ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಮತ್ತೆ ಹಾಳಾದ ಹೆದ್ದಾರಿ

Last Updated 23 ಅಕ್ಟೋಬರ್ 2017, 7:12 IST
ಅಕ್ಷರ ಗಾತ್ರ

ಚಿಂಚೋಳಿ: ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮೊದಲನೇ ಹಂತದಲ್ಲಿ ಕೈಗೊಂಡ ಸುಲೇಪೇಟ ಉಮ್ಮರ್ಗಾ ರಾಜ್ಯ ಹೆದ್ದಾರಿ 32ರ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿದೆ. 2012–13ರಲ್ಲಿ ಮಂಜೂರಾದ ಹೆದ್ದಾರಿ ರಸ್ತೆಯಲ್ಲಿ ಸುಲೇಪೇಟದಿಂದ ಹೊಡೇಬೀರನಹಳ್ಳಿ ಕ್ರಾಸ್‌ ಮಧ್ಯೆ, ಕುಡಳ್ಳಿಯಿಂದ ನಾವದಗಿ ಬಳಿ ಮತ್ತು ಕೋಡ್ಲಿಯಿಂದ ಸೂಗೂರು(ಕೆ) ಕ್ರಾಸ್‌ ಮಧ್ಯೆ ರಸ್ತೆ ಹಾಳಾಗಿದ್ದು, ದುರಸ್ತಿಗಾಗಿ ಕಾಯುತ್ತಿದೆ.

ಆರಂಭದಲ್ಲಿ ಪ್ರತಿ ಕಿ.ಮೀ.ಗೆ ₹50ರಂತೆ ₹23 ಕೋಟಿ ಅನುದಾನವನ್ನು ಅಂದಿನ ಶಾಸಕ ಸುನಿಲ ವಲ್ಯಾಪುರ ಅವರು ಮಂಜೂರು ಮಾಡಿಸಿದ್ದರು. ಕಾಮಗಾರಿ ಆರಂಭವಾದ ಮೇಲೆ ಬೇಸ್‌ ಕೋಟ್‌ ಇಲ್ಲದ ರಸ್ತೆ ನಿರ್ಮಾಣ ಮಾಡುತ್ತಿರುವುದರಿಂದ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು.

ಈ ನಡುವೆ 2013ರಲ್ಲಿ ವಿಧಾನಸಭೆ ಚುನಾವಣೆ ನಡೆದ ಮೇಲೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ₹8 ಕೋಟಿ ಅನುದಾನವನ್ನು ಶಾಸಕ ಡಾ.ಉಮೇಶ ಜಾಧವ್‌ ಮಂಜೂರು ಮಾಡಿಸಿದ್ದರು. ಇದರಿಂದ ಕೆಲವು ಕಡೆಗಳಲ್ಲಿ ಬೇಸ್‌ ಕೋಟ್‌ ಮಾಡಲಾಗಿದೆ. ರಸ್ತೆಯನ್ನು ಗುತ್ತಿಗೆದಾರರೊಬ್ಬರ ಮೂಲಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾಧಿಕಾರಿ ಅನುಷ್ಠಾನಗೊಳಿಸಿದ್ದರು.

2012–13ರಿಂದ ಪ್ರಾರಂಭವಾದ ಕಾಮಗಾರಿ 2015ರಲ್ಲಿ ಪೂರ್ಣಗೊಂಡಿತ್ತು. ಆದರೆ, ರಸ್ತೆಯ ಅಲ್ಲಲ್ಲಿ ಮಾಡಿದ ಕೆಲವೇ ದಿನಗಳಲ್ಲಿ ರಸ್ತೆ ಕಿತ್ತು ಹೋಗಿತ್ತು. ಗುತ್ತಿಗೆದಾರ ಅರೆಬರೆ ದುರಸ್ತಿ ಮಾಡಿದ್ದರು. 2016ರಲ್ಲಿ ಗುತ್ತಿಗೆದಾರರ ನಿರ್ವಹಣೆ ಅವಧಿ ಮುಗಿದಿದೆ. ಆದರೆ, 2015ರಿಂದ 2017ವರೆಗೆ ರಸ್ತೆಯನ್ನು ಗುತ್ತಿಗೆದಾರರು ನಿರ್ವಹಣೆ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಸುಲೇಪೇಟ–ಉಮ್ಮರ್ಗಾ ರಾಜ್ಯ ಹೆದ್ದಾರಿ ಅಭಿವೃದ್ಧಿ ಗುತ್ತಿಗೆದಾರರ ಗುತ್ತಿಗೆಯ ನಿರ್ವಹಣೆ ಅವಧಿ ಮುಗಿದ ಬಗ್ಗೆ ತಮ್ಮ ಕಚೇರಿಯಲ್ಲಿ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ, ಈ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಕೆಟ್ಟುಹೋದ ರಸ್ತೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಅವರಿಗೆ ವರದಿ ಮಾಡಿದ್ದಾಗಿ ಇಲಾಖೆಯ ಚಿಂಚೋಳಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವೀರಣ್ಣ ಕುಣೀಕೇರಿ ತಿಳಿಸಿದ್ದಾರೆ.

ತಮ್ಮ ವರದಿ ಆಧರಿಸಿ ಕಾರ್ಯಪಾಲಕ ಎಂಜಿನಿಯರ್‌ ಅವರು ಈಗಾಗಲೇ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾಧಿಕಾರಿಗೆ ಮತ್ತು ಗುತ್ತಿಗೆದಾರರಿಗೆ ಪತ್ರ ಬರೆದಿದ್ದಾರೆ ಎಂದರು. ಆದರೆ, ರಸ್ತೆ ಕೆಟ್ಟುಹೋಗಿದ್ದರಿಂದ ಚಿಂಚೋಳಿ–ಕಲಬುರ್ಗಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದು, ಕೆಟ್ಟು ಹೋದ ರಸ್ತೆ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT