ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ರಕ್ಷಣೆಗೆ ರಾಜಸ್ಥಾನ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ

Last Updated 23 ಅಕ್ಟೋಬರ್ 2017, 7:21 IST
ಅಕ್ಷರ ಗಾತ್ರ

ಜೈಪುರ: ಹಾಲಿ ಮತ್ತು ನಿವೃತ್ತ ನ್ಯಾಯಾಧೀಶರು, ಮ್ಯಾಜಿಸ್ಟ್ರೇಟ್‌ಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ತನಿಖೆಗಳಿಂದ ರಕ್ಷಿಸುವುದಕ್ಕಾಗಿ ರಾಜಸ್ಥಾನ ಸರ್ಕಾರ ಹೊರಡಿಸಿರುವ ಸುಗ್ರೀವಾಜ್ಞೆಯನ್ನು ಪ‍್ರಶ್ನಿಸಿ ವಕೀಲರೊಬ್ಬರು ರಾಜಸ್ಥಾನ ಹೈಕೋರ್ಟ್‌ನಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಸುಗ್ರೀವಾಜ್ಞೆಯ ಪ್ರಕಾರ, ಅಧಿಕಾರಿಗಳು, ನ್ಯಾಯಾಧೀಶರು ಕರ್ತವ್ಯದಲ್ಲಿದ್ದಾಗ ತೆಗೆದುಕೊಂಡ ಕ್ರಮಗಳ ಬಗ್ಗೆ ಅಥವಾ ಅವರ ವಿರುದ್ಧ ಕೇಳಿ ಬಂದ ಆರೋಪಗಳ ಬಗ್ಗೆ ಸರ್ಕಾರದ ಅನುಮತಿ ಇಲ್ಲದೇ ತನಿಖೆ ನಡೆಸುವಂತಿಲ್ಲ.

ಅಲ್ಲದೇ, ಸರ್ಕಾರ ತನಿಖೆಗೆ ಅನುಮತಿ ನೀಡುವವರೆಗೆ ಆರೋಪಗಳ ಬಗ್ಗೆ ವರದಿ ಮಾಡದಂತೆ ಮಾಧ್ಯಮಗಳಿಗೂ ಈ ಸುಗ್ರೀವಾಜ್ಞೆ ನಿರ್ಬಂಧ ಹೇರುತ್ತದೆ.

‘ಕ್ರಿಮಿನಲ್‌ ಕಾನೂನುಗಳು (ರಾಜಸ್ಥಾನ) (ತಿದ್ದುಪಡಿ) ಸುಗ್ರೀವಾಜ್ಞೆ –2017’ ಅನ್ನು ಹೊರಡಿಸಿ ಸೆಪ್ಟೆಂಬರ್‌ 7ರಂದು ರಾಜಸ್ಥಾನ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆರೋಪ ಕೇಳಿ ಬಂದವರ ವಿರುದ್ಧ ತನಿಖೆ ನಡೆಸಬೇಕೇ ಬೇಡವೇ ಎಂದು ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಆರು ತಿಂಗಳ ಕಾಲಾವಕಾಶವನ್ನು ಇದು ನೀಡುತ್ತದೆ.

‘ಹಾಲಿ ಅಥವಾ ನಿವೃತ್ತ ನ್ಯಾಯಾಧೀಶ ಅಥವಾ ಮ್ಯಾಜಿಸ್ಟ್ರೇಟ್‌ ಅಥವಾ ಸರ್ಕಾರಿ ಅಧಿಕಾರಿ ವಿರುದ್ಧ ಯಾವುದೇ ಮ್ಯಾಜಿಸ್ಟ್ರೇಟ್‌ ತನಿಖೆಗೆ ಆದೇಶಿಸುವಂತಿಲ್ಲ, ಇಲ್ಲವೇ ತನಿಖೆ ನಡೆಸುವಂತಿಲ್ಲ’ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ.

ಒಂದು ವೇಳೆ, ನಿಗದಿತ ಸಮಯದ ಒಳಗಾಗಿ (ಆರು ತಿಂಗಳು) ಸರ್ಕಾರ ತನಿಖೆಯ ಬಗ್ಗೆ ಅಧಿಕೃತವಾಗಿ ನಿರ್ಧಾರ ಕೈಗೊಳ್ಳದೇ ಹೋದರೆ, ತನಿಖೆ ನಡೆಸಲು ಸರ್ಕಾರ ಅನುಮತಿ ನೀಡಿದೆ ಎಂದರ್ಥ.

ಯಾವುದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳ ಹೆಸರು, ವಿಳಾಸ, ಅವರ ಕುಟುಂಬದ ವಿವರಗಳು ಮತ್ತು ಅವರ ಛಾಯಾಚಿತ್ರಗಳನ್ನು ಪ್ರಕಟಿಸುವುದು ಅಥವಾ ಮುದ್ರಿಸುವುದಕ್ಕೂ ಸುಗ್ರೀವಾಜ್ಞೆ ನಿಷೇಧ ಹೇರುತ್ತದೆ.

ನಿಯಮ ಉಲ್ಲಂಘಿಸಿದರೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವುದಕ್ಕೂ ಇದರಲ್ಲಿ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT