ಕಳಸ ಹೊತ್ತ 1008 ಮಹಿಳೆಯರು

ಭಾನುವಾರ, ಮೇ 26, 2019
32 °C

ಕಳಸ ಹೊತ್ತ 1008 ಮಹಿಳೆಯರು

Published:
Updated:
ಕಳಸ ಹೊತ್ತ 1008 ಮಹಿಳೆಯರು

ಶ್ರವಣಬೆಳಗೊಳ: ಹದಿನಾರು ದಿನ ನಡೆಯುವ ಇಂದ್ರಧ್ವಜ ಆರಾಧನೆ ಮಹೋತ್ಸವ ಅಂಗವಾಗಿ 1008 ಮಹಿಳೆಯರು ಮಂಗಳ ಕಳಶಗಳನ್ನು ಹೊತ್ತು ಭಾನುವಾರ ಮೆರವಣಿಗೆ ನಡೆಸಿದರು. ಹಳದಿ ಸೀರೆ, ಕಿರೀಟ ಧರಿಸಿದ್ದ ಮಹಿಳೆಯರ ಮೆರವಣಿಗೆ ನೋಡಲು ರಸ್ತೆಯ ಅಕ್ಕಪಕ್ಕ ಜನರು ನಿಂತಿದ್ದರು.

ಚಾವುಂಡರಾಯ ಸಭಾ ಮಂಟಪದಲ್ಲಿ ಇಂದ್ರಧ್ವಜ ಆರಾಧನೆಯ ಘಟಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಫೆಬ್ರುವರಿಯಲ್ಲಿ ಜರುಗಲಿರುವ ಬಾಹುಬಲಿ ಮಹಾ ಮಸ್ತಕಾಭಿಷೇಕ ಮಹೋತ್ಸವದಲ್ಲಿ 10,000 ಕ್ಕೂ ಅಧಿಕ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಆಚಾರ್ಯ ವರ್ಧಮಾನ ಸಾಗರ ಮಹಾರಾಜರು ಮಾತನಾಡಿದರು. ಪ್ರತಿಷ್ಠಾಚಾರ್ಯರಾದ ಕುಮದ್‌ ಚಂದ್‌ ಸೋನಿ, ಡಿ.ಪಾರ್ಶ್ವನಾಥ ಶಾಸ್ತ್ರಿ, ಎಸ್‌.ಡಿ.ನಂದಕುಮಾರ್‌, ಎಸ್‌.ಪಿ.ಉದಯಕುಮಾರ್‌ ಶಾಸ್ತ್ರಿ ಜಿನ ಬಿಂಬಗಳಿಗೆ ಅಭಿಷೇಕ ಮಾಡುವ ಜಲಕ್ಕೆ ಪೂಜೆ ನೆರವೇರಿಸಿದರು.

ನಂತರ 1008 ಮಹಿಳೆಯರು ಮಂಗಲ ಕಲಶಗಳಿಗೆ ಪವಿತ್ರ ಜಲ ತುಂಬಿಸಿಕೊಂಡು ಮಂಗಳವಾದ್ಯ, ಧರ್ಮಧ್ವಜಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಮೈಸೂರು, ಹಾಸನ, ಬೆಂಗಳೂರು, ಮಂಡ್ಯ, ಚಾಮರಾಜನಗರ, ಸಾಲಿಗ್ರಾಮ, ಬೆಳ್ಳೂರು, ಮಾಯಸಂದ್ರ, ದಡಗ, ತಂಡಗ, ಕಡದರವಳ್ಳಿ, ಅಡಗೂರು ಭಾಗದ ಮಹಿಳೆಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಾಸುಪೂಜ್ಯ ಸಾಗರ ಮಹಾರಾಜರು, ಪಂಚಕಲ್ಯಾಣಕ ಸಾಗರ ಮಹಾರಾಜರು, ಚಂದ್ರಪ್ರಭ ಸಾಗರ ಮಹಾರಾಜರು, ಅಮಿತ ಸಾಗರ ಮಹಾರಾಜರು ಹಾಗೂ ಸಂಘಸ್ಥ ತ್ಯಾಗಿಗಳು ಸಾನಿಧ್ಯ ವಹಿಸಿದ್ದರು.

ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಚಾರುಕೀರ್ತಿ ಸ್ವಾಮೀಜಿ, ‘ಧರ್ಮ ವಿಜ್ಞಾನವನ್ನು ವಿರೋಧಿಸುವುದಿಲ್ಲ. ಧರ್ಮ ಮತ್ತು ವಿಜ್ಞಾನ ಸೇರಿಕೊಂಡರೆ ಸಮನ್ವಯತೆ ಸಾಧಿಸಿ ಸಂಸ್ಕೃತಿ ಉಳಿಸಬಹುದು. ಸೌರಮಂಡಲ ಮತ್ತು ಪೃಥ್ವಿಯ ಸರಿ ಸಮಾನ ಹಾಗೂ ಅದಕ್ಕೂ ದೊಡ್ಡದಾದ ಗ್ರಹಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ಮಾಡಿ ತಿಳಿಸಿದ್ದಾರೆ’ ಎಂದರು.

‘ಮಧ್ಯ ಲೋಕದಲ್ಲಿ 458 ಅಕೃತ್ರಿಮ ಜಿನಾಲಯಗಳಿದ್ದು, ಕಾರ್ತಿಕ ಮಾಸದ ಶುಕ್ಲಪಕ್ಷದ ಅಷ್ಟಮಿಯಿಂದ ಪೌರ್ಣಮಿಯವರೆಗಿನ ಅಷ್ಟಾಹ್ನಿಕ ಮಹಾ ಪರ್ವದಲ್ಲಿ ಅದಕ್ಕೆ ಸ್ವರ್ಗದ ದೇವತೆಗಳು ಹೋಗಿ ಪೂಜೆ ಮಾಡಿ ಧ್ವಜಾರೋಹಣ ಮಾಡಿ ಬರುತ್ತಾರೆ. ಆದರೆ ನಾವು ಅಲ್ಲಿಗೆ ಹೋಗಲು ಸಾಧ್ಯವಿಲ್ಲ.

ಆದ್ದರಿಂದ ಅದರ ರಚನೆ ಮಾಡಿ ಪೂಜಿಸುವ ಮೂಲಕ ಭಕ್ತಿ ಸಮರ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಡಲದ ರಚನಾ ವಿನ್ಯಾಸದಲ್ಲಿ 458 ಮಂಟಪಗಳು, 458, ಜಿನ ಮೂರ್ತಿಗಳು ಹಾಗೂ ಶಾಸ್ತ್ರೋಕ್ತವಾದ 5 ಮೇರು ಪರ್ವತಗಳ ರಚನೆ ಮಾಡಲಾಗಿದೆ’ ಎಂದು ಸ್ವಾಮೀಜಿ ವಿವರಿಸಿದರು.

ಮುಂದೆಯೂ ಇಂತಹ ಆರಾಧನೆಗಳು ಕ್ಷೇತ್ರದಲ್ಲಿ ಯಾವಾಗಲೂ ನಡೆಯಬೇಕೆಂಬ ಉದ್ದೇಶದಿಂದ ಶಾಶ್ವತ ವ್ಯವಸ್ಥ ಮಾಡಲಾಗಿದೆ. ಶ್ರವಣಬೆಳಗೊಳದ ಸುತ್ತ ಮುತ್ತ 45 ಜಿನಾಲಯಗಳ ಜೀರ್ಣೋದ್ಧಾರದ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry