಪಡೆಯಿತು. 20ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ಈ ಊರಿನ ಜನರ ಮುಖ್ಯ ಕಸಬುಗಳಲ್ಲಿ ನೇಕಾರಿಕೆಯೂ ಒಂದು. ಇಲ್ಲಿನ ರೇಷ್ಮೆ ಬಟ್ಟೆಗಳು ಒಂದು ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದವು. ಅಕ್ಕಿ, ಬೆಲ್ಲದ ವ್ಯಾಪಾರದ ಮುಖ್ಯ ಸ್ಥಾನವಾಗಿತ್ತು. ಚನ್ನಮ್ಮನ ನೆನಪಿಗಾಗಿ ಮಹಿಳೆಯರ ಸೈನಿಕ ಶಾಲೆ ಇಲ್ಲಿದೆ. ದೇಸಾಯಿಗಳ ಕಾಲದ ಜನಜೀವನ ಮತ್ತು ಪ್ರಾಚೀನ ಕಾಲದ ಶಿಲ್ಪವೈಖರಿ ಪ್ರತಿಬಿಂಬಿಸುವ ವಸ್ತು ಸಂಗ್ರಹಾಲಯ ಇದೆ.

ಈಗ ಕಿತ್ತೂರಿನಲ್ಲಿ ಉಳಿದಿರುವ ಪ್ರಾಚೀನ ಅವಶೇಷಗಳಲ್ಲಿ ಮುಖ್ಯವಾದುದು ಹೊಂಡದ ಬಸವಣ್ಣನ ಗುಡಿ ಎಂದು ಕರೆಯುವ ದೇವಾಲಯ. 12ನೇ  ಶತಮಾನದ ಚಾಲುಕ್ಯರ ಮಾದರಿಯಲ್ಲಿ ನಿರ್ಮಿತವಾಗಿದ್ದ ಈ ದೇವಾಲಯ ಈಗ ಸಂಪೂರ್ಣ ಪುನರ್‌ನಿರ್ಮಾಣಗೊಂಡು ಹೊಸ ರೂಪ ಪಡೆದಿದೆ. ಇಲ್ಲಿನ ನವರಂಗದ ಕಂಬಗಳು, ನಂದಿ, ಗಣೇಶ, ಮಹಿಷಾಸುರ ಮರ್ದಿನಿ ಮೊದಲಾದ ಮೂರ್ತಿಗಳು ದೇವಾಲಯದ ತಳಹದಿಯ ಅಷ್ಟಪಟ್ಟಿಕೆಗಳು ಚಾಲುಕ್ಯರ ಕಲಾಕೃತಿಗೆ ಉತ್ತಮ ಮಾದರಿಯಾಗಿವೆ.

ಪಾಳು ಬಿದ್ದ ಕೋಟೆ
ದಿಬ್ಬದ ಮೇಲೆ ದೇಸಾಯಿ ಮನೆತನದವರು ಕಟ್ಟಿಸಿದ್ದ ಕೋಟೆ ಈಗ ಪಾಳು ಬಿದ್ದಿದೆ. ಎತ್ತರವಾದ ಇದರ ಮಣ್ಣಿನ ಗೋಡೆಗಳಲ್ಲಿ ಅಲ್ಲಲ್ಲಿ ಕಿರುಗಲ್ಲಿನ ಮುಖವರಿಸೆಗಳು ಉಳಿದಿವೆ. ಗುಂಡಾದ ಈ ಕೋಟೆಯ ಸುತ್ತಲೂ ಆಳವೂ ಅಗಲವೂ ಆದ ಕಂದಕವಿದ್ದು ಗೋಡೆಗೆ ಅಲ್ಲಲ್ಲಿ ಬುರುಜಗಳಿದ್ದ ಗುರುತುಗಳಿವೆ. ಕೋಟೆಯೊಳಗೆ ಈಶಾನ್ಯಭಾಗದಲ್ಲಿ ದೇಸಾಯರ ಭವ್ಯವಾದ ಸೌಧವಿತ್ತು. ಅದರ ಬಹು ಭಾಗ ಪಾಳು ಬಿದ್ದು ಈಗ ಕೆಲವು ಗೋಡೆಗಳು ಮಾತ್ರ ನಿಂತಿವೆ.

ಈ ಕಟ್ಟಡದ ಭಗ್ನಾವಶೇಷಗಳನ್ನು ಇತ್ತೀಚೆಗೆ ಬಿಡಿಸಿದ್ದು ಅದರ ತಳವಿನ್ಯಾಸ ಬೆಳಕಿಗೆ ಬಂದಿರುವುದಲ್ಲದೆ ಅದರಲ್ಲಿನ ಕೋಣೆಗಳು, ಪಾಕಶಾಲೆಗಳು, ಸ್ನಾನಗೃಹಗಳು, ಬಾವಿಗಳು, ಪ್ರತಿ ಕೋಣೆಗೂ ಗೋಡೆಯೊಳಗೇ ಸಾಗುತ್ತಿದ್ದ ನೀರಿನ ಕೊಳಾಯಿಗಳು, ಹೊಗೆಯ ಗೂಡುಗಳು, ಇವೆಲ್ಲಕ್ಕಿಂತ ಮಿಗಿಲಾಗಿ ಧ್ರುವ ನಕ್ಷತ್ರವನ್ನು ಒಳಗಿನಿಂದಲೇ ಕಾಣಬಹುದಾದ ವೀಕ್ಷಣಾಕಿಂಡಿ– ಇವುಗಳನ್ನು ಈಗಲೂ ಗುರುತಿಸಬಹುದು.

ಅರಮನೆಯ ಮುಂದೆ ದೊಡ್ಡ ಸಭಾಂಗಣವಿದೆ. ದಪ್ಪ ಮರದ ಕಂಬಗಳು, ನೆಲಕ್ಕೆ ಹಾಸಿದ್ದ ಹೊಳಪುಗಲ್ಲುಗಳು ಈಗ ಉಳಿದಿಲ್ಲ. ಕೋಟೆ ನಡುವೆ ವೀಕ್ಷಣಾಗೋಪುರವಿದ್ದು, ಅದರ ಬುಡದಲ್ಲಿ ಆಂಜನೇಯನ ಗುಡಿ ಇದೆ. ಇಲ್ಲಿ ಸುಂದರ ಉದ್ಯಾನ ಮೈದಳೆದಿದೆ. ಕೆಲವು ಸಮಾಧಿ ಕಟ್ಟಡಗಳು ಕೋಟೆಯಿಂದ ಪಶ್ಚಿಮಕ್ಕೆ ಎತ್ತರವಾದ ಸ್ಥಳದಲ್ಲಿ ಕಿತ್ತೂರು ದೇಸಾಯರ ಕೆಲವು ಸಮಾಧಿ ಕಟ್ಟಡಗಳಿವೆ. ಭಾರತೀಯ ಇಸ್ಲಾಮಿಕ್‌ ಶೈಲಿಯಲ್ಲಿ ಕಟ್ಟಿರುವ ಈ ಕಟ್ಟಡಗಳು ಭವ್ಯವಾಗಿವೆ.

ಕಿತ್ತೂರಿನ ಜನಗಳ ಸ್ವಾತಂತ್ರ್ಯ ಆಕಾಂಕ್ಷೆಯಿಂದ, ಚನ್ನಮ್ಮನ ಧೀರೋದಾತ್ತವಾದ ಹೋರಾಟದಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಈ ಊರು ಮೊದಲ ಹೆಜ್ಜೆ ಇಟ್ಟಿತೆಂಬ ಖ್ಯಾತಿ ಪಡೆದಿದೆ. ಕಿತ್ತೂರಿನ ಕಥೆ ಲಾವಣಿಯಾಗಿ, ಕತೆಯಾಗಿ ನಾನಾ ರೀತಿಯಲ್ಲಿ ಪ್ರಚಾರ ಪಡೆದು ಖ್ಯಾತಿ ಗಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT