ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಸ್ಮರಣೆ, ಉತ್ಸವಕ್ಕೆ ಕಿತ್ತೂರು ಸಜ್ಜು

Last Updated 23 ಅಕ್ಟೋಬರ್ 2017, 5:13 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಮಲೆನಾಡಿನ ಸೆರಗು, ಬೆಳವಲದ ಅಡಿಗುಂಟ ಹಬ್ಬಿದ ‘ಬೆಲೆಯುಳ್ಳ ನಾಡು–ಬಂಗಾರು ನಾಡು’ ಎಂಬ ಕೀರ್ತಿಗೆ ಪಾತ್ರವಾಗಿರುವ ‘ರಕ್ತರಂಜಿತ’ ಕಿತ್ತೂರಿನ ನೆಲದಲ್ಲಿ ರಾಣಿ ಚನ್ನಮ್ಮನ ವಿಜಯೋತ್ಸವ ನೆನಪಿಗಾಗಿ ಇದೇ 23ರಿಂದ 25ರವರೆಗೆ ನಡೆಯಲಿರುವ ‘ಚನ್ನಮ್ಮನ ಕಿತ್ತೂರು ಉತ್ಸವ’ಕ್ಕೆ ಕ್ಷಣಗಣನೆ ಆರಂಭವಾಗಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಸ್ವಾಭಿಮಾನ ಮತ್ತು ಸ್ವಾತಂತ್ರ್ಯಕ್ಕಾಗಿ ಬಲಾಢ್ಯ ಬ್ರಿಟಿಷರ ವಿರುದ್ಧ ‘ವೀರಭದ್ರ ಕೂಗು’ ಹಾಕಿದ ಹಿರಿಮೆ ಇಲ್ಲಿನ ರಾಣಿ ಚನ್ನಮ್ಮನದು. ಸಂಗೊಳ್ಳಿರಾಯಣ್ಣ, ಅಮಟೂರು ಬಾಳಪ್ಪ, ಅವರಾದಿ ವೀರಪ್ಪ, ಸರದಾರ ಗುರುಸಿದ್ದಪ್ಪ ಅವರಂತಹ ಅನೇಕ ಹೋರಾಟಗಾರರನ್ನು ನೀಡಿದ ವೀರಭೂಮಿ ಇದು. ಪ್ರಖರ ಸನ್ಯಾಸಿ ಮಡಿವಾಳ ಶಿವಯೋಗಿ ಪಾದಸ್ಪರ್ಶ ಮಾಡಿದ ಪವಿತ್ರ ಹಿನ್ನೆಲೆಯೂ ಈ ಮಣ್ಣಿಗಿದೆ. ಸಂಸ್ಥಾನ ಕಾಲದ ರಾಜಧಾನಿಯಾಗಿದ್ದ ಪಟ್ಟಣದ ತುಂಬೆಲ್ಲಾ ‘ಉತ್ಸವ ದಿಬ್ಬಣ’ದ ಸಡಗರ ಮನೆಮಾಡಿದೆ. ಉತ್ಸವದ ಯಶಸ್ಸಿಗೆ ಪೂರ್ವಸಿದ್ಧತೆಗಳು ಪೂರ್ಣಗೊಂಡಿವೆ.

ವಿಶಾಲ ಶಾಮಿಯಾನ: ಕೋಟೆ ಆವರಣದೊಳಗೆ ವೇದಿಕೆ ಸಜ್ಜಾಗಿದೆ. 40ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್ ಶಾಮಿಯಾನ ಉತ್ಸವದ ಮೂರು ದಿನಗಳ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು 23ರಂದು ಸಂಜೆ 7ಕ್ಕೆ ಅಧಿಕೃತವಾಗಿ ಉತ್ಸವ ಉದ್ಘಾಟಿಸುವರು. ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು. ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಲು 12ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮುಖ್ಯ ವೇದಿಕೆ ಮತ್ತು ವಸ್ತುಪ್ರದರ್ಶನ ಮಳಿಗೆಯನ್ನು ‘ವಾಟರ್‌ ಪ್ರೂಫ್‌’ ಆಗಿ ನಿರ್ಮಿಸಲಾಗಿದೆ.

ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯ ಅಖಾಡ, ಕಬಡ್ಡಿ ಮೈದಾನಕ್ಕೆ ಅಂತಿಮ ರೂಪು ನೀಡುವ ಕೆಲಸ ಭಾನುವಾರ ಬಿರುಸಿನಿಂದ ನಡೆಯಿತು. ಕೋಟೆ ಸ್ಮಾರಕದಲ್ಲಿ ಮತ್ತೊಂದು ಸ್ಮಾರಕವಾಗಿ ನಿಂತು ಹೋಗಿದ್ದ ಧ್ವನಿ– ಬೆಳಕು ಪ್ರದರ್ಶನವನ್ನು ಮತ್ತೆ ಆರಂಭಗೊಳಿಸುವ ಯೋಜನೆಯನ್ನು ಜಿಲ್ಲಾಡಳಿತ ರೂಪಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ, ನೂತನ ತಂತ್ರಜ್ಞಾನದಲ್ಲಿ ಕಿತ್ತೂರು ಇತಿಹಾಸದ ಗತ ವೈಭವ ಸವಿಯಬಹುದಾಗಿದೆ.

ಕ್ಯಾಮೆರಾ ಕಣ್ಗಾವಲು: ಉಪವಿಭಾಗಾಧಿಕಾರಿ ವಿಜಯಕುಮಾರ್ ಹೊನಕೇರಿ, ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ, ಸಿಬ್ಬಂದಿ, ಸ್ಥಳೀಯ ಪಟ್ಟಣ ಪಂಚಾಯ್ತಿಯವರು ಉತ್ಸವ ಯಶಸ್ಸಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿವಿಧೆಡೆ 11 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಖ್ಯವೇದಿಕೆ ಹಿಂದೆ ಮಾಧ್ಯಮ ಕೇಂದ್ರ ತೆರೆಯಲಾಗಿದೆ. ಕಲಾವಿದರಿಗೆ ಪ್ರಸಾದನಕ್ಕಾಗಿ ತಾತ್ಕಾಲಿಕ ಕೊಠಡಿ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT