ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ವಿನಯ ಕುಕರ್ಣಿ ಹೇಳಿಕೆಗೆ ಖಂಡನೆ

Last Updated 23 ಅಕ್ಟೋಬರ್ 2017, 6:34 IST
ಅಕ್ಷರ ಗಾತ್ರ

ಧಾರವಾಡ: ‘ಮುಂದಿನ ಚುನಾವಣೆಯ ಸೋಲಿನ ಭಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹಾಗೂ ಸಂಸದ ಪ್ರಹ್ಲಾದ ಜೋಶಿ ವಿರುದ್ಧ ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅರವಿಂದ ಏಗನಗೌಡರ ದೂರಿದ್ದಾರೆ.

‘ಸಂಸದ ಪ್ರಹ್ಲಾದ ಜೋಶಿ ಈಗಾಗಲೇ ಹ್ಯಾಟ್ರಿಕ್ ಜಯಭೇರಿ ಸಾಧಿಸಿದ್ದಾರೆ. ಈ ಮೂಲಕ ತಮ್ಮ ಶಕ್ತಿ ಏನು ಎಂಬುವುದನ್ನು ಜನರಿಗೆ ತೋರಿಸಿದ್ದಾರೆ. ಅಲ್ಲದೇ, ಜನಪರ ಕಾರ್ಯಗಳನ್ನು ಮಾಡುತ್ತಿರುವ ಅವರು ಸಾಮಾನ್ಯರ ಹೃದಯ ಗೆದ್ದಿದ್ದಾರೆ. ಇದಕ್ಕೆ ಸಚಿವ ವಿನಯ ಕುಲಕರ್ಣಿ ಅವರ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ಸ್ವತಃ ಸಚಿವರಿಗೆ ಇದರ ಅರಿವಿದೆ. ಆದರೂ ಅವರು ಮುಂಬರುವ ಸೋಲಿನ ಭೀತಿಯಿಂದ ಹತಾಶರಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಪ್ರಹ್ಲಾದ ಜೋಶಿ ಮೂರು ಬಾರಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಜತೆಗೆ ಸರಳ ಸಜ್ಜನಿಕೆಗೆ ಹೆಸರಾಗಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಮಹಿಳಾ ಪ್ರತಿಸ್ಪರ್ಧಿ ಎದುರು ಸೋತಿರುವುದ್ದನ್ನು ಸಚಿವರು ಮರೆತಿದ್ದಾರೆ.

ಕಳೆದ ಬಾರಿ ಸಂಸದರ ವಿರುದ್ಧ 1.14 ಲಕ್ಷ  ಮತಗಳ ಅಂತರದಿಂದ ಸೋತಿರುವ ಸಚಿವ ವಿನಯ ಅವರಿಗೆ ಮುಂದಿನ ಚುನಾವಣೆಯ ಸೋಲಿನ ಭಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಚಿವರು ಜಗದೀಶ ಶೆಟ್ಟರ್‌ ಹಾಗೂ ಸಂಸದರ ವಿರುದ್ಧ ಅತೀ ಕೀಳು ಭಾಷೆಯಲ್ಲಿ ಮಾತನಾಡುತ್ತಿರುವುದು ಇದು ಖಂಡನೀಯ’ ಎಂದರು.

‘ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪಗಳು ಸಾಮಾನ್ಯ. ಆದರೆ, ಸಚಿವರು ಬಿಜೆಪಿ ನಾಯಕರ ಕುರಿತು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ.

ಎಲ್ಲವನ್ನೂ ಅರಿತಿರುವ ಕ್ಷೇತ್ರದ ಜನತೆ ತಮ್ಮ ಪ್ರತಿನಿಧಿ ಯಾರು ಎಂಬುದನ್ನು ಮುಂಬರುವ ದಿನಗಳಲ್ಲಿ ಮತದಾನದ ಮುಖಾಂತರ ಉತ್ತರಿಸಲಿದ್ದಾರೆ. ಹೀಗಾಗಿ ಸಚಿವರು ಇಂಥ ಬಾಲಿಷ ಹೇಳಿಕೆ ನೀಡುವುದನ್ನು ಬಿಟ್ಟು ಅಭಿವೃದ್ಧಿ ಕಡೆಗೆ ಗಮನ ನೀಡಬೇಕು. ಜತೆಗೆ ತಮ್ಮ ಕ್ಷೇತ್ರದಲ್ಲಿನ ರಸ್ತೆ ಸುಧಾರಣೆ ಹಾಗೂ ಜನರಿಗೆ ಮೂಲ ಸೌಕರ್ಯ ಒದಗಿಸಲು ಶ್ರಮಿಸಬೇಕು’ ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT