ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯಲ್ಲೇ ಬದುಕು ಕಟ್ಟಿಕೊಂಡ ಕಲಾವಿದ

Last Updated 23 ಅಕ್ಟೋಬರ್ 2017, 6:17 IST
ಅಕ್ಷರ ಗಾತ್ರ

ದಾವಣಗೆರೆ: ಕಲೆ, ಸಂಗೀತ, ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡಿರುವ ಇಲ್ಲಿನ ನಿವಾಸಿಯೊಬ್ಬರು ವೃತ್ತಿಯಲ್ಲಿ ಕಲಾ ಶಿಕ್ಷಕ. ವೈವಿಧ್ಯಮಯ ಕಲಾಕೃತಿಗಳು ಹಾಗೂ ಚಿತ್ರ ರಚನೆಯನ್ನೇ ಅವರು ಜೀವಾಳವನ್ನಾಗಿ ಮಾಡಿಕೊಂಡಿದ್ದಾರೆ.

ನಗರದ ಸರಸ್ವತಿ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ 20 ವರ್ಷಗಳಿಂದ ನೆಲೆಸಿರುವ ಮೌನೇಶ್ವರ ರುದ್ರಪ್ಪ ಪತ್ತಾರ್‌ ಗದಗ ಜಿಲ್ಲೆಯ ರೋಣದವರು. ಪ್ರಸ್ತುತ ದಾವಣಗೆರೆ ತಾಲ್ಲೂಕಿನ ಕುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಬಿಡುವಿನ ಸಮಯ ಕಲೆಗೇ ಮೀಸಲು.

ಅವರಿಗೆ ಕಲೆ ವಂಶ ಪಾರಂಪರಿಕವಾಗಿ ಬಂದಿದೆ. ತಾತ, ತಂದೆಯೇ ಅದಕ್ಕೆ ಪ್ರೇರಣೆ. ಇವರ ಗರಡಿಯಲ್ಲಿ ಪಳಗಿದ ಹಲವು ವಿದ್ಯಾರ್ಥಿಗಳು ಬೆಂಗಳೂರೂ ಒಳಗೊಂಡಂತೆ ಕೆಲವು ದೊಡ್ಡ ನಗರಗಳಲ್ಲಿ ಕಲಾವಿದರಾಗಿ ಪಳಗಿದ್ದಾರೆ.

ವಿಶೇಷ ಕಲಾಕೃತಿಗಳು: ಪೇಂಟಿಂಗ್‌ ಮೂಲಕ ಬಟ್ಟೆಯ ಮೇಲೆ ಚಿತ್ರಿಸಿರುವ ವಚನಾಧಾರಿತ ಕಲಾಕೃತಿಗಳು ವಿಶೇಷವಾಗಿವೆ‌. 12ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ ಅವರ ವಚನಗಳನ್ನು ಒಳಗೊಂಡಂತೆ ರಚಿಸಿರುವ ಚಿತ್ರಗಳು ಅಧ್ಯಾತ್ಮದ ಹಿನ್ನೆಲೆಯೊಳಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಸಹಕಾರಿಯಾಗಿವೆ.

ಕಲಾ ಪ್ರಕಾರದ ಮಾದರಿ: ಪೆನ್ಸಿಲ್‌, ಲೋಹ, ಶಿಲೆ, ಫೈಬರ್‌, ಪ್ಲಾಸ್ಟರ್ ಆಫ್‌ ಪ್ಯಾರಿಸ್‌, ಮರಗಳಲ್ಲಿ ಮೂರ್ತಿ ರಚನೆ ಮಾಡುವುದನ್ನು ಇವರು ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.

ಮೂರ್ತಿ ಕೆತ್ತನೆಯ ವಿಸ್ತಾರ: ಇಲ್ಲಿನ ತಳವಾರ ಪೇಟೆಯ ನಿಮಿಷಾಂಬಾ ದೇವಿ, ವಿರಕ್ತಮಠದಲ್ಲಿ ಕಲ್ಲೇಶ್ವರ ಸ್ವಾಮೀಜಿ, ಒಕ್ಕಲಿಗರ ಪೇಟೆಯಲ್ಲಿ ಗಿರಿಮಲ್ಲೇಶ್ವರ ಸ್ವಾಮೀಜಿ ಕಲ್ಲಿನ ವಿಗ್ರಹ ಕೆತ್ತನೆ ಮಾಡಿದ್ದಾರೆ. ಅಮೃತ ಶಿಲೆಯಲ್ಲಿ ಕೊಂಡಜ್ಜಿ ಬಸಪ್ಪ ಅವರ ಮಣ್ಣಿನ ಭಾವಶಿಲ್ಪ ಮೂಡಿಸಿದ್ದಾರೆ.

ಹರಿಹರದ ಗ್ರಾಮದೇವತೆಗೆ ಬೆಳ್ಳಿಯ ಪ್ರಭಾವಳಿ ಮತ್ತು ಛತ್ರಿ, ಬೆಂಗಳೂರು ಶಿಲ್ಪ ಕಲಾ ಅಕಾಡೆಮಿಗೆ ಕಲ್ಲಿನ ಶಿಲಾಬಾಲಿಕೆ, ಹೊಳಲ್ಕೆರೆ ತಾಲ್ಲೂಕಿನ ಅರೆಹಳ್ಳಿ ಗ್ರಾಮಕ್ಕೆ ಒಂದೂವರೆ ಅಡಿ ಎತ್ತರದ ಪಂಚಲೋಹ ಬನಶಂಕರಿ ಉತ್ಸವ ಮೂರ್ತಿ, ಇಡಗುಂಜಿ ಶೈಲಿಯ ಕಲ್ಲಿನ ಗಣೇಶ ವಿಗ್ರಹಗಳನ್ನೂ ರೂಪಿಸಿ ಕೊಟ್ಟಿದ್ದಾರೆ.

ಈಶ್ವರ ದೇವರ ಬೆಳ್ಳಿ ವಿಗ್ರಹ, ನಂದಿ ವಿಗ್ರಹ, ತಾಲ್ಲೂಕಿನ ಆವರಗೆರೆಯಲ್ಲಿ ಬನಶಂಕರಿ ದೇವರಿಗೆ ಬೆಳ್ಳಿ ಮುಖಪದ್ಮಗಳನ್ನೂ ರಚಿಸಿದ್ದಾರೆ. ಇವರು ಸೃಷ್ಟಿಸಿದ ಮೂರ್ತಿಗಳು ವಿವಿಧ ಜಿಲ್ಲೆಗಳ ಗ್ರಾಮಗಳಲ್ಲಿ ಸ್ಥಾನ ಪಡೆದುಕೊಂಡಿವೆ.

ಸರ್ಕಾರಿ ಯೋಜನೆಗಳ ಜಾಗೃತಿ: ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತನ್ನಿ, ಸರ್ವ ಶಿಕ್ಷಣ ಅಭಿಯಾನ, ಅಕ್ಷರ ದಾಸೋಹ, ಶಿಕ್ಷಣದ ಬಗ್ಗೆ ಮಕ್ಕಳ ಪೋಷಕರಿಗೆ ಜಾಗೃತಿ, ಹಳ್ಳಿ ಜೀವನ ಪರಿಕಲ್ಪನೆ, ಕುರ್ಕಿಯ ಸರ್ಕಾರಿ ಶಾಲೆಯ ಬೋಧನಾ ಪ್ರಕ್ರಿಯೆ, ಬಿಸಿ ಊಟ ಪರಿಕಲ್ಪನೆ ಸೇರಿದಂತೆ ಸರ್ಕಾರದ ಹಲವಾರು ಯೋಜನೆಗಳ ವರ್ಣಮಯ ಚಿತ್ರಗಳನ್ನು ರಚಿಸಿ ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಜಾಗೃತಿ ಮೂಡಿಸುವ ಉತ್ತಮ ಕಾರ್ಯಕ್ಕೆ ಮುಂದಾಗಿದ್ದಾರೆ. ಅವರ ಸಂಪರ್ಕಕ್ಕೆ ಮೊ: 99723 42660.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT