ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಜಿಡಿಗಾಗಿ ರಸ್ತೆಗಳ ಅಂದ ಹಾಳು

Last Updated 23 ಅಕ್ಟೋಬರ್ 2017, 7:06 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದಲ್ಲಿ ಒಳ ಚರಂಡಿ (ಯುಜಿಡಿ) ಕಾಮಗಾರಿಗಳು ಭರದಿಂದ ನಡೆಯುತ್ತಿವೆ. ಆದರೆ ಯುಜಿಡಿ ನಿರ್ಮಾಣಕ್ಕಾಗಿ ಉತ್ತಮವಾಗಿರುವ ರಸ್ತೆಗಳನ್ನು ಅಗೆಯಲಾಗುತ್ತಿದೆ. ಅಗೆದ ರಸ್ತೆಗಳನ್ನು ಸಮರ್ಪಕವಾಗಿ ಮುಚ್ಚದ ಕಾರಣ ನಗರದ ಹಲವು ಬಡಾವಣೆಗಳ ರಸ್ತೆಗಳು ಹದಗೆಟ್ಟಿವೆ.

ನಗರದ ಕೆಲವು ಕಡೆ ಅಗೆದಿರುವ ರಸ್ತೆಗಳನ್ನು ತಿಂಗಳಾದರೂ ಮುಚ್ಚುತ್ತಿಲ್ಲ. ಇದರಿಂದ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಮನೆಯಿಂದ ಹೊರಹೋಗಲು ವಾಹನಗಳನ್ನು ತೆಗೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಅಗೆದ ಸ್ಥಳಗಳಲ್ಲಿ ಮಳೆ ನೀರು ಮತ್ತು ಕೊಳಚೆ ನೀರು ನಿಲ್ಲುತ್ತಿದೆ. ಇದು ಡೆಂಗಿ, ಮಲೇರಿಯಾ ರೋಗ ಹರಡಲು ಕಾರಣವಾಗುತ್ತಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾನ್ಯವಾಗಿ ರಸ್ತೆ ನಿರ್ಮಿಸುವಾಗ ಚರಂಡಿ ನಿರ್ಮಾಣವನ್ನೂ ಸೇರಿಸಿ ಗುತ್ತಿಗೆ ನೀಡಲಾಗುತ್ತದೆ. ಆದರೆ ಕಲಬುರ್ಗಿ ನಗರದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಸಾಕಷ್ಟು ರಸ್ತೆಗಳಲ್ಲಿ ಮಳೆ ನೀರು ಮತ್ತು ಒಳಚರಂಡಿ ವ್ಯವಸ್ಥೆ ಇಲ್ಲ. ಅಲ್ಲದೆ ಈಗ ನಿರ್ಮಾಣವಾಗುತ್ತಿರುವ ಹೊಸ ರಸ್ತೆಗಳಿಗೂ ಒಳಚರಂಡಿ ಇಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ.

ಅಲ್ಲದೆ ಕಲಬುರ್ಗಿ ನಗರಪಾಲಿಕೆ ರಸ್ತೆ ನಿರ್ಮಾಣ ಮಾಡಿದರೆ, ಒಳಚರಂಡಿ ನಿರ್ಮಾಣವನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಿಸುತ್ತಿದೆ. ಈ ಎರಡೂ ಸಂಸ್ಥೆಗಳ ಪರಸ್ಪರ ಹೊಂದಾಣಿಕೆ ಕೊರತೆಯಿಂದ ರಸ್ತೆಗಳು ಹಾಳಾಗುತ್ತಿವೆ. ಒಂದೆಡೆ ನಗರಪಾಲಿಕೆ ರಸ್ತೆ ನಿರ್ಮಿಸಿದರೆ. ಮತ್ತೊಂದೆಡೆ ಒಳಚರಂಡಿ ಮಂಡಳಿ ರಸ್ತೆಗಳನ್ನು ಅಗೆಯುತ್ತಾ ಹಾಳು ಮಾಡುತ್ತಿದೆ. ಇದರಿಂದ ನಿವಾಸಿಗಳು ನೆಮ್ಮದಿ ಹಾಳಾಗುವುದಲ್ಲದೆ,  ತೆರಿಗೆ ಹಣವನ್ನು ಅಪ್ರಯೋಜಕವಾಗಿ ಬಳಕೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

‘ಉತ್ತಮವಾಗಿರುವ ರಸ್ತೆಗಳನ್ನು ಅಗೆದು ಹಾಳು ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಿದರೆ, ನಮಗೆ ಟೆಂಡರ್‌ ನೀಡಲಾಗಿದೆ. ಕೆಲಸ ಮಾಡುತ್ತೇವೆ ಎನ್ನುತ್ತಾರೆ. ಕೆಲಸವನ್ನು ಬೇಕಾಬಿಟ್ಟಿ ಮಾಡಿ ರಸ್ತೆಗಳನ್ನು ಸರಿಯಾಗಿ ಮುಚ್ಚುವುದಿಲ್ಲ. ಇದನ್ನು ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿಲ್ಲ. ಅಲ್ಲದೆ ಕೆಲಸವನ್ನು ಪೂರ್ಣಗೊಳಿಸದೆ ಬಿಟ್ಟಿರುವುದನ್ನು ಪ್ರಶ್ನಿಸಲು ಅಧಿಕಾರಿಗಳು ಕೆಲಸದ ಸ್ಥಳದತ್ತ ಸುಳಿಯುವುದಿಲ್ಲ’ ಎಂದು ನಿವಾಸಿ ಬಸವರಾಜ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT