ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೈಂಗಿಕ ಶಿಕ್ಷಣ: ಮಠ, ಮಂದಿರಗಳ ಪಾತ್ರ ದೊಡ್ಡದು’

Last Updated 23 ಅಕ್ಟೋಬರ್ 2017, 6:33 IST
ಅಕ್ಷರ ಗಾತ್ರ

ಧಾರವಾಡ: ‘ಗಂಡು ಹಾಗೂ ಹೆಣ್ಣಿನ ದಾಂಪತ್ಯ ಜೀವನಕ್ಕೆ ವೇದಿಕೆ ಕಲ್ಪಿಸುವ ಮಠ ಹಾಗೂ ಮಂದಿರಗಳು ಲೈಂಗಿಕ ಶಿಕ್ಷಣ ನೀಡುವಲ್ಲೂ ಪ್ರಮುಖ ಪಾತ್ರ ವಹಿಸಬೇಕು’ ಎಂದು ಲೈಂಗಿಕ ತಜ್ಞ ಡಾ. ವಿನೋದ ಛಬ್ಬಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಭಾನುವಾರ ಆಯೋಜಿಸಿದ್ದ ‘ಲೈಂಗಿಕತೆ, ಲೈಂಗಿಕ ಸಾಹಿತ್ಯ ಮತ್ತು ನಮ್ಮ ಸಮಾಜ’ ಎಂಬ ವಿಶೇಷ ಚಿಂತನ ಮಂಥನ ಕಾರ್ಯಕ್ರಮದಲ್ಲಿ ‘ಕನ್ನಡದಲ್ಲಿ ಲೈಂಗಿಕ ಸಾಹಿತ್ಯ: ಒಂದು ಮನೋ ಸಾಮಾಜಿಕ ವಿಶ್ಲೇಷಣೆ’ ವಿಷಯ ಕುರಿತು ಅವರು ಮಾತನಾಡಿದರು.

‘ಮನೆ ಹಾಗೂ ಮಂದಿರ ಎರಡೂ ಕಡೆ ಲೈಂಗಿಕ ಶಿಕ್ಷಣಕ್ಕೆ ಮುಕ್ತ ಅವಕಾಶ ಸಿಗಬೇಕು. ಕ್ರೈಸ್ತ ಸಮುದಾಯದಲ್ಲಿ ಮದುವೆಯಾಗುವ ಗಂಡು ಹೆಣ್ಣಿಗೆ ನಿಸರ್ಗ ಕ್ರಿಯೆ ಕುರಿತು ಬೋಧಿಸುವ ಪರಿಪಾಠವಿದೆ. ಆದರೆ, ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತೀಯ ಪರಂಪರೆಯಲ್ಲಿ ಒಂದು ಕಾಲದಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿತ್ತಾದರೂ, ಇಂದು ಅದಕ್ಕೆ ಮಡಿವಂತಿಕೆಯ ಪರದೆ ಹಾಕಿರುವುದು ವಿಪರ್ಯಾಸ’ ಎಂದರು.

‘ನಮ್ಮಲ್ಲಿರುವ ಶತಮಾನಗಳಷ್ಟು ಹಿಂದಿನ ದೇವಾಲಯಗಳಲ್ಲಿ ಶಿಲ್ಪಗಳನ್ನು ಕೆತ್ತಿ ಆ ಮೂಲಕ ಲೈಂಗಿಕ ಜ್ಞಾನ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಯುವತಿಯರಿಗೆ ಲೈಂಗಿಕ ಶಿಕ್ಷಣ ನೀಡಲು ದೇವದಾಸಿಯರು ಹಾಡುಗಳ ಮೂಲಕ ಶಿಕ್ಷಣ ನೀಡುತ್ತಿದ್ದರು. ವಾತ್ಸಾಯನ ಮುಂತಾದವರು ಈ ಕುರಿತು ಪುಸ್ತಕಗಳನ್ನು ಬರೆದಿರುವುದು ಆ ಕಾಲಕ್ಕೆ ಶ್ರೇಷ್ಠ ಸಾಹಿತ್ಯಗಳೇ ಆಗಿದ್ದವು. ಕಾಲ ಬದಲಾದಂತೆ ಸಾಹಿತ್ಯವೂ ಪರಿಷ್ಕರಣೆಗೊಂಡಿದೆ’ ಎಂದರು.

‘ಕಳೆದ ಐನೂರು ವರ್ಷಗಳವರೆಗೂ ಬಾಲ್ಯ ವಿವಾಹ ಪದ್ಧತಿ ಇಲ್ಲದ ಈ ನೆಲದಲ್ಲಿ, ಪರಿಕೀಯರ ದಾಳಿ ಆರಂಭವಾದ ನಂತರ ಹೆಣ್ಣು ಮಕ್ಕಳನ್ನು ರಕ್ಷಿಸುವ ಸಲುವಾಗಿ ಬಾಲ್ಯದಲ್ಲೇ ಅವರನ್ನು ಮದುವೆ ಮಾಡಿಕೊಡುವ ಪದ್ಧತಿ ಬಂತು. ಅದನ್ನು ಅವರು ‘ಜಾವಾಬ್ದಾರಿ ಕಳೆದುಕೊಳ್ಳುವುದು’ ಎಂಬ ವ್ಯಾಖ್ಯಾನ ಮಾಡಿದ್ದರು. ಈ ಪದ ಬಳಕೆಯನ್ನು ಇಂದಿನ ಬಹಳಷ್ಟು ಪೋಷಕರೂ ಬಳಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಲೈಂಗಿಕ ಶಿಕ್ಷಣಕ್ಕೆ ವೈದ್ಯಕೀಯದ ಜತೆಗೆ ಭಾವನಾತ್ಮಕ ದೃಷ್ಟಿಕೋನವೂ ಅಗತ್ಯ. ಲೈಂಗಿಕತೆ ಎಂದರೆ ಭಾವನೆ, ಬಾಂಧವ್ಯ, ಶರೀರ ಹಾಗೂ ಸಂಬಂಧ ಎಂಬ ನಾಲ್ಕು ಪ್ರಮುಖ ವಿಷಯಗಳ ಸಂಗಮ. ಲೈಂಗಿಕತೆ ಇತರ ವಿಷಯಗಳಂತೆಯೇ ಒಂದು ವಿಷಯ ಎಂದು ಪರಿಗಣಿಸಿ ಕಲಿಸುವವರ ಸಂಖ್ಯೆ ತೀರಾ ವಿರಳವಾಗಿದೆ’ ಎಂದರು.

‘ಪ್ರೀತಿ–ಪ್ರಣಯ, ಶೃಂಗಾರ, ಕಾಮ ಪ್ರಚೋದಕ ಹಾಗೂ ಅಶ್ಲೀಲ ಎಂಬ ನಾಲ್ಕು ಹಂತಗಳು ಇವೆ. ಅಶ್ಲೀಲ ಮತ್ತು ಕಾಮಪ್ರಚೋದನೆ ಎಂಬುದು ಒಂದೇ ಎಂದು ಹಲವರು ಭಾವಿಸಿದ್ದಾರೆ. ಕಾಮ ಪ್ರಚೋದನೆ ಮನೋ ವಿಕಾಸವಾದರೆ, ಅಶ್ಲೀಲ ಎಂಬುದು ಮನೋವಿಕಾರ’ ಎಂದು ಡಾ. ಛಬ್ಬಿ ವಿವರಿಸಿದರು.

‘ಈ ಎಲ್ಲ ಗೊಂದಲಗಳಿಂದ ಮುಕ್ತರಾಗಲು ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತೆ ಲೈಂಗಿಕ ಶಿಕ್ಷಣ ನೀಡುವುದು ಕುಟುಂಬ ಹಾಗೂ ಸಮಾಜದ ಬಹು ದೊಡ್ಡ ಜವಾಬ್ದಾರಿಯಾಗಿದೆ. ಇದರಿಂದ ಮಾತ್ರ ಆರೋಗ್ಯಕರ ಭವಿಷ್ಯ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡದಲ್ಲಿರುವ ಹಲವಾರು ಸಾಹಿತ್ಯಗಳು ಪೂರಕ ಆಕರಗಳನ್ನು ನೀಡಲಿದೆ’ ಎಂದು ಅಭಿಪ್ರಾಯಪಟ್ಟರು.

‘ಲೈಂಗಿಕತೆ ಮತ್ತು ಸ್ತ್ರೀವಾದ’ ಕುರಿತು ಮಾತನಾಡಿದ ಮನೋಶಾಸ್ತ್ರಜ್ಞೆ ರಮ್ಯಾ ಶಾಸ್ತ್ರಿ, ಸಲಿಂಗ ಕಾಮ ಹಾಗೂ ಲೈಂಗಿಕ ಭಾವನೆ ಕುರಿತು ಸಭಿಕರೊಂದಿಗೆ ಸಂವಾದ ನಡೆಸಿದರು. ಡಾ. ಮದನ ಮೋಹನ ತಾವರೆಗೆರೆ ಮಾತನಾಡಿ, ಲೈಂಗಿಕ ಶಿಕ್ಷಣದಲ್ಲಿ ಭಾರತೀಯ ಕುಟುಂಬ ಕಲ್ಯಾಣ ಯೋಜನೆಯ ಕೊಡುಗೆಗಳನ್ನು ವಿವರಿಸಿದರು. ಡಾ. ಸಂಜೀವ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT