ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆಗೆ ಡೊಣ್ಣೆಗುಡ್ಡದ ಓಣಿ ಜನ ಸುಸ್ತು!

Last Updated 23 ಅಕ್ಟೋಬರ್ 2017, 6:53 IST
ಅಕ್ಷರ ಗಾತ್ರ

ಶಿಗ್ಗಾವಿ: ಪಟ್ಟಣದ ಸಾಯಿನಗರದಲ್ಲಿನ ಡೊಣ್ಣೆಗುಡ್ಡದ ಓಣಿಯಲ್ಲಿರುವ ರಸ್ತೆ ಮಳೆ ನೀರಿನಿಂದ ಸಂಪೂರ್ಣ ಕೆಸರಿನಿಂದ ಹದಗೆಟ್ಟು ಹೋಗಿದೆ. ಅದರಿಂದ ಇಲ್ಲಿನ ಜನ ಬದುಕುವುದು ಕಠಿಣವಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.

ಡೊಣ್ಣೆಗುಡ್ಡದ ರಸ್ತೆಯಲ್ಲಿನ ಎರಡು ಬದಿಗಳಲ್ಲಿ ಚರಂಡಿಗಳಿಲ್ಲ. ಅದರಿಂದಾಗಿ ಚರಂಡಿಗಳು ಸಂಪೂರ್ಣ ಕೊಳಚೆಯಿಂದ ತುಂಬಿಕೊಂಡು ಅವ್ಯವಸ್ಥೆ ಆಗರವಾಗಿವೆ. ಅಲ್ಲದೆ ರಸ್ತೆ ಯಾವುದು, ಚರಂಡಿಗಳಾವವು ಎಂಬುದು ತಿಳಿಯದಾಗಿದೆ. ಮಳೆಗಾಲ ಬಂದರೆ ಸಾಕು ಇಡೀ ಡೊಣ್ಣೆಗುಡ್ಡದ ರಸ್ತೆ ಕೆರೆ, ಹೊಂಡದಂತೆ ಕಾಣುತ್ತದೆ. ಹೀಗಾಗಿ ಇಲ್ಲಿನ ನಿವಾಸಿಗಳು ಬದುಕುವುದು ದುರ್ಲಭವಾಗಿ ಪರಿಣಮಿಸಿದೆ.

ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ. ಚರಂಡಿಗಳಿಂದ ಬರುವ ದುರ್ವಾಸನೆಯಿಂದ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲದಾಗಿದೆ. ಅಲ್ಲದೆ ಚರಂಡಿಗಳಲ್ಲಿ ನಿಂತಿರುವ ಕೊಳಚೆ ನೀರಿನಿಂದ ರೋಗರುಜಿನಗಳ ಭಯ ಕಾಡುತ್ತಿದೆ. ಈಗಾಗಲೇ ಅನೇಕರು ವಿವಿಧ ರೋಗಗಳು ಸೇರಿಕೊಂಡು ಬಲಿಯಾದ ಉದಾಹರಣೆಗಳಿವೆ. ಶಾಲಾ, ಕಾಲೇಜಿಗೆ ಹೋಗುವ ಮಕ್ಕಳಿಗೆ, ವಾಹನ ಸವಾರರಿಗೆ ತುಂಬಾ ಕಿರಿಕಿರಿಯಾಗಿದೆ. ನಿತ್ಯ ಹಾವು, ಚೇಳುಗಳ ಕಾಟ ಹೆಚ್ಚಾಗುತ್ತಿದೆ.

ಮನೆಯಲ್ಲಿ ಮಹಿಳೆಯರು ಮಕ್ಕಳು ಬದುಕುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಇಲ್ಲಿನ ನಿವಾಸಿ ಗುರುರಾಜ ಹೆಬಸೂರ ಕಳವಳ ವ್ಯಕ್ತಪಡಿಸಿದರು. ಈ ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ, ಲಿಖಿತವಾಗಿ ಅನೇಕ ಬಾರಿ ಮನವಿ ಮಾಡಲಾಗಿದೆ. ಆದರೂ ಈವರೆಗೆ ಯಾರೂ ಗಮನ ಹರಿಲ್ಲ. ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು, ಅವರು ಈ ಕಾಮಗಾರಿ ಹಮ್ಮಿಕೊಳ್ಳಬೇಕು ಎಂದು ಕಾರಣ ಹೇಳುತ್ತಾರೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಪುರಸಭೆಯಿಂದ ಯಾವುದೇ ಮಾಹಿತಿ ಕಳಿಸಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಈ ರೀತಿ ಎರಡು ಇಲಾಖೆಗಳ ಕಚೇರಿಗಳಿಗೆ ಅಲೆದಾಡಿ ಸಾಕಾಗಿ ಹೋಗಿದೆ. ಮನೆ ಕಟ್ಟುವ ಪೂರ್ವದಲ್ಲಿ ಪುರಸಭೆಯಿಂದ ಅನುಮತಿ ಪತ್ರ ಪಡೆಯಲಾಗಿದೆ. ಮನೆ, ನಳದ ತೆರಿಗೆ ಕಟ್ಟಲಾಗುತ್ತಿದೆ. ಯಾವ ಇಲಾಖೆ ಅಧಿಕಾರಿಗಳಿಗೆ ಸಂಬಂಧಿಸಿದೆ ಎಂಬುವುದು ಈವರೆಗೆ ತಿಳಿಯದಾಗಿದೆ ಎಂದು ಗುರುರಾಜ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT