ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಶಿಸುತ್ತಿರುವ ಜಾನಪದ ಕಲೆಗಳಿಗೆ ಉತ್ತೇಜನ ಅಗತ್ಯ’

Last Updated 23 ಅಕ್ಟೋಬರ್ 2017, 5:32 IST
ಅಕ್ಷರ ಗಾತ್ರ

ಬೀದರ್: ‘ಪ್ರಸ್ತುತ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳಿಗೆ ಉತ್ತೇಜನ ನೀಡುವ ಕಾರ್ಯ ನಿರಂತರವಾಗಿ ನಡೆಸಿದಾಗ ಮಾತ್ರ ಆ ಕಲೆಗಳು ನಮ್ಮ ನಡುವೆ ಜೀವಂತವಾಗಿ ಉಳಿಯಲು ಸಾಧ್ಯ’ ಎಂದು ನಟ ಚೇತನ್‌ ತಿಳಿಸಿದರು.

ಕಲ್ಯಾಣ ಕುವರ ಕಲ್ಚರಲ್‌ ಟ್ರಸ್ಟ್‌ ವತಿಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ನಡೆದ ‘ಬೀದರ್‌ ಸಾಂಸ್ಕೃತಿಕ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲಾ ಕಲೆಗಳಿಗೆ ಜಾನಪದ ಕಲೆಗಳೇ ಮೂಲ. ಎಲ್ಲಾ ಕಲಾವಿದರಿಗೆ ಜಾನಪದ ಕಲೆಗಳೇ ಜೀವಾಳ. ಈ ಕಲೆಗಳು ಉತ್ತಮ ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶಿಯಾಗಿವೆ. ಅಲ್ಲದೇ, ನಮ್ಮ ನಾಡಿನ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಹೀಗಾಗಿ ಈ ಕಲೆಗಳನ್ನು ನಶಿಸಿ ಹೋಗದಂತೆ ಉಳಿಸಿ ಬೆಳೆಸಬೇಕಿದೆ’ ಎಂದು ಹೇಳಿದರು.

‘ಪ್ರಸ್ತುತ ನಮ್ಮ ನಾಡು–ನುಡಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಂಬಿಸುವ ನಿಟ್ಟಿನಲ್ಲಿ ಕಲಾವಿದರು ತಮ್ಮ ಕಲೆ ಮೂಲಕ ಪ್ರಯತ್ನಿಸಬೇಕಿದೆ. ನೆಲ, ಜಲ ಸೇರಿದಂತೆ ನಾಡಿನ ಪ್ರಚಲಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವಂತ ಸಿನಿಮಾಗಳು ಮಾಡಬೇಕಾಗಿದೆ’ ಎಂದರು.

‘ಯುವಕರು ಯಾವುದೇ ರೀತಿಯ ದುಶ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಅವುಗಳಿಂದ ದೂರವಿದ್ದು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿ ಏನಾದರು ಉತ್ತಮ ಸಾಧನೆ ಮಾಡುವ ದಿಸೆಯಲ್ಲಿ ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.

ಕಲಬುರ್ಗಿ ರಂಗಾಯಣದ ನಿರ್ದೇಶಕ ಮಹೇಶ ಪಾಟೀಲ ಮಾತನಾಡಿದರು. ಕಲ್ಯಾಣ ಕುವರ ಕಲ್ಚರಲ್‌ ಟ್ರಸ್ಟ್‌ನ ಅಧ್ಯಕ್ಷ ಬಿ.ಜೆ. ವಿಷ್ಣುಕಾಂತ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮನೋಹರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪ್ರಮುಖರಾದ ಡಾ. ರಾಜಶೇಖರ ಕುಲಕರ್ಣಿ, ವೈಜನಾಥ ಕಮಠಾಣೆ, ವಿಜಯಕುಮಾರ ಸೋನಾರೆ, ಅನಂತ ನಾಯಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚೋಂಡಿ ಗ್ರಾಮ ಕಲಾವಿದರು ರಾಮ, ಲಕ್ಷ್ಮ ಪಾತ್ರ ಧರಿಸಿ ಕೋಲಾಟ ಪ್ರದರ್ಶಿಸಿ ಗಮನ ಸೆಳೆದರು. ಹುಲಿ ಕುಣಿತ, ಲಂಬಾಣಿ ನೃತ್ಯ, ಮೋರಂ ಪದ, ಡೊಳ್ಳು ಕುಣಿತ ಮತ್ತಿತರ ಜಾನಪದ ಕಲೆಗಳು ಅನಾವರಣಗೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT