ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತಕ್ಕೆ ಎಲೆ ಸುರುಳಿ ಕೀಟದ ಬಾಧೆ

Last Updated 23 ಅಕ್ಟೋಬರ್ 2017, 5:48 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಇತ್ತೀಚಿಗೆ ಸುರಿದ ಮಳೆ ಮತ್ತು ಹವಾಮಾನ ವೈಪರಿತ್ಯದಿಂದಾಗಿ ಭತ್ತಕ್ಕೆ ಗರಿ ಕತ್ತರಿಸುವ ಪೀಡೆ ಅಮರಿಕೊಂಡಿದ್ದು, ಹಿಂಗಾರಿನಲ್ಲಿ ಅಲ್ಪ ಪ್ರಮಾಣದಲ್ಲಿ ನಾಟಿ ಮಾಡಿದ ಪೈರು ಸೊರಗುತ್ತಿದ್ದು, ಎಲೆಗಳು ಒಣಗುತ್ತಿರುವುದರಿಂದ ಕಂಗೆಟ್ಟಿದ್ದಾರೆ.

ಎಲೆ ಸುರುಳಿ ಕೀಟವು ಎಲೆಯ ತುದಿಯಿಂದ ಎರಡು ಆಥವಾ ಒಂದೇ ಬದಿಯಲ್ಲಿ ಹರಡಿ, ಆ ಭಾಗ ಒಣಗಲು ಆರಂಭವಾಗುತ್ತದೆ. ಕೆಲವೆಡೆ ರೋಗಾಣು ಪತ್ರನಾಳಗಳ ಮೂಲಕ ಎಲೆಯ ತುದಿಯಲ್ಲಿ ಶೇಖರಣೆಗೊಂಡು ನೇರಳೆ ಬಣ್ಣಕ್ಕೆ ತಿರುಗಿ ಒಣಗುತ್ತದೆ. ಕೆಲವು ಕಡೆ ಸಸಿಗಳು ಹಳದಿ ಬಣ್ಣಕ್ಕೆ ತಿರುಗಿ ಎಲೆ ಸುರುಳಿ ಗಟ್ಟುತ್ತದೆ ಎನ್ನುತ್ತಾರೆ ರೈತರು.

‘ನೀರಾವರಿ ಭೂಮಿಯಲ್ಲಿ ಎರಡು ಎಕರೆಯಲ್ಲಿ ಬಾಸುಮತಿ ಮತ್ತು ರಾಜಮುಡಿ ತಳಿಯ ಭತ್ತ ನಾಟಿ ಮಾಡಿದ್ದೇನೆ. ₹ 24 ಸಾವಿರ ಖರ್ಚು ತಗುಲಿದೆ. ರಸಾಯನಿಕ ಗೊಬ್ಬರದ ಬದಲಾಗಿ ಹಟ್ಟಿಗೊಬ್ಬರ ಬಳಸಿದ್ದೇನೆ. ತಿಂಗಳು ತುಂಬುವುದರೊಳಗೆ ಸಸಿಗಳಲ್ಲಿ ರೋಗ ಪೀಡಿತವಾಗಿವೆ’ ಎನ್ನುತ್ತಾರೆ ಕೃಷಿಕ ಯಳಂದೂರು ಸುರೇಶ್ ಕುಮಾರ್.

‘ಇತ್ತೀಚಿಗೆ ಸತುವಿನ ಕೊರತೆಯಿಂದ ಭತ್ತದ ಎಲೆಗಳು ಬಾಡುತ್ತಿರುವುದು ಕಂಡುಬಂದಿದೆ. 1 ಲೀಟರ್ ನೀರಿಗೆ 2 ಗ್ರಾಂ ಸತುವಿನ ಸಲ್ಫೇಟ್‌ನ್ನು ಸೇರಿಸಿ ಸಿಂಪಡಿಸಿದರೆ ಸಮಸ್ಯೆ ನಿವಾರಿಸುತ್ತದೆ. ಕೆಲವೆಡೆ ಎಲೆ ಸುರಳಿ ಹುಳ ಹಾಗೂ ಕಂದು ಜಿಗುಹುಳ ಕಾಟವೂ ಕಾಣಿಸಿದೆ.

ಮಳೆಗಾಲದ ನಂತರ ತಾಕುಗಳಲ್ಲಿ ಶೀತ ಜಾಸ್ತಿಯಾಗಿದೆ. ಸಾರಜನಕ ಪ್ರಮಾಣವನ್ನು ಹೆಚ್ಚು ನೀಡದೆ, ನೀರು ನಿಲ್ಲಿಸುವುದನ್ನು ಕಡಿಮೆ ಮಾಡಬೇಕು. ಬಾಧಿತ ಗಿಡದ ಭಾಗಗಳನ್ನು ಕೃಷಿ ಕೇಂದ್ರಕ್ಕೆ ತಂದಲ್ಲಿ ಮಾಹಿತಿ ನೀಡಲಾಗುವುದು ಎನ್ನುತ್ತಾರೆ’ ಜಿಲ್ಲಾ ಕೃಷಿ ಕೇಂದ್ರದ ಕೀಟ ವಿಜ್ಞಾನಿ ಶಿವರಾಯನಾವಿ ಅವರು.

ಭತ್ತ ಬಿತ್ತನೆ ಬೇಡ: ಇನ್ನೂ ಎರಡು ವಾರ ಕಾಲ ಒಣ ಹವೆ ಮುಂದುವರಿಯಲಿದೆ. ಈಗಾಗಲೇ ಭತ್ತ ಬಿತ್ತನೆ ಕಾಲ ಮುಗಿದಿದೆ. ಭತ್ತಕ್ಕೆ ಬದಲಾಗಿ ಕೃಷಿಕರು ರಾಗಿ ತಳಿಗಳಾದ ಇಂಡ್ಹಾಫ್ 7 ಮತ್ತು 9 ಹಾಗೂ ಕೆಎಂಆರ್ 201 ಹಾಗೂ ಹಲಸಂದೆ, ಕಡ್ಲೆ ಬಿತ್ತನೆ ಮಾಡಬಹುದು. ವಾಯುಭಾರ ಕುಸಿತದ ವ್ಯತ್ಯಾಸದಿಂದ ಮಳೆ ಬರುವುದು ಹತ್ತು ದಿನ ತಡವಾಗುತ್ತದೆ ಎಂದು ನಾಗನಹಳ್ಳಿ ಸಾವಯವ ಕೃಷಿಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ. ಗೋವಿಂದರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT