ಸೋರುವ ನೀರು: ಮುಗಿಯದ ಆತಂಕ

ಸೋಮವಾರ, ಮೇ 20, 2019
30 °C

ಸೋರುವ ನೀರು: ಮುಗಿಯದ ಆತಂಕ

Published:
Updated:
ಸೋರುವ ನೀರು: ಮುಗಿಯದ ಆತಂಕ

ಚಿಕ್ಕಬಳ್ಳಾಪುರ: ನಗರದ ಕೆಳಗಿನ ತೋಟದ ರಸ್ತೆಯಲ್ಲಿರುವ ರೈಲ್ವೆ ಕೆಳ ಸೇತುವೆಯಲ್ಲಿ ಕುಡಿಯುವ ನೀರು ಒಂದೂವರೆ ವರ್ಷದಿಂದ ಸೋರಿಕೆ ಯಾಗುತ್ತಿದೆ. ಇದರಿಂದಾಗಿ ನೀರು ವ್ಯರ್ಥವಾಗಿ ಚರಂಡಿಗೆ ಸೇರುವುದಲ್ಲದೆ ಸೇತುವೆ ಕೆಳಗೆ ಸಂಚರಿಸುವ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ನಿತ್ಯ ಸಮಸ್ಯೆಯಾಗಿ ಕಾಡುತ್ತಿದೆ.

ಕೆಳಗಿನ ತೋಟ ಪ್ರದೇಶಕ್ಕೆ ಜಕ್ಕಲಮಡಗು ಜಲಾಶಯದ ನೀರು ಪೂರೈಸಲು ಹಾಕಿದ್ದ ಮಾರ್ಗವನ್ನು ಕೆಳ ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಸ್ಥಳಾಂತರಿಸಲಾಗಿತ್ತು. ಸೇತುವೆ ನಿರ್ಮಾಣವಾದಗಿನಿಂದಲೂ ಈ ಮಾರ್ಗದಲ್ಲಿ ಉಂಟಾಗಿರುವ ಹಾನಿಯನ್ನು ಸರಿಪಡಿಸುವ ಕೆಲಸಕ್ಕೆ ಅಧಿಕಾರಿಗಳು ಆದ್ಯತೆ ನೀಡಿಲ್ಲ. ಹೀಗಾಗಿ ಅಮೂಲ್ಯ ಜೀವಜಲವನ್ನು ಉಳಿಸುವ ಕೆಲಸ ಈವರೆಗೆ ಈಡೇರಿಲ್ಲ. ಸಾವಿರಾರು ಲೀಟರ್‌ನಷ್ಟು ಕುಡಿಯುವ ನೀರು ಚರಂಡಿ ಸೇರುತ್ತಿದೆ. ಸೇತುವೆ ಕೆಳ ಭಾಗದ ಹಳ್ಳ ಕೊಳ್ಳಗಳಲ್ಲಿ ನೀರು ನಿಂತು ರೋಗಗಳಿಗೂ ಕಾರಣವಾಗುತ್ತಿದೆ.

ತಿಪ್ಪೇನಹಳ್ಳಿ ಬಳಿ ಇರುವ ಜಕ್ಕಲಮಡಗು ನೀರು ಸಂಸ್ಕರಣಾ ಘಟಕದಿಂದ ಸರ್ಕಾರಿ ಪದವಿ ಪೂರ್ವ (ಜೂನಿಯರ್) ಕಾಲೇಜಿನ ಹಿಂಭಾಗದಲ್ಲಿರುವ ಟ್ಯಾಂಕ್‌ಗೆ ನೀರು ಬಿಟ್ಟಾಗಲೆಲ್ಲ ಈ ಸೇತುವೆಯಲ್ಲಿ ನೀರು ಸದಾ ಹನಿಯುತ್ತಿರುತ್ತದೆ. ಆಗೆಲ್ಲ ಕಿರಿಕಿರಿ ಅನುಭವಿಸುತ್ತ, ಹಿಡಿಶಾಪ ಹಾಕುತ್ತಲೇ ಈ ದಾರಿಯಲ್ಲಿ ಸಾಗುತ್ತಾರೆ. ವಾಹನ ಸವಾರರು ಸೋರುವ ನೀರಿನಿಂದ ತಪ್ಪಿಸಿಕೊಳ್ಳಲು ಸಂಚಾರ ನಿಯಮ ಉಲ್ಲಂಘಿಸಿ ಏಕಮುಖ ಸಂಚಾರ ಮಾರ್ಗದಲ್ಲಿ ನುಗ್ಗುತ್ತಾರೆ. ಆಗ ಅಪಘಾತಗಳು ಸಂಭವಿಸಿದರೆ ಯಾರು ಹೊಣೆ ಎನ್ನುವುದು ಸ್ಥಳೀಯರ ಪ್ರಶ್ನೆ.

ಜೂನಿಯರ್ ಕಾಲೇಜು ಹಿಂಭಾಗದಲ್ಲಿರುವ ಟ್ಯಾಂಕ್‌ಗೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತದೆ. ಈ ಟ್ಯಾಂಕ್‌ ಮೂಲಕ 20, 21 ಮತ್ತು 22ನೇ ವಾರ್ಡ್‌ಗಳಿಗೆ ಪ್ರತಿ ವಾರಕ್ಕೊಮ್ಮೆ ನೀರು ಹರಿಸಲಾಗುತ್ತದೆ. ಜಕ್ಕಲಮಡಗು ಜಲಾಶಯದಿಂದ ಟ್ಯಾಂಕ್‌ಗೆ ನೀರು ಪೂರೈಸಿದಾಗ ನಾಲ್ಕೈದು ದಿನಗಳ ಕಾಲ ಸುರಿಯುತ್ತಿರುತ್ತದೆ. ಪೈಪ್‌ಗಳಲ್ಲಿ ಸಂಗ್ರಹವಾಗಿರುವ ನೀರು ಹನಿ ಹನಿಯಾಗಿ ಸೇರಿಸಿದರೆ ಹಲವು ಕುಟುಂಬಗಳಿಗೆ ಸಮಸ್ಯೆ ತಪ್ಪುತ್ತದೆ. ಅಲ್ಲದೆ ನೀರು ಸೋರುವಿಕೆಯಿಂದ ಸೇತುವೆ ದಿನೇ ದಿನೇ ಶಿಥಿಲವಾಗುತ್ತಿದೆ. ಈ ಕುರಿತು ಹಲವು ಸಂಘಟನೆಗಳು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪರಿಹಾರ ಸಿಕ್ಕಿಲ್ಲ.

‘ಸತತ ಬರಗಾಲದಿಂದ ಜಿಲ್ಲೆಯ ಜನ ಕುಡಿಯುವ ನೀರಿಗೆ ಹಪಹಪಿಸುವರು. ಇತ್ತೀಚೆಗೆ ಬಿದ್ದ ಮಳೆಯಿಂದ ಜಕ್ಕಲಮಡಗು ಜಲಾಶಯ ತುಂಬಿದೆ. ಹೀಗಾಗಿ ಈ ಬಾರಿ ಕುಡಿಯಲು ನೀರಿನ ಸಮಸ್ಯೆ ಎದುರಾಗದು ಎಂಬ ಸಮಾಧಾನ ಜನರದ್ದು. ಆದರೆ ಅಲ್ಲಿಂದ ಹತ್ತಾರು ಕಿ.ಮೀ. ದೂರದಿಂದ ನೀರು ತಂದು ಸಂಸ್ಕರಿಸಿ, ಶುದ್ಧೀಕರಿಸಿ ಪೂರೈಸುವ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಜನರ ಬೇಡಿಕೆಯ ಉದ್ದೇಶ ಸಾರ್ಥಕವಾಗದು ಎಂದು ಸ್ಥಳೀಯ ನಿವಾಸಿ ಸುಬ್ಬರಾಜು ಬೇಸರ ವ್ಯಕ್ತಪಡಿಸಿದರು.

‘ಈ ಸೇತುವೆ ಮೇಲಿಂದ ಬೀಳುವ ನೀರಿನಲ್ಲಿ ಮಕ್ಕಳು ಆಟವಾಡಿದರೆ, ವಾಹನ ಸವಾರರಿಗೆ ಪ್ರಾಣ ಸಂಕಟ. ಅಪಾಯ ತಪ್ಪಿಸಲು ಜನಪ್ರತಿನಿಧಿಗಳೂ ಆಸಕ್ತಿ ತೋರುತ್ತಿಲ್ಲ. ಸುಲಭವಾಗಿ ಸ್ವಲ್ಪ ಖರ್ಚಿನಲ್ಲಿ ದುರಸ್ತಿ ಮಾಡಿಸಿದರೆ ಎಲ್ಲರೂ ಸರಿ ಹೋಗುತ್ತದೆ. ಆದರೆ ನಗರಸಭೆ ಅಧಿಕಾರಿಗಳಿಗೆ ಆ ನಿಟ್ಟಿನಲ್ಲಿ ಆಸಕ್ತಿ ಇಲ್ಲ ಎಂದು ನಕ್ಕಲಕುಂಟೆ ನಿವಾಸಿ ಶಿವರಾಜ್‌ ಆರೋಪಿಸಿದರು.

‘ಇದಿಷ್ಟೇ ಅಲ್ಲ. ಜಕ್ಕಲಮಡುಗು ಜಲಾಶಯದಿಂದ ನಗರಕ್ಕೆ ನೀರು ತರುವ ಕೊಳವೆ ಮಾರ್ಗದ ಕೆಲವೆಡೆ ಸೋರಿಕೆಯಾಗುತ್ತಿದೆ. ಅದರ ದುರಸ್ತಿಯ ಕೆಲಸವೂ ಆಗಿಲ್ಲ. ಅಲ್ಪ ಪ್ರಮಾಣದ ಸಮಸ್ಯೆಯನ್ನು ಆ ಸಂದರ್ಭದಲ್ಲಿಯೇ ಬಗೆಹರಿಸಿದರೆ ಮುಂದಾಗುವ ಅಡಚಣೆ ತಪ್ಪುತ್ತದೆ. ಇಲ್ಲವಾದರೆ ಕೊನೆ ಗಳಿಗೆಯಲ್ಲಿ ಸಂಕಷ್ಟ ನಿವಾರಿಸಲು ಪರದಾಡುವಂತಾಗುತ್ತದೆ ಎಂಬುದು 21ನೇ ವಾರ್ಡ್‌ ನಿವಾಸಿ ರವಿಕುಮಾರ್‌ ಅವರ ಸಲಹೆ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry