ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲುಗುಗೌಡ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿಸಿ

Last Updated 23 ಅಕ್ಟೋಬರ್ 2017, 6:02 IST
ಅಕ್ಷರ ಗಾತ್ರ

ಬೀರೂರು: ಮೀಸಲಾತಿ ದೊರಕದೆ ಆಡಳಿತಾತ್ಮಕ ಹುದ್ದೆಗಳಿಂದ ಮತ್ತು ರಾಜಕೀಯ ಮೀಸಲಾತಿ ಇಲ್ಲದೆ ಅವಕಾಶ ವಂಚಿತ ತೆಲುಗುಗೌಡ ಸಮುದಾಯವನ್ನು ಕೇಂದ್ರ ಸರ್ಕಾರವು ಒಬಿಸಿ (ಇತರೆ ಹಿಂದುಳಿದ ವರ್ಗ)ಗೆ ಸೇರಿಸಿ ಸಮುದಾಯ ಬಲಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಜಿಗಣೇಹಳ್ಳಿ ಮಂಜು ಆಗ್ರಹಿಸಿದರು.

ಪಟ್ಟಣದ ಪತ್ರೆ.ಕೆ.ಚನ್ನವೀರಪ್ಪಯ್ಯ ರೋಟರಿಭವನದಲ್ಲಿ ಭಾನುವಾರ ರಾಜ್ಯ ತೆಲುಗುಗೌಡ ಶಿಕ್ಷಕರ ಸಂಘ ಆಯೋಜಿಸಿದ್ದ 2017ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಣ್ಣ ಸಮುದಾಯವಾಗಿರುವ ತೆಲುಗುಗೌಡ ಜನಾಂಗವು ಬಲಿಷ್ಠ ಸಮುದಾಯಗಳ ನಡುವೆ ಸಿಲುಕಿ ನಲುಗಿ ಹೋಗಿದೆ. ಪ್ರತಿಭೆ ಇದ್ದೂ ಅವಕಾಶ ವಂಚಿತರಾಗುವ ಹಣೆಬರಹ ನಮ್ಮದಾಗಿದೆ. ಈವರೆಗೆ ಕೃಷಿ ನಂಬಿ ಬದುಕು ನಡೆಸಿರುವ ನಾವು ಶಿಕ್ಷಣದ ಪ್ರಭಾವದಿಂದಲಾದರೂ ಮುನ್ನಡೆದು ಉನ್ನತ ಸ್ತರ ತಲುಪಲು ರಾಜಕೀಯ ಮತ್ತು ಉದ್ಯೋಗ ಮೀಸಲಾತಿ ಅಗತ್ಯವಾಗಿ ಬೇಕಿದೆ.

ಸಮಾಜ ಎನ್ನುವುದು ವ್ಯಕ್ತಿ ಇದ್ದಂತೆ, ವ್ಯಕ್ತಿಗೆ ನೋವಾದರೆ ಹೇಗೆ ಅಸಹನೀಯವೋ ಹಾಗೆ ಸಮಾಜಕ್ಕೆ ನೋವಾಗುವುದೂ ಅಸಹನೀಯ. ನಾವು ದೊಡ್ಡ ಸಮುದಾ ಯಗಳ ದೌರ್ಜನ್ಯದಿಂದ ಹೊರಬರಲು ಸರ್ಕಾರಗಳು ಅವಕಾಶ ನೀಡಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರಧಾನ ಭಾಷಣ ಮಾಡಿದ ಶಿಕ್ಷಕ ಶೇಖರಪ್ಪ, ‘ತೆಲುಗುಗೌಡರು ಬಾಹ್ಯಶಕ್ತಿಯ ಬದಲಾಗಿ ಅಂತಃಶಕ್ತಿ ಯಿಂದ ಸಮುದಾಯದ ಶ್ರೇಷ್ಠತೆ ಎತ್ತಿ ಹಿಡಿಯಬೇಕು. ನಮ್ಮ ಮೌಲ್ಯ ವೃದ್ಧಿಯಾಗಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜದ ಕಣ್ಣು ತೆರೆಸಿದಾಗ ನಾವು ಸಾಧನೆಯ ಮಜಲಿನ ಮೊದಲನೆಯ ಹಂತ ತಲುಪಿದಂತೆ.

ಹೆಣ್ಣುಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಿ ವಿಷಯ ಅರ್ಥೈಸಿಕೊಳ್ಳುವ ಅಧ್ಯಯನಶೀಲರಾದಾಗ ನಾವು ಪರಿಪೂರ್ಣರಾಗುತ್ತೇವೆ. ನಮ್ಮ ಸಾಮರ್ಥ್ಯ ಒರೆಗೆ ಹಚ್ಚುವ ಸಕಾರಾತ್ಮಕ ಮನೋಭಾವ ಮತ್ತು ಶಿಕ್ಷಣ ಮೌಲ್ಯದಿಂದ ನಾವು ಮಕ್ಕಳನ್ನು ಸಮಾಜದ ಆಸ್ತಿಯಾಗಿಸಬೇಕು’ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತೆಲುಗುಗೌಡ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದಪ್ಪ, ‘ಮಕ್ಕಳಲ್ಲಿ ಒತ್ತಡ ಹೇರದೆ, ಅವರ ಇಚ್ಛೆಯ ಶಿಕ್ಷಣ ಕೊಡಿಸುವ ಮತ್ತು ಸರಿದಾರಿಯಲ್ಲಿ ಅವರನ್ನು ಕರೆದೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಮ್ಮ ಮಕ್ಕಳು ಕನಿಷ್ಠ ಸ್ವಾವಲಂಬಿಗಳಾಗಲು ತಾಂತ್ರಿಕ ಶಿಕ್ಷಣ ಕೊಡಿಸಲೂ ಪೋಷಕರು ಮುಂದಾಗಬೇಕು’ ಎಂದು ಹೇಳಿದರು.

ಶಿಕ್ಷಕರ ಸಂಘದ ಎಂ.ಮೈಲಾರಪ್ಪ, ವಕೀಲ ಗೋವಿಂದಸ್ವಾಮಿ, ಜೆಡಿಎಸ್‌ ತಾಲ್ಲೂಕು ಉಪಾಧ್ಯಕ್ಷ ವೈ.ಎಚ್‌.ನೀಲಕಂಠಪ್ಪ, ತೆಲುಗುಗೌಡ ಸಂಘದ ಅಧ್ಯಕ್ಷ ರಂಗನಾಥ್‌, ಶಿಕ್ಷಕ ವೀರಮಾರುತಿ, ಮಲ್ಲಪ್ಪ ಮಾತನಾಡಿದರು. ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಿಕ್ಷಕರಾದ ಮಹದೇವ್‌, ತಿಮ್ಮಮ್ಮ, ಹೇಮಾವತಿ, ತಿಮ್ಮರಾಯಪ್ಪ, ಸುರೇಶ್‌, ಪೋಷಕ ಶಂಕರಪ್ಪ, ಕುರುಬಗೆರೆ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT